ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಬಂದಿದೆ ಹಕ್ಕಿಜ್ವರ

ಅಕ್ಷರ ಗಾತ್ರ

ರಾಜ್ಯ ಸರ್ಕಾರವು ಕೋಳಿ ಸಾಕಣೆಯನ್ನು ಒಂದು ಉದ್ಯಮ ಎಂದು ಪರಿಗಣಿಸುವ ಮೂಲಕ ಕೋಳಿ ಸಾಕಾಣಿಕೆ ಮಾಡುವವರಿಗೆ ಸಂತಸ ಉಂಟು ಮಾಡಿರುವ ಬೆನ್ನಲ್ಲೇ ನಮ್ಮ ನೆರೆಯ ರಾಜ್ಯ ಕೇರಳದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವುದು ಆತಂಕ ಉಂಟು ಮಾಡಿದೆ.

ಕುಕ್ಕುಟ ಉದ್ಯಮದ ದುಃಸ್ವಪ್ನವಾದ ಹಕ್ಕಿಜ್ವರ ರೋಗ ಮಹಾರಾಷ್ಟ್ರ, ತ್ರಿಪುರಾ ಮತ್ತು ಒಡಿಶಾ ರಾಜ್ಯಗಳಲ್ಲಿ ಪತ್ತೆಹಚ್ಚಲಾಗಿದ್ದು ಹಳೆಯ ಸುದ್ದಿ. ವರ್ಷದ ಹಿಂದೆ ನಮ್ಮ ರಾಜ್ಯದ ಹೆಸರಘಟ್ಟದಲ್ಲೂ ಹಕ್ಕಿಜ್ವರ  ಕಾಣಿಸಿಕೊಂಡಿತ್ತು. ಇದರಿಂದಾಗಿ ಆಯಾ ಪ್ರದೇಶದಲ್ಲಿ ಆಗ ಕುಕ್ಕುಟೋದ್ಯಮಕ್ಕೆ ಪೆಟ್ಟು ಬಿತ್ತು. ಆದರೆ ಕೂಡಲೇ ನಿವಾರಣಾ ಕ್ರಮಗಳನ್ನು ಕೈಗೊಂಡಿದ್ದರಿಂದ ಈ ರೋಗ ಸಾಂಕ್ರಾಮಿಕದ ರೂಪ ತಾಳಲಿಲ್ಲ.
  
ಪಕ್ಷಿಗಳಲ್ಲಿ ಇದ್ದಕ್ಕಿದ್ದಂತೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಸಾವು ತರುವಷ್ಟು ತೀವ್ರತರದ ರೋಗವಿದು. ಒಮ್ಮೆ ರೋಗಾಣುಗಳು ಒಂದು ಪ್ರದೇಶದಲ್ಲಿ ಕಂಡುಬಂದರೆ ಅಲ್ಲಿನ ಪಕ್ಷಿಗಳ ಮೂಲಕ ರೋಗ ಹರಡುತ್ತಲೇ ಹೋಗಬಹುದು. ಕುಕ್ಕುಟೋದ್ಯಮವು ಬಹುದೊಡ್ಡ ಉದ್ಯಮವಾಗಿರುವುದಿಂದ ಹಕ್ಕಿ ಜ್ವರ ಹರಡಿದರೆ ಕೋಳಿ ಸಾಕಣೆಗಾರರಿಗೆ ಬಹುದೊಡ್ಡ ನಷ್ಟ. ಜೊತೆಗೆ ಕುಕ್ಕುಟ ಉತ್ಪನ್ನಗಳ ಬಳಕೆ ಕಡಿಮೆಯಾಗಬಹುದು, ದರ ಕುಸಿಯಬಹುದು. ಕುಕ್ಕುಟ ಉತ್ಪನ್ನಗಳ ರಫ್ತು ಕೂಡ ಹಿಂಜರಿತ ಕಾಣುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ರೋಗಾಣುವು ರೂಪಾಂತರ ಹೊಂದಿ ಮನುಷ್ಯರಲ್ಲೂ ಹರಡಬಹುದು. ಶತಮಾನದ ಹಿಂದೆ ಯುರೋಪ್‌ನಲ್ಲಿ ಇದೇ ರೋಗದಿಂದ ಕೋಟ್ಯಂತರ ಜನ ಸಾವಿಗೀಡಾಗಿದ್ದರು! ಅದಕ್ಕೇ ಹಕ್ಕಿಜ್ವರವೆಂದರೆ ಇಷ್ಟೊಂದು ಭಯ.

ಹಕ್ಕಿ ಜ್ವರವು ಇದು H5 N1 ಪ್ರಬೇಧದ ಒಂದು ಜಾತಿಯ ವೈರಸ್‌ನಿಂದ ಬರುತ್ತದೆ. ಇದನ್ನು ಕೋಳಿ ಶೀತ ಜ್ವರ, H5 N1 ರೋಗ, ಬರ್ಡ್ ಫ್ಲೂ, ಏವಿಯನ್ ಇನ್‌ಫ್ಲುಯೆಂಜಾ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಮನುಷ್ಯರಲ್ಲಿ ಕಂಡುಬರುವ ಚಿಕೂನ್ ಗುನ್ಯಾ ರೋಗಕ್ಕೂ ಈ ರೋಗಕ್ಕೂ ಯಾವ ಸಂಬಂಧವೂ ಇಲ್ಲ.

ಹಕ್ಕಿ ಜ್ವರ ಮೂಲತಃ ಕಾಡಿನಲ್ಲಿರುವ ಪಕ್ಷಿಗಳಿಗೆ ಬರುವ ರೋಗ. ಅವುಗಳಿಂದ ಹಂದಿಗಳಿಗೆ ಮತ್ತು ಮಾನವರಿಗೆ ಕೂಡ ಬರುವ ಸಾಧ್ಯತೆ ಇದೆ. ವಲಸೆ ಬರುವ ಪಕ್ಷಿಗಳು, ಹದ್ದು, ಗಿಳಿ, ಮೈನಾ ಇತ್ಯಾದಿಗಳು ತಮ್ಮ ಹಿಕ್ಕೆ ಮೂಲಕ ಬಹುದೂರದವರೆಗೆ ಈ ರೋಗವನ್ನು ಸಾಗಿಸುವ ಸಾಧ್ಯತೆಗಳಿರುತ್ತವೆ.

ಇದು ಶ್ವಾಸಕೋಶದ ರೋಗ
ಈ ರೋಗವು ಗಾಳಿಯ ಮೂಲಕ, ರೋಗಗ್ರಸ್ಥ ಕೋಳಿಗಳ ನೇರ ಸಂಪರ್ಕದಿಂದ, ಕೆಮ್ಮು, ಸೀನು, ರೋಗಾಣುಗಳಿಂದ ಕಲುಷಿತಗೊಂಡ ಆಹಾರ, ನೀರು ಮತ್ತು ಉಪಕರಣಗಳ ಸಂಪರ್ಕಕ್ಕೆ ಬಂದಾಗ, ರೋಗಪೀಡಿತ ಪ್ರದೇಶದಿಂದ ಬರುವ ವಾಹನಗಳು, ಮಾನವರ ಮೂಲಕ ಕೂಡ ಹರಡುತ್ತದೆ.

ಇದ್ದಕ್ಕಿದ್ದಂತೆ ಅತ್ಯಧಿಕ ಪ್ರಮಾಣದಲ್ಲಿ ಪಕ್ಷಿಗಳ ಸಾವು, ಫಾರ್ಮ್ ಕೋಳಿಗಳಲ್ಲಿ ಮೊಟ್ಟೆ ಉತ್ಪಾದನೆಯ ಕುಸಿತ, ನೀರು, ಆಹಾರ ಸೇವನೆಯಲ್ಲಿ ಇಳಿಕೆ, ತೀವ್ರವಾದ ಉಸಿರಾಟದ ತೊಂದರೆ ಮತ್ತು ನರಸಂಬಂಧಿತ ಲಕ್ಷಣಗಳು ಕಂಡುಬರುತ್ತವೆ. ತೀವ್ರ ಕೆಮ್ಮು, ಸೀನುವುದನ್ನೂ ಕಾಣಬಹುದು. ಕೋಳಿಗಳ ಮುಖ ಊದಿಕೊಳ್ಳುತ್ತದೆ. ತುರಾಯಿ ಕಪ್ಪಗಾಗಬಹುದು. ಕಾಲುಗಳು ರಕ್ತ ಕಟ್ಟಿದಂತೆ ತೋರಬಹುದು. ಆದರೆ ಇವೇ ಚಿಹ್ನೆಗಳು ಕುಕ್ಕುಟಗಳ ಇತರ ಕೆಲವು ರೋಗಗಳಾದ ಕೊಕ್ಕರೆ ರೋಗ, ಗುಂಬರೋ, ಶ್ವಾಸಕೋಶದ ಇತರ ರೋಗಗಳಲ್ಲೂ ಕಂಡುಬರುವುದರಿಂದ ರೈತರು ಹಕ್ಕಿಜ್ವರ ಎಂಬ ನಿರ್ಧಾರಕ್ಕೆ ತಾವೇ ಬರಬಾರದು. ಸರ್ಕಾರಕ್ಕೆ ಮಾತ್ರ ಇದನ್ನು ಘೋಷಣೆ ಮಾಡುವ ಅಧಿಕಾರವಿದೆ. ಒಂದೊಮ್ಮೆ ಹಕ್ಕಿ ಜ್ವರ ಬಂದಿದೆ ಎಂದು ಸರ್ಕಾರದಿಂದ ಘೋಷಿತವಾದರೆ ಅದು ರೋಗ ಹರಡದಂತೆ ಅತ್ಯಂತ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುತ್ತದೆ.

ತಡೆ ಹೇಗೆ?
ಕಟ್ಟುನಿಟ್ಟಾದ ಜೈವಿಕ ರಕ್ಷಣೆಯೇ ಈ ರೋಗತಡೆಯ ಮೂಲ ಮಂತ್ರ. ವಲಸೆ ಪಕ್ಷಿಗಳ ಮತ್ತು ನಾಡಿನ ಪಕ್ಷಿಗಳ ಸಂಪರ್ಕ ತಪ್ಪಿಸಬೇಕು. ಹಂದಿ, ಮತ್ತು ಇತರ ಪಕ್ಷಿಗಳನ್ನು ಒಂದೇ ಕಡೆ ಸಾಕಬಾರದು. ಒಂದು ಕೋಳಿ ಫಾರ್ಮಿನಿಂದ ಪಕ್ಕದ ಫಾರ್ಮಿನ ಕೋಳಿಗಳ ಸಂಪರ್ಕ ಪರಸ್ಪರ ಬಾರದಂತೆ ಎಚ್ಚರ ವಹಿಸಬೇಕು. ನೀರು ಕುಡಿಯಲು ದೂರದಿಂದ ಬರುವ ಪಕ್ಷಿಗಳು ರೋಗಾಣುಗಳನ್ನು ಹೊತ್ತುತರಬಹುದಾದ್ದರಿಂದ ನೀರಿನ ಹೊಂಡ, ಕೆರೆ ಅಥವಾ ಸರೋವರಗಳ ಸಮೀಪ ಇರುವ ಕೋಳಿ ಫಾರ್ಮಿನವರು ಹೆಚ್ಚು ಎಚ್ಚರ ವಹಿಸಬೇಕು. ಕೋಳಿ ಫಾರ್ಮಿನ ಒಳಗೆ ಯಾವುದೇ ಬೇರೆ ಪಕ್ಷಿ ಪ್ರಾಣಿಗಳು, ಮನುಷ್ಯರು ಬಾರದಂತೆ ಎಚ್ಚರ ವಹಿಸಬೇಕು. ಪ್ರತಿ ಶೆಡ್‌ನ ಹೊರಗೆ ಕ್ರಿಮಿನಾಶಕದ ದ್ರಾವಣ/ಪುಡಿಯನ್ನು ಮೆಟ್ಟಿಕೊಂಡೇ ಒಳಪ್ರವೇಶ ಮಾಡುವಂತಿರಬೇಕು.
ಕೋಳಿಗಳಿಗೆ ಕುಡಿಯುವ ನೀರನ್ನು ಬ್ಲೀಚಿಂಗ್ ಪೌಡರ್‌ನಂತಹ ಔಷಧ ಬಳಸಿ ಶುದ್ಧೀಕರಿಸಿ ನೀಡಬೇಕು. ಫಾರ್ಮಿನೊಳಗೆ ಶುಭ್ರತೆ ಕಾಪಾಡಬೇಕು. ಸತ್ತು ಹೋದ ಕೋಳಿಗಳನ್ನು ಡೆಟಾಲ್, ಸಾವ್ಲಾನ್, ಸೋಡಿಯಂ ಹೈಪೋಕ್ಲೋರೇಟ್, ಸುಣ್ಣ, ಫಿನೈಲ್, ಕ್ರಿಸೋಲಿಕ್ ಆಸಿಡ್ ಅಥವಾ ಫಾರ್ಮಾಲಿನ್‌ನಂತಹ ಕ್ರಿಮಿನಾಶಕ ಬಳಸಿ ಹುಗಿಯಬೇಕು ಇಲ್ಲವೇ ಸುಡಬೇಕು.

ಜನರ ಜವಾಬ್ದಾರಿ
ತಮ್ಮ ಆಸುಪಾಸಿನಲ್ಲಿ ಅಸ್ವಾಭಾವಿಕವಾಗಿ ಅಧಿಕ ಪ್ರಮಾಣದಲ್ಲಿ ಪಕ್ಷಿಗಳು ಸಾಯುತ್ತಿದ್ದರೆ ವಿನಾಕಾರಣ ಭಯಭೀತರಾಗದೇ ಸಮೀಪದ ಪಶುವೈದ್ಯರಿಗೆ ಆದಷ್ಟು ಶೀಘ್ರದಲ್ಲಿ ತಿಳಿಸಬೇಕು. ಸತ್ತ ಪಕ್ಷಿಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳಿಸಿ ಅಲ್ಲಿ ದೃಢಪಟ್ಟ ನಂತರವೇ ಈ ರೋಗದ ಇರುವಿಕೆಯನ್ನು ಸರ್ಕಾರ ಘೋಷಿಸುತ್ತದೆ. ಪಶುಪಾಲನಾ ಇಲಾಖೆ ಕೂಡ ಈ ರೋಗದ ಬಗ್ಗೆ ತೀವ್ರತರದ ಸತತ ನಿಗಾ ವಹಿಸಿದೆ. ಸಿಬ್ಬಂದಿಗಳಿಗೆ ಈ ರೋಗವನ್ನು ಎದುರಿಸಲು ತರಬೇತಿಯನ್ನೂ ನೀಡಲಾಗಿದೆ. ಅಷ್ಟಕ್ಕೂ ಈ ತನಕ ನಮ್ಮ ದೇಶದಲ್ಲಿ ಪಕ್ಷಿಗಳಿಗೆ ಮಾತ್ರ ಈ ರೋಗ ಕಂಡುಬಂದಿದೆಯೇ ಹೊರತು ಮನುಷ್ಯರಿಗೆ ಹರಡಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT