ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಜಾಡು ಹಿಡಿಯಲು ಆ್ಯಪ್‌ ನೆರವು!

Last Updated 29 ಜೂನ್ 2016, 19:30 IST
ಅಕ್ಷರ ಗಾತ್ರ

ಧಾರವಾಡ: ಮರಳು ಅಕ್ರಮ ಗಣಿಗಾರಿಕೆ ತಡೆಗಟ್ಟುವ ಸಲುವಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಇದೀಗ ಹೊಸದಾಗಿ ಮೊಬೈಲ್‌ ಆ್ಯಪ್ ಅಭಿವೃದ್ಧಿಪಡಿಸಿದ್ದು, ಕೆಲವೇ ದಿನಗಳಲ್ಲಿ ಅದನ್ನು ರಾಜ್ಯದಾದ್ಯಂತ ಬಳಸಲು ಸಿದ್ಧತೆ ನಡೆಸಿದೆ.

ಮರಳು ಅಕ್ರಮ ಸಾಗಾಟ ನಿಯಂತ್ರಿಸುವ ಸಲುವಾಗಿ ಸರ್ಕಾರವು ಗಣಿ ಮತ್ತು ಭೂವಿಜ್ಞಾನ, ಲೋಕೋಪಯೋಗಿ, ಪೊಲೀಸ್‌ ಇಲಾಖೆ ಸೇರಿದಂತೆ ಹಲವು ಇಲಾಖೆಗಳಿಗೆ ಜವಾಬ್ದಾರಿ ನೀಡಿದೆ. ಆದರೆ ಇವುಗಳ ನಡುವೆ ಸಮನ್ವಯದ ಕೊರತೆಯಿಂದಾಗಿ  ಮರಳು ನೀತಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಕಷ್ಟವಾಗಿದೆ ಎಂಬುದನ್ನು ಅಲ್ಲಿನ ಅಧಿಕಾರಿಗಳೇ ಹೇಳುತ್ತಾರೆ.

ಯಾರ್ಡ್‌ನಿಂದ, ಪರವಾನಗಿ ಪಡೆದ ಸ್ಥಳದವರೆಗೂ ಮರಳು ಹೊತ್ತ ಲಾರಿಗಳ ಮಾರ್ಗವನ್ನು ನಿಖರವಾಗಿ ಹೇಳಬಲ್ಲ ವ್ಯವಸ್ಥೆಯನ್ನು ಮೊದಲು ಜಾರಿಗೆ ತರಲು ಇಲಾಖೆ ನಿರ್ಧರಿಸಿದೆ. ಇದಕ್ಕೆ ಈಗಾಗಲೇ ಜಿಪಿಎಸ್‌ ಮಾದರಿಯ ತಂತ್ರಜ್ಞಾನ ಬಳಕೆ ಇದ್ದರೂ, ಅದು ಸಮರ್ಪಕವಾಗಿಲ್ಲದ ಕಾರಣ ಅಕ್ರಮ ಚಟುವಟಿಕೆಗಳನ್ನು ಪೂರ್ಣವಾಗಿ ತಡೆಯಲು ಸಾಧ್ಯವಾಗಿಲ್ಲ. ಈಗ ಕಿಯೋನಿಕ್ಸ್‌ ಅಭಿವೃದ್ಧಿಪಡಿಸಿರುವ ಹೊಸ ಮೊಬೈಲ್‌ ಆ್ಯಪ್‌ ಅನ್ನು ರಾಜ್ಯದ ಕೆಲವೆಡೆ ಪ್ರಾಯೋಗಿಕವಾಗಿ ಬಳಕೆ ಮಾಡಲಾಗಿದ್ದು, ಅದರ ವರದಿ ಆಧರಿಸಿ ರಾಜ್ಯದಾದ್ಯಂತ ಜಾರಿಗೊಳಿಸಲು ಇಲಾಖೆ ಮುಂದಾಗಿದೆ.

ಜಿಪಿಎಸ್‌ ಬಂದ್ ಮಾಡಿ ಸಾಗಾಣಿಕೆ ‘ಈ ಮೊದಲು ಮರಳು ಸಾಗಣೆಗೆ ಲೋಕೋಪಯೋಗಿ ಇಲಾಖೆಯಿಂದ ವಿಶೇಷ ಭದ್ರತಾ ಪರವಾನಗಿ ಪತ್ರವನ್ನು (ಎಸ್‌ಎಸ್‌ಪಿಪಿ) ಆಯಾ ತಾಲ್ಲೂಕು ಕಚೇರಿಗಳಲ್ಲಿ ವಿತರಿಸಲಾಗುತ್ತಿತ್ತು. ಮರಳು ಸಾಗಿಸುವ ವಾಹನಗಳಿಗೆ ಜಿಪಿಎಸ್‌ ಕಡ್ಡಾಯ ಮಾಡಲಾಗಿತ್ತು. ಅದರೆ ಇದನ್ನೂ ದುರುಪಯೋಗ ಮಾಡಿಕೊಂಡು ಪರವಾನಗಿ ಪಡೆದ ವಾಹನದ ಜಿಪಿಎಸ್‌ ಬಂದ್‌ ಮಾಡಿ ಬೇರೆ ವಾಹನದಲ್ಲಿ ಮತ್ತೆಲ್ಲೋ ಸಾಗಿಸುತ್ತಿದ್ದುದರಿಂದ ಇಲಾಖೆಗೆ ಮರಳಿನ ಮಾಹಿತಿ ಲಭ್ಯವಾಗುತ್ತಿರಲಿಲ್ಲ’ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಇಷ್ಟು ಮಾತ್ರವಲ್ಲ, ಜಿಪಿಎಸ್‌ ಅಳವಡಿಸುವ ದರವೂ ದುಬಾರಿ ಎಂಬ ಕೂಗು ಲಾರಿ ಮಾಲೀಕರಿಂದ ಕೇಳಿಬಂದಿತ್ತು. ಜತೆಗೆ ಜಿಪಿಎಸ್‌ ಯಂತ್ರಗಳನ್ನು ವಿವಿಧ ಕಂಪೆನಿಗಳು ತಯಾರು ಮಾಡುತ್ತಿದ್ದುದರಿಂದ, ಅವುಗಳ ನಿಖರತೆಯಲ್ಲೂ ವ್ಯತ್ಯಾಸ ಇರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದರು. ಹೀಗಾಗಿ ಇದಕ್ಕೆ ಪರ್ಯಾಯವಾದ, ಸರಳ ಹಾಗೂ ನಿಖರ ವ್ಯವಸ್ಥೆಯನ್ನು ಜಾರಿಗೆ ತರಲು ಈ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಇದನ್ನು ಬಳಸಲು ಆ್ಯಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಸಾಧಾರಣ ಸ್ಮಾರ್ಟ್‌ ಫೋನ್‌ ಇದ್ದರೆ ಸಾಕು. ಅದರಲ್ಲಿ ಕಿಯೋನಿಕ್ಸ್‌ ಅಭಿವೃದ್ಧಿಪಡಿಸಿದ ತಂತ್ರಾಂಶ ಅಳವಡಿಸಬೇಕು. ಮೊಬೈಲ್‌ ಬಂದ್‌ ಆಗಿದ್ದರೂ ಚಲನವಲನದ ಆಧಾರದ ಮೇಲೆ ಸ್ಥಳದ ಮಾಹಿತಿಯನ್ನು ಇಲಾಖೆಯ ಕಚೇರಿಗೆ ನೀಡುವಷ್ಟು ಸಾಮರ್ಥ್ಯ ಇದಕ್ಕಿದೆ. ಗಣಿ ಇಲಾಖೆಯನ್ನು ಮಾಲೀಕನೆಂದು ಹಾಗೂ ಲೋಕೋಪಯೋಗಿ ಇಲಾಖೆಯನ್ನು ಬಾಡಿಗೆದಾರರೆಂದು ಇಲ್ಲಿ ಪರಿಗಣಿಸಲಾಗಿದೆ. ಮರಳು ಸಾಗಣೆ ವಾಹನದ ಮಾಹಿತಿಯನ್ನು ಅಧಿಕಾರಿಗಳು ಎಸ್‌ಎಂಎಸ್ ಮೂಲಕ ದೃಢೀಕರಿಸಿಕೊಳ್ಳುತ್ತಾರೆ.  ಯಾವುದೇ ರೇಡಿಯೊ ಟ್ಯಾಕ್ಸಿಗಳನ್ನು ಬುಕ್‌ ಮಾಡುವ ಮಾದರಿಯಲ್ಲೇ ಈ ಮೊಬೈಲ್ ಆ್ಯಪ್‌ ಬಳಸಬಹುದು. ಇದರ ಸಹಾಯದಿಂದ ಗಣಿ ಮತ್ತು ಭೂವಿಜ್ಞಾನ, ಲೋಕೋಪಯೋಗಿ ಇಲಾಖೆ ಹಾಗೂ ಗ್ರಾಹಕರು ಮರಳು ಸಾಗಿಸುವ ವಾಹನಗಳ ಚಲನವಲನದ ಮೇಲೆ ನಿಗಾ ವಹಿಸಬಹುದು.

ಶಿವಮೊಗ್ಗ ಜಿಲ್ಲೆಯಲ್ಲಿ ಮೇ 12 ರಂದು ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಜೂನ್ 13ರಂದು ಈ ಆ್ಯಪ್‌ ಬಳಕೆ ಯನ್ನು ಪ್ರಾಯೋಗಿಕವಾಗಿ ಪರೀಕ್ಷೆ ಮಾಡಿ ವರದಿ ಸಲ್ಲಿಸಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ಇದರ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ.  ರಾಜ್ಯದಾದ್ಯಂತ ಇರುವ ಎಲ್ಲಾ ಮರಳು ಸಾಗಾಣಿಕೆದಾರರ ಮೊಬೈಲ್‌ನಲ್ಲಿ ಅಳವಡಿಕೆಗೆ ಸೂಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ತಂತ್ರಾಂಶದ ಮಾಹಿತಿ
* ಇಲಾಖೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಸಂಯೋಜಿತ ಗುತ್ತಿಗೆ ನಿರ್ವಹಣಾ ವ್ಯವಸ್ಥೆ (ಐಎಲ್‌ಎಂಎಸ್‌) ತಂತ್ರಾಂಶದೊಂದಿಗೆ ಮೊಬೈಲ್ ಆ್ಯಪ್‌ ಸೇರಿಸಲಾಗುತ್ತದೆ.

* ಗಣಿ ಮತ್ತು ಭೂವಿಜ್ಞಾನ ಇಲಾಖೆಯು, ಲೋಕೋಪಯೋಗಿ ಇಲಾಖೆಯ ಮನವಿ ಮೇರೆಗೆ ನೀಡುವ ಪರವಾನಗಿಯನ್ನು ಐಎಲ್‌ಎಂಎಸ್‌ ತಂತ್ರಾಂಶದ ಮೂಲಕವೇ ನೀಡಲಾಗುತ್ತದೆ.
* ಐಎಲ್‌ಎಂಎಸ್‌ ತಂತ್ರಾಂಶದಿಂದ ಪರವಾನಗಿಯನ್ನು ಎಸ್‌ಎಸ್‌ಪಿಪಿ ಮೂಲಕ ವಿತರಿಸಲಾಗುತ್ತದೆ.
* ಈಗ ಅಭಿವೃದ್ಧಿಪಡಿಸಿರುವ ತಂತ್ರಾಂಶವನ್ನು ಚಾಲಕನ ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡಿರಬೇಕು
* ಪರವಾನಗಿಯಲ್ಲಿ ಹೆಸರು ಇರುವ ಚಾಲಕನ ಮೊಬೈಲ್‌ ಸಂಖ್ಯೆಯು ಹೊಸ ಆ್ಯಪ್‌ಗೆ ಯೂಸರ್‌ ಐಡಿ ಮತ್ತು ಪಾಸ್‌ವರ್ಡ್‌್ ಆಗಿರುತ್ತದೆ.
* ವಿತರಣಾ ಕೇಂದ್ರದಿಂದ ಮರಳು ಹೊತ್ತು ವಾಹನ ಹೊರಡುವ ಮೊದಲು, ಚಾಲಕ ತನ್ನ ವಾಹನದೊಂದಿಗೆ ಸೆಲ್ಫಿ ಚಿತ್ರವನ್ನು ತೆಗೆದುಕೊಳ್ಳುವಂತೆ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ.
* ಚಾಲಕನು ವಾಹನ ಚಲಿಸುವ ಮುನ್ನ ‘ಸ್ಟಾರ್ಟ್‌ ಟ್ರಿಪ್‌’ ಗುಂಡಿಯನ್ನು ಒತ್ತಿದಲ್ಲಿ ಆ ಲೋಡ್‌ನ ಪರವಾನಗಿ ಆರಂಭವಾಗುತ್ತದೆ. ತಲುಪಬೇಕಾದ ಸ್ಥಳದಲ್ಲಿ ‘ಎಂಡ್‌ ಟ್ರಿಪ್‌’ ಗುಂಡಿಯನ್ನು ಒತ್ತಿದಾಗ ಇದರ ಪರವಾನಗಿ ಅಂತ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT