ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಪೂರೈಕೆಗೆ ಪಾರದರ್ಶಕ ಕ್ರಮ

Last Updated 6 ಜೂನ್ 2014, 20:04 IST
ಅಕ್ಷರ ಗಾತ್ರ

ಬೆಂಗಳೂರು: ಮರಳು ಸಾಗಣೆ ಮತ್ತು ಪೂರೈಕೆ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಮುಂದಾಗಿರುವ ರಾಜ್ಯ ಸರ್ಕಾರ, ಈಗ ಆನ್‌ಲೈನ್‌ ಆಧಾರಿತ ಹೊಸ ತಂತ್ರಜ್ಞಾನದ ಮೊರೆ ಹೋಗಿದೆ.

ನದಿ ಪಾತ್ರದಿಂದ ಮರಳು ತೆಗೆದು ಸ್ಟಾಕ್‌ ಯಾರ್ಡ್‌ಗೆ ಸ್ಥಳಾಂತರಿಸುವು­ದರಿಂದ ಹಿಡಿದು ಗ್ರಾಹಕರ ಮನೆ ಬಾಗಿಲಿಗೆ ಮರಳು ತಲುಪಿಸು­ವವರೆಗೂ ನಿಗಾ ಇಡುವ ವ್ಯವಸ್ಥೆ ಇದಾಗಿದೆ.

ಗುಜರಾತ್‌ ಮೂಲದ ನರ್ಮದಾ ಫರ್ಟಿಲೈಸರ್‌್್ಸ ಸಂಸ್ಥೆ ಇದಕ್ಕಾಗಿ ಹೊಸ ಸಾಫ್ಟ್‌ವೇರ್‌ ಅಭಿವೃದ್ಧಿ­ಪಡಿಸಿದೆ. ಅಕ್ರಮ ಮರಳು ಸಾಗಣೆಗೆ ಕಡಿವಾಣ ಹಾಕಲು ಈ ಸಾಫ್ಟ್‌ವೇರ್‌ ಬಳಕೆ ನೆರವಾಗಲಿದೆ ಎಂದು ಮರಳು ಕುರಿತ ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷರೂ ಆದ ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮತ್ತು ಕಾನೂನು ಸಚಿವ ಟಿ.ಬಿ.­ಜಯಚಂದ್ರ ಶುಕ್ರವಾರ ಪತ್ರಿಕಾಗೋಷ್ಠಿ­ಯಲ್ಲಿ ತಿಳಿಸಿದರು.

ಇನ್ನು ಮುಂದೆ ಮರಳು ಸಾಗಣೆ ಲಾರಿಗಳಿಗೆ  ಆರ್‌ಎಫ್‌ಐಡಿ ಬಿಲ್ಲೆ ಅಳ­ವಡಿಸಲಾಗುವುದು. ಅದು  ಯಾವ ಚೆಕ್‌ಪೋಸ್ಟ್‌ಗಳ ಮೂಲಕ ಹಾದು ಹೋಗಿದೆ ಎಂಬುದರ ಮಾಹಿತಿ ದೊರೆ­ಯುತ್ತದೆ. ಒಂದು ವೇಳೆ ಚೆಕ್‌ಪೋಸ್ಟ್‌­ಗಳನ್ನು ತಪ್ಪಿಸಿ, ಕಳ್ಳ ಮಾರ್ಗಗಳಲ್ಲಿ  ಹೋಗಿದ್ದರೂ ಅದರ ಮಾಹಿತಿ ಸಿಗುವ ಹಾಗೆಯೂ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸ­ಲಾಗಿದೆ ಎಂದು ಸಚಿವರು ವಿವರಿಸಿದರು.

ಮನೆ ಬಾಗಿಲಿಗೇ ಮರಳು: ಮನೆ ಕಟ್ಟುವ ಜನ ಮರಳಿಗಾಗಿ ಅಲೆದಾಡು­ವುದನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳ­ಲಾಗಿದೆ. ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್‌ ಕೇಂದ್ರಕ್ಕೆ ಹೋಗಿ ಹಣ ಸಂದಾಯ ಮಾಡಿದರೆ ಮರಳಿನ ಲಾರಿ ಮನೆ ಬಾಗಿಲಿಗೇ ಬರುವ ವ್ಯವಸ್ಥೆ ಮೂರು ತಿಂಗಳಲ್ಲಿ ಜಾರಿಗೆ ಬರಲಿದೆ ಎಂದರು.

ಮನೆ ಬಾಗಿಲಿಗೆ ಮರಳು ಲಾರಿ ಬಂದಾಗ ಅದರ ಸಾರಿಗೆ ವೆಚ್ಚ ಮತ್ತು ಬಾಡಿಗೆಯನ್ನು ಗ್ರಾಹಕರೇ ಪಾವತಿಸ­ಬೇಕಾಗುತ್ತದೆ. ಒಂದು ವೇಳೆ ತಾವೇ ಲಾರಿ ವ್ಯವಸ್ಥೆ ಮಾಡಿಕೊಂಡರೆ ಬೆಂಗಳೂರು ಒನ್‌ ಕೇಂದ್ರದಲ್ಲಿ ಅದರ ನೋಂದಣಿ ಸಂಖ್ಯೆ ದಾಖಲಿಸಿದರೆ ಸಾಕು. ಆ ಲಾರಿಗೇ ಮರಳು ತುಂಬಿ ಕಳುಹಿಸಲಾಗು­ತ್ತದೆ. ಲಾರಿ ಇಲ್ಲ ಎಂದು ನಮೂದಿಸಿದರೆ ಮಾತ್ರ ಇಲಾಖೆ ಜತೆ ನೋಂದಣಿ ಮಾಡಿಕೊಂಡಿರುವ ಲಾರಿ­ಗಳಲ್ಲಿ ಮರಳು ಕಳುಹಿಸಲಾಗುತ್ತದೆ ಎಂದು ವಿವರಿಸಿದರು.

ಇದನ್ನು ಪ್ರಾಯೋಗಿಕವಾಗಿ ಮೈಸೂರು ಜಿಲ್ಲೆ­ಯಲ್ಲಿ ಆರಂಭಿಸು­ತ್ತಿದ್ದು, ಅದರ ಯಶಸ್ಸು ನೋಡಿ­ಕೊಂಡು ಇತರ ಕಡೆಗೂ ವಿಸ್ತರಿಸಲಾಗು­ವುದು ಎಂದರು. ಇದಲ್ಲದೆ, ಸಗಟು ಪ್ರಮಾಣದಲ್ಲಿ ಮರಳು ಸಾಗಣೆ ಮಾಡು­ವುದಕ್ಕೂ ಅವಕಾಶ ಕಲ್ಪಿಸಲಾಗಿದೆ. ಮರಳು ಸಾಗಣೆಯನ್ನೇ ವೃತ್ತಿ ಮಾಡಿಕೊಂಡಿ­ರುವವರಿಗೂ ಸ್ಟಾಕ್‌ ಯಾರ್ಡ್‌ಗಳಲ್ಲಿ  ಮರಳು ನೀಡಲಾಗು­ತ್ತದೆ. ಅಲ್ಲಿ ಕೂಡ ಒಬ್ಬರಿಗೇ ಸೇರಿದ ಲಾರಿಗಳಿಗೆ ಮರಳು ತುಂಬಲು ಬಿಡುವುದಿಲ್ಲ ಎಂದರು.

ಸುಳ್ಳು ಹೇಳ್ತಾರೆ...
ಏನಾದರೂ ಕಾನೂನು ಮಾಡಲಿ ಮೊದಲು ಮರಳು ಕೊಡಲಿ. ಸರ್ಕಾರದವರು ಬರೇ ಸುಳ್ಳು ಹೇಳುತ್ತಿದ್ದಾರೆ. ಇಡೀ ರಾಜ್ಯದಲ್ಲಿ 1000 ಲೋಡ್‌ನಷ್ಟು  ಮರಳನ್ನೂ ಕೊಟ್ಟಿಲ್ಲ. ನಕಲಿ ಪರವಾನಗಿಗಳ ಮೂಲಕ ಮರಳು ಸಾಗಣೆ ನಡೆಯುತ್ತಿದ್ದರೆ ತೋರಿಸಲಿ. ಬೆಂಗಳೂರು ಒನ್ ಕೇಂದ್ರದಲ್ಲಿ ಹಣ ಕಟ್ಟಿದ ತಕ್ಷಣ ಮರಳು ಕೊಡಲು ಇವರಿಂದ ಹೇಗೆ ಸಾಧ್ಯ ಆಗುತ್ತದೆ? ಇವೆಲ್ಲವೂ ಬೋಗಸ್‌. ಜನರನ್ನು ತಪ್ಪು ದಾರಿಗೆ ಎಳೆಯಲು ಮಾಡುತ್ತಿರುವ ಕುತಂತ್ರ. ಮರಳು ಕೊಡದೆ ಏನೇನೊ ನೆಪಗಳನ್ನು ಹೇಳುತ್ತಿದ್ದಾರೆ.

ಷಣ್ಮುಗಪ್ಪ, ಮರಳು ಲಾರಿ ಮಾಲೀಕರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT