ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ದುಮಣಿಗಳು!

Last Updated 30 ಜುಲೈ 2016, 19:30 IST
ಅಕ್ಷರ ಗಾತ್ರ

1988ರ ಸೋಲ್ ಒಲಿಂಪಿಕ್ಸ್‌ನಲ್ಲಿ ಬೆನ್ ಜಾನ್ಸನ್ ವೇಗವಾಗಿ ಓಡುತ್ತಿದ್ದರೆ ಅವರ ಕಾಲುಗಳ ಸ್ನಾಯುಗಳ ಮೇಲೆಯೇ ಎಲ್ಲರ ಕಣ್ಣು. ಅವರಿಗೆ ಪೈಪೋಟಿ ಒಡ್ಡಲು ಕಾರ್ಲ್ ಲೂಯಿಸ್ ಇದ್ದರು. ಜಾನ್ಸನ್ ಓಡಿ, ಅವರ ಎದೆಗೆ ದಾರ ತಾಗಿದಾಗ ಹರ್ಷೋದ್ಗಾರ. ದಾಖಲೆ ಸಮಯದಲ್ಲಿ ಓಡಿದ ಅವರ ಕೊರಳಿಗೆ ಪದಕದ ಹಾರ.

ಕೆಲವು ದಿನಗಳಲ್ಲೇ ಗೊತ್ತಾದದ್ದು, ಅವರು ಸ್ಟೆರಾಯಿಡ್ ತೆಗೆದುಕೊಂಡಿದ್ದರು ಎನ್ನುವುದು. ಕೊರಳನ್ನು ಅಲಂಕರಿಸಿದ್ದ ಬಂಗಾರದ ಪದಕವನ್ನು ಮರಳಿಸಿದ ಅವರ ಅಥ್ಲೆಟಿಕ್ ಬದುಕು ಮುಂದೆಂದೂ ಹಸನಾಗಲೇ ಇಲ್ಲ.

ಅದೇ ವರ್ಷ ಅಮೆರಿಕದಲ್ಲಿ ಲೂಯಿಸ್ ಕೂಡ ಉದ್ದೀಪನಾ ಔಷಧ ತೆಗೆದುಕೊಂಡಿರುವುದು ಸ್ಪಷ್ಟವಾಗಿತ್ತು. ಸೋಲ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಲಿನ್‌ಫೋರ್ಡ್ ಕ್ರಿಸ್ಟಿ ಕೂಡ ನಿಷೇಧಿತ ಮದ್ದು ಸೇವನೆಯಿಂದ ಸಿಕ್ಕಿಬಿದ್ದವರೇ. ಅವರು ಹನ್ನೊಂದು ವರ್ಷಗಳ ನಂತರ ಅಪರಾಧಿ ಸ್ಥಾನದಲ್ಲಿ ನಿಂತರಷ್ಟೆ.

ಅದುವರೆಗೆ ಪೂರ್ವ ಜರ್ಮನ್ನರನ್ನು ‘ನಿಷೇಧಿತ ಔಷಧಗಳ ದಾಸರು’ ಎಂದು ಸಾಮಾನ್ಯೀಕರಿಸಿ ಆರೋಪಿಸುತ್ತಿದ್ದ ಒಲಿಂಪಿಕ್ಸ್ ಪಂಡಿತರು, ಎಚ್ಚರಿಕೆಯಿಂದ ಮಾತನಾಡಲು ಅಭ್ಯಾಸ ಮಾಡಿಕೊಳ್ಳಬೇಕಾಯಿತು.

1990ರ ದಶಕದಲ್ಲಿ ಚೀನಾದ ಈಜುಗಾರರು ಉದ್ದೀಪನಾ ಔಷಧಗಳ ಕಾರಣಕ್ಕೇ ಸುದ್ದಿಯಾದರು. ಬ್ರೆಸ್ಟ್‌ಸ್ಟ್ರೋಕರ್ ಯುವಾನ್ ಯುವಾನ್ ಕಿಟ್‌ನಲ್ಲಿ ಮನುಷ್ಯನ ಅಂಗಾಂಗ ಬೆಳವಣಿಗೆಗೆ ಕಾರಣವಾಗಬಲ್ಲ ಹಾರ್ಮೋನ್ ಸಿಕ್ಕಾಗ, ಮಾಧ್ಯಮಗಳು ದೊಡ್ಡ ಸುದ್ದಿ ಮಾಡಿದವು. ಆ ಕಾಲಘಟ್ಟದಲ್ಲಿ ಯುವಾನ್ ತರಹವೇ 40 ಅಥ್ಲೀಟ್‌ಗಳು ಸಿಕ್ಕಿ ಬಿದ್ದಿದ್ದರು.

ಸಿಡ್ನಿ ಓಟದ ಅಂಗಳದಲ್ಲಿ ಎಲ್ಲರ ಡಾರ್ಲಿಂಗ್ ಎನಿಸಿಕೊಂಡಿದ್ದ ಕೃಷ್ಣ ಸುಂದರಿ ಮರಿಯಾನ್ ಜೋನ್ಸ್ ಸ್ಯಾನ್‌ಫ್ರಾನ್ಸಿಸ್ಕೊದ ಬಾಲ್ಕೊ ಡ್ರಗ್ ಹಗರಣದಲ್ಲಿ ಸಿಲುಕಿದ ಮೇಲೆ ತಪ್ಪೊಪ್ಪಿಕೊಂಡು ಕಣ್ಣೀರು ಹಾಕಿದ್ದು ಈಗಲೂ ಕಣ್ಣಿಗೆ ಕಟ್ಟಿದಹಾಗಿದೆ. ‘ನಾನು ನಂಬಿಕೆ ದ್ರೋಹ ಮಾಡಿದ್ದೇನೆ. ಎಲ್ಲರಿಗೂ ನನ್ನ ಮೇಲೆ ಕೋಪಿಸಿಕೊಳ್ಳಲು ಕಾರಣವಿದೆ’ ಎಂದು ಅವರು ಗೊಳೋ ಎಂದು ಅತ್ತಾಗ ಅವರ ಅಸಂಖ್ಯ ಅಭಿಮಾನಿಗಳೂ ಕಣ್ಣೀರು ಹಾಕಿದ್ದರು. ಇನ್ನು ಕೆಲವರು ‘ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು’ ಎಂದು ತರಾಟೆಗೆ ತೆಗೆದುಕೊಂಡರು.

ವೇಗದ ಓಟಗಾರ ಜಸ್ಟಿನ್ ಗಾಟ್ಲಿನ್ ಕೂಡ ನಾಲ್ಕು ವರ್ಷ ನಿಷೇಧದ ಶಿಕ್ಷೆಗೆ ಒಳಗಾದವರೇ. ಆಮೇಲೆ ಅವರು ಕಂಚು ಗೆಲ್ಲಲು ಹೋರಾಡಬೇಕಾಗಿ ಬಂದದ್ದು ಇನ್ನೊಂದು ಕಥಾನಕ.

ಅಮೆರಿಕನ್ ಸೈಕ್ಲಿಸ್ಟ್ ಟೇಲರ್ ಹ್ಯಾಮಿಲ್ಟನ್ ಕೂಡ ಜನಪ್ರಿಯ ಅಥ್ಲೀಟ್. ಅವರು ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ರಕ್ತ ವರ್ಗಾವಣೆ ಮಾಡಿಸಿಕೊಂಡಿದ್ದನ್ನು ಒಪ್ಪಿಕೊಂಡು ಎಂಟು ವರ್ಷಗಳ ನಿಷೇಧಕ್ಕೆ ಗುರಿಯಾದರು.

ಡೋಪಿಂಗ್ ವ್ಯುತ್ಪತ್ತಿ
‘ಮಾದಕ ವ್ಯಸನ’ ಎಂಬ ಅರ್ಥ ಕೊಡುವ ‘ಡೋಪಿಂಗ್’ ಪದ ಆಧುನಿಕವಾದದ್ದು. ವೀರಯೋಧರು ತಮ್ಮ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಕೆಲವು ಪದಾರ್ಥಗಳನ್ನು ಸೇವಿಸುವುದು, ತಿನ್ನುವುದು ಸಾಮಾನ್ಯವಾಗಿತ್ತು ಎಂದು ನಾರ್ವೆ ಪುರಾಣಗಳಲ್ಲಿ ಉಲ್ಲೇಖವಾಗಿದೆ.

‘ಬ್ಯುಫೋಟೆನಿನ್’ ಎಂಬ ದ್ರವ್ಯವನ್ನು ಅವರು ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಬಳಸುತ್ತಿದ್ದರು. ಕಾಡುಕಪ್ಪೆಯ ಚರ್ಮದಿಂದ ಅದನ್ನು ತಯಾರಿಸುತ್ತಿದ್ದರು. ಅಣಬೆಗಳನ್ನು ತಿಂದು ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು ಎಂಬ ನಂಬಿಕೆ ಕೂಡ ಆಗ ಇತ್ತು.

ಆಫ್ರಿಕಾದ ಕಾಫಿರ್ ಸಮುದಾಯದವರು ಧಾರ್ಮಿಕ ಆಚರಣೆಗಳಲ್ಲಿ ತುಸು ನಶೆ ಏರುವ ಮದ್ಯ ಸೇವಿಸುತ್ತಿದ್ದರು. ಅದನ್ನು ಅವರು ‘ಡೋಪ್’ ಎಂದು ಕರೆಯುತ್ತಿದ್ದರು. ದ್ರಾಕ್ಷಿಯ ಸಿಪ್ಪೆ ಹಾಗೂ ಕೋಲಾ ಪಾನೀಯದಿಂದ ಆ ಮದ್ಯ ತಯಾರಿಸುತ್ತಿದ್ದುದು. ಪಶ್ಚಿಮ ಆಫ್ರಿಕಾದಲ್ಲಿ ನಡೆದಾಡುವ, ಓಟದ ಸ್ಪರ್ಧೆಗಳ ಸಂದರ್ಭದಲ್ಲಿ ‘ಕೋಲಾ ಅಕ್ಯುಮಿನೇಟಾ’ ಹಾಗೂ ‘ಕೋಲಾ ನಿಟಿಡಾ’ ಎಂಬ ಪಾನೀಯಗಳನ್ನು ಕುಡಿಯುವ ಅಭ್ಯಾಸವನ್ನು ಅನೇಕ ಅಥ್ಲೀಟ್‌ಗಳು ಇಟ್ಟುಕೊಂಡಿದ್ದರು.

ಡಚ್ ವಸಾಹತುಶಾಹಿಗಳು ಉದ್ದೀಪನಗೊಳಿಸುವ, ನಶೆ ಏರಿಸುವ ಯಾವುದೇ ದ್ರವ–ದ್ರವ್ಯವನ್ನು ‘ಡೋಪ್’ ಎನ್ನಲಾರಂಭಿಸಿದರು. ಆದ್ದರಿಂದ ಈ ಪದ ಜಗತ್ತಿನಾದ್ಯಂತ ಜನರ ಬಾಯಿಂದ ಬಾಯಿಗೆ ಹರಿದಾಡಿತು. ಇಂಗ್ಲಿಷ್ ಪದಕೋಶಕ್ಕೆ ಈ ಪದ ಸೇರಿದ್ದು 1889ರಲ್ಲಿ. ಕ್ರೀಡಾಕ್ಷೇತ್ರದಲ್ಲಿ ಉದ್ದೀಪನಗೊಳಿಸುವ ಔಷಧ, ದ್ರವ್ಯ, ದ್ರವವನ್ನು ಸೇವಿಸುವುದನ್ನು ‘ಡೋಪಿಂಗ್’ ಎಂದು ಕರೆಯುವ ಪರಿಪಾಠ ಶುರುವಾಯಿತು.

ಪ್ರಾಚೀನ ಗ್ರೀಕ್‌ನಲ್ಲಿ ಅಥ್ಲೀಟ್‌ಗಳು ದೈಹಿಕ ಕ್ಷಮತೆ ಹೆಚ್ಚಿಸಿಕೊಳ್ಳಲು ಪೌಷ್ಟಿಕಾಂಶವುಳ್ಳ ಅನೇಕ ಪದಾರ್ಥಗಳನ್ನು ಸೇವಿಸುವಂತೆ ನಾಟಿವೈದ್ಯರು ಶಿಫಾರಸು ಮಾಡುತ್ತಿದ್ದರು.

ಈಗಿನ ಕ್ರೀಡಾ ಔಷಧ ತಜ್ಞರಂತೆ ಅವರು ಆಗ ಕೆಲಸ ಮಾಡುತ್ತಿದ್ದರು. ಆಟ ಅಥವಾ ಸ್ಪರ್ಧೆ ಶುರುವಾಗುವ ನಿಗದಿತ ಸಮಯಕ್ಕೆ ಮೊದಲು ಹಲವು ಬಗೆಯ ಮಾಂಸಾಹಾರ, ಪ್ರಾಣಿಗಳ ವೃಷಣದ ಭಾಗದ ಮಾಂಸಗಳನ್ನು ತಿನ್ನುವುದು ಉತ್ತಮ ಎಂಬ ಸಲಹೆಯನ್ನು ಆಗ ವೈದ್ಯರು ನೀಡಿದ್ದರು. ಕ್ರಿ.ಪೂ. 3ನೇ ಶತಮಾನದಲ್ಲಿ ಒಲಿಂಪಿಕ್ಸ್ ಸಂದರ್ಭದಲ್ಲಿ ಅಥ್ಲೀಟ್‌ಗಳು ಅಣಬೆಯನ್ನು ಶಕ್ತಿವರ್ಧಕ ಎಂದು ಸೇವಿಸುತ್ತಿದ್ದರು.

ಗ್ರೀಕ್ ಓಟಗಾರರಿಗೆ ಗಿಡಮೂಲಿಕೆಗಳಿಂದ ತಯಾರಿಸಿದ ಶಕ್ತಿವರ್ಧಕ ಪಾನೀಯಗಳನ್ನು ಸೇವಿಸುವ ಅಭ್ಯಾಸವೂ ಇತ್ತು. ನೋವು ಶಮನಕ ಅಂಶಗಳುಳ್ಳ ಬ್ರೆಡ್ ತಯಾರಿಸುವ ಬಾಣಸಿಗರೂ ಆಗ ಇದ್ದರು. ಆ ಕಾಲದ ಪೂಜಾರಿಗಳು ಯಾವ ಮದ್ದನ್ನು ಸೇವಿಸಿದರೆ ಹೆಚ್ಚು ಶಕ್ತಿ ಬರುತ್ತದೆ ಎನ್ನುವುದನ್ನು ಗುಟ್ಟಾಗಿ ಇಟ್ಟಿದ್ದರು. ಆದ್ದರಿಂದ ಆ ಕುರಿತ ಲಿಖಿತ ಮಾಹಿತಿ ಲಭ್ಯವಿಲ್ಲ.

ರೋಮನ್ ಚರಿತ್ರೆಯಲ್ಲಿ ಉದ್ದೀಪನ ಮದ್ದಿನ ಬಳಕೆ ದಾಖಲಾಗಿದೆ. ರಥದ ಸ್ಪರ್ಧೆಯಲ್ಲಿ ಓಡುವ ಕುದುರೆಗಳಿಗೆ ಹಲವು ಬಗೆಯ ಮಿಶ್ರಣದ ದ್ರವ ನೀಡುತ್ತಿದ್ದ ಕುರಿತು ಅದರಲ್ಲಿ ಬರೆಯಲಾಗಿದೆ. ರೋಮನ್ ಕುಸ್ತಿಮಲ್ಲರು ಕೂಡ ಶಕ್ತಿವರ್ಧಕಗಳನ್ನು ಸೇವಿಸುತ್ತಿದ್ದರು.

19ನೇ ಶತಮಾನದಿಂದ...
ಕ್ರೀಡೆಯಲ್ಲಿ ಮೊದಲಿಗೆ ಅಧಿಕೃತವಾಗಿ ಉದ್ದೀಪನಾ ಮದ್ದು ಸೇವನೆಯ ಆರೋಪ ಪ್ರಕರಣ ದಾಖಲಾದುದು 1865ರಲ್ಲಿ. ಆಮ್‌ಸ್ಟರ್‌ಡ್ಯಾಮ್ ಕಣಿವೆಯ ಈಜು ಸ್ಪರ್ಧೆಯಲ್ಲಿ ಒಬ್ಬರು ಅದುವರೆಗೆ ಗೊತ್ತೇ ಇರದ ಉದ್ದೀಪನ ಮದ್ದನ್ನು ಸೇವಿಸಿದ್ದರೆಂದು ದಾಖಲಾಯಿತು. ಫ್ರಾನ್ಸ್‌ನಲ್ಲಿ ಆರು ದಿನಗಳ ವಾರ್ಷಿಕ ಸೈಕಲ್ ರೇಸ್ ನಡೆಯುತ್ತಿತ್ತು. 1867ರಲ್ಲಿ ಅದರಲ್ಲಿ ಸ್ಪರ್ಧಿಸಿದ ಅಥ್ಲೀಟ್‌ಗಳಲ್ಲಿ ಕೆಲವರು ಕೆಫಿನ್ ಮೂಲದ ಮಿಶ್ರ ಪಾನೀಯಗಳನ್ನು ಶಕ್ತಿವರ್ಧಕಗಳಾಗಿ ಸೇವಿಸಿದ್ದರು.

ಬೆಲ್ಜಿಯನ್ನರು ಸಕ್ಕರೆ ದ್ರಾವಣ ಬೆರೆಸಿದ ಪಾನೀಯಗಳನ್ನು ಕುಡಿಯುತ್ತಿದ್ದರು. ಇನ್ನು ಕೆಲವರು ಆಲ್ಕೋಹಾಲ್ ಮಿಶ್ರಣದ ದ್ರವ ಅಥವಾ ನೈಟ್ರೊಗ್ಲಿಸರಿನ್ ಉಳ್ಳ ಪಾನೀಯಗಳನ್ನು ಸೇವಿಸುತ್ತಿದ್ದರು.

‘ಡೋಪಿಂಗ್’ನಿಂದ ವ್ಯಕ್ತಿಯೊಬ್ಬ ಮೃತಪಟ್ಟ ಮೊದಲ ಘಟನೆ ಎಂದು ದಾಖಲಾದದ್ದು 1896ರಲ್ಲಿ. ಇಂಗ್ಲಿಷ್ ಸೈಕ್ಲಿಸ್ಟ್ ಎ. ಲಿಂಟನ್, ಪ್ಯಾರಿಸ್ ಬೋರ್‌ಡ್ಯುಕ್ಸ್ ರೇಸ್‌ನಲ್ಲಿ ಭಾಗವಹಿಸುವಾಗ ‘ಎಫಡ್ರೀನ್’ (ದಮ್ಮು ರೋಗದ ಔಷಧಿಗಳಲ್ಲಿ ಇದನ್ನು ಬಳಸುತ್ತಿದ್ದರು) ಸೇವಿಸಿದ್ದರಿಂದ ಮೃತಪಟ್ಟರು. ಅದಾಗಿ ಎಂಟು ವರ್ಷಗಳ ನಂತರ ಸೇಂಟ್ ಲೂಯಿಸ್ ಮ್ಯಾರಥಾನ್‌ನಲ್ಲಿ ಟಾಮ್ ಹಿಕ್ಸ್ ಗೆದ್ದ ತಕ್ಷಣ ಕುಸಿದರು. ಅವರು ‘ಸ್ಕ್ರಿಕ್‌ನೈನ್’ ಹಾಗೂ ‘ಕಾಗ್ನ್ಯಾಕ್’ ಸೇವಿಸಿದ್ದುದನ್ನು ವೈದ್ಯರು ಪತ್ತೆಹಚ್ಚಿದರು.

ಸ್ಪರ್ಧೆ ಹೆಚ್ಚಿತು; ಮದ್ದೂ...
1910ರಲ್ಲಿ ಕುಸ್ತಿ ಪಂದ್ಯವೊಂದರಲ್ಲಿ ಜೇಮ್ಸ್ ಜೆಫ್ರೀಸ್ ಅವರನ್ನು ಜಾಕ್ ಜಾನ್ಸನ್ ಸೋಲಿಸಿದರು. ತಾನು ಕುಡಿದ ಚಹಾಗೆ ಏನೋ ಮಿಶ್ರಣ ಸೇರಿಸಿ ಕೊಟ್ಟಿದ್ದರಿಂದಲೇ ಸೋಲುಂಡಿದ್ದಾಗಿ ಜೇಮ್ಸ್ ಆಗ ಆರೋಪಿಸಿದರು. 20ನೇ ಶತಮಾನದ ಆದಿಯಲ್ಲಿ ಕುಸ್ತಿಯಲ್ಲಂತೂ ಇಂಥ ಆರೋಪಗಳು ಪದೇ ಪದೇ ಕೇಳಿಬರತೊಡಗಿದವು.

‘ಆಂಫಿಟಮೈನ್ಸ್’ ಶಕ್ತಿವರ್ಧಕಗಳ ಬಳಕೆ ಹೆಚ್ಚಾದದ್ದು 1920ರಲ್ಲಿ. ಅದು ಸಾಮಾನ್ಯವಾಗಿಯೂ ವ್ಯಾಪಕವಾಗಿ ಉಪಯೋಗಕ್ಕೆ ಬರುತ್ತಿದ್ದ ಔಷಧ. 1952ರಲ್ಲಿ ‘ಓಸ್ಲೊ ಐಸ್ ಸ್ಕೇಟಿಂಗ್ ಗೇಮ್ಸ್’ ನಡೆದ ಸಂದರ್ಭದಲ್ಲಿ ಅಥ್ಲೀಟ್‌ಗಳ ಕಿಟ್‌ಗಳಲ್ಲಿ ಸಣ್ಣ ಸಣ್ಣ ಔಷಧಿಯಂಥ ಶೀಶೆಗಳು ಹಾಗೂ ಸಿರೆಂಜ್‌ಗಳು ಸಿಕ್ಕಾಗ ಉದ್ದೀಪನ ಮದ್ದು ಸೇವನೆಯ ವ್ಯಾಪಕತೆ ಜಾಹೀರಾಯಿತು.

1960ರ ದಶಕದಲ್ಲಿ ಉದ್ದೀಪನ ಮದ್ದುಗಳನ್ನು ಬಳಸಿ ಏನನ್ನು ಬೇಕಾದರೂ ಸಾಧಿಸಬಹುದು ಎಂಬ ಉನ್ಮತ್ತತೆ ಅನೇಕರನ್ನು ಆವರಿಸಿಕೊಂಡಿತು. ರೋಮ್ ಒಲಿಂಪಿಕ್ಸ್‌ನಲ್ಲಿ ಡ್ಯಾನಿಷ್ ಸೈಕ್ಲಿಸ್ಟ್ ಕೆ. ಜೆನ್ಸನ್ ಆಂಫಿಟಮೈನ್‌ನ ಅತಿಯಾದ ಸೇವನೆಯಿಂದಾಗಿ ಸತ್ತರು. 1967ರಲ್ಲಿ ಬ್ರಿಟಿಷ್ ಸೈಕ್ಲಿಸ್ಟ್ ಟಾಮ್ ಸಿಂಪ್ಸನ್  ಹಾಗೂ ಓಟಗಾರ ಡಿಕ್ ಹಾರ್ವರ್ಡ್ ಕ್ರಮವಾಗಿ ಆಂಫಿಟಮೈನ್ಸ್ ಹಾಗೂ ಹೆರಾಯಿನ್ ಸೇವನೆಯಿಂದ ಮೃತಪಟ್ಟರು.

ಮಾಂಟ್ರಿಯಲ್‌ನಲ್ಲಿ 1976ರಲ್ಲಿ ಒಲಿಂಪಿಕ್ಸ್ ನಡೆದಾಗ ಪೋಲೆಂಡ್‌ನ ಝಡ್. ಕಜ್‌ಮೆರೆಕ್ ಹಾಗೂ ಬಲ್ಗೇರಿಯನ್ ಅಥ್ಲೀಟ್ ವಿ. ಕ್ರಿಸ್ತೊವ್ (ಇಬ್ಬರೂ ವೇಟ್‌ಲಿಫ್ಟರ್‌ಗಳು) ‘ಡೋಪಿಂಗ್’ ಪರೀಕ್ಷೆಯಲ್ಲಿ ಸಿಲುಕಿ ಹಾಕಿಕೊಂಡರು. ಇಬ್ಬರೂ ಚಿನ್ನದ ಪದಕಗಳನ್ನು ಮರಳಿಸುವಂತಾಯಿತು. ‘ಸ್ಟ್ಯಾನೊಜೊಲೊಲ್’ ಸ್ಟಿರಾಯಿಡ್ ಸೇವನೆಯಿಂದ 1988ರಲ್ಲಿ ಬೆನ್ ಜಾನ್ಸನ್ ಕುಖ್ಯಾತ ಆದಮೇಲೆ, ಆ ವರ್ಷ ಬಹುತೇಕ ಓಟದ ಸ್ಪರ್ಧೆಗಳ ಅಂತಿಮ ಘಟ್ಟದಲ್ಲಿ ಇದ್ದವರು ಉದ್ದೀಪನ ಮದ್ದು ಸೇವಿಸಿದ್ದರೆನ್ನುವುದು ದೃಢಪಟ್ಟಿತು.
 
ರಂಗೋಲಿ ಕೆಳಗೆ ತೂರಿದವರು...

ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ಹೆಮ್ಮೆಯ–ಪ್ರತಿಷ್ಠೆಯ ಸಂಗತಿ. ಇದರಿಂದಾಗಿಯೇ ಪದಕಗಳನ್ನು ಗೆಲ್ಲುವ ದಾರಿಗಳಲ್ಲಿ ಉದ್ದೀಪನ ಮದ್ದು ಸೇವನೆಯ ಮಾರ್ಗ ಆಯ್ದುಕೊಂಡವರೂ ಇದ್ದಾರೆ. ಅಥ್ಲೀಟ್‌ಗಳ ಆರೋಗ್ಯ ಕಾಳಜಿ ಹಾಗೂ ‘ಅಂತರರಾಷ್ಟ್ರೀಯ ಒಲಿಂಪಿಕ್ ಸಂಸ್ಥೆ’ (ಐಒಸಿ) ರೂಪಿಸಿದ ನಿಯಮಾವಳಿಗಳ ಹೊರತಾಗಿಯೂ ರಂಗೋಲಿ ಕೆಳಗೆ ತೂರುವ ಅಥ್ಲೀಟ್‌ಗಳ ಸಂಖ್ಯೆ ಏರುತ್ತಾಹೋಯಿತು.

ಶೀತ, ಕೆಮ್ಮು ನಿವಾರಿಸುವ ಔಷಧಗಳಲ್ಲಿ ಇರಬಹುದಾದ ಉದ್ದೀಪನ ಗುಣದ ಪದಾರ್ಥಗಳನ್ನು ‘ಐಒಸಿ’ ನಿಷೇಧಿಸಿತು. ಅಷ್ಟೇ ಏಕೆ, ಕೆಫಿನ್ ಸೇವನೆ ಕೂಡ ನಿಷಿದ್ಧ. ನಾರ್ಕೋಟಿಕ್‌ಗಳು, ಅನಬಾಲಿಕ್ ಸ್ಟೆರಾಯಿಡ್‌ಗಳು, ಡ್ಯುರೆಟಿಕ್ಸ್, ಕೆಲವು ಹಾರ್ಮೋನ್‌ಗಳ ಬೆಳವಣಿಗೆಗೆ ಸಹಕಾರಿಯಾಗುವ ಔಷಧಗಳ ಸೇವನೆ ಕೂಡದು ಎಂದಿತು.

ಮೆಕ್ಸಿಕೊದಲ್ಲಿ 1968ರಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಮೊದಲಿಗೆ ಮದ್ದು ಸೇವನೆ ಪರೀಕ್ಷೆ ನಡೆಸುವ ಪದ್ಧತಿ ಜಾರಿಗೆ ಬಂದಿತು. 1972ರ ಒಲಿಂಪಿಕ್ಸ್‌ನಲ್ಲಿ ಅದು ತೀವ್ರಗೊಂಡಿತು.

ಬರಬರುತ್ತಾ ಹೊಸ ಔಷಧಗಳ, ಹಾರ್ಮೋನ್‌ಗಳ ಬಳಕೆ ಹೆಚ್ಚಾದದ್ದೇ ಹೊಸ ರೀತಿಯ ಪರೀಕ್ಷೆಗಳನ್ನೂ ಸೇರಿಸಲಾಯಿತು. ಇಷ್ಟೆಲ್ಲ ಎಚ್ಚರಿಕೆಯ ಕ್ರಮಗಳಿದ್ದರೂ ದೈಹಿಕ ಸಾಮರ್ಥ್ಯ ವರ್ಧನೆಗೆ ದಾರಿಗಳನ್ನು ಹುಡುಕುವ ಮನಸ್ಸುಗಳು ತಮ್ಮ ಚಾಳಿ ಬಿಡಲಿಲ್ಲ. ಪೂರ್ವ ಜರ್ಮನಿಯ ಕ್ರೀಡಾ ಫೆಡರೇಷನ್ ಮದ್ದು ಬಳಕೆಯನ್ನು ಎಷ್ಟು ವ್ಯವಸ್ಥಿತವಾಗಿ ಮಾಡಿತು ಎನ್ನುವುದು ಇದಕ್ಕೆ ಉತ್ತಮ ಉದಾಹರಣೆ.

1974ರಿಂದ 1989ರ ಅವಧಿಯಲ್ಲಿ ಅದು ತನ್ನ ಅಥ್ಲೀಟ್‌ಗಳಿಗೆ ಕೆಲವು ಸ್ಟೆರಾಯಿಡ್‌ಗಳನ್ನು ತೆಗೆದುಕೊಳ್ಳುವ ಸಲಹೆ ನೀಡಿತು. ಆ ಅವಧಿಯಲ್ಲಿ ಈಜಿನ ವಿವಿಧ ಸ್ಪರ್ಧೆಗಳಲ್ಲಿ ಪೂರ್ವ ಜರ್ಮನ್ ಲಲನೆಯರು ಮೇಲುಗೈ ಸಾಧಿಸಿದರು. 1976 ಹಾಗೂ 1980ರ ಒಲಿಂಪಿಕ್ಸ್‌ನಲ್ಲಿ 13 ಈಜು ಸ್ಪರ್ಧೆಗಳ ಪೈಕಿ ಹನ್ನೊಂದರಲ್ಲಿ ಅವರದ್ದೇ ಪಾರುಪತ್ಯ.

ಬೇರೆ ಸ್ಪರ್ಧಿಗಳು ಪೂರ್ವ ಜರ್ಮನಿಯ ಅಥ್ಲೀಟ್‌ಗಳ ವಾಮಮಾರ್ಗದ ಕುರಿತು ಶಂಕೆ ವ್ಯಕ್ತಪಡಿಸಿದರಾದರೂ, ಜರ್ಮನ್ ಲಲನೆಯರು ಸಿಲುಕಿ ಹಾಕಿಕೊಳ್ಳಲಿಲ್ಲ. ಜರ್ಮನ್ ಮರು ಏಕೀಕರಣ ಆದ ಮೇಲೆ ಪೂರ್ವ ಜರ್ಮನ್‌ನ ಕ್ರೀಡಾ ಕಾರ್ಯಕ್ರಮಗಳ ದಾಖಲೆಗಳನ್ನು ಪರಿಶೀಲಿಸಲಾಯಿತು.

ಹಿಂದೆ ಔಷಧ ಸೇವನೆಯನ್ನು ಗೊತ್ತುಪಡಿಸಿದ್ದ ಅಧಿಕಾರಿಗಳು–ವೈದ್ಯರನ್ನು ವಿಚಾರಣೆಗೆ ಒಳಪಡಿಸಿದಾಗ ಅವರೆಲ್ಲರೂ ವಾಮಮಾರ್ಗ ಅನುಸರಿಸಿದ್ದು ಸ್ಪಷ್ಟವಾಯಿತು.ಪೂರ್ವ ಜರ್ಮನಿಯಲ್ಲಿ ‘ಡೋಪಿಂಗ್’ ವ್ಯವಸ್ಥಿತವಾಗಿ ನಡೆದಿತ್ತು. ಆದರೆ, ಅಥ್ಲೀಟ್‌ಗಳಿಗೆ ತಮಗೆ ಸ್ಟೆರಾಯಿಡ್ ನೀಡಿದ್ದಾರೆ ಎನ್ನುವ ಸತ್ಯವೇ ಗೊತ್ತಿರಲಿಲ್ಲ. ಅದನ್ನು ಅವರು ಶಕ್ತಿವರ್ಧಕ ಪೋಷಕಾಂಶದ ಔಷಧ ಎಂದೇ ಭಾವಿಸಿದ್ದರು. 1990ರ ದಶಕದಲ್ಲಿ ಚೀನಾದ ಈಜುಗಾರ್ತಿಯರು ಸದ್ದು ಮಾಡತೊಡಗಿದರು. ಅವರ ಮೇಲೂ ಅನುಮಾನದ ನೆರಳು ಕವಿಯಿತು. ಮುಂದೆ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಅನೇಕರು ಸಿಕ್ಕಿಬಿದ್ದರು.

‘ಐಒಸಿ’ಯು 1999ರಲ್ಲಿ ‘ವರ್ಲ್ಡ್ ಆಂಟಿ-ಡೋಪಿಂಗ್ ಏಜೆನ್ಸಿ’ (ವಾಡಾ) ಹುಟ್ಟುಹಾಕಿತು. ಅಂದಿನಿಂದ ಪ್ರತಿ ಒಲಿಂಪಿಕ್ಸ್ ಸಂದರ್ಭದಲ್ಲಿಯೂ ಮದ್ದುಕೋರರನ್ನು ಮಟ್ಟಹಾಕುವ ಯತ್ನಗಳು ನಡೆಯುತ್ತಲೇ ಇವೆ. 2000ನೇ ಇಸವಿಯ ಸೆಪ್ಟೆಂಬರ್‌ನಲ್ಲಿ ಅಮೆರಿಕ ಸರ್ಕಾರವು ತಾನೇ ಹಣ ವಿನಿಯೋಗಿಸಿ ‘ಐಒಸಿ’ ನಡೆಸುವ ಉದ್ದೀಪನ ಮದ್ದು ಪರೀಕ್ಷೆಯ ಬಗೆಗೆ ವಿಸ್ತೃತ ವರದಿಯೊಂದನ್ನು ತಯಾರಿಸಿತು. ಈಗಲೂ ಕೆಲವು ಮದ್ದುಗಳ ಬಳಕೆಗೆ ‘ಐಒಸಿ’ ಅನುಮತಿ ನೀಡಿದ್ದು, ಅದು ಸ್ಪರ್ಧಾ ಮನೋಭಾವನೆಗೆ ವಿರುದ್ಧವಾದುದು ಎಂದು ಅಮೆರಿಕ ಆಗ ಆರೋಪಿಸಿದೆ.

ಸ್ವೀಡನ್‌ನ ಪೆಂಟಥ್ಲೀಟ್ ಹಾನ್ಸ್–ಗುನ್ನರ್ ಲಿಲ್ಜೆನ್‌ವಾಲ್ 1968ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಆಲ್ಕೋಹಾಲ್ ಸೇವಿಸಿದ್ದು ದೃಢಪಟ್ಟಿತ್ತು. ಅವರಿಗೆ ದಕ್ಕಿದ್ದ ಕಂಚಿನ ಪದಕವನ್ನು ಆಗ ಮರಳಿ ಪಡೆಯಲಾಗಿತ್ತು. ಅಲ್ಲಿಂದಾಚೆಗೆ ಪದಕ ಕಳೆದುಕೊಂಡವರ ಪಟ್ಟಿ ಬೆಳೆಯುತ್ತಲೇ ಇದೆ. ಒಲಿಂಪಿಕ್ಸ್ ಪ್ರಾರಂಭಕ್ಕೆ ಮೊದಲೇ ರಷ್ಯಾದ ಅಥ್ಲೀಟ್‌ಗಳು ಈಗ ಸ್ಪರ್ಧೆಯಿಂದ ಹೊರಗುಳಿಯುವ ನೋವು ಅನುಭವಿಸುತ್ತಿದ್ದಾರೆ. ಭಾರತದ ಕುಸ್ತಿಪಟು ನರಸಿಂಗ್ ಪಂಚಮ್ ಯಾದವ್ ತಮ್ಮನ್ನು ಬಲಿಪಶು ಮಾಡಿದ್ದಾರೆ ಎಂದು ನಿಷೇಧಕ್ಕೆ ಒಳಗಾದ ದುಃಖದಲ್ಲಿ ಹೋರಾಟದ ಹಾದಿ ಹಿಡಿದಿದ್ದಾರೆ.

2012ರಲ್ಲಿ ಲಂಡನ್‌ನಲ್ಲಿ ಒಲಿಂಪಿಕ್ಸ್ ನಡೆದಾಗ 10 ಸಾವಿರಕ್ಕೂ ಹೆಚ್ಚು ಅಥ್ಲೀಟ್‌ಗಳು 240 ಬಗೆಯ ಮದ್ದುಗಳನ್ನು ಸೇವಿಸಿಲ್ಲವಷ್ಟೆ ಎಂದು ಪರೀಕ್ಷೆಗೆ ಒಳಪಡಿಸಲಾಗಿತ್ತು. ‘ರಿಯೊ ಒಲಿಂಪಿಕ್ಸ್‌’ನಲ್ಲಿ ಅಥ್ಲೀಟ್‌ಗಳ ಹಾಗೂ ಪರೀಕ್ಷೆಗಳ ಸಂಖ್ಯೆ ಏರಿಕೆಯಾಗಿದೆ. ಕ್ರೀಡಾಕೂಟ ಮುಗಿದ ಮೇಲಷ್ಟೇ ಅದರ ಅಸಲಿ ಗಣಿತ ಸಿಕ್ಕೀತು. ಯಾರೆಲ್ಲಾ ಚಾಪೆ ಕೆಳಗೆ, ಯಾರೆಲ್ಲಾ ರಂಗೋಲಿಯ ಕೆಳಗೆ ತೂರುವರು ಎನ್ನುವುದನ್ನು ಕಾದು ನೋಡಬೇಕು.

‘ವಾಡಾ’ ಸಂರಚನೆ
‘ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಂಸ್ಥೆ’ಯು (ಐಒಸಿ) 1999ರ ನವೆಂಬರ್‌ 10ರಂದು ‘ವಿಶ್ವ ಉದ್ದೀಪನ ಮದ್ದು ನಿಷೇಧ ಘಟಕ’ (ವಾಡಾ)ವನ್ನು ಸ್ಥಾಪಿಸಿತು. ಆರಂಭದಲ್ಲಿ ‘ವಾಡಾ’ದ ಕೇಂದ್ರ ಕಚೇರಿ ಇದ್ದುದು ಸ್ವಿಟ್ಜರ್‌ಲೆಂಡ್‌ನ ಲಾಸೇನ್‌ನಲ್ಲಿ. 2002ರಿಂದ ಅದರ ಕೇಂದ್ರ ಕಚೇರಿ ಕೆನಡಾದ ಕ್ಯುಬೆಕ್‌ನ ಮಾಂಟ್ರಿಯೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಲಾಸೇನ್‌ನಲ್ಲಿನ ಕಚೇರಿಯು ಯುರೋಪ್‌ ರಾಷ್ಟ್ರಗಳ ಪಾಲಿನ ಪ್ರಾದೇಶಿಕ ಕೇಂದ್ರವಾಗಿ ಕೆಲಸ ಮಾಡುತ್ತಿದೆ. ಆಫ್ರಿಕಾ, ಏಷ್ಯಾ/ಒಸಿಯೇನಿಯಾ ಹಾಗೂ ಲ್ಯಾಟಿನ್‌ ಅಮೆರಿಕದಲ್ಲಿಯೂ ಪ್ರಾದೇಶಿಕ ಕಚೇರಿಗಳಿವೆ.

ವಿಶ್ವದಾದ್ಯಂತ 600ಕ್ಕೂ ಹೆಚ್ಚು ಕ್ರೀಡಾ ಸಂಸ್ಥೆಗಳು ‘ವಾಡಾ’ದ ಉದ್ದೀಪನ ಮದ್ದು ನಿಷೇಧದ ನಿಯಮಾವಳಿಗಳನ್ನು ಒಪ್ಪಿಕೊಂಡಿವೆ. ಅಂತರರಾಷ್ಟ್ರೀಯ ಒಲಿಂಪಿಕ್‌ ಫೆಡರೇಷನ್ಸ್‌, ರಾಷ್ಟ್ರೀಯ ಉದ್ದೀಪನ ಮದ್ದು ನಿಷೇಧ ಸಂಸ್ಥೆಗಳು, ಐಒಸಿ ಹಾಗೂ ಪ್ಯಾರಾಲಿಂಪಿಕ್‌ ಸಂಸ್ಥೆಗಳು ಕೂಡ ನಿಯಮಾವಳಿಗಳಿಗೆ ಬದ್ಧವಾಗಿವೆ. 2014ರಿಂದ ಸರ್‌ ಕ್ರೇಗ್‌ ರೀಡೀ ‘ವಾಡಾ’ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ವಾಡಾ’ ನಿರ್ವಹಣೆಗೆ ಅರ್ಧದಷ್ಟು ಹಣ ಐಒಸಿಯಿಂದ ಬರುತ್ತದೆ. ಉಳಿದರ್ಧ ವಿವಿಧ ದೇಶಗಳ ಸರ್ಕಾರಗಳಿಂದ ಸಂಗ್ರಹವಾಗುತ್ತದೆ.

2004ರಲ್ಲಿ ಉದ್ದೀಪನ ಮದ್ದು ನಿಷೇಧದ ಮಾನದಂಡಗಳನ್ನು ರೂಪಿಸಲಾಯಿತು. 2009ರ ಜನವರಿ 1ರಂದು ಕ್ರೀಡೆಯಲ್ಲಿನ ‘ಡೋಪಿಂಗ್‌’ ಕುರಿತು ವಿಶ್ವ ಸಮ್ಮೇಳನ ನಡೆದು, ಆ ಮಾನದಂಡಗಳಲ್ಲಿ ತಿದ್ದುಪಡಿ ತರಲಾಯಿತು. 2013ರಲ್ಲಿ ಇನ್ನಷ್ಟು ತಿದ್ದುಪಡಿಗಳನ್ನು ಮಾಡಲಾಯಿತು. 2015ರ ಜನವರಿ 1ರಂದು ಇನ್ನಷ್ಟು ಸುಧಾರಿಸಿದ ಮಾನದಂಡಗಳು ಜಾರಿಗೆ ಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT