ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣು ಬದಲಾವಣೆಗೆ ಬಯೋಚಾರ್

Last Updated 4 ಜುಲೈ 2016, 19:30 IST
ಅಕ್ಷರ ಗಾತ್ರ

ಗ್ರಾಮೀಣ ಭಾಷೆಯಲ್ಲಿ ಬಯೋಚಾರನ್ನು ಜೈವಿಕ ಇದ್ದಿಲು ಎನ್ನುತ್ತಾರೆ. ಕೃಷಿಕರು ಸ್ಥಳೀಯವಾಗಿ ಲಭ್ಯವಿರುವ ಕಚ್ಚಾ ಸಾಮಗ್ರಿಗಳಾದ ತರಗೆಲೆ, ತೆಂಗಿನ, ಅಡಿಕೆ ಸಿಪ್ಪೆ, ಒಣಹುಲ್ಲು, ಸೋಗೆ, ಹಾಳೆ, ಗೆಲ್ಲು, ತೆಂಗಿನ ಮಡಲು, ಶೇಂಗಾ ಸಿಪ್ಪೆ, ಭತ್ತದ ಹೊಟ್ಟನ್ನು ಬಳಸಿ ಕಡಿಮೆ ಖರ್ಚಿನಲ್ಲಿ ತಯಾರಿಸುವ ಜೈವಿಕ ಇದ್ದಿಲು ಇದು. ಹಾಗೆಂದು ಇದು ಗೊಬ್ಬರವಲ್ಲ. ಹಾಗಾದಲ್ಲಿ ಭೂಮಿಗೆ ಯಾಕೆ ಉಪಯೋಗಿಸಬೇಕೆಂಬ ಪ್ರಶ್ನೆ ಮೂಡುವುದು ಸಹಜ.

ಬಯೋಚಾರ್‌ನಲ್ಲಿ ಕೆಲವು ವಿಶಿಷ್ಟ ಗುಣಗಳಿವೆ. ಅಗಾಧ ಪ್ರಮಾಣದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇದಕ್ಕಿದೆ.   ಇದರಿಂದಾಗಿ ಬಯೋಚಾರ್ ನೀಡಿದ ಮಣ್ಣಿಗೆ ಕಡಿಮೆ ಪ್ರಮಾಣದಲ್ಲಿ ನೀರು ನೀಡಬಹುದು. ಅಧಿಕ ಇಳುವರಿ ಪಡೆಯುವ ನಿಟ್ಟಿನಲ್ಲಿ ಭೂಮಿಗೆ ಸುರಿಯುವ ಗೊಬ್ಬರದ ಸಾರಸತ್ವವನ್ನೇ ಹೆಚ್ಚುಕಾಲ ಹಿಡಿದಿಟ್ಟುಕೊಳ್ಳುವ ಶಕ್ತಿ ಇಂದು ಭೂಮಿಗಿಲ್ಲ. 

ಹೆಚ್ಚಿನ ರೈತರು ಮಣ್ಣು ಪರೀಕ್ಷೆಯ ಗೋಜಿಗೆ ಹೋಗದೆ ಅಂಗಡಿಗಳಲ್ಲಿ ದೊರೆಯುವ ರಾಸಾಯನಿಕಗಳನ್ನು ಭೂಮಿಗೆ ಸುರಿಯುತ್ತಿದ್ದಾರೆ.  ಆದರೆ ಬಯೋಚಾರನ್ನು ಮಣ್ಣಿಗೆ ಸೇರಿಸಿದಲ್ಲಿ ಅದು ಗೊಬ್ಬರ ಹೀರಿಕೊಳ್ಳುತ್ತದೆ. ಒಮ್ಮೆ ಮಣ್ಣು ಸೇರಿದ ಬಯೋಚಾರ್ ಸಾವಿರಾರು ವರ್ಷ ಮಣ್ಣಿನಲ್ಲಿರುತ್ತದೆ.  ಬಯೋಚಾರ್ ಮಣ್ಣಿಗೆ ಸೇರಿದ ನಂತರ ಅದರಲ್ಲಿರುವ ಸೂಕ್ಷ್ಮಾಣು ಹಾಗೂ ಮಣ್ಣಿನ ಗುಣಗಳನ್ನು ಕಡಿಮೆಯಾಗದಂತೆ ರಕ್ಷಿಸುತ್ತದೆ.

ಅದು ಗೊಬ್ಬರವನ್ನು ಹೀರಿಕೊಳ್ಳುತ್ತದೆ. ಸಾಮಾನ್ಯ ಮಣ್ಣಿಗೆ ಈ ಸಾಮರ್ಥ್ಯವಿರುವುದಿಲ್ಲ.  ಬಯೋಚಾರ್ ನೀಡುವುದರಿಂದ ಗಿಡಗಳ ಬೇರುಗಳು ಸದೃಢವಾಗಿ ಬೆಳೆಯುತ್ತದೆ.ಬಯೋಚಾರ್‌ನಲ್ಲಿರುವ ಇಂಗಾಲಕ್ಕೆ ಶಿಲೀಂಧ್ರಗಳನ್ನು ನಾಶ ಮಾಡುವ ಶಕ್ತಿಯಿದೆ. ಅಡಿಕೆಗಳಿಗೆ ಕೊಳೆರೋಗ ಬಾರದಂತೆ ತಡೆಗಟ್ಟುತ್ತದೆ.

ಇದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ ಎನ್ನುತ್ತಾರೆ ಕೃಷಿಕ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಮುಂಡಾಜೆ ಗ್ರಾಮದ ಗಜಾನನ ವಝೆ. ಇಂದು ಅಧಿಕವಾಗಿ ಉತ್ಪತ್ತಿಯಾಗುತ್ತಿರುವ ಇಂಗಾಲದ ಡೈಆಕ್ಸೈಡ್ ವಾತಾವರಣವನ್ನು ಸೇರುತ್ತದೆ.

ಇದರಿಂದ ವರ್ಷದಿಂದ ವರ್ಷಕ್ಕೆ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚುತ್ತಿದೆ. ಇದೇ ಇಂಗಾಲವನ್ನು ಭೂಮಿಯೊಳಗೆ ಸೇರಿಸುವ ಮೂಲಕ ಸ್ವಚ್ಛ ವಾತಾವರಣದ ನಿರ್ಮಾಣದಲ್ಲಿ ಇದು ಪೂರಕ. ಕಡಿಮೆ ನೀರಿನ ಬಳಕೆಯಿಂದಾಗಿ ವಿದ್ಯುಚ್ಛಕ್ತಿ ಉಳಿದಂತಾಗುತ್ತದೆ. ಒಂದು ಕೆ.ಜಿ ಮಣ್ಣಿಗೆ 30 ರಿಂದ 40 ಗ್ರಾಂ ಬಯೋಚಾರ್‌ ನೀಡಬಹುದು.

ತಯಾರಿಸುವುದು ಹೀಗೆ...
ಗಜಾನನ ವಝೆ ಅವರು ಎರಡು ವರ್ಷಗಳಿಂದ ಈ ಕುರಿತು ಪ್ರಯೋಗ ನಿರತರಾಗಿದ್ದಾರೆ. ಮೂರು ಎಕರೆ ಅಡಿಕೆ  ತೋಟಕ್ಕೆ, ತರಕಾರಿಗಳಿಗೆ ಬಯೋಚಾರ್‌ ಬಳಸಿದ್ದಾರೆ.ದೊಡ್ಡ ಗಾತ್ರದ ಡ್ರಮ್ಮಿನ ಅಡಿಯಲ್ಲಿ ಗಾಳಿ ಚಲಿಸುವಂತೆ ಐದಾರು ಸಣ್ಣಗಾತ್ರದ ರಂಧ್ರ ಕೊರೆಯಬೇಕು.  ಡ್ರಮ್‌ನ ಮೇಲ್ಭಾಗವನ್ನು ಮುಚ್ಚಳವಾಗಿ ಕತ್ತರಿಸಿಕೊಳ್ಳಬೇಕು. ಮುಚ್ಚಳದ ಮಧ್ಯ ಭಾಗದಲ್ಲಿ ಎಂಟು ಇಂಚು ವ್ಯಾಸದ ಒಂದು ರಂಧ್ರ ಕೊರೆಯಬೇಕು.

ಮೂರು ಅಡಿ ಉದ್ದವಾಗಿ ತಗಡಿನಿಂದ ಕೊಳವೆ ತಯಾರಿಸಿಕೊಳ್ಳಬೇಕು. ಈ ಕೊಳವೆ ಇದರ ಚಿಮಣಿ. ಕೊಳವೆ (ಚಿಮಣಿ)ಯನ್ನು ಡ್ರಮ್‌ನ ಮುಚ್ಚಳದ ಮಧ್ಯ ಭಾಗದಲ್ಲಿ ಕೊರೆದ ರಂಧ್ರಕ್ಕೆ ಜೋಡಿಸಬೇಕು.  ನಂತರ ಗಾಳಿ ಹೋಗಲು ಅನುಕೂಲವಾಗುವಂತೆ ಡ್ರಮ್‌ ಅನ್ನು ಭೂಮಿಯಿಂದ ಒಂದು ಅಡಿ ಎತ್ತರವಾಗಿ ಕಲ್ಲು ಅಥವಾ ಒಲೆಯ ಮೇಲೆ ಇಡಬೇಕು.

ಡ್ರಮ್‌ಗೆ ಪೂರ್ತಿಯಾಗಿ ತರಗೆಲೆ, ಅಡಿಕೆ ಸಿಪ್ಪೆ, ತೆಂಗಿನ ಸಿಪ್ಪೆ, ಒಣ ಮರದ ತುಂಡು, ಬೈಹುಲ್ಲು, ಸೋಗೆ, ಹಾಳೆ ಹೀಗೆ ಯಾವುದನ್ನು ಬೇಕಾದರೂ ತುಂಬಬಹುದು. ನಂತರ ಡ್ರಮ್‌ ತುದಿ ಅಂದರೆ ಮುಚ್ಚಳದ ಭಾಗಕ್ಕೆ ಬೆಂಕಿ ಹಾಕಬೇಕು. ಡ್ರಮ್‌ನ ಮೇಲ್ಭಾಗಕ್ಕೆ ಅಡ್ಡವಾಗಿ ಒಂದು ಇಂಚಿನಷ್ಟು ದಪ್ಪನೆಯ ಚೌಕಾಕಾರದ ಕಬ್ಬಿಣದ ಎರಡು ಪೈಪ್‌ ಇಡಬೇಕು. ಅವುಗಳ ಮೇಲೆ ಚಿಮಣಿ ಇರುವ ಮುಚ್ಚಳವನ್ನಿಡಬೇಕು.

ಡ್ರಮ್‌ನ ಮೇಲ್ಭಾಗಕ್ಕೆ ಪೈಪುಗಳನ್ನು ಜೋಡಿಸುವುದರಿಂದ ಮುಚ್ಚಳ ಮತ್ತು ಡ್ರಮ್‌ ನಡುವೆ ಇರುವ ಜಾಗದಲ್ಲಿ ಗಾಳಿ ಸರಿದು ಒಳಗಿನ ಕಚ್ಚಾವಸ್ತು ಉರಿಯಲು ಸಹಕಾರಿಯಾಗುತ್ತದೆ. ಡ್ರಮ್‌ಗೆ ಅಡಿಕೆ ಸಿಪ್ಪೆ ಅಥವಾ ಇತರ ಯಾವುದೇ ಒಣ ವ್ಯರ್ಥಗಳನ್ನು ತುಂಬಿಸಬೇಕು. ಪ್್ಲಾಸ್ಟಿಕ್, ತಗಡು ಮುಂತಾದ ಭೂಮಿಯಲ್ಲಿ ಕರಗದ ವಸ್ತುಗಳನ್ನು ತುಂಬಿಸಬಾರದು. ಮೇಲ್ಭಾಗಕ್ಕೆ ಬೆಂಕಿ ಹಾಕಬೇಕು.

ಡ್ರಮ್‌ನ ಮೇಲ್ಭಾಗದಿಂದ ಕೆಳಗಿನವರೆಗೆ ಒಂದೇ ಪ್ರಮಾಣದಲ್ಲಿ ಬೆಂಕಿ ಉರಿಯುತ್ತಾ ಹೋಗುತ್ತದೆ. ಡ್ರಮ್‌ನ ತಳಭಾಗಕ್ಕೆ ಕೈಬೆರಳಿನಿಂದ ನೀರು ಸಿಂಪಡಿಸಿದಾಗ ಆ ನೀರು ಒಮ್ಮೆಲೇ ಆವಿಯಾದರೆ ಬಯೋಚಾರ್ ಸಿದ್ಧವಾಗಿದೆ ಎಂದರ್ಥ. ನಂತರ ಮುಚ್ಚಳ ತೆಗೆದು ಒಳಭಾಗಕ್ಕೆ ಸಾಕಷ್ಟು ನೀರು ಹಾಕಿ, ಆಮೇಲೆ ತಯಾರಾದ ಬಯೋಚಾರನ್ನು ದ್ರವಗೊಬ್ಬರಕ್ಕೆ ಸ್ಥಳಾಂತರಿಸಿಡಿ. 

ಬಯೋಚಾರ್‌ ತಯಾರಿಸಲು ಆರಂಭದಲ್ಲಿ ಡ್ರಮ್, ಕಬ್ಬಿಣದ ಪೈಪು, ಚಿಮಣಿ ಎಲ್ಲಾ ಸೇರಿ ಎರಡು ಸಾವಿರ ರೂಪಾಯಿವರೆಗೆ ಖರ್ಚು ತಗಲುತ್ತದೆ. ಒಮ್ಮೆ ತಯಾರಿಸಿದ ನಂತರ ಕಚ್ಚಾವಸ್ತುಗಳಿದ್ದರೆ ಸುಲಭವಾಗಿ ತಯಾರಿಸಿಕೊಳ್ಳಬಹುದು.

ಇಲ್ಲಿ ಸ್ವಲ್ಪ ಎಚ್ಚರವೂ ಅಗತ್ಯ. ಬಯೋಚಾರ್‌ಗೆ ಆಕರ್ಷಿಸುವ ಮತ್ತು ಹೀರಿಕೊಳ್ಳುವ ಗುಣವಿದೆ.  ಬಯೋಚಾರ್‌ ಅನ್ನು 24 ಗಂಟೆಗಳ ಕಾಲ ದ್ರವರೂಪಿ ಗೊಬ್ಬರವಾದ ಗೋಮೂತ್ರ, ಸೆಗಣಿ ನೀರು, ಸ್ಲರಿ, ಪಂಚಗವ್ಯ, ಜೀವಾಮೃತ ಇವ್ಯಾವುದಾದರೂ ಒಂದರಲ್ಲಿ ನೆನೆಹಾಕಬೇಕು.  ಇವು ದೊರೆಯದಿದ್ದರೆ ಎರಡು ದಿನಗಳ ಕಾಲ ತಣ್ಣೀರಿನಿಂದ ನೆನೆಸಬೇಕು. ತಯಾರಿಸಿ ನೇರವಾಗಿ ಮಣ್ಣಿಗೆ ಸೇರಿಸಿದರೆ ತನ್ನ ಆಕರ್ಷಿಸುವ ಗುಣದಿಂದಾಗಿ ಮಣ್ಣಿನಲ್ಲಿರುವ ಸಾರವನ್ನೇ ಹೀರಿಕೊಳ್ಳುವ ಅಪಾಯವಿದೆ.

ಕಾಂಪೋಸ್ಟ್‌ ಗೊಬ್ಬರ ತಯಾರಿಯಲ್ಲಿ ಬಯೋಚಾರ್: ಕಾಂಪೋಸ್ಟ್‌ ತಯಾರಿಸಬೇಕಾದರೆ ಐದರಿಂದ ಆರು ತಿಂಗಳುಗಳು ಬೇಕು. ಕಾಂಪೋಸ್ಟ್‌ ಗುಂಡಿಗೆ ಒಂಚೂರು ಬಯೋಚಾರ್ ಸೇರಿಸಿದರೆ ಬಯೋಚಾರ್‌ನ ರಂಧ್ರಗಳಲ್ಲಿ ಸೂಕ್ಷ್ಮಾಣುಗಳು ಸೇರಿಕೊಂಡು ಸೂಕ್ಷ್ಮಾಣುಗಳ ಸಂಖ್ಯೆ ವೃದ್ಧಿಯಾಗುತ್ತದೆ.  ಸೂಕ್ಷ್ಮಾಣುಗಳು ಇದ್ದಷ್ಟು ವೇಗವಾಗಿ ಕಾಂಪೋಸ್ಟ್ ವೃದ್ಧಿಯಾಗುತ್ತದೆ. ಅದರಿಂದಾಗಿ ಆರು ತಿಂಗಳಲ್ಲಿ ಆಗಬೇಕಾದ ಕಾಂಪೋಸ್ಟ್ ನಾಲ್ಕು ತಿಂಗಳಲ್ಲಿ ತಯಾರಾಗುತ್ತದೆ.

ಬಯೋಚಾರ್ ನೀಡುವುದು ಹೀಗೆ: ವಝೆ ಅವರು ಅಡಿಕೆ ಮರದ ಬುಡಗಳ ಸುತ್ತ ಮಣ್ಣಿನಲ್ಲಿ ಆರು ಇಂಚು ವ್ಯಾಸದಲ್ಲಿ ಒಂದು ಅಡಿ ಆಳವಾಗಿ ರಂಧ್ರ ಕೊರೆದು ಈ ರಂಧ್ರಗಳಲ್ಲಿ ಬಯೋಚಾರ್‌ ತುಂಬಿ ರಂಧ್ರ ಮುಚ್ಚಿದ್ದಾರೆ. ಬಯೋಚಾರ್‌ನ್ನು ಮರಳಿನ ಹುಡಿಯಂತೆ ಪುಡಿ ಮಾಡಿ ತುಂಬಿಸಿದ್ದಾರೆ. ‘ಕಳೆದ ಆರು ತಿಂಗಳಿನಿಂದ ಸೂಕ್ಷ್ಮಾಣುಗಳ ಸಂಖ್ಯೆ ವೃದ್ಧಿಯಾಗಿದೆ. ಬುಡಗಳಿಗೆ ಕಡಿಮೆ ನೀರು ಸಾಕಾಗುತ್ತಿದೆ. ನರ್ಸರಿಗಳಲ್ಲೂ ಇದನ್ನು ಉಪಯೋಗಿಸಬಹುದಾಗಿದೆ’ ಎನ್ನುತ್ತಾರೆ.

ಶಿಕ್ಷಕರಾಗಿದ್ದ ವಝೆ ಅವರು ಕೋತಿ ಓಡಿಸುವ ಸಾಧನ, ಕಾಡುಪ್ರಾಣಿಗಳನ್ನು ಓಡಿಸುವ ಉಪಕರಣ, ಅಡಿಕೆ ಹೆಕ್ಕುವ ಉಪಕರಣ, ತೋಟದಲ್ಲಿ ಗುಂಡಿ ತೋಡುವ ಸಾಧನ ಮುಂತಾದವುಗಳನ್ನು ಕಂಡು ಹಿಡಿದಿದ್ದಾರೆ. ಛಾಯಾಚಿತ್ರಗಾರರೂ ಆಗಿರುವ ಇವರು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟಗಳಲ್ಲಿ ಬಹುಮಾನ ಗಳಿಸಿದ್ದಾರೆ. ಪ್ರಾಧ್ಯಾಪಕ ವೃತ್ತಿಯಲ್ಲಿರುವಾಗ ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್‌ ಆಗಿದ್ದ ಇವರು ಸಂಗೀತಗಾರರು ಕೂಡ. ಕಂಪ್ಯೂಟರ್‌ ಹಾಗೂ ವಸ್ತ್ರಗಳ ವಿನ್ಯಾಸದಲ್ಲಿಯೂ ಇವರು ಪಳಗಿದ್ದಾರೆ.

ಸಂಪರ್ಕಕ್ಕೆ: (ರಾತ್ರಿ7 ರಿಂದ 9)  9611545202.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT