ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಲು ಸೇರುವ ಮುನ್ನ

ದತ್ತು ಯಾಕೀ ವಿಳಂಬ?
Last Updated 6 ಮಾರ್ಚ್ 2015, 20:28 IST
ಅಕ್ಷರ ಗಾತ್ರ

ಅಧಿಕೃತ ಸಂಸ್ಥೆಗಳಲ್ಲಿ ನೋಂದಣಿ ಮಾಡಿಸಿ ವರ್ಷಾನುಗಟ್ಟಲೆ ಕಾಯ್ದರೂ ಮಗುವನ್ನು ದತ್ತು ಪಡೆಯಲು ಕೆಲ ದಂಪತಿಗೆ ಸಾಧ್ಯವಾಗುತ್ತಿಲ್ಲ. ದೇಶದಾದ್ಯಂತ ದತ್ತು ಪ್ರಕ್ರಿಯೆ ವಿಳಂಬವಾಗುತ್ತಿರುವ ಬಗ್ಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಇತ್ತೀಚೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಹಾಗಿದ್ದರೆ ವಿಳಂಬಕ್ಕೆ ಕಾರಣಗಳೇನು? ಅನಾಥ ಮಕ್ಕಳು ನಿರ್ಭಾವುಕ ಸಾಮಾಜಿಕ ವಾತಾವರಣದಿಂದ ಹೊರಬಂದು, ಹೊಸ ಬದುಕು ಕಟ್ಟಿಕೊಳ್ಳಲು ನೆರವಾಗುವ ಅಂಶಗಳಾವುವು? ಈ ಕುರಿತ ವಿಶ್ಲೇಷಣೆ...

‘ಮನೆಗೊಂದು ಮಗುವಿರಲಿ, ಮನೆ ತುಂಬಾ ನಗುವಿರಲಿ’ ಎಂಬ ಮಾತಿದೆ. ಮಕ್ಕಳಿರುವ ಮನೆಯ ಕಲರವವನ್ನು ಕಣ್ತುಂಬಿ­ಕೊಳ್ಳುವುದೇ ಪರಮಾನಂದ. ಆದರೆ, ಕೆಲ ದಂಪತಿ ಇಂಥ ಸಂತೋಷದಿಂದ ವಂಚಿತರಾಗಿ­ರುತ್ತಾರೆ. ಅಂಥವರಿಗೆ ದತ್ತು ಎಂಬುದು ದೇವರು ಇನ್ನೊಂದು ರೂಪದಲ್ಲಿ ಕರುಣಿಸುವ ವರ ಎನ್ನಬಹುದು. ದತ್ತು ಬೇಕೆಂದು ಬರುವ ದಂಪತಿಯ ಹಲವಾರು ಮುಖಗಳನ್ನು ನಾವು ದಿನನಿತ್ಯ ನೋಡುತ್ತಿರುತ್ತೇವೆ.

ಕೆಲ ದಿನಗಳ ಹಿಂದೆ ದತ್ತು ಸಂಸ್ಥೆಗೆ ಬಂದಿದ್ದ ದಂಪತಿ, ಎರಡು ತಿಂಗಳಲ್ಲಿ ಮಗು ಬೇಕು ಎಂದು ಹಟ ಹಿಡಿದಿದ್ದರು. ಅವರ ಮೊಗದಲ್ಲಿ ಏನೋ ಆತಂಕ. ಕಾರಣ ಹುಡುಕಿದಾಗ ಅಚ್ಚರಿಯ ಅಂಶವೊಂದು ಗೊತ್ತಾ-­­ಯಿತು. ತಾನು ಗರ್ಭಿಣಿಯಾಗಿದ್ದು ಎರಡು ತಿಂಗಳಲ್ಲಿ ಮಗು ಜನಿಸಲಿದೆ ಎಂದು ಆಕೆ ದೂರದಲ್ಲಿರುವ ಪೋಷಕರನ್ನು ನಂಬಿಸಿದ್ದಳು.

ಇದೇ ಆತಂಕದಲ್ಲಿ ಆ ದಂಪತಿ ಸಂಸ್ಥೆಗೆ ಬಂದು ಮಗುವೊಂದನ್ನು ದತ್ತು ತೆಗೆದುಕೊಳ್ಳಲು ತುರ್ತು ಮನವಿ ಇಟ್ಟಿದ್ದರು. ಗರ್ಭಿಣಿಯಾದರೆ ತನ್ನ ಸೌಂದರ್ಯ ಹಾಳಾಗಬಹುದು ಎಂಬ ಆತಂಕ ಅವಳಿಗೆ. ಆದರೆ, ಮೊಮ್ಮಗು ಬೇಕು ಎಂಬುದು ಈ ದಂಪತಿಯ ಪೋಷಕರ ಒತ್ತಡ. ಹೀಗಾಗಿ ಈ ರೀತಿ ನಾಟಕ ಹೆಣೆಯುವುದು ಅವರಿಗೆ ಅನಿವಾರ್ಯವಾಗಿತ್ತು.

ಇನ್ನೊಬ್ಬ ಮಹಿಳೆ ವಿದೇಶದಲ್ಲಿ ಉದ್ಯೋಗದಲ್ಲಿರುವ ಪತಿಗೆ ತಾನು ಗರ್ಭಿಣಿ ಎಂದು ಸುಳ್ಳು ಹೇಳಿದ್ದಳು. ಹೆರಿಗೆ ಸಮಯಕ್ಕೆ ಸ್ವದೇಶಕ್ಕೆ ಬರುತ್ತೇನೆ ಎಂದು ಪತಿ ಹೇಳಿದಾಗ ವಿಚಲಿತಳಾದ ಆಕೆ, ಮಗುವನ್ನು ದತ್ತು ನೀಡುವಂತೆ ಸಂಸ್ಥೆಯನ್ನು ಕೋರಿಕೊಂಡಿದ್ದಳು.
ಮತ್ತೊಂದು ಪ್ರಕರಣದಲ್ಲಿ, ಹೆರಿಗೆ ಸಮಯದಲ್ಲಿ ಮಗು ಆಸ್ಪತ್ರೆಯಲ್ಲೇ ಸಾವನ್ನಪ್ಪಿತು. ಆದರೆ, ಅತ್ತೆ ಮಾವ ತನ್ನನ್ನು ನಿಂದಿಸುತ್ತಾರೆ ಎಂಬ ಭಯ ಆ ತಾಯಿಯಲ್ಲಿತ್ತು. ಹೇಗಾದರೂ ಮಗುವೊಂದನ್ನು ಅತ್ತೆ ಮಾವನಿಗೆ ತೋರಿಸ­ಬೇಕು ಎಂದು ನಿರ್ಧರಿಸಿದ ಆಕೆ ಕೂಡ ದತ್ತು ಕೇಂದ್ರದ ಬಾಗಿಲು ತಟ್ಟಿದ್ದಳು.

ಇವು ಈಚಿನ ಉದಾಹರಣೆಗಳು ಅಷ್ಟೆ. ಇಂಥ ವಿಚಿತ್ರ ಮನವಿಗಳು ದತ್ತು ಕೇಂದ್ರಗಳಿಗೆ ಬರುತ್ತಲೇ ಇರುತ್ತವೆ. ಅಮ್ಮನ ಕರುಳಬಳ್ಳಿ ಕಡಿದುಕೊಂಡು ಬಾಹ್ಯ ಜಗತ್ತು ಕಾಣಲು ಕಂದನಿಗೆ ಒಂಬತ್ತು ತಿಂಗಳು ಬೇಕು. ಆದರೆ, ಬೇಡಿಕೆಯಿಟ್ಟ ಒಂದೆರಡು ತಿಂಗಳಲ್ಲೇ ಮಗು ಕೊಡಿ ಎಂದು ಕೆಲವರು ಕೇಳುತ್ತಾರೆ. ಹೀಗೆ ಬೇರೆ ಬೇರೆ ರಾಜ್ಯಗಳಿಂದ ಕೂಡ ಮಕ್ಕಳನ್ನು ದತ್ತು ಪಡೆಯಲು ಬೇಡಿಕೆ ಬರುತ್ತಲೇ ಇರುತ್ತದೆ.

ಆದರೆ, ದತ್ತು ಸಂಸ್ಥೆಗಳ ಸಮಸ್ಯೆಯೇ ಬೇರೆ. ಸಂಸ್ಥೆಗಳಿಗೆ ಬರುವ ಮಕ್ಕಳ ಸಂಖ್ಯೆ ಇತ್ತೀಚೆಗೆ ತೀರಾ ಕಡಿಮೆಯಾಗಿದೆ. ಇದೇ ಕಾರಣಕ್ಕಾಗಿ ನಿರೀಕ್ಷಿತ ಪ್ರಮಾಣದಲ್ಲಿ ದತ್ತು ಕೊಡಲು ಸಾಧ್ಯವಾಗುತ್ತಿಲ್ಲ. ದತ್ತು ಪಡೆಯಲು ಬರುವ ದಂಪತಿ ವರ್ಷಾನುಗಟ್ಟಲೆ ಕಾಯುವುದು ಅನಿವಾರ್ಯವಾಗಿದೆ.

ಆದ್ಯತೆ ಮೇರೆಗೆ ದತ್ತು: ನಮ್ಮ ‘ಮಾತೃಛಾಯಾ’ ಸಂಸ್ಥೆಯನ್ನೇ ಉದಾಹರಣೆ ತೆಗೆದುಕೊಳ್ಳಿ. ಮಕ್ಕಳು ಬೇಕೆಂದು ಸದ್ಯ 30 ದಂಪತಿ

ಇಲ್ಲಿ ನೋಂದಣಿ ಮಾಡಿಸಿದ್ದಾರೆ. ಇಷ್ಟು ದಂಪತಿಗೆ ಮಕ್ಕಳನ್ನು ಪೂರೈಸಲು ಸುಮಾರು ಎರಡು ವರ್ಷಗಳಾದರೂ ಹಿಡಿಯುತ್ತದೆ. ಕಾಯುವ ತಾಳ್ಮೆ ಇರಬೇಕು ಅಷ್ಟೆ. ಈ ಸಂಸ್ಥೆಯಲ್ಲಿ ಸದ್ಯ ದತ್ತು ಪ್ರಕ್ರಿಯೆಗೆ ಸಿದ್ಧವಾಗುತ್ತಿರುವ ಆರು ಮಕ್ಕಳಿದ್ದು ಆದ್ಯತೆ ಮೇರೆಗೆ ನಿೀಡಲಾಗುತ್ತದೆ.

ಅನಾಥಾಶ್ರಮಕ್ಕೂ ದತ್ತು ಸಂಸ್ಥೆಗಳಿಗೂ ವ್ಯತ್ಯಾಸವಿದೆ. ಅನಾಥಾ­ಶ್ರಮದಲ್ಲಿರುವ ಮಕ್ಕಳೆಲ್ಲರೂ ದತ್ತು ಪಡೆಯಲು ಅರ್ಹರಲ್ಲ. ಏಕೆಂದರೆ ಆ ಮಕ್ಕಳಿಗೆ ಪೋಷಕರು ಅಥವಾ ಸಂಬಂಧಿಕರು ಇರುತ್ತಾರೆ. ಮಗುವಿಗೆ ಯಾರೂ ವಾರಸುದಾರರಿಲ್ಲ ಎಂಬುದನ್ನು ದೃಢಪಡಿಸಿಕೊಂಡ ಮೇಲಷ್ಟೇ ದತ್ತು ಪ್ರಕ್ರಿಯೆ ಆರಂಭವಾಗುತ್ತದೆ. ಸರ್ಕಾರದ ಪರವಾನಗಿ ಪಡೆದ ಏಜೆನ್ಸಿಗಳು ಮಾತ್ರ ಮಕ್ಕಳನ್ನು ದತ್ತು ನೀಡಲು ಅರ್ಹವಾಗಿರುತ್ತವೆ.

ದತ್ತು ಸಂಸ್ಥೆಗೆ ಮಗುವೊಂದು ಲಭಿಸಿದ ನಂತರ ಅದನ್ನು ದತ್ತು ಪ್ರಕ್ರಿಯೆಗೆ ಒಳಪಡಿಸಲು 3ರಿಂದ 4 ತಿಂಗಳು ಬೇಕು. ಈಗ ಪ್ರಕ್ರಿಯೆ ಸರಳವಾಗಿದ್ದು, ಯಾವುದೇ ಸಮಸ್ಯೆ ಇಲ್ಲ. ಆದರೆ, ಸಂಸ್ಥೆಯಲ್ಲಿ ಮಕ್ಕಳು ಇಲ್ಲದಿದ್ದಾಗ ಕಾಯಲೇಬೇಕಾಗುತ್ತದೆ. ‌ಟೆಕ್ಕಿಗಳಿಂದ ಬೇಡಿಕೆ: ಐ.ಟಿ, ಬಿ.ಟಿ ಉದ್ಯೋಗಿಗಳು ಮಕ್ಕಳನ್ನು ದತ್ತು ಪಡೆದುಕೊಳ್ಳಲು ಹೆಚ್ಚಾಗಿ ಆಸಕ್ತಿ ತೋರಿಸುತ್ತಿದ್ದಾರೆ. ದಿನಕ್ಕೆ 15ರಿಂದ 20 ಮಂದಿ ಕರೆ ಮಾಡುತ್ತಾರೆ. ಕೆಲವರು ಬೇರೆ ರಾಜ್ಯಗಳಿಗೆ ಹೋಗಿ ದತ್ತು ಪಡೆಯುತ್ತಿದ್ದಾರೆ. ಕೆಲ ದಂಪತಿ, ಮಗುವಿಗಾಗಿ ಹಂಬಲಿಸಿ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ವ್ಯಯಿಸಿರುತ್ತಾರೆ. ಔಷಧಿ ಸೇವನೆ ಹಾಗೂ ಒತ್ತಡದಿಂದಾಗಿ ಆರೋಗ್ಯವೂ ಕೆಟ್ಟು ಹೋಗಿರುತ್ತದೆ. ಕೊನೆಗೆ ನಿರಾಸೆಯಿಂದ ದತ್ತು ಸಂಸ್ಥೆಗೆ ಬಂದು ಮಗುವಿಗಾಗಿ ಬೇಡಿಕೆ ಇಡುತ್ತಾರೆ. ಆದರೆ, ಕಾಯುವ ತಾಳ್ಮೆ ಮಾತ್ರ ಅವರಿಗಿರುವುದಿಲ್ಲ.

ಹಿಂದೆ ದತ್ತು ಕೇಂದ್ರಕ್ಕೆ ಸಿಗುತ್ತಿದ್ದ ಮಕ್ಕಳ ಸಂಖ್ಯೆಯೂ ಅಧಿಕವಿತ್ತು. ಮದುವೆಗೆ ಮುಂಚೆ ಜನ್ಮ ನೀಡಿದವರು ಮಗುವನ್ನು ಆಸ್ಪತ್ರೆಯಲ್ಲೊ, ಬಸ್‌, ರೈಲು ನಿಲ್ದಾಣದಲ್ಲೊ ಬಿಟ್ಟು ಹೋಗುತ್ತಿದ್ದರು. ಈ ರೀತಿ ಸಿಕ್ಕಿದ ಮಕ್ಕಳನ್ನು ಪೊಲೀಸರ ಕಸ್ಟಡಿಯಿಂದ ಮಕ್ಕಳ ಕಲ್ಯಾಣ ಸಮಿತಿಗೆ, ಅಲ್ಲಿಂದ ಮಕ್ಕಳ ದತ್ತು ಏಜೆನ್ಸಿಗಳಿಗೆ ಕಳುಹಿಸಲಾಗುತ್ತಿತ್ತು.  ಹಾಗೇ ನಾಲ್ಕೈದು ಹೆಣ್ಣು ಮಕ್ಕಳಾದವರು, ಬಡತನದಿಂದಾಗಿ ಮಕ್ಕಳನ್ನು ದತ್ತು ಸಂಸ್ಥೆಗಳಲ್ಲಿ ಬಿಟ್ಟು ಹೋಗುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಎಷ್ಟೇ ಮಕ್ಕಳು ಇದ್ದರೂ ಸಾಕುವ ಧೈರ್ಯವಿರುತ್ತದೆ. ಗರ್ಭ ನಿಯಂತ್ರಿಸುವ ಕುರಿತಾದ ಅರಿವು, ಮಾಧ್ಯಮಗಳ ಪ್ರಭಾವ... ಹೀಗೆ ಹತ್ತು ಹಲವು ಕಾರಣಗಳಿಂದ ದತ್ತು ಸಂಸ್ಥೆಗೆ ಬರುವ ಮಕ್ಕಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. 

ಆರೋಗ್ಯವಂತ ಮಗುವನ್ನು ಬಿಟ್ಟು ಹೋಗುವವರ ಸಂಖ್ಯೆ ವಿರಳ. ಏನಾದರೂ ಸಮಸ್ಯೆ ಇದ್ದರೆ, ಅಂಗವಿಕಲರಾಗಿದ್ದರೆ, ಬುದ್ಧಿಮಾಂದ್ಯ­ರಾಗಿದ್ದರೆ ಬಿಟ್ಟು ಹೋಗುತ್ತಾರೆ. ಆದರೆ, ಸಂಸ್ಥೆಗಳಲ್ಲಿ ನೋಂದಣಿ ಮಾಡಿಸಿರು­ವವರು ಇಂಥ ಮಕ್ಕಳನ್ನು ದತ್ತು ಪಡೆಯಲು ಹಿಂದೇಟು ಹಾಕುತ್ತಾರೆ. ಉದಾಹರಣೆ ನೀಡುವುದಾದರೆ ಮಗುವಿನ ಕಾಲು ಬೆರಳುಗಳನ್ನು ಇರುವೆಗಳು ತಿಂದು ಹಾಕಿರುವ ಸಂದರ್ಭ ಇರಬಹುದು, ಮಗುವಿಗೆ ಕಣ್ಣಿನ ತೊಂದರೆ ಇರಬಹುದು... ಇಂಥ ಮಕ್ಕಳನ್ನು ದತ್ತು ತೆಗೆದುಕೊಳ್ಳುವವರ ಸಂಖ್ಯೆ ಕಡಿಮೆ.

ಕೆಲವರಿಗೆ ಸುಂದರವಾದ ದಷ್ಟಪುಷ್ಟ ಮಗುವೇ ಬೇಕು. ಅಲ್ಲದೆ, ಮಕ್ಕಳನ್ನು ಕಾನೂನಿನ ಚೌಕಟ್ಟಿನಲ್ಲಿ ಪಡೆಯಲು ಕಾಯುವ ವ್ಯವಧಾನ ಇಲ್ಲದೇ ಇರುವು­ದರಿಂದ ಅನಧಿಕೃತ ದತ್ತು ಪ್ರಕರಣಗಳು ಹೆಚ್ಚಾಗುತ್ತಿವೆ. ಆಸ್ಪತ್ರೆಗಳಲ್ಲೇ ಮಕ್ಕಳ ಮಾರಾಟ ನಡೆಯುತ್ತಿದೆ. ಇದರಿಂದ ಅಧಿಕೃತ ಸಂಸ್ಥೆಗಳನ್ನು ಸೇರುವ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ.

ಸಮಸ್ಯೆಗಳು ನೂರು: ಕೆಲ ಜಿಲ್ಲೆಗಳಲ್ಲಿ ದತ್ತು ಪ್ರಕ್ರಿಯೆ ವಿಳಂಬವಾಗುತ್ತಿದೆ. ಮಕ್ಕಳ ಕಲ್ಯಾಣ ಸಮಿತಿಯು ಸಭೆ ಸೇರುವುದು ಹಾಗೂ  ಪೊಲೀಸ್‌ ಪರಿಶೀಲನಾ ವರದಿ ಪ್ರಕ್ರಿಯೆ ನಿಧಾನವಾಗು­ತ್ತಿರು­ವುದು ಇದಕ್ಕೆ ಮುಖ್ಯ ಕಾರಣ. ಆದರೆ, ಬೆಂಗಳೂರಿನಲ್ಲಿ ಸದ್ಯಕ್ಕೆ ಈ ಸಮಸ್ಯೆ ಇಲ್ಲ.

ಮಗು ದತ್ತು ಪಡೆಯುವವರಿಗೆ ಸಂಸ್ಥೆ ವಿಧಿಸುವ ಶುಲ್ಕ  40 ಸಾವಿರ. ಆದರೆ, ಆ ಮಗುವನ್ನು ನಾವು ಸಂಸ್ಥೆಯಲ್ಲಿ ಮೂರು ತಿಂಗಳು ಪೋಷಿಸಿರುತ್ತೇವೆ. ಪ್ರತಿದಿನ  300ರಿಂದ 400 ಖರ್ಚು ಮಾಡಿರುತ್ತೇವೆ. ಜೊತೆಗೆ ಮಗುವಿನ ವೈದ್ಯಕೀಯ ವೆಚ್ಚ ಭರಿಸಿರುತ್ತೇವೆ. ಕೆಲ ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಿಸಬೇಕಾಗುತ್ತದೆ.

ಬುದ್ಧಿಮಾಂದ್ಯ ಮಕ್ಕಳಿಗೆ ವಿಶೇಷ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ. ಇಂಥ ಮಕ್ಕಳನ್ನು ನೋಡಿಕೊಳ್ಳಲು ನುರಿತ ತರಬೇತುದಾರರನ್ನು ನೇಮಿಸ­ಬೇಕಾಗುತ್ತದೆ. ಉಪಕರಣಗಳನ್ನು ಖರೀದಿಸಬೇಕಾಗುತ್ತದೆ.  ನಿರ್ವಹಣೆಗೆ ಹೆಚ್ಚು ಖರ್ಚಾಗುತ್ತದೆ. ಆದರೆ ಇದಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಬರುವುದಿಲ್ಲ. ಕೆಲ ದತ್ತು ಸಂಸ್ಥೆಗಳ ಕಾರ್ಯವೈಖರಿ ತೃಪ್ತಿಕರವಾಗಿಲ್ಲ. ಇಂಥ ಸಂಸ್ಥೆ­ಗಳಿಗೆ ಎಚ್ಚರಿಕೆ, ಸೂಕ್ತ ಮಾರ್ಗದರ್ಶನ ನೀಡಬೇಕು. ಸರಿಯಾಗಿ ಕಾರ್ಯ­ನಿರ್ವಹಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕು. ಆದರೆ, ಸರಿ­ಯಾಗಿ ಪರಿಶೀಲಿಸದೆ ಎಲ್ಲ ಸಂಸ್ಥೆಗಳೂ ನಿಷ್ಕ್ರಿಯವಾಗಿವೆ ಎನ್ನುವುದು ತಪ್ಪು.

ದತ್ತು ಎನ್ನುವುದು ತುಂಬಾ ಸೂಕ್ಷ್ಮ ವಿಷಯ. ಹಾಗಾಗಿ ದತ್ತು ತೆಗೆದು­ಕೊಳ್ಳುವ ದಂಪತಿಯಲ್ಲಿ ಹಲವಾರು ಪ್ರಶ್ನೆಗಳು ಏಳುತ್ತವೆ. ಮುಂದೆ ಏನಾದರೂ ತೊಂದರೆಯಾಗಬಹುದು ಎಂಬ ಆತಂಕ ಕಾಡುತ್ತಿರುತ್ತದೆ. ಆ ಮನೋಭಾವದಿಂದ ಅವರನ್ನು ಹೊರತರುವುದು ಸವಾಲಿನ ಕೆಲಸ. ಅದಕ್ಕಾಗಿ ಆಪ್ತ ಸಮಾಲೋಚನೆ ಮೂಲಕ ಅವರಿಗೆ ತಿಳಿಹೇಳಬೇಕು.

ಕೆಲ ದಂಪತಿ, ದತ್ತು ತೆಗೆದುಕೊಂಡು ಹೋದ ಕೆಲವೇ ದಿನಗಳಲ್ಲಿ ಹೊಂದಾಣಿಕೆ ಸಮಸ್ಯೆ ಎದುರಿಸುತ್ತಾರೆ. ಇದಕ್ಕೆ ಹಲವು ಕಾರಣಗಳಿವೆ. ಕೆಲ ಸಂಸ್ಥೆಗಳು ದತ್ತು ತೆಗೆದುಕೊಂಡು ಹೋಗುವವರಿಗೆ ಸರಿಯಾಗಿ ಆಪ್ತ ಸಮಾಲೋಚನೆ ನೀಡಿರುವುದಿಲ್ಲ. ಕೆಲ ಸಂದರ್ಭಗಳಲ್ಲಿ ಮಕ್ಕಳು ಹೊಂದಿಕೊಳ್ಳದಿದ್ದರೆ, ತುಂಟಾಟ ಮಾಡಿದರೆ, ಮುಜುಗರವಾಗುವಂತೆ ವರ್ತಿಸಿದರೆ ವಾಪಸ್‌ ಸಂಸ್ಥೆಗೆ ಬಿಡುವ ಆಲೋಚನೆ ಮಾಡುತ್ತಾರೆ. ಇದರಿಂದ ಮಗುವಿನ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.

ಮಗುವಿಗೆ ಯಾವ ಸಂದರ್ಭದಲ್ಲಿ ದತ್ತು ವಿಷಯ ತಿಳಿಸಬೇಕು ಎಂಬು­ದನ್ನು ಪೋಷಕರಿಗೆ ಮನದಟ್ಟು ಮಾಡಬೇಕು. ಏಕೆಂದರೆ ಬೇರೆಯವ­ರಿಂದ ತನ್ನ ದತ್ತು ಸಂಗತಿ ಗೊತ್ತಾದರೆ ಅದು ಆಘಾತಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.  ಅನಧಿಕೃತ ಸಂಸ್ಥೆಗಳಿಂದ ದತ್ತು ತೆಗೆದು­ಕೊಂಡರೆ ಮತ್ತಷ್ಟು ಸಮಸ್ಯೆಗಳು ಉದ್ಭವಿಸುತ್ತವೆ. ಭವಿಷ್ಯದಲ್ಲಿ ಮಕ್ಕಳಿಗೆ ತೊಂದರೆ­ಯಾಗುವ ಸಾಧ್ಯತೆ ಇರುತ್ತದೆ. ದತ್ತು ಪಡೆದ ಪೋಷಕರು ಮಕ್ಕಳನ್ನು ಅರ್ಧದಲ್ಲಿ ಕೈಬಿಟ್ಟರೆ, ಅವರು ಬೀದಿಪಾಲಾಗುತ್ತಾರೆ.

ಆನ್‌ಲೈನ್‌ ಮೂಲಕ ಮಗು ಪಡೆಯುವ ವ್ಯವಸ್ಥೆ ಅಷ್ಟು ಸಮಂಜಸ­ವಲ್ಲ. ಏಕೆಂದರೆ ಇಲ್ಲಿ ಮಗು ಮತ್ತು ಪೋಷಕರ ನಡುವೆ ಭಾವನಾತ್ಮಕ ಸಂಬಂಧವೇ ಇರುವುದಿಲ್ಲ. ಮಗುವಿನ ಸ್ಪರ್ಶ ಕೂಡ ಪಡೆಯದೇ ಹೇಗೆ ಇಷ್ಟಪಟ್ಟು ಆಯ್ಕೆ ಮಾಡಿಕೊಳ್ಳುತ್ತಾರೆ? ಅಷ್ಟಕ್ಕೂ ಮಗುವಿನ ಸಂಬಂಧ ಎಂಬುದು ಆನ್‌ಲೈನ್‌ನಲ್ಲಿ ಮೊಬೈಲ್‌ ಖರೀದಿಸಿದಂತೆ ಅಲ್ಲ.

ಆನ್‌ಲೈನ್‌ನಲ್ಲೂ ಮಗು ಪಡೆಯಬಹುದು!
ಕಳೆದ ವಾರ ನವದೆಹಲಿಯಲ್ಲಿ ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರದ (‘ಕಾರಾ’) ಸಭೆ ನಡೆಯಿತು. ಕೇಂದ್ರ ಸಚಿವೆ ಮೇನಕಾ

ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದತ್ತು ಸ್ವೀಕಾರ ಮಾರ್ಗಸೂಚಿಗಳಲ್ಲಿ ಕೆಲ ಬದಲಾವಣೆಗೆ ಸಲಹೆಗಳು ಬಂದವು. ಅದರಲ್ಲಿ ಆನ್‌ಲೈನ್‌ ಆಯ್ಕೆ ಪದ್ಧತಿ ಅಳವಡಿಕೆಯೂ ಒಂದು.  ಇದರ ಪ್ರಕಾರ, ದತ್ತು ಪಡೆಯುವವರು ಆನ್‌ಲೈನ್‌ನಲ್ಲಿಯೇ ತಮಗೆ ಬೇಕಾದ ಮಗುವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಜೊತೆಗೆ ಇಲ್ಲೂ ನೋಂದಣಿ ಸಮಯವನ್ನು ಆಧರಿಸಿ ಆದ್ಯತೆ ಮೇರೆಗೆ ಮಗು ಲಭ್ಯವಾಗುತ್ತದೆ.

(ಲೇಖಕರು ಬೆಂಗಳೂರಿನ ‘ಮಾತೃಛಾಯಾ’ ದತ್ತು ಸಂಸ್ಥೆ ವ್ಯವಸ್ಥಾಪಕಿ)

ನಿರೂಪಣೆ: ಕೆ.ಓಂಕಾರ ಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT