ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸೂರೆಗೊಂಡ ‘ನಟನ’ ಸಂಸ್ಥೆಯ ಮಕ್ಕಳ ನಟನೆ

ಈಶಾನ್ಯ ರಾಜ್ಯದಲ್ಲಿ ಮೈಸೂರಿನ ‘ರತ್ನಪಕ್ಸಿ’
Last Updated 5 ಮಾರ್ಚ್ 2015, 9:28 IST
ಅಕ್ಷರ ಗಾತ್ರ

ಮೈಸೂರು: ಅಸ್ಸಾಂ ಮತ್ತು ಮೇಘಾಲಯದಲ್ಲಿ ಈಚೆಗೆ ನಡೆದ ಪೂರ್ವ– ಉತ್ತರ ರಾಷ್ಟ್ರೀಯ ನಾಟಕೋತ್ಸವದಲ್ಲಿ ಮೈಸೂರಿನ ‘ನಟನ’ ಸಂಸ್ಥೆಯ ಮಕ್ಕಳು ‘ರತ್ನಪಕ್ಸಿ’ ನಾಟಕವನ್ನು ಮನೋಜ್ಞವಾಗಿ ಅಭಿನಯಿಸುವ ಮೂಲಕ ಈಶಾನ್ಯ ರಾಜ್ಯಗಳ ಜನರ ಮನಸೂರೆಗೊಂಡಿದ್ದಾರೆ.

ಈ ಸಂಬಂಧ ನಾಟಕೋತ್ಸವದಲ್ಲಿ ಪಾಲ್ಗೊಂಡಿದ್ದ ಪುಟಾಣಿಗಳು ಹಾಗೂ ತಂತ್ರಜ್ಞರು ಬುಧವಾರ ನಗರ ವಿಜಯ ವಿಠ್ಠಲ ಶಾಲೆಯ ಆವರಣದಲ್ಲಿ ಅನುಭವ ಹಂಚಿಕೊಂಡರು. 

ನಾಟಕ ನಿರ್ದೇಶಕ ಮಂಡ್ಯ ರಮೇಶ್‌ ಮಾತನಾಡಿ, ಈಶಾನ್ಯ ರಾಜ್ಯಗಳಲ್ಲಿ ಉಗ್ರರ ಭಯ ಇರುವುದರಿಂದ ಪ್ರತಿ ಕ್ಷಣವೂ ಆತಂಕ ಮನೆ ಮಾಡಿತ್ತು. ಆದರೂ ಅದಕ್ಕೆ ತಲೆಕೆಡಿಸಿಕೊಳ್ಳದೆ ಮಕ್ಕಳು ಉತ್ತಮ ಪ್ರದರ್ಶನ ನೀಡಿದ್ದು ಖುಷಿ ತಂದಿದೆ. ಈ ಪ್ರಯಾಣದಿಂದ ಮಕ್ಕಳಿಗೆ ಉತ್ತಮ ವೇದಿಕೆ ಸಿಕ್ಕಿದೆ. ಅಲ್ಲದೆ, ಅಲ್ಲಿನ ಜನರ ಜನಜೀವನ, ಸಂಸ್ಕೃತಿಯನ್ನು ತಿಳಿದುಕೊಳ್ಳುವಂತಾಯಿತು ಎಂದರು.

ಪುನೀತ್‌ ರಾಜ್‌ಕುಮಾರ್‌ ಅಭಿನಯದ ಮೈತ್ರಿ ಚಿತ್ರದಲ್ಲಿ ಸಿದ್ದರಾಮ ಎಂಬ ಪ್ರಮುಖ ಪಾತ್ರದಲ್ಲಿ ಲೀಲಾಜಾಲವಾಗಿ ಅಭಿನಯಿಸಿದ್ದ ಚಿಂಟು ನಟನ ಮಾತನಾಡಿ, ಈಶಾನ್ಯ ರಾಜ್ಯಕ್ಕೆ ತೆರಳುವಾಗ ನನಗೆ ಸೇರಿದಂತೆ ಹಲವರಿಗೆ ಆರೋಗ್ಯದಲ್ಲಿ ಸ್ವಲ್ಪ ತೊಂದರೆಯಾಗಿತ್ತು. ಆದರೆ, ನಾವೆಲ್ಲಾ ವೇದಿಕೆ ಮೇಲೆ ಚೈತನ್ಯದಿಂದಲೇ ಅಭಿನಯಿಸಿ, ಎಲ್ಲರ ಮನ ಗೆದ್ದಿರುವುದು ಖುಷಿ ತಂದಿದೆ ಎಂದ.
ಕಿರುತೆರೆ ಹಾಗೂ ಹಿರಿತೆರೆ ನಿರ್ದೇಶಕ ಬಿ. ಸುರೇಶ್‌, ಮಕ್ಕಳ ಪೋಷಕರು ಇದ್ದರು.

ಗೌರವಕ್ಕೆ ಪಾತ್ರ: ನವದೆಹಲಿಯಲ್ಲಿ ನವೆಂಬರ್‌ನಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವಕ್ಕೆ ದಕ್ಷಿಣ ಭಾರತದಿಂದ ‘ನಟನ’ ತಂಡ ಮಾತ್ರ ಆಯ್ಕೆಯಾಗಿತ್ತು. ಈ ನಾಟಕೋತ್ಸವದಲ್ಲಿ ಕವಿ ಕೋಟಗಾನಹಳ್ಳಿ ರಾಮಯ್ಯ ರಚನೆಯ ‘ರತ್ನಪಕ್ಸಿ’ ನಾಟಕವನ್ನು ‘ನಟನ’ ಮಕ್ಕಳು, ಮಂಡ್ಯ ರಮೇಶ್‌ ಅವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಪ್ರದರ್ಶಿಸಿದ್ದರು. ರಂಗಾಯಣದ ನಿರ್ದೇಶಕ ಎಚ್‌. ಜನಾರ್ದನ್‌ ಸಂಗೀತ ನೀಡಿದ್ದಾರೆ. ನವದೆಹಲಿಯಲ್ಲಿ ಪ್ರದರ್ಶಿಸಿದ ನಾಟಕವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ ಅಸ್ಸಾಂ ಮತ್ತು ಮೇಘಾಲಯದಲ್ಲಿ ಪ್ರದರ್ಶನ ನೀಡುವ ಗೌರವಕ್ಕೆ ಪಾತ್ರವಾಗಿತ್ತು.

ರಾಷ್ಟ್ರೀಯ ನಾಟಕೋತ್ಸವದ ಮುಂದುವರಿದ ಭಾಗವಾಗಿ ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯು ಅಸ್ಸಾಂನ ಗುವಹಾತಿ ಮತ್ತು ಮೇಘಾಲಯದ ತುರಾದಲ್ಲಿ ಫೆಬ್ರುವರಿ ಕೊನೆಯ ವಾರದಲ್ಲಿ ಆಯೋಜಿಸಿದ್ದ ಉತ್ಸವದಲ್ಲಿ ದೇಶದಾದ್ಯಂತ ಒಟ್ಟು 8 ತಂಡಗಳು ಭಾಗವಹಿಸಿದ್ದವು. ಎಲ್ಲ ಹಿರಿಯರ ನಡುವೆ ಮಕ್ಕಳ ತಂಡ ಇದೊಂದೇ ಆಗಿತ್ತು. ಹಿರಿಯರಿಗೆ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲ ಎಂಬಂತೆ ನಟನ ಸಂಸ್ಥೆಯ ಮಕ್ಕಳು ‘ರತ್ನಪಕ್ಸಿ’ ಕನ್ನಡ ನಾಟಕವನ್ನು ಅದ್ಭುತವಾಗಿ ಅಭಿನಯಿಸಿ, ಪ್ರೇಕ್ಷಕರ ಮನಸೂರೆಗೊಂಡರು.
ಅಲ್ಲಿನ ಪ್ರೇಕ್ಷಕರಿಗೆ ಕನ್ನಡ ಅರ್ಥವಾಗದಿದ್ದರೂ ಮಕ್ಕಳ ಮನೋಜ್ಞ ಅಭಿನಯಕ್ಕೆ ಮನಸೋತರು. ಮಾತ್ರವಲ್ಲದೆ, ಅಲ್ಲಿ ಸೇರಿದ್ದ ನೂರಾರು               ಕಿವುಡ ಮತ್ತು ಮೂಗ ಮಕ್ಕಳು ಪ್ರದರ್ಶನ ನೋಡಿ,         ನಟನ ಮಕ್ಕಳನ್ನು ಅಭಿನಂದಿಸಿದ್ದು ವಿಶೇಷವಾಗಿತ್ತು.
ಅಸ್ಸಾಂನಲ್ಲಿ ನಾಟಕ ಪ್ರದರ್ಶನಕ್ಕೆ ಫೆ. 18ರಂದು ನಟನ ತಂಡ ಮೈಸೂರಿನಿಂದ ಪ್ರಯಾಣ ಬೆಳೆಸಿತು. 18 ಮಕ್ಕಳು, 6 ತಂತ್ರಜ್ಞರು ಸೇರಿ 24 ಮಂದಿ ತಂಡದಲ್ಲಿದ್ದರು. ಅಸ್ಸಾಂನ ನಂತರ ಮೇಘಾಲಯದಲ್ಲಿ ನಾಟಕ ಪ್ರದರ್ಶಿಸಿದ ತಂಡವು ಮಾರ್ಚ್‌ 1ರಂದು ತವರಿಗೆ ಬಂದಿದೆ.

ತಂಡದಲ್ಲಿದ್ದ ಬಾಲಕಲಾವಿದರು: ಆದಿತ್ಯ ಭಾರದ್ವಾಜ (ಚಿಂಟು ನಟನ), ಅಭಿಷೇಕ್‌, ಸುಪ್ರಿತ್‌, ಶಮಂತ, ಯಶವಂತ, ಶ್ರೇಯಸ್‌, ಋತು, ಮನಸ್ವಿನಿ, ಸ್ಪಂದನಾ, ಅರ್ಪಿತಾ, ವಿಧೀಶಾ ಗೌತಮಿ, ವರ್ಷಿಣಿ, ಚಂದನಾ, ಪವನ್‌, ಹಿತನಾಗ್‌, ಹರ್ಷಿತಾ, ಲಾವಣ್ಯ, ಆನ್ಲಿನೆಟ್‌.

ತೆರೆಯ ಹಿಂದಿನ ತಂತ್ರಜ್ಞರು: ನಿರ್ದೇಶನ ಮಂಡ್ಯ ರಮೇಶ್‌, ಮೇಘ ಸಮೀರಾ, ದಿಶಾ ರಮೇಶ್‌, ರಾಗಾ ಅರಸ್‌, ಸತೀಶ್‌ ಚಿಕಾಡಿ, ದುರ್ಗಾ ಪರಮೇಶ್ವರಿ, ಸುದರ್ಶನ್‌ ಗುಲ್ಬರ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT