ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠಗಳು ಜಾತಿ ಪೋಷಿಸುವ ನರ್ಸರಿಗಳು

ವಿಮರ್ಶಕ ಪ್ರೊ.ಜಿ.ಎಚ್‌. ನಾಯಕ ಅನಿಸಿಕೆ
Last Updated 31 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಮೈಸೂರು: ‘ಮಠಗಳು ಜಾತಿ-ಮತ ವ್ಯವಸ್ಥೆಯನ್ನು ಪೋಷಿಸುವ ನರ್ಸರಿಗಳಂತೆ ಕೆಲಸ ನಿರ್ವಹಿಸುತ್ತಿವೆ. ಮತಧರ್ಮಗಳ ಆಧಾರದಲ್ಲಿ ಸಮಾಜವನ್ನು ಹೋಳು ಮಾಡಿ, ಸಂವಿಧಾನದ ಮೂಲ ಆಶಯಕ್ಕೆ ಸವಾಲೊಡ್ಡುತ್ತಿವೆ’ ಎಂದು ಹಿರಿಯ ವಿಮರ್ಶಕ ಪ್ರೊ.ಜಿ.ಎಚ್‌. ನಾಯಕ ಆರೋಪಿಸಿದರು.

‘ಮಡೆಸ್ನಾನ– ಪಂಕ್ತಿಭೇದ, ಮಠಮಾನ್ಯಗಳು ಮತ್ತು ಧಾರ್ಮಿಕ ಸಂಸ್ಥೆಗಳ ಸಾರ್ವಜನಿಕ ಉತ್ತರ­ದಾಯಿತ್ವ’ ಕುರಿತು ನಗರದ ರೋಟರಿ ಸಭಾಂಗಣ­ದಲ್ಲಿ ಬುಧವಾರ ಆಯೋಜಿಸಿದ್ದ ಚಿಂತನಾ ಕಾರ್ಯ­ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಮಡೆಸ್ನಾನ, ಎಡೆಸ್ನಾನ, ಪಂಕ್ತಿಭೇದ ಮುಂತಾದ ಮೌಢ್ಯಾಚರಣೆಗಳ ಮೂಲಕ ಸಂವಿಧಾನದ ಸಮಾನತೆ ಮೌಲ್ಯಕ್ಕೆ ಅವಮಾನ ಮಾಡಲಾಗುತ್ತಿದೆ. ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಮೌಢ್ಯಗಳನ್ನು ಸಮರ್ಥಿಸುವುದು ಸರಿಯಲ್ಲ’ ಎಂದು ಹೇಳಿದರು.

‘ಮೌಢ್ಯ ಪ್ರತಿಬಂಧಕ ಕಾಯ್ದೆ ಮತ್ತು ಮಠಗಳಿಗೆ ಆಡಳಿತಾಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆರಂಭದಲ್ಲಿ ನಿಲುವು ತೆಗೆದು­ಕೊಂಡಿತು. ಆದರೆ, ಕೆಲ ಶಕ್ತಿಗಳ ಒತ್ತಡಕ್ಕೆ ಸಿಲುಕಿ, ಇದೀಗ ಆರಂಭದ ಪೌರುಷ ಕಾಣುತ್ತಿಲ್ಲ. ಈ ಬಗ್ಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಕಠಿಣ ನಿರ್ಧಾರ ತೆಗೆದು­ಕೊಳ್ಳುವ ತಾಕತ್ತಿಲ್ಲವೇ?’ ಎಂದು ಪ್ರಶ್ನಿಸಿದರು.

‘ಗಾಂಧೀಜಿ ಹತ್ಯೆ ಮಾಡಿದ ವ್ಯಕ್ತಿಗೆ ದೇವರ ಸ್ಥಾನ ನೀಡುತ್ತಿರುವುದು ದುರಂತ. ಗೋಡ್ಸೆ­ಯಂತಹ ವ್ಯಕ್ತಿ­ಯನ್ನು ಮೆರೆಸುವುದನ್ನು ಯಾರೂ ಒಪ್ಪಲು ಸಾಧ್ಯ­ವಿಲ್ಲ. ಪ್ರಜಾಪ್ರಭುತ್ವ ಮತ್ತು ಜನ­ಸಂಸ್ಕೃತಿ ವಿರುದ್ಧದ ತೀರ್ಮಾನವನ್ನು ಪ್ರತಿಯೊಬ್ಬರೂ ವಿರೋಧಿಸಲು ಸಂಕಲ್ಪ ತೊಡಬೇಕು. ದೇಶದ ಭವಿ­ಷ್ಯದ ಬಗ್ಗೆ ಯುವತಲೆಮಾರು ಚಿಂತಿಸಿ, ಸರ್ಕಾರ­ವನ್ನು ಬಡಿದೆಬ್ಬಿ­ಸುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ವಿ. ಶ್ರೀರಾಮ­ರೆಡ್ಡಿ ಮಾತನಾಡಿ, ‘ಪುರುಷ ಪ್ರಧಾನ ಸಮಾಜದಲ್ಲಿ ಮೌಢ್ಯ, ಜಾತಿಯತೆಯ ಹೆಸರಿನಲ್ಲಿ ಅಮಾನವೀಯ ಕ್ರೌರ್ಯ ಪ್ರದರ್ಶಿಲಾಗುತ್ತಿದೆ. ಮಡೆಸ್ನಾನ, ಪಂಕ್ತಿ­ಭೇದ ಅನಾಗರಿಕ ಪ್ರವೃತ್ತಿಯಾಗಿವೆ. ಕೆಲವರು ಕಾವಿ ಹಾಕಿಕೊಂಡು ನೆಲದ ಕಾನೂನಿಗೆ ವಿರೋಧವಾಗಿ ವರ್ತಿಸುತ್ತಿದ್ದಾರೆ. ಕಾನೂನಿಗಿಂತ ಯಾರೂ ದೊಡ್ಡವ­ರಲ್ಲ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕು’ ಎಂದು ಅಭಿಪ್ರಾಯಪಟ್ಟರು.

‘ಪೇಜಾವರ ಶ್ರೀಗಳು ತಮ್ಮ ಒಡಲಲ್ಲೇ ಪಂಕ್ತಿ­ಭೇದ­ವನ್ನು ಹೊತ್ತುಕೊಂಡು, ಮೈಸೂರಿನಲ್ಲಿ ದಲಿತಕೇರಿ­ಗಳಿಗೆ ಭೇಟಿ ನೀಡಿರುವುದು ಅಚ್ಚರಿ ಮೂಡಿಸುತ್ತದೆ’ ಎಂದು ವ್ಯಂಗ್ಯವಾಡಿದರು. ವಿಚಾರವಾದಿ ಡಾ.ನರೇಂದ್ರ ನಾಯಕ್‌ ಮಾತ­ನಾಡಿ, ‘ಯುವಪೀಳಿಗೆಯಲ್ಲಿ ಒಂದೆಡೆ ವೈಜ್ಞಾನಿಕ ಚಿಂತನೆ ಬೆಳೆಸಿದರೆ, ಮತ್ತೊಂದೆಡೆ ಮೂಢನಂಬಿಕೆ­ಯನ್ನು ಬಿತ್ತುವ ಕೆಲಸ ನಡೆಯುತ್ತಿದೆ. ಹೀಗಾಗಿ, ಅವರು ಕೂಡ ಗೊಂದಲದಲ್ಲಿದ್ದಾರೆ. ಅವರು ಮೂಢನಂಬಿಕೆಯ ಗುಲಾಮರಾಗದಂತೆ ಎಚ್ಚರಿಸುವ ಕೆಲಸ ಆಗಬೇಕಿದೆ’ ಎಂದರು.

ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್‌. ಶಿವರಾಮು, ಪಿಯುಸಿಎಲ್‌ ಅಧ್ಯಕ್ಷ ಡಾ.ವಿ. ಲಕ್ಷ್ಮೀನಾರಾಯಣ್‌ ಮಾತನಾಡಿದರು. ಎಂ. ಬಸವರಾಜು, ಶಶಿಧರ ಸಂಗಾಪುರ, ದೊಡ್ಡುಂಡಿ ಸಿ. ನಾಗಣ್ಣ, ಎಚ್‌. ಬೀರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT