ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗಳ್ಳನ ಬಂಧನ: 52 ಪ್ರಕರಣಗಳ ಆರೋಪಿ

Last Updated 24 ಏಪ್ರಿಲ್ 2014, 20:29 IST
ಅಕ್ಷರ ಗಾತ್ರ

ಬೆಂಗಳೂರು: ಕುಖ್ಯಾತ ಕನ್ನಗಳವು ಪ್ರಕರಣಗಳ ಆರೋಪಿ ಮಂಜುನಾಥ ಅಲಿಯಾಸ್‌ ಕೊಮ್ಮಘಟ್ಟ ಮಂಜ (32) ಹಾಗೂ ಆತನ ಮೂವರು ಸಹಚರರನ್ನು ಬಂಧಿಸಿರುವ ಜಯನಗರ ಪೊಲೀಸರು, ₨ 75 ಲಕ್ಷ ಬೆಲೆಬಾಳುವ ಚಿನ್ನಾಭರಣಗಳನ್ನು ವಶ­ಪಡಿಸಿ­ಕೊಂಡಿದ್ದಾರೆ.

ತಮಿಳುನಾಡಿನ ಅಂಥೋಣಿರಾಜ್ (25), ನಗರದ ಹೇರೋಹಳ್ಳಿಯ ಶಿವರಾಜ ಅಲಿಯಾಸ್‌ ಕಪ್ಪೆ ಶಿವ (24) ಹಾಗೂ ಫಿಲಿಪ್‌ರಾಜ್ ಅಲಿಯಾಸ್ ಸೀಜನ್ (29) ಇತರೆ ಬಂಧಿತರು. ಮಂಜನ ವಿರುದ್ಧ 52 ಪ್ರಕರಣಗಳು ದಾಖಲಾಗಿದ್ದು, ಒಂದೂವರೆ ವರ್ಷದ ಹಿಂದೆ ಜಾಮೀನಿನ ಮೇಲೆ ಜೈಲಿನಿಂದ  ಬಿಡುಗಡೆಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

17ನೇ ವರ್ಷದಿಂದಲೇ ಸಣ್ಣಪುಟ್ಟ ಕಳ್ಳತನ ಆರಂಭಿಸಿದ್ದ ಮಂಜ, ಕಬ್ಬಿಣ ಕಳವು ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ. ಆಗ ಆತನಿಗೆ ಕುಖ್ಯಾತ ಕನ್ನಕಳವು ಆರೋಪಿಯೊಬ್ಬನ ಪರಿಚಯ­ವಾಯಿತು. ಆತ ಹೆಚ್ಚಿನ ಹಣ ಸಿಗ­ಬೇಕೆಂದರೆ ಕಬ್ಬಿಣ ಕಳವು ಮಾಡುವು­ದನ್ನು ಬಿಟ್ಟು ಮನೆಗಳಲ್ಲಿ ಕಳ್ಳತನ ಮಾಡುವಂತೆ ಮಂಜನಿಗೆ ಸೂಚಿಸಿದ್ದ. ಅದರಂತೆ ಜೈಲಿನಿಂದ ಬಿಡುಗಡೆಯಾದ ಬಳಿಕ ಆತ, ಇಬ್ಬರು ಸಹಚರರೊಂದಿಗೆ ಸೇರಿಕೊಂಡು ಮನೆಗಳಲ್ಲಿ ಕಳವು ಮಾಡಲಾರಂಭಿಸಿದ್ದ.

ಆರೋಪಿಗಳು ಬನಶಂಕರಿಯ ಮನೆ­ಯೊಂದರಲ್ಲಿ ಕಳವು ಮಾಡಲು ಸಂಚು ರೂಪಿಸಿದ್ದಾರೆ ಎಂಬ ಬಗ್ಗೆ ದೊರೆತ ಖಚಿತ ಮಾಹಿತಿಯಿಂದ ಕಾರ್ಯಾ­ಚರಣೆ ನಡೆಸಿದಾಗ ಮಂಜ ಹಾಗೂ ಅಂಥೋಣಿ ಸಿಕ್ಕಿ ಬಿದ್ದರು. ಅವರು ನೀಡಿದ ಮಾಹಿತಿ ಆಧರಿಸಿ ಉಳಿದಿಬ್ಬ­ರನ್ನು ಚಂದಾಪುರದ ಆರ್‌.ಕೆ. ಡಾಬಾದಲ್ಲಿ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಐಷಾರಾಮಿ ಕಾರಿನಲ್ಲಿ ಒಳ್ಳೆಯ ಬಟ್ಟೆ ಧರಿಸಿ ನಗರದ ಪ್ರಮುಖ ರಸ್ತೆ­ಗಳನ್ನು ಸುತ್ತುವ ಆರೋಪಿಗಳು, ಬಾಗಿಲು ಹಾಕಿದ ಮನೆಗಳನ್ನು ಗುರುತಿ­ಸು-­­ತ್ತಾರೆ. ನಂತರ ವಿಳಾಸ ಕೇಳುವ ನೆಪದಲ್ಲಿ ಆ ಮನೆ ಬಳಿ ಹೋಗಿ ಯಾರಾದರೂ ಇದ್ದಾರೆಯೇ ಎಂಬು­ದನ್ನು ಖಾತ್ರಿ ಮಾಡಿಕೊಳ್ಳುತ್ತಿದ್ದರು. ಯಾರೂ ಇಲ್ಲ ಎಂದು ಖಚಿತವಾದರೆ ಅಲ್ಲೇ ಹೊಂಚು ಹಾಕಿ ರಾತ್ರಿ ವೇಳೆಗೆ ಮನೆ ಬೀಗ ಮುರಿದು ಕಳ್ಳತನ ಮಾಡುತ್ತಿದ್ದರು.

ಕೊಮ್ಮಘಟ್ಟ ಮಂಜನ ಬಂಧನದಿಂದ ಬೆಂಗಳೂರು, ಮಂಡ್ಯ ಹಾಗೂ ತಮಿಳು­ನಾಡಿನ ಹೊಸೂರು  ಠಾಣೆ ವ್ಯಾಪ್ತಿ­ಯಲ್ಲಿ ನಡೆದಿದ್ದ 21 ಪ್ರಕರಣಗಳು ಪತ್ತೆಯಾಗಿವೆ. ಆರೋಪಿಯಿಂದ 1.8 ಕೆ.ಜಿ ಚಿನ್ನ, 5.75 ಕೆ.ಜಿ ಬೆಳ್ಳಿ ಸೇರಿದಂತೆ ₨ 75 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಮಂಜ ಒಮ್ಮೆ ಬಂಧಿತನಾಗಿ ಜೈಲಿಗೆ ಹೋದರೆ ಹಿಂದಿನ ಸಹಚರರನ್ನು ತಂಡದಿಂದ ಹೊರಗಿಡು­ತ್ತಾನೆ. ನಂತರ ಜೈಲಿನಲ್ಲಿ ಪರಿಚಯ­ವಾಗುವ ಇತರೆ ಯುವಕರನ್ನು ತಂಡಕ್ಕೆ ಸೇರಿಸಿಕೊಂಡು ಕೃತ್ಯ ಮುಂದುವರಿ­ಸುತ್ತಾನೆ ಎಂದು ಜಯನಗರ ಪೊಲೀಸರು ಮಾಹಿತಿ ನೀಡಿದರು.

ದಕ್ಷಿಣ ವಿಭಾಗದ ಡಿಸಿಪಿ ಎಚ್‌.ಎಸ್.­ರೇವಣ್ಣ, ಎಸಿಪಿ ಯಶವಂತ್‌ ಸಾವರ್ಕರ್‌, ಇನ್‌ಸ್ಪೆಕ್ಟರ್ ಎಂ.ಪಿ.ಲೋಕೇಶ್, ಎಸ್‌ಐ ಪಿ.ಎನ್‌.­ಈಶ್ವರಿ ಮತ್ತು ಅಪರಾಧ ವಿಭಾಗದ ತಂಡ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಚಿಲಕಕ್ಕೆ ಎಲೆ ಇಡುವ ತಂತ್ರ
ಜನದಟ್ಟಣೆ ಇರುವ ರಸ್ತೆಗಳಲ್ಲೂ ಆರೋಪಿ ಮಂಜ ಸಲೀಸಾಗಿ ಮನೆಗಳವು ಮಾಡುತ್ತಾನೆ. ಬಾಗಿಲು ಹಾಕಿರುವ ಮನೆಗಳ ಚಿಲಕಕ್ಕೆ ಎಲೆ ಸಿಕ್ಕಿಸಿ ಹೋಗುವ ಆತ, ರಾತ್ರಿ ವೇಳೆ ಅಲ್ಲಿಗೆ ಬಂದು ನೋಡುತ್ತಾನೆ. ಆ ಎಲೆ ಚಿಲಕದಲ್ಲೇ ಸಿಕ್ಕಿಕೊಂಡಿದ್ದರೆ ಮನೆಯಲ್ಲಿ ಯಾರೂ ಇಲ್ಲವೆಂದು ಅರ್ಥ. ಈ ತಂತ್ರದ ಮೂಲಕ ಆತ ಸಂಪಿಗೇಹಳ್ಳಿ, ಅಮೃತಹಳ್ಳಿ, ನಂದಿನಿಲೇಔಟ್, ಮಹಾಲಕ್ಷ್ಮೀಲೇಔಟ್, ಬಸವನಗುಡಿ, ರಾಜಗೋಪಾಲನಗರ, ಹುಳಿಮಾವು, ಆರ್‌ಎಂಸಿ ಯಾರ್ಡ್‌, ಕೊತ್ತನೂರು, ಹೆಬ್ಬಗೋಡಿ ಹಾಗೂ ಮೈಸೂರಿನ ವಿಜಯನಗರ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT