ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆದೇವ್ರು ಸೂರ್ಯನ ಮನದ ಮಾತು

Last Updated 30 ಮೇ 2016, 19:30 IST
ಅಕ್ಷರ ಗಾತ್ರ

ಗುಂಗುರು ಕೂದಲು, ಶ್ವೇತವರ್ಣ, ಕುರುಚಲು ಗಡ್ಡ, ಮುಖದಲ್ಲಿ ಮಾಸದ ಮಂದಹಾಸ, ಮುಗ್ಧ ನೋಟದ ಈ ಹುಡುಗ ‘ಮನೆದೇವ್ರು’ ಧಾರಾವಾಹಿಯ ಹೀರೋ ಸೂರ್ಯ. ಅಮ್ಮನ ಪ್ರೀತಿಯ ಮಗನಾಗಿ, ಪೀಪಿ ಊದುವ ಮೂಲಕ ಮನದನ್ನೆಯ ಮನಸು ಕದಿಯುವ ಈ  ಸೂರ್ಯ ಕಾರವಾರದ ಕಡಲತಡಿಯವರು.

ಎಂಜಿನಿಯರಿಂಗ್ ಪದವೀಧರರಾದ ಜೈ ಜೂಜೆ ಡಿಸೋಜಾ ಯಾವುದೇ ನಟನಾ ಹಿನ್ನಲೆ ಇಲ್ಲದೇ ನಟರಾದವರು. ಪಿಯುಸಿವರೆಗೆ ಕಾರವಾರದಲ್ಲಿ ಓದಿದ್ದ ಜೈ, ಎಂಜಿನಿಯರಿಂಗ್ ಓದಲು ಬೆಂಗಳೂರಿನತ್ತ ಹೆಜ್ಜೆ ಹಾಕಿದರು. ಎಂಜಿನಿಯರಿಂಗ್ ಅಂತಿಮ ವರ್ಷ ಓದುತ್ತಿರುವಾಗ ಮಾಡೆಲಿಂಗ್ ಕ್ಷೇತ್ರ ಅವರನ್ನು ಸೆಳೆಯಿತು.

ನೋಡಲು ಆಕರ್ಷಕವಾಗಿದ್ದ ಅವರು ಸ್ವಲ್ಪ ಸಮಯದಲ್ಲಿಯೇ ಸೈ ಅನಿಸಿಕೊಂಡರು. ಮಾಡೆಲಿಂಗ್ ಮಾಡುತ್ತಿರುವಾಗಲೇ ನಟನೆಯ ರುಚಿ ಹತ್ತಿತು. ಕೆಲ ಜಾಹೀರಾತುಗಳಲ್ಲಿಯೂ ನಟಿಸಿದ್ದರು. ಎಂಜಿನಿಯರಿಂಗ್ ಮುಗಿಸಿ ಐಬಿಎಂ ಕಂಪೆನಿಯಲ್ಲಿ 3 ತಿಂಗಳು ಕೆಲಸ ಮಾಡಿದರು. ಆಗಲೂ ಅವರ ಮನಸ್ಸಿನಲ್ಲಿ ನಟನೆಯ ಗುಂಗು ಹರಿದಾಡುತ್ತಿತ್ತು.

ಆ ಕಾರಣಕ್ಕೆ ಮುಂಬೈಗೆ ತೆರಳಿದ ಡಿಸೋಜಾ ಅಲ್ಲಿನ ಅನುಪಮ್ ಖೇರ್ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ನಲ್ಲಿ 3 ತಿಂಗಳ ಅಭಿನಯ ತರಬೇತಿಯ ಡಿಪ್ಲೊಮಾ ಮುಗಿಸಿದರು. ನಂತರ ಬೆಂಗಳೂರಿಗೆ ಮರಳಿ, ಟೀವಿ ಜಾಹೀರಾತುಗಳಲ್ಲಿ ಅವಕಾಶ ಹುಡುಕಿದರು. ನಟಿ ಹರ್ಷಿಕಾ ಪೂಣಚ್ಚ ಜೊತೆ ‘ಗುಲಾಬಿ ಸ್ಟ್ರೀಟ್’ ಎಂಬ ಚಿತ್ರವೊಂದರಲ್ಲಿ ನಟಿಸಿದ್ದರು. ಆದರೆ ಆ ಚಿತ್ರ ಪೂರ್ಣವಾಗದೆ ಅರ್ಧಕ್ಕೆ ನಿಂತಿತ್ತು.

ನಟನೆಯ ಮೇಲೆ ಅಪಾರ ಒಲವಿರಿಸಿಕೊಂಡಿದ್ದ ಜೈ ಧಾರವಾಹಿ ಸೇರಿದಂತೆ ಯಾವುದೇ ಆಡಿಷನ್‌ ನಡೆದರೂ ಭಾಗವಹಿಸುತ್ತಲೇ ಇದ್ದರು. ಕೊನೆಗೂ ಅದೃಷ್ಟ ಒಲಿಯಿತು. ರಾಜ್‌ಕುಮಾರ್ ಕುಟುಂಬದ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಮನೆದೇವ್ರು’ ಧಾರಾವಾಹಿಗೆ ಹೀರೋ ಆಗಿ ಆಯ್ಕೆಯಾದರು. 

‘ರಾಜ್‌ಕುಮಾರ್ ಕುಟುಂಬದ ಬ್ಯಾನರ್‌ನ ಧಾರವಾಹಿಯಾದ ಕಾರಣ ನನ್ನೂಳಗೆ ನಟನೆಯ ಕಾವು ಹೆಚ್ಚಿತು. ಅಲ್ಲದೇ ಚೆನ್ನಾಗಿ ನಟಿಸಿಬೇಕು ಎಂಬ ಛಲ ಕೂಡ ಹುಟ್ಟುಕೊಂಡಿತ್ತು. ಹೊಸತೊಂದು ಜವಾಬ್ದಾರಿ ಹೆಗಲಿಗೇರಿದ ಅನುಭವ ನನಗಾಯಿತು’ ಎಂದು ಮೊದಲ ಧಾರಾವಾಹಿಗೆ ಆಯ್ಕೆಯಾದ ಅನುಭವವನ್ನು ತೆರೆದಿಡುತ್ತಾರೆ ಡಿಸೋಜಾ.

ಧಾರಾವಾಹಿ ನಿರ್ದೇಶಕರು, ಸಹ ನಟರು ಸೇರಿದಂತೆ ಸೆಟ್‌ನಲ್ಲಿರುವ ಎಲ್ಲರೂ ತುಂಬಾನೇ ಸಹಕಾರ ನೀಡುತ್ತಾರೆ ಎನ್ನುವ ಜೈ ತಮ್ಮನ್ನು ಸಂಪೂರ್ಣವಾಗಿ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಧಾರಾವಾಹಿಯಲ್ಲಿ ಯಾರ ಪಾತ್ರ ನಿಮಗೆ ತುಂಬಾ ಹಿಡಿಸುತ್ತದೆ ಎಂಬ ಪ್ರಶ್ನೆಗೆ ಮುಗ್ಧ ನಗು ಚೆಲ್ಲುವ ಜೈ ಡಿಸೋಜಾಗೆ ಮನೆದೇವ್ರುವಲ್ಲಿ ತಾನು ನಿರ್ವಹಿಸುವ ಪಾತ್ರವೇ ಇಷ್ಟವಂತೆ.

ಸೂರ್ಯ ಮುಗ್ಧ ಹುಡುಗ, ತನ್ನ ಸುತ್ತಲಿನ ಜನ ಎಷ್ಟು ಕೆಟ್ಟವರಾಗಿರುತ್ತಾರೆ ಎಂಬುದನ್ನು ಅರಿಯದ ಹುಡುಗನ ಪಾತ್ರ. ನಾನು ಕೂಡ ಸ್ವಭಾವತಃ ಹಾಗೆಯೇ ಇರುವುದರಿಂದ ಸೂರ್ಯ ಪಾತ್ರ ತುಂಬಾ ಇಷ್ಟವಾಗುತ್ತದೆ ಎಂದು ನಸು ನಗುತ್ತಾರೆ. 100ಕ್ಕೂ ಅಧಿಕ ಷೋಗಳಲ್ಲಿ ಭಾಗವಹಿಸಿದ ಇವರು ನಟನಾಗುವ ಹಾದಿಯನ್ನು ಸಂಕಷ್ಟದಿಂದ ದಾಟಿ ಬಂದವರು.

ಆಡಿಷನ್ ಸಮಯದಲ್ಲಿ ನಾನು ಕೂಡ ಎಲ್ಲರಂತೆ ನಾಲ್ಕೈದು ಗಂಟೆ ಕ್ಯೂನಲ್ಲಿ ನಿಲ್ಲುತ್ತಿದ್ದೆ. ಆದರೆ ನನಗೆ ಸಾಧಿಸಬೇಕೆಂಬ ಛಲವಿದ್ದ ಕಾರಣ ಹಾದಿ ಕಷ್ಟವೆನ್ನಿಸಲಿಲ್ಲ ಎನ್ನುವುದು ಅವರ ಮಾತು. ನಟನೆ, ಮಾಡೆಲಿಂಗ್ ಯಾವುದರಲ್ಲೂ ರೋಲ್ ಮಾಡೆಲ್ ಇಲ್ಲದೇ ತಾವಾಗಿಯೇ ಮೇಲೆ ಬಂದ ಇವರು ತಮ್ಮ ಇಂದಿನ ಸ್ಥಾನವನ್ನು ಸ್ವಸಾಮರ್ಥ್ಯದಿಂದ ಗಳಿಸಿದ್ದು ಎನ್ನುತ್ತಾರೆ.

ಮಾಡೆಲಿಂಗ್ ಮಾಡುವಾಗ ಜಿಮ್, ಡಯೆಟ್ ಜೈ ಜೀವನದ ಭಾಗವಾಗಿತ್ತು. ಆದರೆ ಧಾರಾವಾಹಿಯ ಬ್ಯುಸಿಯ ಮಧ್ಯೆ ಜಿಮ್‌ ಕಡೆ ಅಷ್ಟು ಗಮನ ಕೊಡುತ್ತಿಲ್ಲ. ಆದರೂ ಸಮಯ ಸಿಕ್ಕಾಗ ಜಿಮ್‌ನಲ್ಲಿ ದೇಹ ದಂಡಿಸುತ್ತೇನೆ ಎನ್ನುತ್ತಾರೆ ಜೈ . ಧಾರಾವಾಹಿ ಬಗ್ಗೆ ಮೆಚ್ಚುಗೆಯ ಮಾತನಾಡುವ ಡಿಸೋಜಾ ‘‘ಮನೆದೇವ್ರು’ ಕತೆ ತುಂಬಾ ವಿಭಿನ್ನವಾಗಿದೆ. ಮಧ್ಯದಲ್ಲಿ ಎಣಿಸಲಾಗದಷ್ಟು ತಿರವುಗಳು ಬರುತ್ತದೆ.

ಧಾರಾವಾಹಿ ಆರಂಭದಲ್ಲಿ ನನ್ನನ್ನು ಜನ ಗುರುತಿಸುತ್ತಿಲ್ಲ ಎಂದುಕೊಳ್ಳುತ್ತಿದ್ದೆ. ಆದರೆ ಬರಬರುತ್ತಾ ನಾನು ಹೋದಲೆಲ್ಲಾ ಜನ ಮಾತನಾಡಿಸಲು ಆರಂಭಿಸಿದರು. ನನಗೆ ಇದರಿಂದ ತುಂಬಾನೇ ಸಂತೋಷವಾಗಿದೆ. ನನ್ನ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ ಎಂಬ ಸಾರ್ಥಕ್ಯ ಭಾವ ನನ್ನಲ್ಲಿದೆ’’ ಎನ್ನುತ್ತಾರೆ. ಸಿನಿಮಾಗಳಲ್ಲಿ ಅಭಿನಯಿಸುವ ಹಂಬಲವಿರುವ  ಡಿಸೋಜ ಸದ್ಯದ ಮಟ್ಟಿಗೆ ಧಾರಾವಾಹಿಗಳಲ್ಲಿ ಬ್ಯುಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT