ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ್ಡರ್ ಮಿಸ್ಟರಿಯೂ ಮನರಂಜನೆಯೂ...

Last Updated 19 ಮೇ 2016, 19:32 IST
ಅಕ್ಷರ ಗಾತ್ರ

ಪವನ್ ಕುಮಾರ್ ನಿರ್ದೇಶನದ ‘ಯೂ ಟರ್ನ್’ ಇಂದು (ಮೇ 20) ತೆರೆ ಕಾಣುತ್ತಿದೆ. ಸಂಚಾರ ದಟ್ಟಣೆಯ ಗಂಭೀರ ವಿಷಯವನ್ನು ಅವರು ಮರ್ಡರ್ ಮಿಸ್ಟರಿ ಥ್ರಿಲ್ಲರ್ ರೂಪದಲ್ಲಿ ಹೇಳಿದ್ದಾರಂತೆ. 

*‘ನಿಕೋಟಿನ್’ ಸಿನಿಮಾವನ್ನು ಕೈ ಬಿಟ್ಟು ಇದ್ದಕ್ಕಿದ್ದಂತೆ ‘ಯೂ ಟರ್ನ್’ ಸಿನಿಮಾ ಮಾಡಿದ್ದು ಏಕೆ?
‘ನಿಕೋಟಿನ್’ ಹೆಚ್ಚು ಬಜೆಟ್ ಅಗತ್ಯವಿರುವ ಸಿನಿಮಾ. ಹಣಕಾಸಿನ ಕೊರತೆಯ ಕಾರಣ ಅದಕ್ಕೆ ತಾತ್ಕಾಲಿಕ ವಿರಾಮ ನೀಡಲಾಯಿತು. ಸ್ನೇಹಿತರೊಬ್ಬರು ಒಂದು ಚಿತ್ರದ ರೀಮೇಕ್ ಬಗ್ಗೆ ಪ್ರಸ್ತಾಪಿಸಿದ್ದರು. ಅವರನ್ನು ಯಾವ ರೀತಿ ಕಥೆ ಮಾಡಿದರೆ ನಿಮಗೆ ಇಷ್ಟ ಎಂದೆ. ಥ್ರಿಲ್ಲರ್ ಎಂದರು. ಆ ಸಮಯದಲ್ಲಿ ಹುಟ್ಟಿದ್ದು ‘ಯೂ ಟರ್ನ್’.

*‘ಯೂ ಟರ್ನ್’ ಸಂಚಾರ ದಟ್ಟಣೆಯ ಬಗ್ಗೆ ಜಾಗೃತಿ ಮೂಡಿಸುತ್ತದೆಯೇ?
ನೋಡಿದವರ ಮೇಲೆ ಖಂಡಿತ ಪ್ರಭಾವ ಬೀರುತ್ತದೆ. ನಾವು ಸಂಚಾರಿ ನಿಯಮಗಳನ್ನು ಹೇಗೆ ಪಾಲಿಸಬೇಕು, ಇಲ್ಲದಿದ್ದರೆ ತೊಂದರೆ ಏನು. ಹೀಗೆ ಒಂದು ವಿವೇಚನೆಗೆ ಪ್ರೇಕ್ಷಕರನ್ನು ದೂಡುತ್ತದೆ.

*ಮರ್ಡರ್ ಮಿಸ್ಟರಿ ಸಿನಿಮಾ ಎಂದು ಹೇಳಿದ್ದೀರಿ. ಯಾವ ರೀತಿ?
‘ಲೂಸಿಯಾ’ ಚಿತ್ರಕ್ಕಿಂತ ಹೆಚ್ಚು ಥ್ರಿಲ್ ಇಲ್ಲಿದೆ. ಸಿನಿಮಾದಲ್ಲಿ ಹಾಡುಗಳು ಇಲ್ಲ. ‘ಯೂ ಟರ್ನ್’ ತೆಗೆದುಕೊಳ್ಳುವಾಗ ಎಚ್ಚರವಹಿಸದಿದ್ದರೆ ಆಗುವ ಅನಾಹುತವೇನು, ಅದರಿಂದ ಏನೆಲ್ಲಾ ಕಷ್ಟಗಳು ಎದುರಾಗಬೇಕಾಗುತ್ತದೆ ಎನ್ನುವುದನ್ನು ಚಿತ್ರಕಥೆಯಲ್ಲಿ ಹೇಳಿದ್ದೇನೆ.

ಇಲ್ಲಿಯವರೆಗೆ ನೋಡಿರುವ ಪ್ರೇಕ್ಷಕರ ಅನುಭವವನ್ನೇ ಹೇಳುವುದಾದರೆ ನಮ್ಮ ಊರಿನ ಒಂದು ಕಥೆಯನ್ನು ಸಾಕ್ಷ್ಯಚಿತ್ರದ ರೀತಿ ಸಿದ್ಧಮಾಡದೆ ಮನರಂಜನೆಯ ರೂಪದಲ್ಲಿ ನಿರ್ದೇಶಿಸಿದ್ದೇನೆ.  ಕೇವಲ ಕಥೆಯನ್ನೇ ಇಟ್ಟುಕೊಂಡು ಯಾವ ರೀತಿ ಮನರಂಜಿಸಬಹುದು ಎನ್ನುವುದನ್ನು ಇಲ್ಲಿ ಕಾಣಬಹುದು.

*ಈ ಥ್ರಿಲ್ಲರ್ ಕಥೆಯನ್ನು ಮಹಿಳಾ ಪ್ರಧಾನವಂತೆ. ಏನಿದರ ವಿಶೇಷ?
ನಾಯಕಿ ಪ್ರಮುಖ ಪಾತ್ರ ನಿರ್ವಹಿಸಿದರೆ ಕಥೆಗೆ ನ್ಯಾಯ ಸಲ್ಲುತ್ತದೆ ಅನ್ನಿಸಿತು. ಚಿತ್ರದಲ್ಲಿ ನಾಯಕ ಇಲ್ಲ. ರಾಧಿಕಾ ಚೇತನ್, ಶ್ರದ್ಧಾ ಪ್ರಮುಖ ಪಾತ್ರಗಳು.

*ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚು. ಮೇಲ್ಸೇತುವೆ ಬಳಸಿಕೊಂಡು ಚಿತ್ರೀಕರಣ ನಡೆಸಿದ್ದು ಕಷ್ಟವಾಯಿತೆ?
ಹೌದು. ನಮಗೆ ಚಿಂತೆಯಾಗಿದ್ದೇ ಮೇಲ್ಸೇತುವೆಯಲ್ಲಿ ಚಿತ್ರೀಕರಣ ನಡೆಸುವುದು. ಈ ಹಿಂದಿನ ಬೆಂಗಳೂರು ನಗರ ಸಂಚಾರ ವಿಭಾಗದ ಆಯುಕ್ತರಾಗಿದ್ದ ಸಲೀಂ ಅವರಿಗೆ ಈ ಕಥೆ ಮತ್ತು ಸಿನಿಮಾದ ಬಗ್ಗೆ ಹೇಳಿದೆವು. ಅವರು ಎಲ್ಲ ರೀತಿಯ ಅನುಮತಿ ಕೊಡಿಸಿದರು.

ಬೆಳಿಗ್ಗೆ ಚಿತ್ರೀಕರಣದ ಸಮಯದಲ್ಲೂ ಸಂಚಾರ ನಿಯಂತ್ರಿಸಿ ಅನುಕೂಲ ಮಾಡಿಕೊಟ್ಟರು. ಜನರಿಗೆ ಒಳ್ಳೆಯ ವಿಷಯವನ್ನು ಮುಟ್ಟಿಸುತ್ತೇವೆ ಎನ್ನುವುದೇ ಅವರ ಸಹಕಾರಕ್ಕೆ ಕಾರಣ. ಕೆ.ಎಚ್‌. ರಸ್ತೆಯ ಮೇಲ್ಸೇತುವೆಯಲ್ಲಿ ಚಿತ್ರೀಕರಣ ಮಾಡಿದ್ದೇವೆ.

*ಚಿತ್ರವನ್ನು ನೆರೆಯ ಭಾಷೆಗಳಿಗೆ ಕೊಂಡೊಯ್ಯವ ಮಾತುಕತೆಗಳು ಎಲ್ಲಿಗೆ ಬಂದವು?
ತೆಲುಗು ಮತ್ತು ತಮಿಳಿನಲ್ಲಿ, ಸಮಂತಾ ನಾಯಕಿಯಾಗಿ ಅಭಿನಯಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ.

*ಒಂದು ಗಂಭೀರ ವಿಷಯ ಎತ್ತಿಕೊಂಡಿದ್ದೀರಿ. ಜನ ಸ್ವೀಕರಿಸುವ ನಂಬಿಕೆ ಇದೆಯಾ?
‘ಲೂಸಿಯಾ’ ಹ್ಯಾಂಗೋವರ್‌ನಲ್ಲಿ ಇರುವವರಿಗೆ ಇದನ್ನು ನೋಡಿದಾಗ ಮತ್ತಷ್ಟು ಕಿಕ್ ಸಿಕ್ಕುತ್ತದೆ. ‘ಲೂಸಿಯಾ’ ಕಾರಣದಿಂದ ನನ್ನ ಬಗ್ಗೆ ನಿರೀಕ್ಷೆ ಹೊತ್ತವರು ಆ ಚಿತ್ರದಿಂದ ಹೊರ ಬಂದು ‘ಯೂ ಟರ್ನ್’ ನೋಡಿದರೆ ಹೆಚ್ಚು ಖುಷಿಯಾಗುತ್ತಾರೆ. ಇಲ್ಲಿ ಯಾವುದೇ ಸಂದೇಶ, ಉಪದೇಶಗಳು ಇಲ್ಲ. ಚಿತ್ರದಿಂದ ಏನನ್ನು ತೆಗೆದುಕೊಂಡು ಹೋಗಬೇಕು ಎನ್ನುವುದು ಪ್ರೇಕ್ಷಕರ ಭಾವಕ್ಕೆ ಬಿಟ್ಟದ್ದು. ‘ಲೂಸಿಯಾ’ಕ್ಕಿಂತ ಇಲ್ಲಿ ವೇಗವಿದೆ.

*‘ಜಂಗಲ್ ಬುಕ್’ ತೆರೆಕಂಡ ಸಮಯದಲ್ಲಿ ಡಬ್ಬಿಂಗ್ ಬಗ್ಗೆ ಪ್ರಸ್ತಾಪ ಮಾಡಿದ್ದಿರಿ. ನಿಮ್ಮ ಸಿನಿಮಾ ಬಿಡುಗಡೆ ಸಮೀಪದಲ್ಲಿದ್ದ ಕಾರಣ ಇದು ಪ್ರಚಾರದ ಭಾಗ ಎನ್ನುವ ಆರೋಪವೂ ಕೇಳಿಬಂತು?
ಇದಕ್ಕೆ ಏನು ಹೇಳುವುದು ಗೊತ್ತಿಲ್ಲ. ಅದು ಕಾಕತಾಳೀಯ. ಆ ರೀತಿ ಅರ್ಥ ಮಾಡಿಕೊಂಡರೆ ನಾನೇನೂ ಮಾಡಲು ಸಾಧ್ಯವಿಲ್ಲ.                              

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT