ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಬಹುತೇಕ ಶಾಂತಿಯುತ

ಬಿಸಿಲು ಏರಿದಂತೆ ಮತದಾರರಲ್ಲಿ ನಿರುತ್ಸಾಹ
Last Updated 17 ಏಪ್ರಿಲ್ 2014, 20:06 IST
ಅಕ್ಷರ ಗಾತ್ರ

ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರದಲ್ಲಿ ಮತದಾನ ಬಹುತೇಕ ಶಾಂತಿಯುತವಾಗಿತ್ತು. ನೆಲಮಂಗಲದಲ್ಲಿ ಅಲ್ಲಲ್ಲಿ ಘರ್ಷಣೆಗಳು ನಡೆದಿವೆ.

ಬೆಳಿಗ್ಗೆ ಚುರುಕಿನಿಂದ ಆರಂಭವಾದ ಮತದಾನ, ಬಿಸಿಲು ಏರಿದಂತೆ ಮತದಾರರಲ್ಲಿ ನಿರುತ್ಸಾಹ ಕಂಡುಬಂತು. ಬೆಳಿಗ್ಗೆ ತುಂಬಿದ್ದ ಮತಗಟ್ಟೆಗಳು ಮಧ್ಯಾಹ್ನದಲ್ಲಿ  ಬಹುತೇಕ ಖಾಲಿಯಾಗಿದ್ದವು.

ಸರದಿ ಸಾಲಿನಲ್ಲಿ ನಿಂತು ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಮತ ಚಲಾಯಿಸಿದ ಅನೇಕರು ತಮ್ಮ ತಮ್ಮ ಹೊಲದ ಕೆಲಸಗಳಿಗೆ ಮತ್ತು ಮನೆಗಳಿಗೆ ತೆರಳಿದರು.

ಮತಯಂತ್ರಗಳಲ್ಲಿ ದೋಷ: ಹೊಸಕೋಟೆ ವಿಧಾನಸಭಾ ಕ್ಷೇತ್ರದ ರಾಮಗೋವಿಂದಪುರದಲ್ಲಿ ಮತಯಂತ್ರದಲ್ಲಿ ದೋಷ ಕಂಡುಬಂದಿದ್ದು, ಸ್ವಲ್ಪ ಕಾಲ ಮತದಾನ ಸ್ಥಗಿತಗೊಂಡಿತ್ತು. 15 ನಿಮಿಷಗಳ ನಂತರ ಸರಿಪಡಿಸಲಾಯಿತು.

ದೇವನಹಳ್ಳಿ ಟೌನ್‌ನ ಎತ್ತಿಗಾನಹಳ್ಳಿಯಲ್ಲಿ ಮತಯಂತ್ರದಲ್ಲಿ ದೋಷ ಕಂಡುಬಂದಿದ್ದು, ಬಳಿಕ ಸರಿಪಡಿಸಲಾಯಿತು.

‘ಮತಗಟ್ಟೆಗಳಲ್ಲಿ ಊಟ ಪರವಾಗಿಲ್ಲ. ಆದರೆ, ಮಹಿಳಾ ಸಿಬ್ಬಂದಿಗೆ ಬೇಕಾದ ಮೂಲ ಸೌಕರ್ಯಗಳನ್ನೇ ಒದಗಿಸಿಲ್ಲ. ಸರಿಯಾದ ಶೌಚಾಲಯ ವ್ಯವಸ್ಥೆಯಿಲ್ಲ’ ಎಂದು ಹೊಸಕೋಟೆ ತಾಲ್ಲೂಕಿನ ಅತ್ತಿಬೆಲೆ ಬೂತ್‌ನ ಸಿಬ್ಬಂದಿ ಸಿ.ಅಂಬಿಕಾ ಹೇಳಿದರು.

ಯುವಕರನ್ನು ನಾಚಿಸಿದ ವಯಸ್ಸಾದವರು: ಬಹುತೇಕ ಮತಗಟ್ಟೆ­ಗಳಲ್ಲಿ ಯುವಕರಿ­ಗಿಂತಲೂ ಹೆಚ್ಚು ವಯಸ್ಸಾದ ಅಜ್ಜ – ಅಜ್ಜಿಯರು ಉತ್ಸಾಹದಿಂದ ಮತ ಚಲಾಯಿಸಿದರು.

‘ಇದುವರೆಗೂ ಯಾವ ಚುನಾವಣೆಯನ್ನು ತಪ್ಪಿಸದೆ, ಮತ ಚಲಾಯಿಸುತ್ತ ಬಂದಿದ್ದೇನೆ’ ಎಂದು 95 ವರ್ಷದ ತಿಮ್ಮಕ್ಕ ನುಡಿದರು. ‘ನಾವು ಮತ ಚಲಾಯಿಸಿದರೆ ಮಾತ್ರ ನಮ್ಮ ಅಗತ್ಯ ಸೌಲಭ್ಯಗಳನ್ನು ಕೇಳಲು ಸಾಧ್ಯ. ಇಲ್ಲವಾದರೆ, ನಾವು ದೇಶದ ಪ್ರಜೆಗಳಾಗಿದ್ದೂ ವ್ಯರ್ಥವಾದಂತೆ’ ಎಂದು ನೂರರ ಗಡಿಯಲ್ಲಿರುವ 99 ವರ್ಷದ ಬಸವಜ್ಜ ನುಡಿದರು.

ನೆಲಮಂಗಲದಲ್ಲಿ ಘರ್ಷಣೆ:  ನೆಲಮಂಗಲ ವಿಧಾನಸಭಾ ಕ್ಷೇತ್ರದ  ಅಡಕಮಾರನಹಳ್ಳಿ ಗ್ರಾಮದಲ್ಲಿ ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತರ ಮೇಲೆ ಜೆಡಿಎಸ್‌ ಕಾರ್ಯ­ಕರ್ತರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತರು ಸಿಪಿಎಂ ಪಕ್ಷದ ಪರ ಕೆಲಸ ಮಾಡುತ್ತಿದ್ದಾರೆ ಎಂದು  ಆರೋಪಿಸಿ ಮಹಿಳಾ ಕಾರ್ಯಕರ್ತರ  ಮೇಲೆ ಹಲ್ಲೆ ನಡೆಸಿದರು.
ತಕ್ಷಣವೇ ಪೊಲೀಸರು ಗುಂಪು ಚದುರಿಸಲು ಕ್ರಮ ಕೈಗೊಂಡರು. ನಂತರ ಶಾಂತಿಯುತ ಮತದಾನ ನಡೆಯಿತು.

ಮಂಡಿಗೆರೆ ಸರ್ಕಾರಿ ಶಾಲೆಯಲ್ಲಿ ಕುಡಿದ ಅಮಲಿನಲ್ಲಿ ಮತ ಚಲಾಯಿಸಲು ಬಂದ ವ್ಯಕ್ತಿ ಮತಯಂತ್ರವನ್ನು ಧ್ವಂಸ ಮಾಡಿದ ಪ್ರಕರಣವು ನಡೆಯಿತು. ಇದರಿಂದ, ಕೆಲವು ಕಾಲ ಮತದಾನ ಸ್ಥಗಿತಗೊಂಡಿತ್ತು.

ಜನವಾದಿ ಮಹಿಳಾ ಸಂಘಟನೆ ಖಂಡನೆ: ನೆಲಮಂಗಲ ವಿಧಾನಸಭಾ ಕ್ಷೇತ್ರದ  ಅಡಕಮಾರನಹಳ್ಳಿ ಗ್ರಾಮದಲ್ಲಿ ಜೆಡಿಎಸ್‌ ಕಾರ್ಯಕರ್ತರು ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಮುಖಂಡರಾದ ಲೀಲಾವತಿ ಮತ್ತು ಐದು  ಮಂದಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವುದನ್ನು ಜನವಾದಿ ಮಹಿಳಾ ಸಂಘಟನೆಯು ತೀವ್ರವಾಗಿ ಖಂಡಿಸಿದೆ.

ಮೊದಲ ಮತದಾನ
ಮೊದಲ ಬಾರಿ ಮತ ಚಲಾವಣೆಯಿಂದ ಅಧಿಕೃತವಾಗಿ ನಾನೂ ಈ ದೇಶದ ಪ್ರಜೆಯಾಗಿದ್ದೇನೆ ಎಂಬ ಹೆಮ್ಮೆಯಿದೆ. ಅರ್ಹ ಮತದಾರರ ಆಯ್ಕೆ ಪ್ರತಿಯೊಬ್ಬರ ಹಕ್ಕು.
– ಎಂ.ಅನುಪಮಾ (ದ್ವಿತೀಯ ಪಿಯುಸಿ ವಿದ್ಯಾರ್ಥಿನಿ)

100 ವರ್ಷದ ಅಜ್ಜಿ
ಪ್ರತಿ ಚುನಾವಣೆಯಲ್ಲಿಯೂ ಮತ ಚಲಾಯಿಸಿದ್ದೇನೆ. ಎಲ್ಲರೂ ಮತ ಚಲಾಯಿಸಬೇಕು.
– 100 ವರ್ಷದ ತಿಮ್ಮಜ್ಜಿ.

ಮೊದಲ ಮತ ಚಲಾವಣೆ
ಮೊದಲ ಬಾರಿ ಮತ ಚಲಾವಣೆ ಮಾಡಿದ್ದೇನೆ. ಕೆಲವು ಮಾಹಿತಿಗಳಿದ್ದಿದ್ದರಿಂದ ಮತ ಚಲಾವಣೆ ಸುಲಭವಾಯಿತು. ಈ ಅನುಭವ ನಾನೆಂದೂ ಮರೆಯಲಾರೆ
– ಆರ್‌.ಉಮೇಶ್‌ (18 ವರ್ಷದ ಗಾರ್ಮೆಂಟ್‌ ಕೆಲಸಗಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT