ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯನೆಂದೂ ಕಟ್ಟಲಾಗದ ಕೊನೆಯನೆಂದೂ ಮುಟ್ಟಲಾಗದ ವಿಶ್ವಮಾನವರ ಅಧ್ಯಯನ

ವಿಮರ್ಶೆ
Last Updated 25 ಜುಲೈ 2015, 19:30 IST
ಅಕ್ಷರ ಗಾತ್ರ

ಶಿಳ್ಳೇಕ್ಯಾತರು (ಒಂದು ಜಾನಪದೀಯ ಅಧ್ಯಯನ)
ಲೇ: ಡಾ. ಸಣ್ಣವೀರಣ್ಣ ಎಚ್. ದೊಡ್ಡಮನಿ
ಪ್ರ: ಗಂಗಬಸವ ಪ್ರಕಾಶನ, ಕೊಕ್ಕರಗೊಂದಿ,
ಬಾಗಲಕೋಟೆ ಜಿಲ್ಲೆ.

ಊರು ಯಾವುದೆಂದರೆ ಊರಿಲ್ಲ; ಹೊಲ ಯಾವುದೆಂದರೆ ಹೊಲವಿಲ್ಲ; ಮನೆ ಯಾವುದೆಂದರೆ ಮನೆಯಿಲ್ಲ, ನೆಲೆ ಯಾವುದೆಂದರೆ ನೆಲೆಯಿಲ್ಲ, ಕಡೆಗೆ ತಾವೆಷ್ಟು ಜನರಿದ್ದೇವೆಂಬ ಸಂಖ್ಯೆಯನ್ನು ತಿಳಿಯಲು ಗಣಿತ ಕೂಡ ಅವರನ್ನು ಕೂಡದ ಅಲೆಮಾರಿ ವಿಶ್ವಮಾನವರಾದ ಶಿಳ್ಳೇಕ್ಯಾತರನ್ನು ಕುರಿತಾದ ಜನಾಂಗೀಯ ಅಧ್ಯಯನ ಈ ಪುಸ್ತಕ. ಮೊದಲಿಗೆ ಇಲ್ಲದವುಗಳ ಪಟ್ಟಿಯಾಯಿತು; ಇನ್ನು ಇರುವ ಸಂಗತಿಗಳ ಪಟ್ಟಿಯನ್ನು ಕೇಳಿ. ಇವರಲ್ಲಿ ಇಡೀ ವಿಶ್ವಕ್ಕೆ ಹಂಚಿ ಉಳಿಯುವಷ್ಟು ಸಂಗೀತವಿದೆ; ಭಾರತದ ಶ್ರೇಷ್ಠ ಮಾದರಿಯೆಂದು ಮುಂದಿಡಬಲ್ಲ ಚಿತ್ರಕಲೆಯಿದೆ; ನಿಂತ ನೆಲದಲ್ಲಿ ಕುಟುಂಬವನ್ನೇ ರಂಗಭೂಮಿಯನ್ನಾಗಿ ಕ್ಷಣಾರ್ಧದಲ್ಲಿ ರೂಪಾಂತರಿಸಬಲ್ಲ ರಂಗಕಲೆಯಿದೆ; ಮತ್ತು ಹೊತ್ತು ಹೊತ್ತಿನ ತುತ್ತಿಗೆ ಪರದಾಡುವ ಬಡತನವಿದೆ, ತಮಗೊಂದು ಘನವಾದ ಹೆಸರ ಹೊಂದಿಸಿಕೊಂಡು ಕರೆಸಿಕೊಳ್ಳಲಾರದ ಅಲೆಮಾರಿ ದುರ್ದೆಸೆಯಿದೆ.

ಶಿಳ್ಳೇಕ್ಯಾತರು ಕರ್ನಾಟಕದವರೆಂದು, ಮಹಾರಾಷ್ಟ್ರದವರೆಂದು, ಆಂಧ್ರದವರೆಂದು ಕರೆಯಲು ಕೂಡ ಆಗದ ವಿಳಾಸವಿಲ್ಲದ ವಿಶ್ವಮಾನವರು. ಹಗಲು ಇವರ ಪಾಲಿಗೆ ಘೋರ ವರ್ತಮಾನ. ಕತ್ತಲನ್ನು ಕ್ಷಣಾರ್ಧದಲ್ಲಿ ವಿಶ್ವದ ರಂಗಭೂಮಿಯನ್ನಾಗಿಸಿಬಿಡುತ್ತಾರೆ. ನಾಡೋಜ ಬೆಳಗಲ್ಲು ವೀರಣ್ಣನವರೋ, ನಾಡೋಜ ಯಡ್ರಾಮನಹಳ್ಳಿ ದೊಡ್ಡ ಭರಮಪ್ಪನವರೋ ತೊಗಲುಗೊಂಬೆಗಳನ್ನು ಕೈಗೆತ್ತಿಕೊಂಡರೆ ಅವರ ಕುಟುಂಬದ ಎಲ್ಲರ ಕೈಗಳಿಗೊಂದೊಂದು ವಾದ್ಯ ಪರಿಕರ ಬಂದು ಕೂರುತ್ತದೆ. ಯಾವುದೋ ಒಂದು ಕೈ ಮದ್ದಳೆ ನುಡಿಸಿದರೆ, ಮತ್ಯಾವುದೋ ಕೈಯಲ್ಲಿ ಪೆಟ್ಟಿ, ಇನ್ಯಾವುದೋ ಕೈಯಲ್ಲಿ ಗೆಜ್ಜೆ, ಯಾವುದೋ ಬಾಯಿ ಯಾವುದೊ ಮಹಾಕಾವ್ಯದ ಹತ್ತಾರು ಪಾತ್ರ. ಎಲ್ಲರ ಎದೆಯೂ ಹತ್ತಾರು ಮಹಾಕಾವ್ಯಗಳ ಜೀವಂತ ಗ್ರಂಥಾಲಯ.

ಕತ್ತಲು ಮತ್ತು ಹಚ್ಚಿಟ್ಟ ಹಿಲಾಲಿನ ಎದುರಿಗೆ ಉಟ್ಟದ್ದನ್ನೆ ಬಿಚ್ಚಿ ಕಟ್ಟಿದ ಬಿಳೆ ಪರದೆಯೇ ರಂಗಭೂಮಿ! ಜಗತ್ತಿಗೆ ಸಂಗೀತದ  ಮಾದರಿಗಳನ್ನು, ಹತ್ತಾರು ಕಾವ್ಯಗಳ ಮಾದರಿಗಳನ್ನು, ಚಿತ್ರಕಲೆಯ ಮಾದರಿಗಳನ್ನು  ನೀಡಲು ಇಷ್ಟು ಸಾಕು! ಮತ್ತೆ ಬೆಳಗಾದರೆ ಮುಖವಿಲ್ಲದವರು, ಹೆಸರಿಲ್ಲದವರು, ಮನೆಯಿಲ್ಲದವರು, ಊರಿಲ್ಲದವರು... ಮತ್ತೆ ಇಲ್ಲದವುಗಳ ಪಟ್ಟಿ! ಇಡೀ ಪುಸ್ತಕದ ತುಂಬ ಇಂತಹ ಕೊನೆಯಿಲ್ಲದ ಪಟ್ಟಿಗಳ ಸಾಲು ಸಾಲು!

ಶ್ರೇಷ್ಠ ಹಿಂದೂಸ್ತಾನಿ ಗಾಯಕರಲ್ಲೊಬ್ಬರಾದ ಪಂಡಿತ್ ಎಚ್. ವೆಂಕಟೇಶಕುಮಾರ್ ಅವರ ಮಾಧುರ್ಯಕ್ಕೆ ತಲೆದೂಗದವರಿಲ್ಲ. ಇಂದು ವಿಶ್ವಮಟ್ಟದ ಶ್ರೇಷ್ಠ ಹಿಂದೂಸ್ತಾನಿ ಗಾಯಕರಲ್ಲಿ ಅವರೂ ಒಬ್ಬರು. ಮೇಲಿನ ಕುಲಮೂಲದ ಸಂಗೀತಸಾಮರ್ಥ್ಯವನ್ನು ಹುಟ್ಟಿನೊಂದಿಗೇ ಪಡೆದ ಪಂಡಿತ್ ವೆಂಕಟೇಶ್ ಕುಮಾರ್ ಅವರಲ್ಲಿದ್ದ ಅಲೆಮಾರಿಯನ್ನು ದಾರಿಗೆ ಹಚ್ಚಿ ಸಂಗೀತ ವಿಶ್ವಕ್ಕೆ ನೀಡಿದ್ದು ಪಂಡಿತ ಪುಟ್ಟರಾಜ  ಗವಾಯಿಗಳ ಆಶ್ರಮ ಶಾಲೆ. ಶಿಳ್ಳೇಕ್ಯಾತರ ಸಮೂಹದ ಎಲ್ಲರೂ ಇಂತಹ ಸತ್ವದ ವಾರಸುದಾರರೇ.

ಇಡೀ ದಕ್ಷಿಣ ಭಾರತವನ್ನು ತಡಕಾಡಿದರೆ ಕೆಲವಾರು ಸಾವಿರ ಸಂಖ್ಯೆಯಲ್ಲಿ ಶೀಳ್ಳೇಕ್ಯಾತ ಕುಲಮೂಲದವರು ದೊರೆತಾರು. ಐದಾರು ದಶಕಗಳ ಹಿಂದೆ ಈ ಕುಲಮೂಲದ ಎಲ್ಲರೂ ಕಾವ್ಯದ, ರಂಗಭೂಮಿಯ, ಚಿತ್ರಕಲೆಯ ಸಂಗೀತದ ಓಡಾಡುವ ರೂಪಗಳೇ ಆಗಿದ್ದರು. ಹತ್ತಾರು ಲಕ್ಷ ಸಂಖ್ಯೆಯ ಬಲಾಢ್ಯ ಜಾತಿಗಳಲ್ಲಿ ಹೇಳಿಕೊಳ್ಳಲು ಒಬ್ಬ ಕವಿಯೋ ಸಂಗೀತಗಾರನೋ ಇಲ್ಲದ ನಾಡಿನಲ್ಲಿ ಇಂತಹ ವಿಶೇಷಗಳು ನೂರಾರು ಸಿಗುತ್ತವೆ. ಕೆಳಜಾತಿಸ್ತರಗಳಿಗೆ ಅವರ ಕುಲಸೂಚಕ ಪದಗಳೇ ಅಪಮಾನ ಸೂಚಿಗಳಾಗುತ್ತವೆ. ಅತ್ಯಂತ ಪ್ರಾಚೀನ ಹಿಂದುಳಿದ ಅಲೆಮಾರಿ ಬುಡಕಟ್ಟು ಸಮುದಾಯಗಳಲ್ಲಿ ಒಂದಾದ ಇವರನ್ನು ಕಿಳ್ಳೇಕ್ಯಾತರು, ಸಿಳ್ಳೇಕ್ಯಾತರು, ಗೊಂಬೆರಾಮರು, ತೊಗಲು ಗೊಂಬೆಯವರು ಮುಂತಾಗಿ ಕರೆಯುವವರು ಕರೆಯುತ್ತಾರೆ.

ಊರು, ನೆಲ, ಹೊಲಮನೆ ಇಲ್ಲದವರನ್ನು ಹೆಸರಿಟ್ಟು ಕರೆವ ಹೊತ್ತಿಗೆ ಅವರು ಅಲ್ಲಿರುವವರಲ್ಲ. ಊರಿಂದೂರಿಗೆ ಅಲೆಯುತ್ತ, ಸಂಜೆಯಾಗುವುದನ್ನೆ ಕಾಯುತ್ತ, ಸಿಕ್ಕ ಊರಲ್ಲಿ ತಮ್ಮ ತೊಗಲುಗೊಂಬೆಗಳ ಪೆಟ್ಟಿಗೆಯನ್ನು ಇಳುವಿ, ಊರವರ ಕಂಡು, ಊರ ನಡುವಿನ ಬಯಲನ್ನು ರಂಗಭೂಮಿಯನ್ನಾಗಿಸಿಕೊಳ್ಳುತ್ತಾರೆ. ಜೋಡಿಸಿದ ಒಂದೆರಡು ಬಿಳಿಪಂಚೆಗಳೆ ಪರದೆಯಾದರೆ, ಪರದೆಯ ಹಿಂದೆ ಬಳಪದ ಕಲ್ಲಿನಲ್ಲಿ ದೊಡ್ಡದಾಗಿ ಕೊರೆದ ದೀಪಗಳಿಗೆ ಎಣ್ಣೆ ತುಂಬಿ ಹಚ್ಚಿದ ಹಿಲಾಲಿನ ರೀತಿಯ ಕಕ್ಕಡಗಳೇ ಬೆಳಕು. ಈ ಬೆಳಕು ಮತ್ತು ಪರದೆಯ ನಡುವೆ ಪಾರದರ್ಶಕ ಬೊಂಬೆಗಳಿಗೆ ಜೀವ ಬರುತ್ತದೆ. ಊರೆಲ್ಲ ಸಂಗೀತವನ್ನು, ಕಾವ್ಯವನ್ನು, ನಾಟಕವನ್ನು ನೋಡಿ ನಲಿಯುತ್ತದೆ. ಅವರು ಕೊಟ್ಟ ಎರಡು ಸೇರು ರಾಗಿಯನ್ನೋ ಜೋಳವನ್ನೋ ಸುರುವಿಕೊಂಡು ತಮ್ಮ ಬಣ್ಣದ ಗೊಂಬೆಗಳ ಪೆಟ್ಟಿಗೆಯನ್ನು ಹೊತ್ತು ಮುಂದಿನ ಊರಿಗೆ ಪಯಣ.

ಶಿಳ್ಳೇಕ್ಯಾತರ ತೊಗಲುಗೊಂಬೆಗಳ ತಯಾರಿಯ ಹಿಂದೆ ಕಲೆಯ ಶ್ರೇಷ್ಠ ಮಾದರಿಯೊಂದು ಇದೆ. ಜಿಂಕೆ ಅಥವಾ ಮೇಕೆಯ ಚರ್ಮವನ್ನು ನೆನೆಸಿ ಹದಮಾಡಿ ಪಾರದರ್ಶಕವಾಗುವಂತೆ ಸಿದ್ಧಮಾಡಿಕೊಳ್ಳುತ್ತಾರೆ. ನೈಸರ್ಗಿಕ ವಸ್ತುಗಳನ್ನು ಬಳಸಿ ಬಣ್ಣಗಳನ್ನು ಹೊಂದಿಸಿಕೊಳ್ಳುತ್ತಾರೆ. ಈ ಗೊಂಬೆಗಳು ಪ್ರದರ್ಶನ ಕಲೆಯ ಭಾಗವಾಗುವುದರಿಂದ ಅವು ಸ್ಥಿರ ಚಿತ್ರಗಳಲ್ಲ. ಅವುಗಳ ಅಂಗಾಂಗಗಳು ಚಲಿಸುವಂತಿರಬೇಕು. ಹಾಗಾಗಿ ಅವುಗಳನ್ನು ಚಲನೆಗೆ ಒಳಪಡಿಸಲು ಸಾಧ್ಯವಾಗುವಂತೆ ಕಡ್ಡಿಗಳಿಗೆ ಬಂಧಿಸಬೇಕು. ಇದು ಅವುಗಳ ಸಿದ್ಧತೆಯ ಒಂದು ಭಾಗವಾದರೆ, ಬಣ್ಣಗಾರಿಕೆ ಮತ್ತು ಚಿತ್ರಕಲೆಯ ಹಿಂದೆ ಸಾವಿರಾರು ವರುಷಗಳ ಪಾರಂಪರಿಕ ಕ್ರಮವಿದೆ. ಸಾಮಾನ್ಯವಾಗಿ ತೊಗಲುಗೊಂಬೆಗಳು ಉದ್ದ ಮತ್ತು ಅಗಲಗಳ ಎರಡು ಆಯಾಮಗಳ ಚಿತ್ರಗಳು.

ಪ್ರಾಚೀನ ಬುಡಕಟ್ಟುಗಳು ಇಂದಿಗೂ ಈ ಎರಡು ಆಯಾಮದ ಚಿತ್ರಕಲೆಯನ್ನು ಜತನದಿಂದ ಕಾಪಾಡಿಕೊಂಡು ಬಂದಿವೆ. ಮೂರನೆಯ ಆಯಾಮವು ಹುಸಿ. ಈ ತೊಗಲು ಗೊಂಬೆಗಳಲ್ಲಿ ಮೂರನೆಯ ಆಯಾಮವನ್ನೂ ಎರಡೇ ಆಯಾಮಗಳಲ್ಲಿ ಚಿತ್ರಿಸಿಬಿಡುತ್ತಾರೆ. ತೊಗಲುಗೊಂಬೆಗಳು ಸಾಮಾನ್ಯವಾಗಿ ಒಂದು ಪಾರ್ಶ್ವವನ್ನು ಕಾಣಿಸುವಂತೆ ರೂಪಿಸಿದ ಚಿತ್ರಗಳು. ಆದರೂ ಎರಡೂ ಕಣ್ಣುಗಳನ್ನು ಒಂದರ ಪಕ್ಕದಲ್ಲಿ ಒಂದನ್ನು ಬಿಡಿಸಿ ನಮ್ಮನ್ನು ಒಪ್ಪಿಸುತ್ತಾರೆ. ಎರಡೇ ಆಯಾಮದ ಈ ಚಿತ್ರಗಳು ಎರಡು ಪಂಚೆಗಳನ್ನು ಸೇರಿಸಿ ಕಟ್ಟಿದ ಆ ವಿಶಾಲ ವಿಶ್ವದ ಬಯಲ ತುಂಬ ಯುದ್ಧ ಮಾಡುತ್ತವೆ, ನರ್ತನ ಮಾಡುತ್ತವೆ ಮತ್ತು ಮಹಾಕಾವ್ಯಗಳನ್ನು ಕಟ್ಟಿಕೊಡುತ್ತವೆ.

ನಮ್ಮ ಕಣ್ಣು ಕಾಣುವುದು ಎರಡೇ ಆಯಾಮದ ಚಿತ್ರ. ನಾವು ಕಾಣುವುದರಲ್ಲಿನ ಮೂರನೆಯ ಆಯಾಮವು ನಮ್ಮ ಮೆದುಳಿನ ಸೃಷ್ಟಿ. ಹಾಗಾಗಿ ತೊಗಲು ಗೊಂಬೆಗಳ ಈ ಎರಡು ಆಯಾಮದ ಚಿತ್ರಗಾರಿಕೆ ಒಂದು ವಿಶೇಷ ಪ್ರಕಾರ. ತೊಗಲು ಗೊಂಬೆಗಳಲ್ಲಿ ಕೆಲವು ನಗ್ನ ಗೊಂಬೆಗಳಿರುತ್ತವೆ. ಇವುಗಳನ್ನು ಹದವರಿತು ಬಳಸುತ್ತಾರೆ. ಪ್ರೇಕ್ಷಕರನ್ನು ನಾಟಕಪೂರ್ತಿ ತನ್ಮಯರನ್ನಾಗಿಸುವ ಸಂಗೀತ, ಹಾಸ್ಯ, ಎಲ್ಲವೂ ಯಥೇಚ್ಛ ಬಳಕೆಯಾಗುತ್ತವೆ.

ಶಿಳ್ಳೇಕ್ಯಾತರ ತೊಗಲುಗೊಂಬೆಗಳು ಚಿತ್ರಕಲೆಯಲ್ಲಿ ಒಂದು ವಿಶಿಷ್ಟ ಪ್ರಕಾರ. ಕೆಳಸ್ತರದ ಬುಡಕಟ್ಟು ಕಲೆಗಳನ್ನು ಹೈಜಾಕ್ ಮಾಡಿ ಸುಖ ಅನುಭವಿಸುವ ಮೇಲುಜಾತಿಯವರು ಇದನ್ನು ದಕ್ಕಿಸಿಕೊಳ್ಳಲು ಅನೇಕ ತೊಡಕುಗಳಿವೆ. ಮೊದಲನೆಯದಾಗಿ ಅವುಗಳನ್ನು ಸಿದ್ಧ ಮಾಡಲು ತೊಗಲು ಹದ ಮಾಡಬೇಕಿದೆ ಮತ್ತು ಅವುಗಳ ಜೊತೆ ಒಡನಾಡಬೇಕಿದೆ. ಎರಡನೆಯದಾಗಿ ನೈಸರ್ಗಿಕ  ಬಣ್ಣಗಳ ತಯಾರಿ ಮತ್ತು ಈ ಕಲೆಗಾರಿಕೆಯನ್ನು ಸಾಮಾನ್ಯವಾಗಿ ಬೇರೊಬ್ಬರ ಜೊತೆ ಹಂಚಿಕೊಳ್ಳದ ಶಿಳ್ಳೇಕ್ಯಾತರ ನಡಾವಳಿಗಳು. ಹಾಗಾಗಿ ಈ ಕಲಾಪ್ರಕಾರ ಇಂದಿಗೂ ಅವರೊಟ್ಟಿಗೇ ಸಾಗುತ್ತಿದೆ. ಜಗತ್ತಿನ ಶ್ರೇಷ್ಠ ಚಿತ್ರಕಲಾ ಮಾದರಿಗಳಲ್ಲಿ ಇದೂ ಒಂದಾಗಿದ್ದರೂ ಅದನ್ನು ವಿಶ್ವ ಮಟ್ಟದಲ್ಲಿ ಪ್ರದರ್ಶಿಸಿ ಗುರುತಿಸಿಕೊಳ್ಳಲು ಬೇಕಾದ ಅಧಿಕಾರ ಕೇಂದ್ರಗಳ ಒತ್ತಾಸೆ ದೊರಕದಿರುವುದು ಒಂದು ಕೊರತೆ.

ನೂರಾರು ಕಲಾಕೃತಿಗಳು ಈಗಲೂ ಅವರ ಹಳೆಯ ಪೆಟ್ಟಿಗೆಗಳಲ್ಲಿ ಮಾತನಾಡಿಸುವವರಿಗಾಗಿ ಸುಮ್ಮನೆ ಕಾಯುತ್ತಿವೆ. ಬೆಂಗಳೂರಿನ ಚಿತ್ರಕಲಾಪರಿಷತ್ತಿನಲ್ಲಿ ಕಲಾವಿದ ಮಧುಗಿರಿಯ ನಂಜುಂಡರಾಯರ ಆಸಕ್ತಿಯಿಂದಾಗಿ ತೊಗಲುಗೊಂಬೆಗಳ ಒಂದು ಸಂಗ್ರಹವಿದೆ. ತೊಗಲುಗೊಂಬೆಯಾಟ ರಂಗಭೂಮಿಯ ಪ್ರಾಚೀನ ರಂಗರೂಪ. ಸ್ಥಳೀಯ ಜಾನಪದ ಕಾವ್ಯಗಳು, ರಾಮಾಯಣ–ಮಹಾಭಾರತಗಳು, ಅನೇಕ ಶಾಕ್ತ–ಭಾಗವತ ಕಥಾನಕಗಳು, ಐತಿಹಾಸಿಕ ಸಂಗತಿಗಳು, ಆಧುನಿಕ ಘಟನೆಗಳು – ಎಲ್ಲವೂ ಇಲ್ಲಿ ಪ್ರಯೋಗಗೊಳ್ಳುತ್ತವೆ. ಬೇಕಾದ ರಂಗರೂಪವನ್ನು ಅವರೇ ಸಿದ್ಧಪಡಿಸಿಕೊಳ್ಳುತ್ತಾರೆ. ಎಲ್ಲವೂ ಸಮೂಹ ಬಯಸಿದ್ದೇ ಹೊರತು ಶಿಳ್ಳೇಕ್ಯಾತರ ಸ್ವಂತ  ಇಚ್ಛೆಯದ್ದಲ್ಲ.

ಕೊಂಚ ಹಿಂದಿನ ರಂಗರೂಪಗಳನ್ನು ಗಮನಿಸಿದರೆ ಸಮೂಹದ ಮಾನಸಿಕ ಮತ್ತು ಕೌಟುಂಬಿಕ ಆರೋಗ್ಯವನ್ನು ಕಾಪಾಡುವ ಅನೇಕ ಅಂಶಗಳನ್ನು ಈ ಪ್ರಯೋಗಗಳು ಒಳಗೊಂಡಿರುವುದನ್ನು ಕಾಣಬಹುದು. ಅದರಲ್ಲಿಯೂ ಗಂಡು ಹೆಣ್ಣಿನ ಸಂಬಂಧವನ್ನು ಕುರಿತಾದ ಮುಕ್ತ ಮಾತುಕತೆಯನ್ನು ಆಗಮಾಡುತ್ತಿದ್ದ ಕಿಳ್ಳೇಕ್ಯಾತ-ಬಂಗಾರಕ್ಕರ ಪಾತ್ರಗಳು ಮಾನಸಿಕ ಆರೋಗ್ಯವನ್ನು ಕಾಪಾಡುವ ಪಾತ್ರಗಳೂ ಆಗಿದ್ದವು. ಇಂತಹ ಪಾತ್ರಗಳು ಮಕ್ಕಳೆಲ್ಲ ಮಲಗಿದ ಮೇಲೆ ನಡುರಾತ್ರಿಯ ನಂತರ ಪ್ರವೇಶಿಸುತ್ತಿದ್ದವು. ಶಿಳ್ಳೇಕ್ಯಾತರು ಒಳ್ಳೆಯ ನಾಟಿವೈದ್ಯರೂ ಆಗಿದ್ದರು. ಅವರ ನಾಟಿವೈದ್ಯದ ತಿಳಿವಳಿಕೆಯನ್ನೂ ಊರಿಂದೂರಿಗೆ ಹಂಚುತ್ತಾ ಹೋಗುತ್ತಿದ್ದರು.

ಇದೆಲ್ಲ ಶಿಳ್ಳೇಕ್ಯಾತರ ಹೊರಗು. ಅವರ ಒಳಗಿನ ಸಂಕಟಗಳು ಹಗಲಿನಲ್ಲಿ ಕಾಣದೆ ಕಳೆದುಹೋಗುತ್ತವೆ. ಇದಿರಿನವರು ಬಯಸಿದ್ದನ್ನು ಹಾಡಿ ಸಂತಸಗೊಳಿಸುವವರಿಗೊಂದು ಸ್ವಂತ ಹಾಡಿದೆ ಎಂದು ಕೇಳುವವರೆಂದೂ ಬಯಸಿ ಕೇಳುವುದಿಲ್ಲ. ಗೊಂಬೆಯಾಟಕ್ಕೆ ಯಾವುದು ಚಾಲ್ತಿಯಲ್ಲಿರುತ್ತದೆಯೋ ಅದನ್ನು ಅನಿವಾರ್ಯವಾಗಿ ಎತ್ತಿಕೊಳ್ಳುತ್ತಾರೆ. ಅವರೇ ನಾಟಕ ಬರೆದುಕೊಳ್ಳುತ್ತಾರೆ. ಹಾಡುಗಳನ್ನು ಸಿದ್ಧಪಡಿಸಿ ಹೊಸ ಹೊಸ ಮಟ್ಟುಗಳನ್ನು ಹೊಂದಿಸಿಕೊಳ್ಳುತ್ತಾರೆ. ಪರಂಪರೆಯಿಂದ ಬಂದಿರುವ ರಾಗ ತಾಳಗಳಿವೆ. ಮತ್ತು ನಿಸರ್ಗ ನೀಡಿರುವ ಕಂಠಸಿರಿಯಿದೆ. ಇವೆಲ್ಲವುಗಳನ್ನು ಬಳಸಿ ಕರಿಭಂಟನ ಕಾಳಗ, ದೇವಿ ಮಹಾತ್ಮೆ, ಪಂಚವಟಿ ರಾಮಾಯಣ, ಶಿವಜಲಂಧರ, ಲವ-ಕುಶ, ಸೀತಾ ಪರಿತ್ಯಾಗ, ಕೃಷ್ಣಸಂಧಾನ, ಪಾಂಡವ ಜಯ ಮುಂತಾದ ಪೌರಾಣಿಕ ನಾಟಕಗಳ ಜೊತೆಗೆ ವರ್ತಮಾನದ ಚಾಲ್ತಿಯ ದೃಷ್ಟಿಯಿಂದಾಗಿ ಜಗಜ್ಯೋತಿ ಬಸವಣ್ಣ, ಮುಂತಾದ ನಾಟಕಗಳ ತೊಗಲುಬೊಂಬೆಯಾಟವನ್ನು ನಡೆಸುತ್ತಾರೆ. 

ಡಾ. ಸಣ್ಣವೀರಣ್ಣ ಎಚ್ ದೊಡ್ಡಮನಿಯವರು ಈ ಬದುಕಿನ ಒಳಗಿನವರು. ಹಾಗಾಗಿ ಇದರ ಒಳ ಹೊರಗನ್ನು ಬಲ್ಲವರು. ಅಲೆಮಾರಿ ಸಮುದಾಯಗಳ ಅಧ್ಯಯನಕ್ಕೆ ಮೊದಲನೆಯದಾಗಿ ಅವರ ಬಗೆಗೆ ಕರುಣೆ-ಮೈತ್ರಿಗಳಿರಬೇಕು. ಅದು ಸಹಜವಾಗಿ ಅವರಿಗೆ ಒದಗಿ ಬಂದಿದೆ. ಅವರನ್ನು ಕಂಡು ಮಾಡನಾಡುವುದು ಕೂಡ ಸುಲಭ ಸಂಗತಿಯಲ್ಲ. ಊರೂರು ಅಲೆಯುವ ಈ ಜನವರ್ಗಕ್ಕೆ ಸ್ವಂತ ಕಸುಬಿಲ್ಲ. ಮೀನುಹಿಡಿಯುವುದು, ಸಣ್ಣ ಪುಟ್ಟ ಪ್ರಾಣಿಗಳ ಬೇಟೆಯಾಗುವುದು, ವೈದ್ಯ ಮಾಡುವುದು, ಹಚ್ಚೆ ಹೊಯ್ಯುವುದು, ಸೂಲಗಿತ್ತಿತನ, ಬಾಂಡೆ ಮಾರುವುದು, ಕಲಾಯಿ ಮಾಡುವುದು, ಕೌದಿ ಹೊಲಿಯುವುದು - ಯಾವುದು ಹೊಟ್ಟೆ ತುಂಬಿಸಲು ಒದಗಿಬರುವುದೋ ಅದು. ಜೊತೆಗೆ ತಮ್ಮದೇ ತೊಗಲಿಗೆ ಅಂಟಿಬಂದ ಬದುಕಿನ ತೊಗಲುಗೊಂಬೆಯಾಟ.

ಈ ನೆಲದ ಪ್ರಾಚೀನ ಬುಡಕಟ್ಟುಗಳಲ್ಲಿ ಕೆಲವು ಸ್ಥಿತ ಉದ್ಯೋಗಗಳನ್ನು ರೂಢಿಸಿಕೊಂಡ ಕುಂಬಾರ, ಕಮ್ಮಾರ, ಬೆಸ್ತ, ಕೊಳವಾರ, ಉಪ್ಪಾರ, ಗಾಣಿಗ, ಕುರುಬ ಮುಂತಾದ ಕೆಲವು ಸಮೂಹಗಳಿಗೆ ಒಂದು ಕಡೆ ನೆಲೆಯಾಗಲು ಸಾಧ್ಯವಾದರೆ, ಕೆಲವು ಸಮೂಹಗಳಿಗೆ ಅವರ ವೃತ್ತಿಯ ಕಾರಣಕ್ಕೇ ಒಂದೆಡೆ ನೆಲೆಯಾಗಲು ಸಾಧ್ಯವಾಗಲಿಲ್ಲ. ಅಂತಹ ಬುಡಕಟ್ಟು ಸಮೂಹಗಳಲ್ಲಿ ಶಿಳ್ಳೇಕ್ಯಾತರ ಸಮೂಹವೂ ಒಂದು. ಅವರಿಗೆ ಸ್ವಂತದ್ದೇನೂ ಉಳಿಯಲಿಲ್ಲ, ಕಡೆಗೆ ಭಾಷೆ ಕೂಡ. ಕನ್ನಡ, ಮರಾಠಿ, ತೆಲುಗುಗಳ ಮಿಶ್ರ ರೂಪವೊಂದನ್ನು ತಮ್ಮ ನಡುವೆ ಬಳಸುವ ಶಿಳ್ಳೇಕ್ಯಾತರು ಭಾರತದ ಮಹಾಕಾವ್ಯಗಳ ಒಡನಾಟವನ್ನು ನಿರಂತರ ಕಾಪಾಡಿಕೊಂಡವರಾಗಿ ಗ್ರಾಂಥಿಕ ಕನ್ನಡವನ್ನೂ ಬಳಸಬಲ್ಲವರು. ಅವರ ಸಂಗೀತ ಸಾಮರ್ಥ್ಯ, ಚಿತ್ರಕಲಾ ಸಾಮರ್ಥ್ಯ, ರಂಗಸಾಮರ್ಥ್ಯ ಮತ್ತು ಕಾವ್ಯ ಸಾಮರ್ಥ್ಯಕ್ಕೆ ಈವರೆಗೆ ಸಿಕ್ಕಿದ್ದು ಒಂದೆರಡು ಸೇರು ರಾಗಿಯೋ ಜೋಳವೋ ಮಾತ್ರ. ನಾಡೋಜ ಬೆಳಗಲ್ಲು ವೀರಣ್ಣನವರು, ಪಂಡಿತ್ ವೆಂಕಟೇಶ ಕುಮಾರ್ ಅವರು ಆ ಸಮೂಹದ ಕಲಾ ಸಮುದ್ರದೊಳಗಿನ ಬೆಟ್ಟಗಳ ತುದಿಗಳು ಮಾತ್ರ. ಈ ಅಧ್ಯಯನ ಕೃತಿಯೂ ಅಂತಹ ಒಂದು ಪ್ರಯತ್ನ.

ಶೀಳ್ಳೇಕ್ಯಾತರ ಸಮೂಹದೊಳಗಿನ ವೈಯಕ್ತಿಕ ಬದುಕಿನ ವಿವರಗಳಿಗೆ ಈ ಕೃತಿಯ ಹೆಚ್ಚುಭಾಗ ಮೀಸಲಾಗಿದೆ. ಅದನ್ನು ದಾಖಲಿಸುವ ಅಗತ್ಯವನ್ನು ಕಡೆಗಣಿಸಲಾಗದು. ಆದರೆ ಅಂಚಿಗೆ ಸರಿಯುತ್ತಿರುವ ಕಲಾಪ್ರಕಾರವೊಂದರ ಅನೇಕ ಸೂಕ್ಷ್ಮ ಸಂಗತಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯಬೇಕಿತ್ತು. ಅಲ್ಲಿ ಬಳಕೆಯಾಗುವ ಅನೇಕ ರಂಗಸೂಕ್ಷ್ಮಗಳು ಆಧುನಿಕ ರಂಗಭೂಮಿಗೆ ಕೂಡ ಬೇಕಾಗಿವೆ. ಸಾವಿರಾರು ವರುಷಗಳ ರಂಗಪ್ರಯಾಣದಲ್ಲಿ ಉಂಟಾಗುವ ದಣಿವನ್ನು ನಿವಾರಿಸಿಕೊಳ್ಳಲು ಅಲ್ಲಿ ಬಳಕೆಯಾದ ಅನೇಕ ಪರಿಹಾರಗಳು ಇಂದು ಏದುಸಿರು ಬಿಡುತ್ತ ಬಿಳುಚಿಕೊಳ್ಳುತ್ತಿರುವ ರಂಗಭೂಮಿಗೆ ಒದಗಿಬಂದರೆ ಒಳಿತಾಗುತ್ತದೆ. ಇಂತಹ ಸಮೂಹಗಳನ್ನು ಕುರಿತ ಸಂಶೋಧನಾ ಕೃತಿಗಳಿಂದ ಅನೇಕ ಕಲಾಪ್ರಕಾರಗಳು ಸಮೃದ್ಧಗೊಳ್ಳುತ್ತವೆ. ಅನೇಕ ಜಡ ಜಾತಿಗಳ ಅಹಂಕಾರವೊಂದಿಷ್ಟು ನಿರಸನಗೊಳ್ಳುತ್ತದೆ; ಬದುಕನ್ನು ಹಿತಕಾರಿಯಾಗಿಸುವ ಹೊಸ ಅರಿವು ನಮ್ಮದಾಗುತ್ತದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT