ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠಾಧೀಶರಿಂದ ಮಹಿಳೆಯರ ಶೋಷಣೆ ಆತಂಕಕಾರಿ

ಸೌಹಾರ್ದ ಸಮಾವೇಶದಲ್ಲಿ ಬಿ.ಟಿ.ಲಲಿತಾ ನಾಯಕ್ ಅಭಿಮತ
Last Updated 21 ಜನವರಿ 2015, 9:02 IST
ಅಕ್ಷರ ಗಾತ್ರ

ಸಾಗರ: ಮನುಷ್ಯರಲ್ಲಿರುವ ಮೃಗೀಯ ವರ್ತನೆಯನ್ನು ಸರಿ ದಾರಿಗೆ ತರಬೇಕಾದ ಮಠಾಧೀಶರೇ ಮಹಿಳೆಯರ ಶೋಷಣೆ ನಡೆಸುವುದು ಆತಂಕಕಾರಿ ಬೆಳವಣಿಗೆ  ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಹೇಳಿದರು.

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಕೇಂದ್ರ ಸಮಿತಿ ಧಾರ್ಮಿಕ ಭಯೋತ್ಪಾದನೆ, ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಮಂಗಳವಾರ ಏರ್ಪಡಿಸಿದ್ದ ಸೌಹಾರ್ದ ಸಮಾವೇಶದಲ್ಲಿ ಮಾತನಾಡಿದರು.

  ದೇವರು ಧರ್ಮದ ಹೆಸರಿನಲ್ಲಿ ಮೌಢ್ಯಕ್ಕೆ ಸಿಲುಕಿರುವ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ಮೇಲೂ ಇಂತಹದ್ದೇ ಗಂಭೀರ ಆರೋಪ ಬಂದಿದೆ. ಇಂತಹ ಆರೋಪ ಎದುರಿಸುತ್ತಿರುವ ವ್ಯಕ್ತಿಗಳು ಯಾವುದೇ ರೀತಿಯ ಗೌರವಕ್ಕೆ ಅರ್ಹರಲ್ಲ. ಭಕ್ತಿಯ ಹೆಸರಿನಲ್ಲಿ ಇಂತವರ ಕಾಲಿಗೆ ನಮಸ್ಕರಿಸುವ ಬದಲು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಗೌರವ ಸೂಚಿಸುವುದೇ ಸೂಕ್ತ ಎಂದು ಅಭಿಪ್ರಾಯಪಟ್ಟರು.

ಸಮಾಜಕ್ಕೆ ಸ್ವಾಮೀಜಿಗಳ, ಜ್ಯೋತಿಷಿಗಳ, ರಾಜಕಾರಣಿ ವೇಷದ ವಸೂಲಿದಾರ ಉದ್ಯಮಿಗಳ ಕಾಟ ದಿನೇ ದಿನೇ ಹೆಚ್ಚುತ್ತಿದೆ. ನಾವು ಮಾಡುವ ಒಳ್ಳೆಯ ಕೆಲಸಗಳೇ ದೇವರು ಹೊರತು, ಯಾವುದೆ ಸ್ವಾಮೀಜಿ ದೇವರಲ್ಲ ಎಂಬ ಸತ್ಯವನ್ನು ಪ್ರತಿಯೊಬ್ಬರೂ ಅರಿಯಬೇಕಿದೆ ಎಂದರು.

ವಿಧಾನ ಪರಿಷತ್‌ನ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್ ಮಾತನಾಡಿ, ರಾಘವೇಶ್ವರ ಶ್ರೀಗಳನ್ನು ಬೆಂಬಲಿಸಿ ಸಾಗರದಲ್ಲಿ ನಡೆದ ಗುರುಭಕ್ತರ ಸಮಾವೇಶದಲ್ಲಿ ಅದರ ಔಚಿತ್ಯವನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ಪ್ರಶ್ನಿಸಿದ ದಲಿತ ಮುಖಂಡ ಪರಮೇಶ್ವರ ದೂಗೂರು ಅವರ ಮೇಲೆ ನಡೆದಿರುವ ಹಲ್ಲೆ ತಾಲಿಬಾನಿ ಸಂಸ್ಕೃತಿಯನ್ನು ಸೂಚಿಸುತ್ತದೆ ಎಂದು ಟೀಕಿಸಿದರು.

ಸಮಾಜದ ಒಳಿತಿಗೆ ಶ್ರಮಿಸಿದ ಈ ಭಾಗದ ವರದಹಳ್ಳಿ ಶ್ರೀಧರ ಸ್ವಾಮಿ ನಮಗೆ ಮಾದರಿಯೇ ಹೊರತು ಮಹಿಳೆ ಕಣ್ಣಲ್ಲಿ ನೀರು ಹಾಕಿಸುತ್ತಿರುವ ರಾಘವೇಶ್ವರ ಶ್ರೀಗಳಲ್ಲ ಎಂದರು.

ಶಿವಮೊಗ್ಗದ ನಮ್ಮ ಹಕ್ಕು ವೇದಿಕೆಯ ಕೆ.ಪಿ.ಶ್ರೀಪಾಲ್ ಮಾತನಾಡಿ, ರಾಘವೇಶ್ವರ ಶ್ರೀಗಳ ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದಿಂದ ಮೂವರು ನ್ಯಾಯಮೂರ್ತಿಗಳು ಹಿಂದಕ್ಕೆ ಸರಿದಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ಯಾವ ಕಾರಣಗಳಿಗಾಗಿ ಇವರು ಹಿಂದೆ ಸರಿದರು ಎನ್ನುವುದು ರಾಜ್ಯದ ಜನತೆಗೆ ಗೊತ್ತಾಗಬೇಕಿದೆ ಎಂದು  ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್ ಮಾತನಾಡಿ, ಸಂಸ್ಕೃತಿಯ ವಕ್ತಾರರು ಎಂದು ಬಿಂಬಿಸಿಕೊಳ್ಳುವ ಆರ್‌ಎಸ್‌ಎಸ್‌ ಮುಖಂಡರು ರಾಘವೇಶ್ವರ ಶ್ರೀಗಳ ಮೇಲೆ ಬಂದಿರುವ ಆರೋಪದ ಬಗ್ಗೆ ಮೌನ ವಹಿಸಿರುವುದು ಯಾಕೆ ಎಂದು ಪ್ರಶ್ನಿಸಿ, ಈ ಭಾಗದ ಹಿರಿಯ ರಾಜಕೀಯ ಮುಖಂಡರಾದ ಕಾಗೋಡು ತಿಮ್ಮಪ್ಪ ಅವರು ಕೂಡ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು. 

ಸಂತ ಜೋಸೆಫರ ದೇವಾಲಯದ ಧರ್ಮಗುರು ಫಾದರ್ ವೀನಸ್‌ ಪ್ರವೀಣ್‌, ನಗರಸಭೆ ಅಧ್ಯಕ್ಷೆ ಎನ್.ಲಲಿತಮ್ಮ, ಸಾಮಾಜಿಕ ಕಾರ್ಯಕರ್ತ ಅಣ್ಣಪ್ಪ ಶಿವಗಂಗೆ, ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಶಾಖೆಯ ಅಧ್ಯಕ್ಷ ಗುರುಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT