ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ನಾಯಕತ್ವದ ಕನಸು ಬಿತ್ತಿದ ಕೈಲಾಶ್‌

Last Updated 11 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: 2014ನೇ ಸಾಲಿನ ನೊಬೆಲ್‌ ವಿಶ್ವಶಾಂತಿ ಪುರಸ್ಕಾರಕ್ಕೆ ಪಾತ್ರರಾದ ಕೈಲಾಶ್‌ ಸತ್ಯಾರ್ಥಿ ಅವರ ‘ಬಚ್‌ಪನ್‌ ಬಚಾವೋ ಆಂದೋಲನ’ದ (ಬಾಲ್ಯ ರಕ್ಷಿಸಿ ಆಂದೋಲನ) ರಾಜ್ಯದ ಏಕೈಕ ಶಾಖೆಯು ಗಿರಿಜನ ಮಕ್ಕಳಲ್ಲಿ ಸ್ಥಳೀಯ ಆಡಳಿತದ ಕನಸು ಬಿತ್ತಿ, ನಾಯಕತ್ವದ ಗುಣಗಳನ್ನು ಬೆಳೆಸುತ್ತಿದೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕಾಡಂಚಿನ ಗ್ರಾಮ ಮಂಗಲದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಚ್‌ಪನ್‌ ಬಚಾವೋ ಆಂದೋಲನದ ಶಾಖೆಯು, ಈವರೆಗೆ ಕಣಿಯನಪುರ ಕಾಲೊನಿಯ (15), ಖಾರೇಮಾಳದ (2), ಮಂಗಲದ (2), ಆಡಿನ ಕಣಿವೆಯ (3), ಚೆನ್ನಿಕಟ್ಟೆಯ (2), ಗುಡ್ಡೆಕೆರೆಯ (3), ಎಲೆಚೆಟ್ಟಿಯ (1) ಮಕ್ಕಳು ಸೇರಿದಂತೆ ಒಟ್ಟು 28 ಮಕ್ಕಳನ್ನು ಬಾಲಕಾರ್ಮಿಕ ಪದ್ಧತಿ­ಯಿಂದ ಮುಕ್ತಗೊಳಿಸಿ ಶಾಲೆಗೆ ದಾಖಲಿಸಿದೆ. 6 ವರ್ಷದಿಂದ 18 ವರ್ಷದೊಳಗಿನ ಒಟ್ಟು 476 ಮಕ್ಕಳು ಈ ಆಂದೋಲನದಲ್ಲಿ ಭಾಗ­ವಹಿಸುತ್ತಿದ್ದಾರೆ.

ಕಚೇರಿ ಆರಂಭ: ಕೈಲಾಸ್‌ ಸತ್ಯಾರ್ಥಿ ಅವರು ಬೆಂಗಳೂರಿನಲ್ಲಿ ಕಚೇರಿ ಆರಂಭಿಸಿದ ತರು­ವಾಯ, 2010ರ ಆಗಸ್ಟ್‌ನಲ್ಲಿ ಊಟಿಗೆ ಭೇಟಿ ನೀಡುವ ಸಂದರ್ಭದಲ್ಲಿ ಬಂಡೀಪುರದ ಕಾಡಂ­ಚಿನ ಮಂಗಲದ ಬಳಿಯ ಧೋಲ್ಸ್‌ ಡೆನ್‌ ರೆಸಾರ್ಟ್ಸ್‌­ನಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ­ದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಗಿರಿಜನ ಮಕ್ಕಳನ್ನು ನೋಡಿ ಅವರನ್ನು ಶೈಕ್ಷಣಿಕ ಮುಖ್ಯ­ವಾಹಿನಿಗೆ ಕರೆತರಲು ‘ಬಚ್‌ಪನ್‌ ಬಚಾವೋ ಆಂದೋಲನ’ದ ಶಾಖೆಯನ್ನು ಆರಂಭಿಸಿದರು.

ಈ ಆಂದೋಲನವು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ, ಮಕ್ಕಳ ಹಕ್ಕುಗಳ ರಕ್ಷಣೆ, ಮಕ್ಕ­ಳಲ್ಲಿ ಆಡಳಿತದ ಬಗ್ಗೆ ಅರಿವು ಮೂಡಿಸು­ವುದು, ಮಕ್ಕಳ ಗ್ರಂಥಾಲಯ ಸ್ಥಾಪನೆ ಮೂಲಕ ಶೈಕ್ಷಣಿಕ ಅಭಿ­ವೃದ್ಧಿ ಮುಂತಾದ ಯೋಜನೆಗಳನ್ನು ಹೊಂದಿದೆ. ಭಾರತದಲ್ಲಿ 28 ರಾಜ್ಯಗಳಲ್ಲಿ ಆಂದೋಲ­ನದ ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ.

ರಾಜ್ಯದಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲು­ಪೇಟೆ ತಾಲ್ಲೂಕಿನ 5 ಕಂದಾಯ ಗ್ರಾಮ­ಗಳಾದ ಮಂಗಲ, ಎಲಚೆಟ್ಟಿ, ಜಕ್ಕಹಳ್ಳಿ, ಕಣಿಯನಪುರ ಕಾಲೊನಿ ಮತ್ತು ಖಾರೆಮಾಳದ ವ್ಯಾಪ್ತಿಗೆ ಬರುವ ಆಡಿನ ಕಣಿವೆ, ಚೆಲುವರಾಯ­ನ­ಪುರ, ಆನಂಜಿಹುಂಡಿ, ಬೂರುದಾರಹುಂಡಿ, ಚೆನ್ನಿಕಟ್ಟೆ, ಲೊಕ್ಕೆರೆ, ಗುಡೆಕೆರೆ, ಕಣಿಯನಪುರ, ಬಂಡೀಪುರ ಸೇರಿದಂತೆ 14 ಗ್ರಾಮಗಳ ವ್ಯಾಪ್ತಿ­ಯಲ್ಲಿ ಈ ಶಾಖೆ ಕಾರ್ಯ ನಿರ್ವಹಿಸುತ್ತದೆ. ಇಲ್ಲಿ 507 ಮನೆಗಳಿದ್ದು, ಸುಮಾರು 2,200 ಮಂದಿ ವಾಸಿಸುತ್ತಿದ್ದಾರೆ. ಮಂಗಲ ಗ್ರಾಮದ ಸುಬ್ಬಣ್ಣ ಎಂಬುವವರ ಮನೆಯಲ್ಲಿ ಕಚೇರಿ­ಯನ್ನು ಹೊಂದಿದ್ದು, ತಿಂಗಳಿಗೆ  ₨ 1300 ಬಾಡಿಗೆ ಪಾವತಿಸಲಾಗುತ್ತಿದೆ.

ಬಾಲ ಪಂಚಾಯಿತಿ: ಮಕ್ಕಳಲ್ಲಿ ಸ್ಥಳೀಯ ಆಡಳಿ­ತದ ಕನಸು ಬಿತ್ತುವ ಉದ್ದೇಶದಿಂದ ‘ಬಾಲ ಪಂಚಾಯಿತಿ’ ಎಂಬ ಪರಿಕಲ್ಪನೆಯನ್ನು ಬಚ್‌­ಪನ್‌ ಬಚಾವೋ ಆಂದೋಲನ ಹುಟ್ಟು ಹಾಕಿದೆ. ಇಲ್ಲಿ ಮಕ್ಕಳು ಚುನಾವಣಾ ಪ್ರಕ್ರಿಯೆಯ ಮೂಲಕ ಉತ್ತಮ ಅಭ್ಯರ್ಥಿಯಾಗಿ, ಮತದಾರ­ರಾಗಿ, ನಾಯಕರಾಗಿ, ಆಡಳಿತಗಾರರಾಗಿ ಹೊರ­ಹೊಮ್ಮಲು ಮುಕ್ತ ಅವಕಾಶ ನೀಡಲಾಗುತ್ತದೆ. ಪ್ರತಿ ಕಂದಾಯ ಗ್ರಾಮಗಳ ಬಾಲ ಪಂಚಾಯಿ­ತಿಗೆ ಅಧ್ಯಕ್ಷ, ಉಪಾಧ್ಯಕ್ಷ ಮತ್ತು 11 ಸದಸ್ಯರನ್ನು ಚುನಾವಣೆ ಮೂಲಕ ಆರಿಸಲಾಗುತ್ತದೆ.

6ರಿಂದ 18 ವರ್ಷದ ಮಕ್ಕಳು ಸ್ಪರ್ಧಿಸಿ, ತಮ್ಮ ನಾಯಕ­ರನ್ನು ತಾವೇ ಆರಿಸುತ್ತಾರೆ. ಇವರಲ್ಲೇ ಮೂವ­ರನ್ನು, ‘ಮಹಾ ಬಾಲ ಪಂಚಾಯಿತಿ’ಗೆ ಕರೆ­ದೊಯ್ಯ­ಲಾಗುತ್ತದೆ. ಕೈಲಾಶ್‌ ಸತ್ಯಾರ್ಥಿ ಅವರು ಈ ಮಕ್ಕಳನ್ನು ಭೇಟಿಯಾಗಿ, ಯೋಜನೆ­ಗಳನ್ನು ಮನದಟ್ಟು ಮಾಡುತ್ತಾರೆ. ಆ ಮಕ್ಕಳು ಗ್ರಾಮದಲ್ಲಿನ ಪಂಚಾಯಿತಿಗಳಲ್ಲಿ ಯೋಜನೆಯ ಸಾಕಾರಕ್ಕೆ ಪ್ರಯತ್ನಿಸುತ್ತಾರೆ.

ಗ್ರಂಥಾಲಯಗಳು: 5 ಕಂದಾಯ ಗ್ರಾಮಗ­ಳಲ್ಲೂ ಉತ್ತಮ ಗ್ರಂಥಾಲಯಗಳಿದ್ದು ಸಮರ್ಪ­ಕ­ವಾಗಿ ಕಾರ್ಯ ನಿರ್ವಹಿಸುತ್ತಿವೆ. ಮಂಗಲ, ಎಲಚೆಟ್ಟಿ , ಕಣಿಯನಪುರ ಕಾಲೊನಿಯ ತಲಾ 20, ಜಕ್ಕಹಳ್ಳಿಯ 18, ಖಾರೇಮಾಳದ 15 ಮಕ್ಕಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ‘ಗ್ರೋ ಬೈ’ ಮಾದರಿಯ ಓದುವಿಕೆಯ ಹೊಸ ವಿಧಾನವನ್ನು ಅಳವಡಿಸಿ ಗ್ರಂಥಾಲಯ ನಡೆಸಲಾ­ಗು­ತ್ತದೆ. ಮೊದಲಿಗೆ ‘ಜಿ’ ಅಕ್ಷರದ ಹಸಿರಿನಿಂದ ಆರಂಭಿಸಿ, ಕೆಂಪು, ಕಿತ್ತಳೆ, ಬಿಳಿ, ನೀಲಿ, ಹಳದಿ ಬಣ್ಣದ ಪುಸ್ತಕಗಳ ಮೂಲಕ ಮಕ್ಕಳ ಗ್ರಹಿಕೆಯ ಮಟ್ಟವನ್ನು ನಿರ್ಧರಿಸಲಾಗುತ್ತದೆ.

ಇಷ್ಟಲ್ಲದೇ ಬಾಲ್ಯವಿವಾಹ ತಡೆ, ವರದಕ್ಷಿಣೆ ಮತ್ತು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ­ಗಾಗಿ ಮಕ್ಕಳು ಬೀದಿನಾಟಕಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ‘ಬಚ್‌ಪನ್‌ ಬಚಾವೋ ಆಂದೋಲನ’ದ ಸಂಯೋಜಕ ಜಿ.ಸಿ. ನಾರಾಯಣಸ್ವಾಮಿ ಮತ್ತು ಸಹಾಯಕಿ ಜ್ಯೋತಿ ಎಂಬ ಇಬ್ಬರು ಉತ್ಸಾಹಿ ನೌಕರರಿಂದ ಆಂದೋ­ಲ­ನವು ಕಾಡಂಚಿನ ಗ್ರಾಮಗಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ.

ಕೈಲಾಶ್‌ರಿಂದ ಉತ್ತಮ ಮಾಹಿತಿ
ಬಾಲಕಾರ್ಮಿಕ ಪದ್ಧತಿಯನ್ನು ತಡೆಗಟ್ಟುವ ಬಗ್ಗೆ ಕೈಲಾಶ್‌ ಸರ್‌ ಸಲಹೆ ನೀಡಿದರು. ದೆಹಲಿಯಲ್ಲಿ ನಡೆದ ‘ಮಹಾ ಬಾಲ ಪಂಚಾಯಿತಿ’ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ ಮಕ್ಕಳೊಡನೆ ವಿಷಯ ವಿನಿಮಯ ಮಾಡಿಕೊಂಡಿದ್ದು ಉತ್ತಮ ಅನುಭವ.
– ನಾಗೇಂದ್ರ, 9ನೇ ತರಗತಿ ವಿದ್ಯಾರ್ಥಿ

ನೊಬೆಲ್‌ ಪುರಸ್ಕಾರದಿಂದ ಸಂತಸ
ನೊಬೆಲ್‌ ಶಾಂತಿ ಪ್ರಶಸ್ತಿಗೆ ಕೈಲಾಶ್‌ ಸರ್‌ ಪುರಸ್ಕೃತರಾಗಿರುವುದು ಸಂತಸ ತಂದಿದ್ದು, ಮತ್ತಷ್ಟು ಕೆಲಸ ನಿರ್ವಹಿಸಲು ಸ್ಫೂರ್ತಿ ನೀಡಿದೆ. ಇದು ಮಕ್ಕಳಿಗೆ ದೊರೆತ ಪ್ರಶಸ್ತಿ ಎನ್ನುವುದರಲ್ಲಿ ಹೆಚ್ಚಿನ ಸಂತೋಷವಿದೆ ಎನಿಸುತ್ತದೆ.

– ಜಿ.ಸಿ. ನಾರಾಯಣಸ್ವಾಮಿ, ಸಂಯೋಜಕ,
ಬಚಪನ್‌ ಬಚಾವೋ ಆಂದೋಲನ’, ಮಂಗಲ ಗ್ರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT