ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳ ಲೋಕದ ಅಂಗಳಕೇರಿ ಹಕ್ಕಿ ಹಾರುತಿದೆ ನೋಡಿದಿರಾ?

Last Updated 4 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

‘ಇಸ್ರೋ’ದ ಮಾಮ್‌ ನೌಕೆ ಮಂಗಳ ಗ್ರಹದ ಅಂಗಳವನ್ನು ಸೇರುವುದರೊಂದಿಗೆ ಮಂಗಳಯಾನವನ್ನು ಯಶಸ್ವಿಯಾಗಿ ಪೂರೈಸಿದ ನಾಲ್ಕನೇ ದೇಶ ಎನ್ನುವ ಅಗ್ಗಳಿಕೆ ಭಾರತದ್ದಾಗಿದೆ. ಭಾರತೀಯ ವೈಜ್ಞಾನಿಕ ರಂಗದ ಮೈಲಿಗಲ್ಲುಗಳಲ್ಲಿ ಇದೂ ಒಂದು. ಅಂದಹಾಗೆ, ಈ ವೈಜ್ಞಾನಿಕ ಸಾಧನೆಯ ಪ್ರಸಂಗವನ್ನು ವರಕವಿ ಬೇಂದ್ರೆ ಅವರ ‘ಹಕ್ಕಿ ಹಾರುತಿದೆ ನೋಡಿದಿರಾ?’ ಕವಿತೆಯೊಂದಿಗೆ ಓದಿಕೊಂಡರೆ ಹೇಗೆ? ಇಂಥದೊಂದು ಪ್ರಯತ್ನವನ್ನು ಬೇಂದ್ರೆ ಅವರ ಒಡನಾಡಿಯಾಗಿದ್ದ ಹಾಗೂ ಬೇಂದ್ರೆ ಕಾವ್ಯದ ಪರಿಚಾರಕರಲ್ಲಿ ಒಬ್ಬರಾದ ಡಾ. ‘ಜೀವಿ’ ಕುಲಕರ್ಣಿ ಅವರು ಮಾಡಿದ್ದಾರೆ. ಈ ಬರಹ, ಕನ್ನಡದ ಅತ್ಯುತ್ತಮ ಕವಿತೆಯೊಂದನ್ನು ಮತ್ತೆ ಪರಿಚಯಿಸುವ ಪ್ರಯತ್ನವೂ ಹೌದು.

‘ಇಸ್ರೋ’ದ ಬಾಹ್ಯಾಕಾಶ ವಿಜ್ಞಾನಿಗಳ ತಂಡದ ‘ಮಾರ್ಸ್ ಆರ್ಬಿಟರ್ ಮಿಶನ್’ (ಮಾಮ್) ಮಂಗಳಯಾನ ನೌಕೆಯು ಪ್ರಥಮ ಪ್ರಯತ್ನದಲ್ಲಿಯೇ ಮಂಗಳ ಗ್ರಹದ ಕಕ್ಷೆಯನ್ನು ತಲುಪಿದಾಗ  (ಸೆ. 24) ನನಗೆ ತಕ್ಷಣ ನೆನಪಾದುದು ವರಕವಿ ದ.ರಾ. ಬೇಂದ್ರೆ ಅವರ– ‘ಮಂಗಳ ಲೋಕದ ಅಂಗಳಕೇರಿ | ಹಕ್ಕಿ ಹಾರುತಿದೆ ನೋಡಿದಿರಾ?’ ಸಾಲುಗಳು. 1929ರಲ್ಲಿ ಅವರು ಹಾಡಿದ ಹಾಡು, 2014ರಲ್ಲಿ ದಿಟವಾಯಿತು, ಕವಿ ಕಂಡ ಕನಸು ನನಸಾಯಿತು ಎಂದು ನನಗನ್ನಿಸಿತು.

ಮಂಗಳಯಾನದ ಈ ಸಂದರ್ಭದಲ್ಲಿ ಅಂಬಿಕಾತನಯದತ್ತರ ‘ಹಕ್ಕಿ ಹಾರುತಿದೆ’ ಕವಿತೆಯನ್ನು ಮತ್ತೆ ಓದಿದರೆ ಹೊಸ ಹೊಸ ಅರ್ಥಗಳು ಸ್ಫುರಿಸುವಂತಿವೆ. ಮಂಗಳಲೋಕದ ಅಂಗಳವನ್ನು ಕಾಲಪಕ್ಷಿ ಏರುತ್ತದೆ ಎಂಬ ಕವಿಯ ಕಲ್ಪನೆ ನಿಜವಾಗಿದೆ ಎನ್ನಿಸುತ್ತದೆ. ಹೀಗೆ ಹೋಲಿಸುವಾಗಲೇ, ಬೇಂದ್ರೆಯವರು ತಮ್ಮ ಕೊನೆಯ ದಿನಗಳಲ್ಲಿ ಮಾತಾಡಿದ ಕೆಲವು ಮಾತುಗಳು ನೆನಪಾಗುತ್ತವೆ. 1981 ಅಕ್ಟೋಬರ್ 1ರಂದು ಬೇಂದ್ರೆಯವರು ಮುಂಬೈಯ ಹರಕಿಸನ್‌ದಾಸ ಆಸ್ಪತ್ರೆಗೆ ಎಡ್ಮಿಟ್ ಆದರು. ಅವರ ಶಸ್ತ್ರಚಿಕಿತ್ಸೆ 10ನೇ ತಾರೀಖು ನಡೆಯಲಿತ್ತು. ಜಠರದಲ್ಲಿಯ ಗಂಟನ್ನು ತೆಗೆಯುವ ದೊಡ್ಡ ಶಸ್ತ್ರಚಿಕಿತ್ಸೆ ಅದಾದುದರಿಂದ ಸಾಕಷ್ಟು ರಕ್ತ ಬೇಕಾಗಿತ್ತು. ಬೇಂದ್ರೆಯವರ ಇಬ್ಬರು ಮಕ್ಕಳಿಂದ ರಕ್ತ ಸಂಗ್ರಹಿಸಲಾಗಿತ್ತು. ನನ್ನೆಡೆಗೆ ನೋಡಿ, ‘ಜೀವಿಯ ಹೆಲ್ತ್‌ ಬಹಳ ಚೆನ್ನಾಗಿದೆ. ಕನಿಷ್ಠ ನಾಲ್ಕು ಬಾಟಲಿ ರಕ್ತ ಅವನು ನನಗೆ spare ಮಾಡಬಹುದು’ ಎನ್ನುತ್ತಾ ಬೇಂದ್ರೆಯವರು ನಕ್ಕರು. ನಾನೊಮ್ಮೆ ಮಾತಾಡುವಾಗ ‘ಬೇಂದ್ರೆಯವರ ರಕ್ತ ನಮ್ಮ ಧಮನಿಗಳಲ್ಲಿ ಹರಿಯುತ್ತಿದೆ’ ಅಂದಿದ್ದೆನಂತೆ. ಅದನ್ನು ಬೇಂದ್ರೆಯವರು ನೆನಪು ಮಾಡಿಕೊಂಡರು. ‘Let us test his blood’ ಎಂದರು. ನನ್ನ ರಕ್ತ ಪರೀಕ್ಷೆಯಾಯಿತು. ನಂತರ ಡಾಕ್ಟರ್ ಬಂದು ಹೇಳಿದರು, ‘He has B+’ ಎಂದು. ಬೇಂದ್ರೆಯವರ ರಕ್ತದ ಗುಂಪಿಗೆ ನನ್ನ ರಕ್ತ ಹೊಂದಿದ್ದನ್ನು ತಿಳಿದಾಗ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ಬೇಂದ್ರೆಯವರು ಈ ಸಂಗತಿಗೆ ಬೇರೆ ವ್ಯಾಖ್ಯಾನ ಕೊಟ್ಟರು. ‘ಕವಿ ಸುಳ್ಳು ಆಡುವುದಿಲ್ಲ ಎಂಬುದು ಇದರಿಂದ ಸಿದ್ಧವಾಗುತ್ತದೆ. ವಿಜ್ಞಾನಿಯ ಸತ್ಯ ಕಾಣುವುದು ಪ್ರಯೋಗದಿಂದ, ಕವಿ ಕಾಣುವುದು ಅಂತಃಸ್ಫುರಣದಿಂದ’ ಅಂದರು.

1929ರಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಲನ ದಲ್ಲಿ ಬೇಂದ್ರೆಯವರು ‘ಹಕ್ಕಿ ಹಾರುತಿದೆ ನೋಡಿದಿರಾ’ ಪದ್ಯವನ್ನು ಓದಿದರು. ಆಗವರು ಧಾರವಾಡ ಸೀಮೆಯ ರೈತರು ತೊಡುವ ರುಮಾಲು ಸುತ್ತಿದ್ದರು. ತಮ್ಮ ವಿಶಿಷ್ಟವಾದ ಹಾವಭಾವ, ಕೈಯ ಮಾಟದಿಂದ ಬೇಂದ್ರೆ ಕಾವ್ಯವಾಚನ ಮಾಡಿದ್ದರು, ಸಹಸ್ರಾರು ಪ್ರೇಕ್ಷರನ್ನು ಮಂತ್ರಮುಗ್ಧಗೊಳಿಸಿದ್ದರು. ಆ ಪದ್ಯ ಇಂತಿದೆ:

ಇರುಳಿರುಳಳಿದು ದಿನ ದಿನ ಬೆಳಗೆ
ಸುತ್ತುಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದೆ
ಎವೆತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ?

ಕರಿನರೆ ಬಣ್ಣದ ಗರಿ-ಗರಿಯುಂಟು
ಕೆನ್ನನ ಹೊನ್ನನ ಬಣ್ಣ-ಬಣ್ಣಗಳ
ರೆಕ್ಕೆಗಳೆರಡೂ ಪಕ್ಕದಲುಂಟು
ಹಕ್ಕಿ ಹಾರುತಿದೆ ನೋಡಿದಿರಾ?

ನೀಲಂಮೇಘಮಂಡಲ-ಸಮ ಬಣ್ಣ
ಮುಗಿಲಿಗೆ ರೆಕ್ಕೆಗಳೋಡೆದವೊ ಅಣ್ಣಾ
ಚಿಕ್ಕೆಯ ಮಾಲೆಯ ಸಿಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ?

ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ
ತೇಲಿಸಿ ಮುಳುಗಿಸಿ ಖಂಡ–ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ?

ಯುಗ-ಯುಗಗಳ ಹಣೆಬರೆಹವ ಒರೆಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ?

ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳನೂರಿನ ನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ?

ಮುಟ್ಟಿದೆ ದಿಗ್ಮಂಡಲಗಳ ಅಂಚ
ಆಚೆಗೆ ಚಾಚಿದೆ ತನ್ನಯ ಚುಂಚ
ಬ್ರಹ್ಮಾಂಡಗಳನು ಒಡೆಯಲು ಎಂದೋ
ಬಲ್ಲರು ಯಾರಾ ಹಾಕಿದ ಹೊಂಚ!
ಹಕ್ಕಿ ಹಾರುತಿದೆ ನೋಡಿದಿರಾ?

ಬೇಂದ್ರೆಯವ ಸಮಗ್ರ ಜೀವನ ಮಹಾಕಾವ್ಯ ‘ಔದುಂಬರ ಗಾಥೆ’ಯ ಮೂರು ಸಾವಿರ ಪುಟಗಳ ಆರು ಸಂಪುಟಗಳಲ್ಲಿ (ನಮನ, ದರ್ಶನ, ವಿಕಾಸ, ವಿನ್ಯಾಸ, ತತ್ತ್ವ, ಸಿದ್ಧಾಂತ) 1427 ಕವಿತೆಗಳಿವೆ. ಅವುಗಳಲ್ಲಿ ಹತ್ತು ಕವಿತೆಗಳನ್ನು ಆರಿಸಿದರೆ ಅದರಲ್ಲಿ ‘ಹಕ್ಕಿ ಹಾರುತಿದೆ ನೋಡಿದಿರಾ?’ ಕವಿತೆಯೂ ಸ್ಥಾನ ಪಡೆಯುತ್ತದೆ. ಇದು ನವೋದಯ ಕಾವ್ಯದ ಶ್ರೇಷ್ಠ ಕವಿತೆಗಳಲ್ಲಿ ಒಂದು. ಇದಕ್ಕೆ ಸಾಹಿತ್ಯದ ಇತಿಹಾಸದಲ್ಲಿ ಭದ್ರವಾದ ಸ್ಥಾನವಿದೆ. ಈ ಕವಿತೆಯ ವಾಚನ ಬೇಂದ್ರೆಯವರನ್ನು ಮೈಸೂರು ಕಡೆಯ ಸಾಹಿತಿಗಳಲ್ಲಿ ಮನೆಮಾತಾಗಿಸಿತು. ಇದನ್ನು ಕೇಳಿ ಪುಲಕಿತಗೊಂಡ ಮಾಸ್ತಿ ವೆಂಕಟೇಶ ಅಯ್ಯಂಗಾರರು ಬೇಂದ್ರೆಯವರ ಸಮೀಪ ಬಂದರು. ಅವರ ಹಿರಿಯಣ್ಣನಾಗಿ (ಮಾಸ್ತಿ ಬೇಂದ್ರೆಯವರಿಗಿಂತ ಹನ್ನೆರಡು ವರ್ಷ ದೊಡ್ಡವರು), ಬೇಂದ್ರೆಯವನ್ನು ಮೈಸೂರಿನ ಕಡೆಗೆ ಕರೆಸಿ ಎಲ್ಲೆಡೆಗೆ ಅವರ ಕಾವ್ಯವಾಚನ ಮಾಡಿಸಿದರು. ಬೇಂದ್ರೆಯವರು ‘ನರಬಲಿ’ ಪದ್ಯ ಬರೆದು, ಬ್ರಿಟಿಷ್ ಅಧಿಕಾರಿಗಳ ಕ್ರೋಧಕ್ಕೆ ಗುರಿಯಾಗಿ, ಹತ್ತು ವರ್ಷ ನಿರುದ್ಯೋಗಿಯಾಗಿ ಪರದಾಡಿದ ಸಮಯದಲ್ಲಿ ಮಾಸ್ತಿಯವರು ‘ಜೀವನ’ ಪತ್ರಿಕೆಯ ಸಂಪಾದಕತ್ವವನ್ನು ನೀಡಿ ಆರ್ಥಿಕ ಸಹಾಯವನ್ನು ಮಾಡಿದರು.

ಬೇಂದ್ರೆಯವರ ‘ನಾದಲೀಲೆ’ ಎಂಬ ಕವನ ಸಂಗ್ರಹಕ್ಕೆ ಮುನ್ನುಡಿ ಮಾಸ್ತಿಯವರು ಬರೆದಿದ್ದಾರೆ. ಅದರಲ್ಲಿ ಈ ಪದ್ಯದ ಬಗ್ಗೆ, ಈ ಪದ್ಯದ ವಾಚನ ಬೆಳಗಾವಿಯಲ್ಲಿ ನಡೆದಾಗ ತಮ್ಮ ಮೇಲೆ ಆದ ಪ್ರಭಾವದ ಬಗ್ಗೆ ಬರೆದಿದ್ದಾರೆ... ಮುನ್ನುಡಿಯಲ್ಲಿ–  ‘‘ಇವರನ್ನು ಬೆಳಗಾವಿಯ ಸಾಹಿತ್ಯ ಸಮ್ಮೇಲನದಲ್ಲಿ ಮತ್ತೆ ಕಂಡೆನು. ಆ ಸಮ್ಮೇಲನದಲ್ಲಿ ಬೇಂದ್ರೆಯವರು ’ಹಕ್ಕಿ ಹಾರುತಿದೆ ನೋಡಿದಿರಾ?’ ಎಂಬ ತಮ್ಮ ಕವನವನ್ನು ಓದಿದರು. ಅದನ್ನು ಕೇಳಿದ ಜನ ಎಂಥ ಆನಂದವನ್ನು ಅನುಭವಿಸಿದರೆಂದು ಈಗ ಹೇಳುವದು ಸಾಧ್ಯವಿಲ್ಲ. ಆ ಕವಿತೆಯ ಎಲ್ಲ ಅರ್ಥವನ್ನೂ ಅರಿಯುವದಕ್ಕೆ ಆ ಒಂದು ಓದು ಸಾಕಲ್ಲವೇ ಅಲ್ಲ; ಆದರೆ ಆ ಒಂದು ಓದಿನಿಂದ ಕಂಡಷ್ಟು ಕಾವ್ಯಗುಣದಿಂದಲೇ ಸಾವಿರ ಜನರ ಸಭೆ ಚಕಿತವಾಯಿತು. ಕಾವ್ಯಪ್ರಪಂಚದಲ್ಲಿ ಬಳಕೆಯುಳ್ಳವರು ಈ ಕವಿಯ ಶಕ್ತಿ ಇವನದೇ ಆದ ಹೊಸ ಒಂದು ಶಕ್ತಿ ಎಂದು ಮನಗಂಡರು. ಮಾರನೆಯ ವರ್ಷ ಮೈಸೂರಿನಲ್ಲಿ ನಡೆದ ಸಮ್ಮೇಲನಕ್ಕೆ ಬಂದ ಸಂದರ್ಭದಲ್ಲಿ ಬೇಂದ್ರೆಯವರು ಮೈಸೂರು, ಬೆಂಗಳೂರು ಮತ್ತು ಮೈಸೂರಿನ ಬೇರೆ ಬೇರೆ ದೊಡ್ಡ ಊರುಗಳಲ್ಲಿ ತಮ್ಮ ಕೃತಿಗಳಿಂದ ಜನರನ್ನು ಮುಗ್ಧರನ್ನಾಗಿ ಮಾಡಿದರು... ಆದರೆ ಈಗ ಆಗಿರುವಷ್ಟು ಕಾರ್ಯದಿಂದಲೇ ಶ್ರೀ ಬೇಂದ್ರೆಯವರು ಕನ್ನಡದ ಕಾವ್ಯ ಸಮುದಾಯಕ್ಕೆ ಅನೇಕ ಅತ್ಯುತ್ತಮ ಕವಿತೆಗಳನ್ನು ಸೇರಿಸಿದ್ದಾರೆ. ಹೀಗೆ ಮಾಡುವುದರಲ್ಲಿ ಇವರು ಪ್ರಪಂಚದ ಕಾವ್ಯ ಸಂಪತನ್ನೇ ಬೆಳೆಸಿದ್ದಾರೆ...’’ ಎಂದು ವರಕವಿಯನ್ನು ಮಾಸ್ತಿಯವರು ಮನಸಾರೆ ಮೆಚ್ಚಿಕೊಂಡಿದ್ದಾರೆ.

ಕಾಲದಂಥ ಅಮೂರ್ತ ಮತ್ತು ವ್ಯಾಪಕವಾದ ತತ್ವಕ್ಕೆ ಮೂರ್ತರೂಪ ಕೊಡುವುದು ಸುಲಭಸಾಧ್ಯವಾದ ಕಾರ್ಯವಲ್ಲ. ಹೀಗಿರುವುದರಿಂದ ಓದುಗರು ತಮ್ಮ ಅಪನಂಬಿಕೆಗಳನ್ನು ಹಿಂದೆ ಬಿಟ್ಟು literal imagination  ಪಾತಳಿಯಿಂದ ಮೇಲೇರಿ ಕವಿತೆಯ ಜಗತ್ತನ್ನು ಪ್ರವೇಶಿಸಬೇಕಾಗುತ್ತದೆ. ಪ್ರತಿಮೆಯ ಪ್ರಪಂಚವೆಂದರೆ ಮಾಯೆಯ ಪ್ರಪಂಚ. ಮಾಸ್ತಿಯವರು ಹೇಳಿದ ಹಾಗೆ ‘ಈ ಮಾಯೆಯೇ ಕಾವ್ಯದ ಜೀವಾಳ’. (ಡಾ. ಜಿ.ಎಸ್. ಆಮೂರ, ‘ಭುವನದ ಭಾಗ್ಯ’ ಪುಟ. 237).

ಬೇಂದ್ರೆಯವರ ಕಾಲ ಪಕ್ಷಿಯ ಅದ್ಭುತ ಚಿತ್ರ ಈ ಕವನದಲ್ಲಿ ಪ್ರತಿಮೆಯ ಮೂಲಕ ಸಾಕಾರಗೊಳ್ಳುತ್ತದೆ. ಇಲ್ಲಿಯದು ವಿಶ್ವ ದೃಷ್ಟಿ (The Cosmic view). ಮಾನವನ ಭಾವವನ್ನು ಉನ್ನತೋನ್ನತವಾಗಿ ಹಿಗ್ಗಲಿಸುವುದೇ ಇದರ ಶಕ್ತಿ. ಕನ್ನಡ ಸಾಹಿತ್ಯದಲ್ಲಿ ಇದನ್ನು ಬಳಕೆಗೆ ತಂದವರು ಅಂಬಿಕಾತನಯದತ್ತರು. (ತೀ.ನ. ಶ್ರೀಕಂಠಯ್ಯ, ‘ಸಮಾಲೋಕನ’, ಪುಟ.45). ‘ಕನ್ನಡ ಕವಿತೆಯಲ್ಲಿ ಇದು (ಹಕ್ಕಿ ಹಾರುತಿದೆ ನೋಡಿದಿರಾ?) ಬಂದು ಹೊಸ ತಂತಿಯನ್ನೇ ಮೀಟಿದೆ. ಇದುವರೆಗೂ ಕಾವ್ಯವು ಸಾಮಾನ್ಯವಾಗಿ ಭೂಮಿಯ ಮೇಲೆಯೇ ಮಾನವ ಹೃದಯದಲ್ಲಿಯೇ ಸಂಚರಿಸುತಿತ್ತು. ಕೇವಲ ವಿಶ್ವದ ಕಡೆಗೆ ಅದರ ದೃಷ್ಟಿ ಹರಿದಿರಲಿಲ್ಲ; ಒಂದೇ ಸಲಕ್ಕೆ ವಿಶ್ವವನ್ನೆಲ್ಲಾ ಒಳಗೊಳ್ಳುವಷ್ಟು ವಿಶಾಲವಾಗಿಯೂ ಇರಲಿಲ್ಲ. ಸೂರ್ಯ ಚಂದ್ರ ನಕ್ಷತ್ರಗಳ ಮಾತು ಬಂದರೂ ಆ ಪ್ರಸ್ತಾವಕ್ಕೆಲ್ಲಾ ಭೂಮಿಯೇ ಕೇಂದ್ರವಾಗಿತ್ತು. ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಕವನದಲ್ಲಿ ಈ ದೃಷ್ಟಿ ಹೊರಳಿತು. ಕಾವ್ಯದ ಸಂಕೋಲೆಗಳು ಮುರಿದವು. ಅನಂತವಾದ ಕಾಲವನ್ನೇ ಹಕ್ಕಿಯನ್ನಾಗಿ ರೂಪಿಸಿ ಅದಕ್ಕೆ ಬಣ್ಣ ಬಣ್ಣದ ಗರಿಗಳನ್ನು ಕೊಟ್ಟು, ಅಂಬಿಕಾತನಯದತ್ತರು ಅದರ ಗತಿಯನ್ನು ಉಚಿತವಾದ ಮಾತುಗಳಲ್ಲಿ ವರ್ಣಿಸಿದರು’ (ತೀನಂಶ್ರಿ, ಅದೇ. ಪುಟ.44).

ನಾನು ಈ ಹಿರಿಯ ವಿಮರ್ಶಕರ ಮಾತುಗಳನ್ನು ಉದ್ಧರಿಸುವ ಉದ್ದೇಶವಿಷ್ಟೇ, ಈ ಕವನವನ್ನು ಬರೆದ 1928ರ ಕಾಲಖಂಡದಲ್ಲಿ ಕನ್ನಡದಲ್ಲಿ ಇಂಗ್ಲಿಷ್ ರೊಮ್ಯಾಂಟಿಕ್ ಕಾವ್ಯ ಪ್ರಭಾವದಿಂದ, ತನ್ನ ಕನ್ನಡದ ಸ್ವಂತಿಕೆಯನ್ನು ಉಳಿಸಿಕೊಂಡು ಕನ್ನಡ ನವೋದಯ ಕಾವ್ಯವು ಸಮೃದ್ಧವಾಗಿ ಬೆಳೆಯುತ್ತಿತ್ತು. ಆ ಕಾಲದಲ್ಲಿ ಈ ಕಾವ್ಯದ ಬೆಳವಣಿಗೆಗೆ ಕಾಯಕಲ್ಪ ನೀಡಿದ ವರಕವಿಗಳು ಅಂಬಿಕಾತನಯದತ್ತರು.

ಕವಿತೆಯ ಪ್ರಾರಂಭದ ನುಡಿ ಅಮೂರ್ತವಾದ ಅಚಿಂತ್ಯವಾದ ವಿರಾಟ ಕಾಲಪಕ್ಷಿಯನ್ನು ಬಣ್ಣಿಸುವ ಸಾಹಸಕ್ಕೆ ಬೇಂದ್ರೆಯವರು ಕೈಹಾಕುತ್ತಾರೆ. ವಿರಾಟ ಪ್ರತಿಮೆಗಳನ್ನು (ಕಾಸ್ಮಿಕ್ ಇಮೇಜ್) ಬಳಸುವಲ್ಲಿ ಬೇಂದ್ರೆಯವರು ಮೊದಲಿಗರಾಗುವ ಹೆಗ್ಗಳಿಕೆಯನ್ನು ಪಡೆಯುತ್ತಾರೆ. ಇರುಳು ಮತ್ತು ಬೆಳಗು ಕಾಲವನ್ನು ಅಳೆಯುವ ಮಾನದಂಡಗಳು. ಕಾಲಪಕ್ಷಿ ಎವೆತೆರೆದಿಕ್ಕುವ ಹೊತ್ತಿನಲ್ಲಿ ಮೇಲೆ ಕೆಳಗೆ ಸುತ್ತುಮುತ್ತ ಗಾವುದಗಾವುದ ಮುಂದೆ ಮುಂದೆ ಹಾರುತ್ತದೆ. ಈ ಕಾಲಪಕ್ಷಿಯ ರೆಕ್ಕೆಗಳ ವರ್ಣನೆಯೂ ಅದ್ಭುತವಾಗಿದೆ. ಇದಕ್ಕೆ ಬಣ್ಣಬಣ್ಣದ ಪುಚ್ಚಗಳಿವೆ, ಕರಿನೆರೆ ಬಣ್ಣ, ಕೆಂಬಣ್ಣ ಹೊಂಬಣ್ಣ ಇದೆ. ಇದರ ಬಣ್ಣ ನೀಲ. ಮುಗಿಲಿಗೇ ರೆಕ್ಕೆ ಪಡೆದಂತೆ ಕಾಣುತ್ತಿದೆ. ಇದರ ಕೊರಳಲ್ಲಿ ಚಿಕ್ಕೆಗಳ ಮಾಲೆ ಇದೆ. ಸೂರ್ಯಚಂದ್ರರನ್ನು ತನ್ನ ಕಣ್ಣುಗಳನ್ನಾಗಿಸಿದೆ ಎನ್ನುತ್ತಾರೆ. ಒಬ್ಬ ವಿಮರ್ಶಕರು ಈ ಪಕ್ಷಿಯ ಕಣ್ಣು ಸೂರ್ಯಚಂದ್ರ ಏಕೆ? ಎಂದು ಕೇಳಿದ್ದಾರೆ. ಕಾಲಪುರುಷ ಇಲ್ಲಿ ಹಕ್ಕಿಯ ರೂಪ ಪಡೆದಿದ್ದಾನೆ. ಅವನೇ ಪರಮಪುರುಷ. ಅವರು ಸಹಸ್ರಶೀರ್ಷ ಸಹಸ್ರಬಾಹು. ಅವನ ಬಲಗಣ್ಣು ಸೂರ್ಯ, ಎಡಗಣ್ಣು ಚಂದ್ರ ಎಂದು ಪುರುಷಸೂಕ್ತದಲ್ಲಿ ವರ್ಣನೆಯಿದೆ. ಕಾಲಪಕ್ಷಿಯ ಕಣ್ಣುಗಳು ಸ್ವಾಭಾವಿಕವಾಗಿ ಸೂರ್ಯಚಂದ್ರರೇ ಆಗಬೇಕಲ್ಲವೇ?

ಕಾಲಪಕ್ಷಿ ರಾಜ್ಯ ಸಾಮ್ರಾಜ್ಯಗಳ ತೆನೆಗಳನ್ನು ಒಕ್ಕಿಬಿಡುತ್ತದೆ, ಕುಕ್ಕಿಬಿಡುತ್ತದೆ. ಮಂಡಲಗಳನ್ನು ಮಂಡಲಾಧೀಶ್ವರರನ್ನು ಮುಕ್ಕಿಬಿಡುತ್ತದೆ. ಸಾರ್ವಭೌಮರ ನೆತ್ತಿಯನ್ನು ಕುಕ್ಕಿಬಿಡುತ್ತದೆ ಎಂಬ ಕಲ್ಪನೆಯೂ ಭೌಮದ ಕಲ್ಪನೆಯನ್ನೇ ಮುಂದಿಡುತ್ತದೆ. ಯುಗಯುಗಗಳ ಹಣೆಬರಹವನ್ನು ಅಳಿಸುವ (ಬರೆಯುವ) ಕಾಲಪಕ್ಷಿ  ಹೊಸತಾಗಿ ಬರುವ ಮನ್ವಂತರಗಳ ಭಾಗ್ಯವನ್ನು ತೆರೆಯುತ್ತದೆ. ರೆಕ್ಕೆಯ ಬೀಸುತ ಚೇತನಗೊಳಿಸಿ ಎಂಬಲ್ಲಿ ಮೂರ್ಛೆಹೋದವರನ್ನು ಎಚ್ಚರಿಸಿ ಎಂಬ ಕಲ್ಪನೆಯಿದೆ. ಹೊಸಗಾಲದ ಹಸುಮಕ್ಕಳ ಹರಸಿ ಎನ್ನುವಲ್ಲಿ ಈ ಕಾಲಪಕ್ಷಿ ವಿಧ್ವಂಸಕ ಕೃತಿಯಲ್ಲಿ ಅಷ್ಟೇ ತೊಡಗಿಲ್ಲ, ಹೊಸಕಾಲದ ಮಕ್ಕಳನ್ನು ಹರಸುತ್ತದೆ ಎಂಬ ಧನಾತ್ಮಕ ಅಂಶವಿದೆ. ಈ ಸಾಲು ಓದುವಾಗ ಕವಿ ಟಿ.ಎಸ್. ಎಲಿಯಟ್‌ನ ಸಾಲು, ‘ಜಗತ್ತಿನ ಕೊನೆ ಮರಣ-ಗಂಟೆಯಿಂದಲ್ಲ, ಮಕ್ಕಳ ಆಕ್ರಂದನದಿಂದ’ ಎಂಬುದು ನೆನಪಿಗೆ ಬರುತ್ತದೆ (It is way the world ends | not with a bang but with a whimper).

ಬೆಳ್ಳಿಯ ಹಳ್ಳಿ ಶುಕ್ರ ನಕ್ಷತ್ರವನ್ನು ನೆನಪಿಗೆ ತರುತ್ತದೆ. ಇಲ್ಲಿ ‘ಜಾಗತಿಕ ಹಳ್ಳಿ’ (ಗ್ಲೋಬಲ್‌ ವಿಲೇಜ್‌) ಕಲ್ಪನೆಯೂ ಇದೆ. ಶುಕ್ರನನ್ನು ಮೀರಿ, ಚಂದ್ರಲೋಕವನ್ನು ಸೇರಿ, ಕಾಲಪಕ್ಷಿ ಮಂಗಳಲೋಕದ ಅಂಗಳವನ್ನೇರಲಿದೆ ಎಂಬ ಮಾತು ಪ್ರಸ್ತುತ ಕಾಲಖಂಡದಲ್ಲಿ ರೋಮಾಂಚನ ತರುವಂತಹ ಪರಿಕಲ್ಪನೆ. ಈ ಪದ್ಯದ ಮುಕ್ತಾಯ ರೋಚಕವಾಗಿದೆ. ಕಾಲಪಕ್ಷಿ ತನ್ನ ಚುಂಚವನ್ನು ಬ್ರಹ್ಮಾಂಡದ ಆಚೆಗೆ ಚಾಚಿದೆ. ನಮ್ಮ ಲೋಕ ಬ್ರಹ್ಮಾಂಡ. ಬ್ರಹ್ಮನ ಅಂಡ (ಮೊಟ್ಟೆ). ಈ ಪಕ್ಷಿ ಯಾವಾಗಿ ಈ ಮೊಟ್ಟೆಯನ್ನು ಒಡೆದು ಹೊಸ ಸೃಷ್ಟಿಯನ್ನು ತರ­ಲಿದೆಯೋ ಯಾರಿಗೆ ಗೊತ್ತು ಎನ್ನುತ್ತಾರೆ ಕವಿ. ಈ ಸೃಷ್ಟಿಯ ಕೌತುಕದ ನಿರೀಕ್ಷೆ ಮಂಗಳಯಾನದ ಸಾಹಸದಲ್ಲೂ ಇದೆಯಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT