ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಮ್ಮೆ ಮುಖ್ಯಾಂಶಗಳು

ಏನಾಗಿದೆ ಆಕಾಶವಾಣಿ? ಏನಾಗಬೇಕು ಈ ವಾಣಿ?
Last Updated 26 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಪ್ರದೇಶ ಸಮಾಚಾರ, ವಾರ್ತೆಗಳು, ಕಾಣೆಯಾದವರ ಕುರಿತ ಪ್ರಕಟಣೆಗಳು, ಮೆಚ್ಚಿನ ಚಿತ್ರಗೀತೆಗಳು, ಬಾನುಲಿ ನಾಟಕಗಳು, ಶಾಸ್ತ್ರೀಯ ಸಂಗೀತ– ರೇಡಿಯೊ ಎಂದರೆ ಎಷ್ಟೊಂದು ನೆನಪುಗಳು! ಎರಡು ಮೂರು ದಶಕಗಳ ಹಿಂದಷ್ಟೇ ‘ಆಕಾಶವಾಣಿ’ ಜನಜೀವನದ ಅವಿಭಾಜ್ಯ ಭಾಗ ಎನ್ನಿಸಿಕೊಂಡಿತ್ತು, ನಮ್ಮ ಸಂವೇದನೆಗಳಿಗೆ ಸ್ಪಂದಿಸುತ್ತಿತ್ತು. ಇಂಥ ಅದ್ಭುತ ಮಾಧ್ಯಮ ಪ್ರಸ್ತುತ ತನ್ನ ವರ್ಚಸ್ಸು ಕಳೆದುಕೊಂಡಿದೆಯೇ? ಕೇಳುಗರು ಬಾನುಲಿಯಿಂದ ದೂರ ಸರಿದರೇ ಅಥವಾ ಬಾನುಲಿಯೇ ವೀಕ್ಷಕರಿಂದ ದೂರ ಸರಿಯುತ್ತಿದೆಯೇ? ಸದ್ಯದ ಬಿಕ್ಕಟ್ಟುಗಳನ್ನು ಪರಿಹರಿಸಿಕೊಂಡು ಆಕಾಶವಾಣಿ ತನ್ನ ಗತವೈಭವವನ್ನು ಮರಳಿ ಪಡೆಯುವುದು ಸಾಧ್ಯವಿದೆಯೇ?

ಹಳಹಳಿಕೆಗಳನ್ನು ಹಾಗೂ ಯಾವುದೋ ಕಾಲದ ಸಮೀಕ್ಷೆಯ ಅಂಕಿ ಅಂಶಗಳನ್ನು ಒಂದಿಷ್ಟು ದೂರ ಇಟ್ಟು, ನಮ್ಮ ದೇಶದ ಮುಖ್ಯವಾಹಿನಿಯಾಗಿದ್ದ ಆಕಾಶವಾಣಿಯ ವಸ್ತುಸ್ಥಿತಿ ಈಗ ಏನಿದೆ? ಎಂಬುದನ್ನು ಮುಕ್ತವಾಗಿ ಚರ್ಚಿಸುವ ಅಗತ್ಯವಿದೆ.

ನಿಜ, ಒಂದು ಕಾಲದಲ್ಲಿ, ಅಂದರೆ 1970, 80 ಮತ್ತು 90ರ ದಶಕಗಳಲ್ಲಿ ಏಕಮೇವಾದ್ವಿತೀಯ ಮಾಧ್ಯಮವಾಗಿ ಮೆರೆದ ಹಾಗೂ ಜನತೆಯನ್ನು ತನ್ನ ಮಾಹಿತಿ, ಶಿಕ್ಷಣ ಮತ್ತು ಮನರಂಜನೆಯ ಉನ್ನತ ಮಟ್ಟದ ಕಾರ್ಯಕ್ರಮಗಳ ಮೂಲಕ ಹಿಡಿದಿಟ್ಟುಕೊಂಡಿದ್ದ ಈ ಪ್ರಸಾರ ವ್ಯವಸ್ಥೆಯು ಈಗ ಕೆಲವು ಆಂತರಿಕ ಹಾಗು ಬಾಹ್ಯ ಕಾರಣಗಳಿಂದ ತನ್ನ ಮೊದಲಿನ ವೈಭವವನ್ನು ಕಳೆದುಕೊಂಡು ತೆವಳುತ್ತಿರುವುದು ವಾಸ್ತವ. ಹೀಗಾದುದಕ್ಕೆ ಆಕಾಶವಾಣಿ ಖಂಡಿತ ಕಾರಣವಲ್ಲ.

ಅದರ ಶಕ್ತಿ–ಸಾಮರ್ಥ್ಯ–ಗುರಿ–ಗಮನಗಳ ಬಗೆಗೆ ಎರಡು ಮಾತಿಲ್ಲ. ಹಾಗಾದರೆ ಇಂಥ ಶಕ್ತಿಯುತ ಪ್ರಸಾರ ಮಾಧ್ಯಮದ ಚಹರೆಯನ್ನು ಕೆಡಿಸಿದವರು ಯಾರು? ಈ ಪ್ರಶ್ನೆಗೆ ಸರಿಯಾದ ಉತ್ತರಗಳನ್ನು ಕಂಡುಕೊಂಡು ಆ ದಿಶೆಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನಗಳು ನಡೆದರೆ ಮತ್ತೆ ಅದನ್ನು ಅದರ ಹಳೆಯ ವೈಭವದ ಸ್ಥಿತಿಗೆ ತರಲು ಖಂಡಿತ ಸಾಧ್ಯ.

ಏಕೆಂದರೆ ಈ ದೇಶದ ಕಟ್ಟಕಡೆಯ ಮನುಷ್ಯ ಮತ್ತು ಕಟ್ಟಕಡೆಯ ಗುಡಿಸಲಿಗೆ ತಲುಪಬಹುದಾದ ಏಕೈಕ ಸರಳ, ಸುಲಭ ಮತ್ತು  ಅತಿ ಕಡಿಮೆ ಖರ್ಚಿನ ಮಾಧ್ಯಮ ಆಕಾಶವಾಣಿ. ಈ ವಿಚಾರಗಳನ್ನು ಬರೆಯುವಾಗ ನಾನು ಗಮನದಲ್ಲಿ ಇಟ್ಟುಕೊಂಡಿರುವುದು, ನಗರಗಳಿಗೆ ಮಾತ್ರ ಸೀಮಿತವಾಗಿರುವ ಹಾಗೂ ಬರೀ ಮನರಂಜನೆಯನ್ನು ಮಾತ್ರ ಉದ್ದೇಶವಾಗಿ ಹೊಂದಿರುವ ‘ಎಫ್.ಎಮ್.’ಗಳನ್ನು ಬಿಟ್ಟು, ಕೇವಲ ಆಕಾಶವಾಣಿಯ ಮುಖ್ಯವಾಹಿನಿಯನ್ನು ಮಾತ್ರ. 

ಆಕಾಶವಾಣಿಯಲ್ಲಿ ಉನ್ನತ ಹುದ್ದೆಯಲ್ಲಿರುವ ನನ್ನ ಸಹೋದ್ಯೋಗಿ ಸ್ನೇಹಿತನೊಬ್ಬನ ಮಾತು: ‘‘ಯಾರಪ್ಪಾ ಈಗ ಆಕಾಶವಾಣಿ ಕೇಳ್ತಾರೆ?’’. ಆತನ ಮಾತಿನಲ್ಲಿ ಸತ್ಯ ಇಲ್ಲದಿಲ್ಲ. ಕೇಳುವಂಥ ಯಾವ ಕಾರ್ಯಕ್ರಮಗಳನ್ನು ನೀವು ನಿರ್ಮಾಣ ಮಾಡ್ತಿದ್ದೀರಿ? ಮತ್ತು ಜನ ಸುಲಭವಾಗಿ ಕೇಳಲು ನೀವು ಯಾವ ಹೊಸ ತಾಂತ್ರಿಕ ಆವಿಷ್ಕಾರ ಮಾಡಿದ್ದೀರಿ? ಎಂದು ಅವನನ್ನು ನಾನು ಅಪ್ಪಿ-ತಪ್ಪಿ ಕೇಳುತ್ತಿರಲಿಲ್ಲ. ಏಕೆಂದರೆ ಆತನ ಉತ್ತರ ಏನಿರಬಹುದೆಂದು ನನಗೆ ಖಂಡಿತ ಗೊತ್ತಿರುತ್ತಿತ್ತು.

ಇಂಥ ಮನೋಭಾವ ಈ ಮಾಧ್ಯಮದ ಒಳಗಡೆ ಕೆಲಸ ಮಾಡುತ್ತಿರುವ ಬಹುತೇಕ ಉದ್ಯೋಗಿಗಳಲ್ಲಿ ಬಂದುಬಿಟ್ಟಿದೆ (ಎಲ್ಲರೂ ಅದೇ ಮನೋಭಾವದವರೆಂದು ಖಂಡಿತ ಹೇಳಲಾಗದು. ಕೆಲವರಾದರೂ ನಿಜವಾದ ಆಸಕ್ತಿಯಿಂದ ಮತ್ತು ಶ್ರದ್ಧೆಯಿಂದ  ದುಡಿಯುತ್ತಿರುವುದರಿಂದಲೇ ಇನ್ನೂ ಅದು ಜೀವಂತವಾಗಿದೆ). ‘ಯಾರಪ್ಪಾ ಈಗ ಆಕಾಶವಾಣಿ ಕೇಳ್ತಾರೆ?’ ಎನ್ನುವ ಪ್ರಶ್ನೆ ಅಲ್ಲಿಗೇ ಮುಗಿಯುವುದಿಲ್ಲ.

ಕೇಳಲಿ, ಬಿಡಲಿ, ಅದರ ಪ್ರಸಾರದ ಸಮಯಕ್ಕೆ ಏನಾದರೂ ಕಾರ್ಯಕ್ರಮಗಳನ್ನು ತುಂಬಲೇಬೇಕಲ್ಲ? ಹಾಗೆಂದೇ ಹೆಚ್ಚಿನ ಸಂಖ್ಯೆಯಲ್ಲಿ ‘ಈ ಏನಾದರೂ’ ಕಾರ್ಯಕ್ರಮಗಳನ್ನು ನಿರ್ಮಿಸುವ ಮತ್ತು ಅವುಗಳನ್ನೂ ನಿರ್ಮಿಸಲಾಗದಿದ್ದಾಗ ತಟ್ಟೆ ತಿರುಗಿಸುವ ಕೆಲಸವಂತೂ ನಡೆದಿದೆ. ಕಣ್ಣಾರೆ ಕಂಡಿರುವ ಈ ಸತ್ಯವನ್ನು, ಆಕಾಶವಾಣಿಯ ಬಗೆಗೆ ಗಾಢವಾದ ಪ್ರೀತಿಯನ್ನಿಟ್ಟುಕೊಂಡಿರುವ ನಾನು ತುಂಬ ನೋವಿನಿಂದ ಹೇಳುತ್ತಿರುವೆ. ಯಾಕೆ ಹೀಗಾಗಿದೆ? ಇದಕ್ಕೆ ಇಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಮಾತ್ರ ಹೊಣೆಗಾರರೆ? ಅಥವಾ ಮತ್ತೇನಾದರೂ ಕಾರಣಗಳಿವೆಯೆ? ಯೋಚನೆ ಮಾಡಬೇಕಾದ ಸಮಯವಿದು.

ಆಕಾಶವಾಣಿಯ ಆಡಳಿತ ಮೊದಲು ಕೇವಲ ಅದರ ಮಹಾನಿರ್ದೆಶನಾಲಯದಿಂದಲೇ ನಡೆಯುತ್ತಿತ್ತು. ಇಡೀ ದೇಶದ ಎಲ್ಲ ಕೇಂದ್ರಗಳ ಕಾರ್ಯಕ್ರಮ, ತಾಂತ್ರಿಕ, ಆರ್ಥಿಕ ಮತ್ತು ಆಡಳಿತಾತ್ಮಕ ನಿರ್ವಹಣೆಯನ್ನು ಮಹಾನಿರ್ದೇಶನಾಲಯವೊಂದೇ ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಿತ್ತು. ಸರ್ಕಾರದ ಇಲಾಖೆಯಾಗಿದ್ದ ಕಾರಣ ಅದರ ಆರ್ಥಿಕ ನಿರ್ವಹಣೆ ಕೂಡ ಸರ್ಕಾರದಿಂದಲೇ ನಡೆಯುತ್ತಿತ್ತು.

ಹೀಗಿದ್ದ ಸಂದರ್ಭದಲ್ಲಿ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯದ ಹೆಸರಿನಲ್ಲಿ ಅದನ್ನು ‘ಪ್ರಸಾರಭಾರತಿ’ ಎಂಬ ಕಾರ್ಪೋರೇಶನ್‌  ಮಾಡಿ, ಸರ್ಕಾರದ ನೇರ ನಿರ್ವಹಣೆಯಿಂದ ಬಿಡಿಸಿ ಮಂಡಳಿಗೆ ಹಸ್ತಾಂತರಿಸಲಾಯಿತು. ಈ ಬದಲಾವಣೆಯಿಂದ ತಮ್ಮ ಸೇವಾಸ್ಥಿತಿಯಲ್ಲಿ ತೀವ್ರ ಬಡ್ತಿಗಳು, ವೇತನ ಹೆಚ್ಚಳ ಮತ್ತು ಇನ್ನೂ ಏನೇನೋ ಅನುಕೂಲಗಳು ಒಮ್ಮೆಲೇ ಬಂದುಬಿಡುತ್ತವೆಯೆಂದು ಭಾವಿಸಿದ್ದ ಆಕಾಶವಾಣಿಯ ಉದ್ಯೋಗಿಗಳು, ರಾಜಕೀಯ ಪಕ್ಷಗಳಿಗಿಂತಲೂ ಹೆಚ್ಚಿನ ತರಾತುರಿ ಮತ್ತು ಆಸಕ್ತಿಯಿಂದ ಅದನ್ನು ಆದರದಿಂದ ಸ್ವಾಗತಿಸಿದ್ದರು.

ಆದರೆ ಆದದ್ದೇನು? ನೇರ ಸರ್ಕಾರದ ಬದಲಾಗಿ, ಸರ್ಕಾರವೇ ನಿಯಮಿಸಿದ ಮಂಡಳಿಯು, ಸರ್ಕಾರವೇ ಕೊಡಮಾಡುವ ಹಣಕಾಸಿನಿಂದ ಆಡಳಿತ ನಡೆಸುವ ವ್ಯವಸ್ಥೆ ಬಂತು. ಮಂಡಳಿಯ ಸಿಇಓ, ಜೊತೆಗೆ ಮಂಡಳಿಯ ವಿವಿಧ ಸದಸ್ಯರು, ಅವರೆಲ್ಲರ ಮೇಲೆ ಪ್ರಸಾರಭಾರತಿಯ ಅಧ್ಯಕ್ಷರು, ಇವರೆಲ್ಲರನ್ನೂ ನಿರ್ವಹಿಸುವ ಮಂತ್ರಾಲಯ, ಅದಕ್ಕೂ ಮೇಲೆ ಸರ್ಕಾರ– ಹೀಗೆ ಒಂದು ದೊಡ್ಡ ಸರಪಣಿಯೇ ನಿರ್ಮಾಣವಾಗಿ, ಕೇವಲ ಮಹಾನಿರ್ದೇಶಕರಿಂದ ಅತ್ಯಂತ ಸುಸೂತ್ರ ಮತ್ತು ವ್ಯವಸ್ಥಿತವಾಗಿ ನಡೆಯುತ್ತಿದ್ದ ಆಡಳಿತವು ಎಲ್ಲೋ ಹರಿದು ಹಂಚಿಹೋಗಿಬಿಟ್ಟಿತು.

ಈ ಪ್ರಕ್ರಿಯೆಯಲ್ಲಿ ಆಡಳಿತದ ವಿಕೇಂದ್ರೀಕರಣದ ಗದ್ದಲ ಜೋರಾಯಿತೇ ಹೊರತು ಅದರ ಕಾರ್ಯಕ್ರಮಗಳಲ್ಲಿ ಹೊಸತನ ತರುವ ಬಗೆಗೆ, ಅದನ್ನು ಹೊಸ ಕಾಲಕ್ಕೆ ತಕ್ಕಂತೆ ಬದಲಾವಣೆಗೊಳಿಸುವ ಬಗೆಗೆ ಮತ್ತು ಬಹಳ ಮುಖ್ಯವಾಗಿ ಅದರ ಸಿಬ್ಬಂದಿಯ ಸೇವಾಸ್ಥಿತಿಯ ಸುಧಾರಣೆಯ ಬಗೆಗೆ ಹೆಚ್ಚಿನ ಕೆಲಸ ನಡೆಯಲಿಲ್ಲ. ತನ್ನ ಅಧಿಕಾರ ಮೊಟಕಾದ ಕಾರಣ ಒಳಗೊಳಗೇ ನಿರಾಶೆಗೊಂಡ ಮಹಾನಿರ್ದೇಶನಾಲಯವು, ‘ಈಗ ನನ್ನ ಕೈಯಲ್ಲೇನಿದೆ?’ ಎಂದು ತನ್ನ ಮೊದಲಿನ ಜವಾಬ್ದಾರಿಯಿಂದ ದೂರಾಗತೊಡಗಿತು.

ಅಚ್ಚರಿಯೆಂದರೆ, ಈ ಎಲ್ಲ ಕಥೆ ನಡೆಯುತ್ತಿರುವಾಗಲೂ ಆಕಾಶವಾಣಿಯ ಅಂದಿನ ಉದ್ಯೋಗಿಗಳು ತಮ್ಮ ಆಸಕ್ತಿಯನ್ನು ಎಳ್ಳಷ್ಟೂ ಕಳೆದುಕೊಳ್ಳದೇ ನಿಜವಾದ ಸಾಮಾಜಿಕ ಕಾಳಜಿ ಮತ್ತು ಮಾಧ್ಯಮಪ್ರಜ್ಞೆಯಿಂದಲೇ ಕೆಲಸ ಮಾಡುತ್ತಿದ್ದರು. ಅದಕ್ಕೆ ಮುಖ್ಯ ಕಾರಣ ಅವರಲ್ಲಿದ್ದ ಬದ್ಧತೆ ಮತ್ತು ಕೆಲಸದಲ್ಲಿನ ಪ್ರೀತಿಯಾಗಿತ್ತು. ಅವರಲ್ಲಿದ್ದ ಸೃಜನಶೀಲ ಮತ್ತು ಕ್ರಿಯಾತ್ಮಕ ಕಾಳಜಿಗಳು ಅವರನ್ನು ಕೆಲಸದಿಂದ ವಿಮುಖ ಮಾಡಿರಲಿಲ್ಲ.

ಆದರೆ, ಬದಲಾದ ಹೊಸ ವ್ಯವಸ್ಥೆಯ ಎಲ್ಲ ಹಂತಗಳಲ್ಲೂ ಸ್ಪಷ್ಟವಾಗಿ ಕಾಣಿಸಿದ್ದು ಸಿಬ್ಬಂದಿಯ ಹಿತ ಕಾಯುವಲ್ಲಿನ ನಿರ್ಲಕ್ಷ್ಯ. ಇದರ ಪರಿಣಾಮವೆಂದರೆ ಇಪ್ಪತ್ತೈದು–ಮೂವತ್ತು ವರ್ಷ ಕಳೆದರೂ ಆಕಾಶವಾಣಿಯ ಹೆಚ್ಚಿನ ಸಿಬ್ಬಂದಿಗೆ, ಅದರಲ್ಲೂ ಕಾರ್ಯಕ್ರಮ ಸಿಬ್ಬಂದಿಗೆ  ಸಿಗಬೇಕಾದ ಬಡ್ತಿ ಸಿಗಲಿಲ್ಲ, ವೇತನ ಸಿಗಲಿಲ್ಲ. ಇದರ ಬಗೆಗೆ ಉದ್ಯೋಗಿಗಳು ಮೇಲಿನವರಿಗೆ ಮಾಡಿಕೊಂಡ ವಿನಂತಿಗಳು, ಕೋರಿಕೆಗಳು ನಿಷ್ಫಲವಾದವು.

ಮಂಡಳಿ ಮತ್ತು ಮಹಾನಿರ್ದೇಶನಾಲಯಗಳೇ ‘ನೀವು ನ್ಯಾಯಾಲಯಗಳಿಗೆ ಹೋಗಬಹುದು’ ಎಂದು ರಹದಾರಿ ತೋರಿಸಿದ ಕಾರಣ ಸೇವಾ ವಿಷಯಕ್ಕೆ ಸಂಬಂಧಿಸಿದ ಸಾವಿರಾರು ಪ್ರಕರಣಗಳು ಹತ್ತಾರು ವರ್ಷಗಳಿಂದ ವಿವಿಧ ಕೋರ್ಟ್‌ಗಳಲ್ಲಿ ನಡೆಯುತ್ತಲೇ ಇವೆ. ಇನ್ನೂ ಅಚ್ಚರಿಯ ಸಂಗತಿಯೆಂದರೆ, ಮಹಾನಿರ್ದೇಶನಾಲಯವು ಎಲ್ಲ ಬಗೆಯ ಪರಿಶೀಲನೆ ನಡೆಸಿಯೇ ಕಾರ್ಯಕ್ರಮ ಸಿಬ್ಬಂದಿಗೆ ಕೊಡಮಾಡಿದ ವೇತನವು ತಪ್ಪಾಗಿದೆಯೆಂದು ಈಗ ಅದನ್ನು ಸಂಬಳದಲ್ಲಿ ಮತ್ತು ನಿವೃತ್ತಿವೇತನದಲ್ಲಿ ಮುರಿದುಕೊಳ್ಳುವ ಆದೇಶ ಹೊರಡಿಸಿದೆ.

ಈ ಕೇಸ್ ಕೂಡ ಕೋರ್ಟ್‌ ಮೆಟ್ಟಿಲೇರಿದೆ. ಇದು ‘ಪ್ರಸಾರಭಾರತಿ’ಯ ಸದ್ಯದ ಆಡಳಿತದ ಒಂದು ಸಣ್ಣ ಮಾದರಿಯ ಚಿತ್ರ. ಇಂಥ ವಿಚಿತ್ರ ಸನ್ನಿವೇಶದಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕ್ರಮ ಸಿಬ್ಬಂದಿಯು ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಇದೇ ಸ್ಥಗಿತ ಸ್ಥಿತಿಯಲ್ಲಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ನಿರಂತರ ಶೋಷಣೆಗೊಳಗಾಗುತ್ತಿರುವ ಈ ಉದ್ಯೋಗಿಗಳು ಮುಂದಿನ ಭರವಸೆಯನ್ನೇ ಕಳೆದುಕೊಂಡಿರುವುದು ವಾಸ್ತವ. ಇದರ ಪರಿಣಾಮವೇ ಏನಾದರೂ ಕಾರ್ಯಕ್ರಮ ನಿರ್ಮಿಸುವ ಹಾಗೂ ತಟ್ಟೆ ತಿರುಗಿಸುವ ಕೆಲಸ.

ಸ್ವಾಯತ್ತತೆ ಹೆಸರಲ್ಲಿ ವ್ಯಾಪಾರ
ಸ್ವಾಯತ್ತತೆಯನ್ನು ಕೊಟ್ಟಿರುವ ಸರ್ಕಾರ, ಇದನ್ನು ಉಪಯೋಗಿಸಿಕೊಂಡು ‘ಆರ್ಥಿಕವಾಗಿ ನಿಮ್ಮನ್ನು ನೀವೇ ನಿರ್ವಹಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಿ’ ಎಂದು ಹೇಳಿತು. ಅಷ್ಟೇ ಅಲ್ಲ, 2017ರವರೆಗೆ ಮಾತ್ರ ಸರ್ಕಾರದ ಅನುದಾನ, ಆನಂತರ ಅದು ನಿಲ್ಲುತ್ತದೆಯೆಂದೂ ಹೇಳಿತು. ಇಲ್ಲಿಂದಲೇ ಆರಂಭವಾದದ್ದು ವಾಣಿಜ್ಯ ಆದಾಯದ ಒತ್ತಡ. ಈ ಒತ್ತಡವನ್ನು ನೇರವಾಗಿ ಹಾಕಿದ್ದು ಕೇವಲ ಕಾರ್ಯಕ್ರಮ ವಿಭಾಗದ ಸಿಬ್ಬಂದಿಯ ಮೇಲೆ.

ಒಂದು ಕಡೆ ‘ಸಾರ್ವಜನಿಕ ಪ್ರಸಾರ ಸೇವೆ’ ಎಂದು ‘ಹೆಡ್ಡಿಂಗ್’ ಇರುವ ಈ ವ್ಯವಸ್ಥೆಯು ಮತ್ತೊಂದು ಕಡೆ ರೆವಿನ್ಯೂ ಇಲಾಖೆಯಂತೆ ಆದಾಯವನ್ನು ಗಳಿಸಿಕೊಡಬೇಕಾದ ಜವಾಬ್ದಾರಿಯನ್ನೂ ನಿಭಾಯಿಸಬೇಕಾಗಿದೆ. ಇದು ನಿಜಕ್ಕೂ  ವಿರೋಧಾಭಾಸ! ಇದನ್ನೂ ಒಪ್ಪಿಕೊಂಡು ಕೋಟಿಗಟ್ಟಲೇ ಹಣವನ್ನೂ ಸಂಪಾದಿಸುತ್ತಿದೆ ಕಾರ್ಯಕ್ರಮ ಸಿಬ್ಬಂದಿ.

ಹೀಗೆ ತಮ್ಮ ಸ್ವಸಾಮರ್ಥ್ಯದಿಂದ ಹಣ ಗಳಿಸುವ ಮತ್ತು ಕಾರ್ಯಕ್ರಮಗಳನ್ನು ನಿರ್ಮಿಸುವ– ಎರಡೂ ಜವಾಬ್ದಾರಿ ನಿರ್ವಹಿಸುತ್ತಿರುವ ಉದ್ಯೋಗಿಗಳು ಈ ಎರಡರಲ್ಲಿ ಯಾವುದು ಮುಖ್ಯ, ಯಾವುದು ಅಮುಖ್ಯ ಎಂದು ನಿರ್ಧರಿಸಲಾಗದೇ ಅಂತೂ ಎರಡನ್ನೂ ಮಾಡುತ್ತಿದ್ದಾರೆ.

ಇನ್ನು ಕೆಲವರು ಈ ಎರಡೂ ಕಾರಣಗಳನ್ನು ಮುಂದೆ ಮಾಡಿಕೊಂಡು, ಎರಡನ್ನೂ ಮಾಡದೇ ಏನಾದರೂ ಕಾರ್ಯಕ್ರಮ ನಿರ್ಮಿಸುವ ಹಾಗೂ ತಟ್ಟೆ ತಿರುಗಿಸುವ ಕೆಲಸದಲ್ಲಿ ತೊಡಗಿದ್ದಾರೆ. ಈ ಏನಾದರೂ ಕಾರ್ಯಕ್ರಮ ನಿರ್ಮಿಸುವ ಮತ್ತು ತಟ್ಟೆ ತಿರುಗಿಸುವ ಸ್ಥಿತಿ ಎಲ್ಲಿಗೆ ಹೋಗಿದೆಯೆಂದರೆ, ಮೂವತ್ತು ನಲವತ್ತು ವರ್ಷಗಳ ಹಿಂದೆ ನಿರ್ಮಾಣವಾದ ನಾಟಕಗಳು–ರೂಪಕಗಳು ಈಗಲೂ ಪ್ರಸಾರವಾಗುತ್ತಿವೆ.

ಎಂದೋ ಧ್ವನಿಮುದ್ರಿತವಾದ ಕಾರ್ಯಕ್ರಮಗಳಲ್ಲಿನ ಅಂದಿನ ದಿನಾಂಕ ಇಂದೂ ಕೂಡ ಹಾಗೆಯೇ ಮರುಪ್ರಸಾರವಾಗುತ್ತದೆ. ಒಂದೊಮ್ಮೆ ನಿರ್ಮಾಣವಾಗಿರುವ ಸಂಗೀತರೂಪಕಗಳು ಬಹುಶಃ ಇಪ್ಪತ್ತು ಮೂವತ್ತು ಬಾರಿಯಾದರೂ ಪುನರುಕ್ತಿಯಾಗುತ್ತಿವೆ. ಸಂಗೀತದ ಧ್ವನಿಮುದ್ರಣಗಳ ಮಾತಂತೂ ವಿಚಿತ್ರ!! ಪುನಃಪ್ರಸಾರದ ಅಗತ್ಯವಿರುವ ಅನುಕೂಲತೆಯನ್ನೇ ಉಪಯೋಗಿಸಿಕೊಂಡು ಮತ್ತೆ ಮತ್ತೆ ಅದೇ ಅದನ್ನೇ ಸುತ್ತಿಸುವ ಕೆಲಸ ನಡೆದಿದೆ.

ಈ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ಎಲ್ಲಿಯವರೆಗೆ ಹೋಗಿದೆಯೆಂದರೆ ಧ್ವನಿಮುದ್ರಣ ಮಾಡುವಾಗಿನ ಪುನರಾವರ್ತಿತ ಭಾಗಗಳನ್ನೂ ಎಡಿಟ್ ಮಾಡದೇ ಪ್ರಸಾರ ಮಾಡಿದ ಉದಾಹರಣೆಗಳೂ ಉಂಟು. ಹಳೆಯ ಕಾರ್ಯಕ್ರಮಗಳಿಗೇ ಹೊಸ ಕಾರ್ಯಕ್ರಮವೆಂದು ಕ್ಯೂಶೀಟ್ ವಿವರ ಬರೆದು ಪ್ರಸಾರ ಮಾಡಿದ ಉದಾಹರಣೆಗಳೂ ಇಲ್ಲದಿಲ್ಲ. ಇವು ಈಗ ನಡೆಯುತ್ತಿರುವ ಅವಾಂತರಗಳ ಕೆಲವು ಉದಾಹರಣೆಗಳು ಮಾತ್ರ.

ಹೊಸದು ಇಲ್ಲದಿದ್ದರೆ ಜನ ಆಕಾಶವಾಣಿಯನ್ನು ಏಕೆ ಕೇಳುತ್ತಾರೆ? ಉಪಯೋಗಕ್ಕೆ ಬಾರದ್ದು ಪ್ರಸಾರವಾದರೆ ಅದನ್ನು ಏಕೆ ಕೇಳಬೇಕು? ಯಾಕೆ ಹೀಗಾಗುತ್ತಿದೆ? ಹಣ ಕಡಿಮೆ ಇದೆಯೇ? ಜನ ಕಡಿಮೆ ಇದ್ದಾರೆಯೇ? ಕಲಾವಿದರು, ಬರಹಗಾರರು, ಪ್ರತಿಭಾವಂತರು, ಸಾಧಕರು ಇಲ್ಲವೇ? ಎಲ್ಲ ಇದ್ದೂ ಹೀಗೇಕಾಗುತ್ತಿದೆ?– ಈ ಎಲ್ಲ ಪ್ರಶ್ನೆಗಳು ಈ ಮಾಧ್ಯಮದಲ್ಲಿರುವವರನ್ನು ಏಕೆ ಕಾಡುವುದಿಲ್ಲ? ವಾಸ್ತವ ಸ್ಥಿತಿ ಹೀಗಿರುವಾಗ, ಆಕಾಶವಾಣಿಯ ಮೊದಲಿನ ಏಕಚಕ್ರಾಧಿಪತ್ಯ ಉಳಿಯಲು ಹೇಗೆ ಸಾಧ್ಯ?

ಪುರಾತನ ತಂತ್ರಜ್ಞಾನ!
ತಾಂತ್ರಿಕವಾಗಿಯೂ ಅಷ್ಟೇ, ಆಕಾಶವಾಣಿಯ ಮುಖ್ಯವಾಹಿನಿಯ ಬಹುತೇಕ ಕಾಯಕ್ರಮಗಳು ಮಧ್ಯಮ (ಎಮ್.ಡಬ್ಲು) ತರಂಗಾಂತರಗಳಿಂದ ಪ್ರಸಾರವಾಗುತ್ತವೆ. ಇದು ಓಬೀರಾಯನ ಕಾಲದ ತಾಂತ್ರಿಕತೆ. ಈ ತರಂಗಾಂತರಗಳಿಂದ ಪ್ರಸಾರವಾಗುವ ಕಾರ್ಯಕ್ರಮಗಳನ್ನು ಕೇಳಲು ಈಗ ‘ಎಮ್.ಡಬ್ಲು’ ತರಂಗಾಂತರಗಳನ್ನು ಹಿಡಿದುಕೊಡುವ ರೇಡಿಯೋ ಸೆಟ್‌ಗಳೇ ಇಲ್ಲ.

ಅವು ಮಾರುಕಟ್ಟೆಯಲ್ಲಿ ಸಿಗುವುದಿಲ್ಲವಷ್ಟೇ ಅಲ್ಲ, ಅವುಗಳನ್ನು ನಿರ್ಮಿಸುವ ಉದ್ಯಮಗಳೂ ಈಗಿಲ್ಲ. ವಾಸ್ತವಸ್ಥಿತಿ ಹೀಗಿರುವಾಗ ಏನಾದರೂ ಅಥವಾ ತಟ್ಟೆ ತಿರುಗಿಸುವ ಕಾರ್ಯಕ್ರಮಗಳನ್ನೂ ಕೇಳುವ ಸಾಧ್ಯತೆ ಇಲ್ಲ. ‘ಯಾರಪ್ಪಾ ಈಗ ರೇಡಿಯೋ ಕೇಳ್ತಾರೆ?’ ಎಂಬ ಪ್ರಶ್ನೆ ಈ ಕಾರಣಕ್ಕಾಗಿಯೂ ಕೇಳಿದ್ದಾಗಿರಬೇಕು ಎನಿಸುತ್ತದೆ.

ಜಗತ್ತು ತಾಂತ್ರಿಕವಾಗಿ ಇನ್ನೂರು ವರ್ಷ ಮುಂದಿರುವಾಗ ನಮ್ಮ ಆಕಾಶವಾಣಿ ಇನ್ನೂ ನೂರು ವರ್ಷಗಳ ಹಿಂದಿನ ತಾಂತ್ರಿಕತೆಯನ್ನು ಬಳಸುತ್ತಿರುವುದು ತುಂಬ ವಿಚಿತ್ರ! ಈಗ ಏನಿದ್ದರೂ ‘ಎಫ್.ಎಮ್.’ ಯುಗ. ಆಕಾಶವಾಣಿಯ ಕಾರ್ಯಕ್ರಮಗಳೇನಾದರೂ ನಿಜಕ್ಕೂ ಜನರಿಗೆ ತಲುಪಬೇಕೆಂಬ ಖಚಿತ ಉದ್ದೆಶ ಇದ್ದರೆ, ಈ ತಕ್ಷಣಕ್ಕೆ ಮಧ್ಯಮ ತರಂಗಾಂತರದ ಎಲ್ಲ ಪ್ರಸಾರಕಗಳನ್ನೂ ಮೊದಲು ‘ಎಫ್.ಎಮ್.’ ತರಂಗಾಂತರಕ್ಕೆ ಪರಿವರ್ತಿಸಬೇಕು.

ಇದರ ಬಗ್ಗೆ ಹಲವಾರು ಸಭೆಗಳಲ್ಲಿ ಚರ್ಚೆಗಳು ನಡೆದಿದ್ದರೂ, ಇನ್ನೂ ಈ ಬದಲಾವಣೆ ಸಾಧ್ಯವಾಗಿಲ್ಲ. ಇದಕ್ಕೆ ಬದಲಾಗಿ ‘ಡಿ.ಆರ್.ಎಮ್.’ ಎಂಬ ಇನ್ನೂ ಜಟಿಲವಾದ ಹಾಗೂ ದುಬಾರಿಯಾದ ತಾಂತ್ರಿಕತೆಯನ್ನು ತರುವ ಪ್ರಯತ್ನಗಳು ನಡೆದಿರುವುದು ಶೋಚನೀಯ. ಈ ‘ಡಿ.ಆರ್.ಎಮ್.’ ಝೀರೋ ಲಿಸನಿಂಗ್‌ಗೆ ಖಂಡಿತ ರಹದಾರಿ! ಇಂಥ ಸ್ಥಿತಿಯಲ್ಲೂ ಅಲ್ಲಲ್ಲಿ ಒಂದೊಂದೇ ಉಳಿದಿರುವ, ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಉಳಿದಿರುವ ಹಳೆಯ ರೇಡಿಯೋ ಸೆಟ್‌ಗಳ ಮೂಲಕವೇ ಆಕಾಶವಾಣಿ ಇನ್ನೂ ಕೆಲವಾದರೂ ಕೇಳುಗರನ್ನು ಉಳಿಸಿಕೊಂಡಿರುವುದು ಅದರ ಅಗತ್ಯ ಮತ್ತು ಮಹತ್ವವನ್ನು ತೋರಿಸುತ್ತದೆ.

‘ಪ್ರಸಾರಭಾರತಿ’ಯ ಸುಪರ್ದಿನ ಆಕಾಶವಾಣಿ ವ್ಯವಸ್ಥೆಯಡಿ ಈಗ ಒಟ್ಟು ೪೧೫ ಕೇಂದ್ರಗಳಿವೆ. ಈ ಸಂಖ್ಯೆ (ಇದು ಆಕಾಶವಾಣಿಯ ಸೈಟ್‌ನಲ್ಲಿರುವ ಸಂಖ್ಯೆ) ಹೆಚ್ಚುತ್ತಲೇ ಇರುತ್ತದೆ ಕೂಡ. ಅಚ್ಚರಿಯೆಂದರೆ ಈ ಕೇಂದ್ರಗಳಲ್ಲಿ ಹೆಚ್ಚಿನವುಗಳಲ್ಲಿ ಸಹಾಯಕ ನಿರ್ದೇಶಕರ ಹಂತದ ಅಧಿಕಾರಿಯ ಮುಖ್ಯಸ್ಥಿಕೆ ಕೂಡ ಇಲ್ಲ. ಕೇಂದ್ರಗಳಲ್ಲಿ ಅದಕ್ಕಿಂತ ಕೆಳಗಿನ ಶ್ರೇಣಿಯ ಅಧಿಕಾರಿಗಳೇ ಹೆಡ್ ಆಗಿದ್ದಾರೆ.

ಈ ಹೆಡ್‌ಗಳನ್ನು ಅದೇ ಶ್ರೇಣಿಯ ಇನ್ನುಳಿದ ಅಧಿಕಾರಿಗಳು ಗೌರವಿಸುವುದಿಲ್ಲ ಹಾಗೂ ಅವರು ನಿರ್ದೇಶಿಸುವಂತೆ ಕೆಲಸ ಮಾಡುವುದಿಲ್ಲ. ಸಮಾನ ಶ್ರೇಣಿಯ ಅಧಿಕಾರಿಗಳಲ್ಲಿ ಇರುವ ವೈಮನಸ್ಸು ಹಾಗೂ ಹೊಟ್ಟೆಯುರಿಯ ಕಾರಣಗಳಿಂದಾಗಿ ಇಡೀ ಕೇಂದ್ರದ ಕಾರ್ಯಕ್ರಮಗಳು ನಲುಗಿವೆ. ಸಂಖ್ಯಾತ್ಮಕವಾಗಿ ವಿಸ್ತಾರವಾಗುತ್ತಲೇ ಹೋಗುತ್ತಿರುವ ಕೇಂದ್ರಗಳಿಗೆ ತಕ್ಕಂತೆ ಸಿಬ್ಬಂದಿಯನ್ನು ಒದಗಿಸದೆ ಇರುವುದು ಕೂಡ ಅವುಗಳ ಕಾರ್ಯಕ್ಷಮತೆಯ ಸೊರಗುವಿಕೆಗೆ ಮುಖ್ಯ ಕಾರಣ. 

ಆಕಾಶವಾಣಿಯಂಥ ಬೃಹತ್ ಮತ್ತು ವಿಸ್ತಾರವಾದ ಜಾಲಕ್ಕೆ, ಮನರಂಜನೆ ಮತ್ತು ಆದಾಯ– ಈ ಎರಡನ್ನೇ ಗುರಿಯಾಗಿಸಿಕೊಂಡಿರುವ ಖಾಸಗಿ ಚಾನಲ್‌ಗಳು ಯಾವ ರೀತಿಯ ಪೈಪೋಟಿಯನ್ನೂ ಕೊಡಲು ಸಾಧ್ಯವಿಲ್ಲ. ಏಕೆಂದರೆ ಮನರಂಜನೆಯನ್ನೂ ಒಳಗೊಂಡ ಹಾಗೆ ಆಕಾಶವಾಣಿಯು ಮಾಹಿತಿ ಮತ್ತು ಶಿಕ್ಷಣವನ್ನು ಕೊಡುವ ಜವಾಬ್ದಾರಿಯನ್ನೂ ನಿಭಾಯಿಸುತ್ತಿದೆ.

ಇಡೀ ದೇಶದ ಎಲ್ಲ ಭಾಗಗಳನ್ನು ಹಾಗೂ ಎಲ್ಲ ಜನತೆಯನ್ನು ತಲುಪುತ್ತಿರುವ ಅದು ಈಗಂತೂ ರಾಷ್ಟ್ರದ ಪ್ರಗತಿಯಲ್ಲಿ ಪೂರಕ ಹಾಗೂ ಪ್ರೇರಕಶಕ್ತಿಯಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ. ಇದು ಸಾಧ್ಯವಾಗಬೇಕಾದರೆ ಬಹಳ ಮುಖ್ಯವಾಗಿ ಇಲ್ಲಿಯ ಸಿಬ್ಬಂದಿ ಬದ್ಧತೆಯಿಂದ ಕೆಲಸ ಮಾಡುವ ಅಗತ್ಯವಿದೆ. ಇದಕ್ಕೆ ಆ ಮಾಧ್ಯಮದ ಶಕ್ತಿ–ಸಾಮರ್ಥ್ಯದ ಅರಿವಿರಬೇಕಾಗುತ್ತದೆ. ದೂರದರ್ಶಿತ್ವ, ಸತತ ಅಧ್ಯಯನ, ಹೊಸದನ್ನು ನಿರ್ಮಿಸುವ ಆಸಕ್ತಿ, ಜವಾಬ್ದಾರಿ, ಜನ ನಮ್ಮ ಕಾರ್ಯಕ್ರಮಗಳನ್ನು ಕೇಳುತ್ತಿದ್ದಾರೆಂಬ ಎಚ್ಚರಿಕೆ ಹಾಗೂ ಒಂದಿಷ್ಟಾದರೂ ತ್ಯಾಗದ ಮನೋಭಾವ– ಇವೆಲ್ಲ ತುಂಬ ಅಗತ್ಯ.

ಹೊಸತನಕ್ಕೆ ಮಿಡಿಯಬೇಕಿದೆ ಮನ
ತಾವು ಏನೆಲ್ಲ ಅವಕಾಶಗಳಿಂದ ವಂಚಿತವಾಗಿದ್ದೇವೆಂಬ ಕಾರಣವೊಂದನ್ನೇ ಮುಂದಿಟ್ಟುಕೊಂಡು ಶಕ್ತಿಯುತ ಮಾಧ್ಯಮವೊಂದರ ಅಗತ್ಯಕ್ಕೆ ತಕ್ಕಂತೆ ಕೆಲಸ ಮಾಡದೇ ಇರುವುದು ದೊಡ್ಡ ಅನ್ಯಾಯ.

ಸಿಗಬೇಕಾದದ್ದು ತಮಗೆ ಸಿಕ್ಕಿಲ್ಲವಾದ ಕಾರಣ (ಇದು ನಿಜವೂ ಹೌದು) ಕೆಲಸ ಮಾಡದಿರುವುದೇ ತಮ್ಮ ಹಕ್ಕೆಂದು ಪ್ರತಿಪಾದಿಸುವ ಇನ್ನೂ ಕೆಲ ಅಧಿಕಾರಿಗಳು, ಮೇಲಧಿಕಾರಿಗಳ ನಿರ್ದೇಶನವನ್ನು ಧಿಕ್ಕರಿಸಿದ ಉದಾಹರಣೆಗಳು ಬೇಕಾದಷ್ಟಿವೆ. ಈ ಮೇಲಧಿಕಾರಿಗಳಿಗೆ ಅವರ ಮೇಲೆ ಯಾವುದೇ ಕ್ರಮವನ್ನೂ ಕೈಕೊಳ್ಳುವ ಹಕ್ಕು ಅಥವಾ ಧೈರ್ಯ ಇರಲಾರದು. ಯಾಕೆಂದರೆ ಹಾಗೆ ಕ್ರಮ ಕೈಗೊಂಡಿದ್ದೇ ಆದರೆ ಅದರಿಂದ ಪಾರಾಗುವ ಶಕ್ತಿಕೇಂದ್ರಗಳ ಸಂಬಂಧ ಅವರಿಗೆ ಸಾಕಷ್ಟಿರುತ್ತವೆ. ‘ತುಂಬಾ ಕಷ್ಟ ಸಾರ್’ ಎಂದು ಜಾರಿಕೊಳ್ಳುವ ಕೆಲಸಗಳ್ಳರಿಗೇನೂ ಕಡಿಮೆಯಿಲ್ಲ.

ಇಂಥ ಕೆಲಸಗಳ್ಳರು ಆಕಾಶವಾಣಿಯಂಥ ಸಶಕ್ತ ಮಾಧ್ಯಮದಲ್ಲಿದ್ದು ಏನು ಪ್ರಯೋಜನ? ನಾನೇನೂ ಇದಕ್ಕೆಲ್ಲ ಸೊಪ್ಪು ಹಾಕಲಿಲ್ಲ. ಒಬ್ಬ ಕೇಂದ್ರ ನಿರ್ದೇಶಕನಾಗಿ ಸ್ವತಃ ನಾನೇ ನಿಂತು ಈ ಕೆಲಸಗಳನ್ನು ಮಾಡಿ ತೋರಿಸಿದೆ. (ಆಸಕ್ತಿ ಮತ್ತು ಪ್ರೀತಿ ಇರುವ ಕೆಲವರು ಅಧಿಕಾರಿಗಳು ನನಗೆ ಆಗ ಪೂರ್ಣ ಸಹಕಾರ ನೀಡಿದ್ದನ್ನೂ ನೆನೆಯಬೇಕು).

ಇವರನ್ನೂ ಮೀರಿಸುವ ಕೆಲವು ಅಧಿಕಾರಿಗಳು ಮಾಡಿದ ಮತ್ತು ನಡೆಸಿದ ಕುತಂತ್ರಗಳನ್ನು ವಿವರಿಸುತ್ತ ಹೋದರೆ ಅದು ಕೊನೆಯಿಲ್ಲದ ಕಾದಂಬರಿಯಾಗುತ್ತದೆ. ಇವೆಲ್ಲಕ್ಕೂ ದಾಖಲೆಗಳಿರುವುದು ಅಷ್ಟೇ ಸತ್ಯ. ಇಂಥ ಅಧಿಕಾರಿಗಳಿಂದ ಆಕಾಶವಾಣಿ ಮತ್ತೇನಾಗಲು ಸಾಧ್ಯ?

ಆಕಾಶವಾಣಿ ಕುರಿತ ಎಲ್ಲ ಬೆಳವಣಿಗೆಗಳಿಗೆ ಯಾರು ಹೊಣೆ? ಯಾರು ಕಾರಣರು? ಎಂಬ ಪ್ರಶ್ನೆಗಳಿಗೀಗ ಉತ್ತರ ಹುಡುಕುವ ಜರೂರು ತುಂಬ ಇದೆ. ಮುಖ್ಯವಾಗಿ ಆಕಾಶವಾಣಿ ಮಹಾನಿರ್ದೇಶನಾಲಯ ತನ್ನ ಸಿಬ್ಬಂದಿಯ ಸ್ಥಗಿತ ಸೇವಾಸ್ಥಿತಿಯ ಬಗೆಗೆ ಮತ್ತು ಅದಕ್ಕೆ ನ್ಯಾಯಬದ್ಧವಾಗಿ ಸಿಗಬೇಕಾಗಿರುವ ಸವಲತ್ತುಗಳ ಬಗೆಗೆ ಯೋಚಿಸಿ ತುರ್ತಾಗಿ ಅಗತ್ಯ ಕ್ರಮಗಳನ್ನು ಕೈಕೊಳ್ಳಬೇಕು.

ಹೀಗಾದರೆ ಮಾತ್ರ ದೀರ್ಘಕಾಲದಿಂದ ನೊಂದಿರುವ ಮತ್ತು ಆಕ್ರೋಶಗೊಂಡಿರುವ ಮನಸ್ಸುಗಳು ಹೊಸ ಹುರುಪಿನಿಂದ ಕೆಲಸ ಮಾಡಲು ಸಾಧ್ಯ. ಮಹಾನಿರ್ದೇಶನಾಲಯಕ್ಕೆ ಇದು ಕಷ್ಟಕರ ಕೆಲಸವೇನಲ್ಲ. ಏಕೆಂದರೆ ಇದರಲ್ಲಿ ಜಟಿಲವಾದ ಯಾವ ಕಾನೂನಿನ ತೊಡಕುಗಳೂ ಇಲ್ಲ. ಇರಬೇಕಾದದ್ದು ಒಳ್ಳೆಯದನ್ನು ಮಾಡಬೇಕೆಂಬ ಮನಸ್ಸು ಮತ್ತು ಅದಕ್ಕನುಗುಣವಾದ ಆಡಳಿತಾತ್ಮಕ ಕಾರ್ಯತತ್ಪರತೆ.

ಮರಳಿ ಮನ್ನಣೆ?
ಪ್ರಗತಿಪರ, ಜನೋಪಯೋಗಿ, ಸಮಾಜಮುಖಿ, ಅರ್ಥಪೂರ್ಣ ಹಾಗೂ ಹೊಸದಾದ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ನಿರ್ಮಿಸಿ ಪ್ರಸಾರಿಸಿದರೆ ಅದರಿಂದ ಮಾಧ್ಯಮಕ್ಕೂ ಗೌರವ, ಕಾರ್ಯಕ್ರಮ ನಿರ್ಮಿಸಿದವರಿಗೂ ಹೆಸರು.

ಮುಗಿಸುವ ಮುನ್ನ ಹೇಳಲೇಬೇಕಾದ ಒಂದು ಮಾತಿದೆ. ಅದು ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕಿ ಬಾತ್’ ಕಾರ್ಯಕ್ರಮ  ಕುರಿತಾದದ್ದು. ಭಾರತದಂಥ ವಿಸ್ತಾರವಾದ ಮತ್ತು ಹಲವಾರು ವೈವಿಧ್ಯತೆಗಳಿಂದ ಕೂಡಿದ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ತಮ್ಮ ಕಳಕಳಿಯ ಮಾತುಗಳನ್ನು ಹಾಗೂ ತಾವು ಯೋಚಿಸುವ ಮತ್ತು ಯೋಜಿಸುವ ಕ್ರಿಯೆಗಳ ಸ್ವರೂಪವನ್ನು ಏಕಕಾಲದಲ್ಲಿ ಪರಿಣಾಮಕಾರಿಯಾಗಿ ಎಲ್ಲರಿಗೂ ತಲುಪಿಸಬಹುದಾದ ಏಕೈಕ ಮಾಧ್ಯಮ ‘ಆಕಾಶವಾಣಿ’ಯೊಂದೇ ಎಂಬ ಸತ್ಯ ಅವರಿಗೆ ಹೊಳೆದದ್ದು ಗಮನಾರ್ಹ.

ಇಂಥ ಶಕ್ತಿಯುತ ಮಾಧ್ಯಮವನ್ನು ಅವರು ಇಡೀ ರಾಷ್ಟ್ರದೊಂದಿಗೆ ಸಂಪರ್ಕ ಸಾಧಿಸುವ ಹಾಗೂ ಸಂವಾದಿಸುವ ಕೊಂಡಿಯನ್ನಾಗಿ ಮಾಡಿಕೊಂಡಿರುವುದು ಅದರ ಸಾಮರ್ಥ್ಯ ಮತ್ತು ಸಾಧ್ಯತೆಗೆ ಸಾಕ್ಷಿ. ‘ಮನ್ ಕಿ ಬಾತ್’ ಕಾರ್ಯಕ್ರಮ ಆಕಾಶವಾಣಿಗೆ ಹೊಸ ಚಹರೆ ತಂದು ಕೊಟ್ಟಿರುವುದು ವಾಸ್ತವ. ಇದನ್ನೇ ಬಳಸಿಕೊಂಡು ಈ ಮಾಧ್ಯಮವನ್ನು ಮತ್ತೊಮ್ಮೆ ಅದರ ಏಕಚಕ್ರಾಧಿಪತ್ಯದ ಸ್ಥಾನಕ್ಕೆ ಒಯ್ಯಬಹುದಲ್ಲವೆ?     

ಬಾನುಲಿ ಸಾಗಬೇಕಾದ ದಾರಿ ಯಾವುದು?
ಆಕಾಶವಾಣಿಯ ಮಹಾನಿರ್ದೇಶನಾಲಯವು ಇತ್ತೀಚೆಗೆ ನಡೆಸುವ ಯಾವುದೇ ಸಭೆಗಳಲ್ಲಿ ಮುಖ್ಯವಾಗಿ ಮತ್ತು ಮೊಟ್ಟಮೊದಲು ಪ್ರಸ್ತಾಪವಾಗುವುದು ಹಣಕಾಸಿಗೆ ಸಂಬಂಧಪಟ್ಟ ‘ಟಾರ್ಗೆಟ್‌’ಗಳು ಮತ್ತು ‘ಅಚೀವ್‌ಮೆಂಟ್‌’ಗಳು. ಇದು ಬೇಡವೆಂದಲ್ಲ, ಆದರೆ ದೇಶದ ಪ್ರಗತಿಯ ಮತ್ತು ಸಾಂಸ್ಕೃತಿಕ ಮುನ್ನಡೆಯ ಹೊಣೆ ಹೊತ್ತ ಪ್ರಸಾರಸೇವೆಯ ಮಾಧ್ಯಮವೊಂದು ಈ ಪರಿಯಲ್ಲಿ ಹಣ ಹಣವೆಂದು ಜಪ ಮಾಡುವ ಮೊದಲು ಅದರ ಕಾರ್ಯಕ್ರಮಗಳಲ್ಲಿ ತರಬೇಕಾದ ಹೊಸತನಗಳ ಬಗೆಗೆ ಯೋಚಿಸುವುದು ಮತ್ತು ತನ್ನ ಕಾರ್ಯಕ್ರಮಗಳು ಹೇಗೆ ಜನೋಪಯೋಗಿ ಆಗಬೇಕೆಂದು ಚರ್ಚಿಸುವುದು ತೀರಾ ಅಗತ್ಯ.

ಆಕಾಶವಾಣಿ ತನ್ನ ಕೆಲವು ಅನಗತ್ಯ ಬಿಗಿ ನೀತಿಗಳನ್ನು ಪುನರ್ ಪರಿಶೀಲಿಸುವ ಅಗತ್ಯ ಕೂಡ ಇದೆ. ಉದಾಹರಣೆಗೆ, ಕಳೆದ ಹದಿನೈದು ವರ್ಷಗಳಿಂದ, ಹೊಸ ‘ಕಾಂಟ್ರ್ಯಾಕ್ಟೆಡ್ ಪೊಯೆಟ್‌’ಗಳನ್ನು ಮಾಡಿಕೊಳ್ಳಬಾರದೆಂಬ ನಿಯಮ ಮಾಡಲಾಗಿದೆ. ಇದರ ಹಿಂದೆ ಯಾವ ತಾತ್ವಿಕತೆ ಇದೆಯೆಂಬುದು ಅರ್ಥವಾಗುವುದಿಲ್ಲ. ಹೊಸ ಹೊಸ ಕವಿಗಳು ಬರುತ್ತಲೇ ಇರುವುದರಿಂದ ಹೊಸಬರಿಗೂ ಅವಕಾಶ ಕೊಡುವ ಅಗತ್ಯ ಇದ್ದೇ ಇರುತ್ತದೆ.

ಇಂಥ ನಿಯಮ ಇರುವ ಕಾರಣಕ್ಕಾಗಿಯೇ ಬರೀ ಹಳೆಯ ಕವಿಗಳ ಹಳೆಯ ಹಾಡುಗಳು ಮಾತ್ರ ಪ್ರಸಾರವಾಗುತ್ತಿವೆ. ಹೊಸತನ ಇಲ್ಲವೇ ಇಲ್ಲ. ಇದರ ಬಗ್ಗೆ ಪತ್ರ ಬರೆಯಲಾಗಿದ್ದರೂ ನಿಯಮ ಇನ್ನೂ ಬದಲಾಗಿಲ್ಲ. ‘ಸರ್ವಭಾಷಾ ಕವಿಸಮ್ಮೇಳನ’ಕ್ಕೆ ವಿವಿಧ ರಾಜ್ಯಭಾಷೆಗಳ ಕವಿಗಳನ್ನಾರಿಸಲು ಈಗ ಇರುವ ನಿಯಮ ಬದಲಾಗಿ, ಆಯಾ ರಾಜ್ಯದ ಮಟ್ಟದಲ್ಲೇ ಆಯಾ ಭಾಷೆಯ ಕವಿಯನ್ನಾರಿಸಿ ಕಳಿಸುವ ವ್ಯವಸ್ಥೆ ಬರಬೇಕಾದ ಅಗತ್ಯವಿದೆ.

ಎಲ್ಲದಕ್ಕೂ ಬಹಳ ಮುಖ್ಯವಾದುದೆಂದರೆ, ಎಲ್ಲ ಕೇಂದ್ರಗಳಿಗೂ ನಿರ್ದೇಶಕರ ನೇಮಕವಾಗುವುದು. ಹೀಗೆ ಬರುವ ಆಯಾ ಕೇಂದ್ರಗಳ ನಿರ್ದೇಶಕರಿಗೆ, ಕೆಲವು ನಿಯಮಾವಳಿಗೊಳಪಟ್ಟು ಹೆಚ್ಚಿನ ಅಧಿಕಾರ ಕೊಟ್ಟರೆ ಅವರು ಅತ್ಯಂತ ಕಟ್ಟುನಿಟ್ಟಾದ ಆಡಳಿತ ನಡೆಸಲು ಮತ್ತು ಜನಸ್ನೇಹಿ ಹಾಗೂ ಜನೋಪಯೋಗಿ ಕಾರ್ಯಕ್ರಮಗಳ ನಿರ್ಮಾಣ ಮಾಡುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಲು ಸಾಧ್ಯವಾಗುತ್ತದೆ.

ಇದರ ಜೊತೆಗೆ ವರ್ಗಾವಣೆಯ ನಿಯಮಗಳು ಎಲ್ಲ ಉದ್ಯೋಗಿಗಳಿಗೂ ಸಮಾನ ರೀತಿಯಲ್ಲಿ ಅನ್ವಯವಾಗುವಂತೆ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಕೆಲಸ ಮಾಡದವರನ್ನು ಕೆಲಸ ಮಾಡುವಂತೆ ಪ್ರೇರೇಪಿಸುವ ಸೂಕ್ತ ಮತ್ತು ಉತ್ತರದಾಯಿತ್ವದ ತರಬೇತಿ ಕೊಡುವುದು, ಹಾಗೆ ಮಾಡಿದಾಗಲೂ ಸುಧಾರಿಸದಿದ್ದರೆ ನಿಯಮಾವಳಿಗಳ ಹಿನ್ನೆಲೆಯಲ್ಲಿಯೇ ಅಂಥವರ ಮೇಲೆ ಯೋಗ್ಯ ಕ್ರಮ ಕೈಗೊಳ್ಳುವ ಕೆಲಸವೂ ಅಗತ್ಯವಾಗಿ ನಡೆಯಬೇಕಾಗಿದೆ. 

ಆಕಾಶವಾಣಿಯಂಥ ಸಶಕ್ತ ಮತ್ತು ಜವಾಬ್ದಾರಿಯುತ ಪ್ರಸಾರ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ಮನಸ್ಸುಗಳ ತಥಾಕಥಿತ ಮೈಂಡ್‌ಸೆಟ್ ಕೂಡ ಬದಲಾಗಬೇಕಾದ ಜರೂರಿದೆ.

  (ಲೇಖಕರು ಬೆಂಗಳೂರು ಆಕಾಶವಾಣಿ ಕೇಂದ್ರದ ನಿವೃತ್ತ ನಿರ್ದೇಶಕ ಹಾಗೂ ಆಕಾಶವಾಣಿ ದಕ್ಷಿಣ ವಲಯ ಎರಡರ ಉಸ್ತುವಾರಿ ನಿರ್ದೇಶಕ (ನಿವೃತ್ತ).)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT