ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಿನ ಮನಸ್ಸಿನ ಸ್ವಚ್ಛತೆ ಯಾವಾಗ?

Last Updated 29 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಭಾರತೀಯ ಸಮಾಜದಲ್ಲಿ ಹೊಲಸು ಮತ್ತು ಸ್ವಚ್ಛತೆಯ ಬಗ್ಗೆ ಬಹಳ ಪೂರ್ವಗ್ರಹಗಳಿವೆ. ಅನೇಕ ಜಾತಿಗಳು ಹೊಲಸಿಗೆ ಸಂಬಂಧಿಸಿದ ಪಟ್ಟಿಯಲ್ಲಿ ಸಿಲುಕಿವೆ. ಹಾಗೆಯೇ ತಮ್ಮನ್ನು ಸ್ವಚ್ಛವೆಂದು ಭಾವಿಸುವ ಜಾತಿಗಳೂ ಸಾಕಷ್ಟಿವೆ. ಅಸ್ಪೃಶ್ಯತೆಯು ಹೊಲಸು ಮಾನದಂಡದಿಂದಲೇ ರೂಢಿಯಾದದ್ದು. ‘ಹೊಲಸು ತಿಂಬುವವನೆ ಹೊಲೆಯ’ ಎಂಬ ಮಾತೇ ಇದೆ.

ಯಾವುದು ಸ್ವಚ್ಛ? ಯಾವುದು ಹೊಲಸು? ಎಂಬ ಸಂಗತಿಗಳನ್ನು ಅವರವರ ಮೂಗಿನ ನೇರಕ್ಕೆ ಅರ್ಥೈಸಿ­ಕೊಳ್ಳ­ಲಾಗಿದೆ. ಗಾಂಧೀಜಿ ಅವರು ಹೇಳಿದ್ದ ಸ್ವಚ್ಛತೆಯ ಪರಿ­ಕಲ್ಪನೆ ಮಾನವನ ಘನತೆಯನ್ನು ಎತ್ತಿ ಹಿಡಿಯುವಂಥದ್ದು. ನಾವು ಮಾಡಿದ ಹೊಲಸನ್ನು ನಾವೇ ತೊಳೆದುಕೊಳ್ಳಬೇಕು ಎಂಬುದರ ಹಿಂದೆ ವಿಶಾಲವಾದ ಅರ್ಥಗಳಿವೆ. ಹೊಲಸು ಎತ್ತಲಿಕ್ಕಾಗಿಯೇ ಕೆಲವು ಜಾತಿಗಳನ್ನು ನೇಮಿಸಿಕೊಳ್ಳುವುದರ ಹಿಂದಿರುವ ಹೇಸಿಗೆಯ ಮನಸ್ಸಿನ ಬಗ್ಗೆ ಗಾಂಧೀಜಿ ಅವರಿಗೆ ತುಂಬ ಪಾಪಪ್ರಜ್ಞೆಯಿತ್ತು.

ಅಂಬೇಡ್ಕರ್, ಜಾತಿ ವ್ಯವಸ್ಥೆಯ ಹೊಲ­ಸನ್ನು ಇಡೀ ಭಾರತದ ಮನಸ್ಸಿನಿಂದ ಹೇಗೆ ತೊಡೆದು ಹಾಕ­ಬೇಕೆಂದು ಹೋರಾಡಿದರು. ಆ ಹೇಸಿಗೆಯ ವಿಚಾರ­ಗ­ಳನ್ನು ಸ್ವಚ್ಛಗೊಳಿಸಲು ಮಾಡಿದ ಅಂಬೇಡ್ಕರ್ ಅವರ ಹೋರಾ­ಟದ ಕಾಯಕದಿಂದ ಭಾರತಕ್ಕೆ ಸ್ವಚ್ಛ ಸಂವಿಧಾನ ಸಾಧ್ಯವಾಯಿತು.

ಮನಸ್ಸಿನಲ್ಲಿ ಮಡುಗಟ್ಟಿರುವ ಹೊಲಸನ್ನು ತೊಳೆದು­ಕೊಳ್ಳ­ದಿ­ದ್ದರೆ ಉಳಿದ ಯಾವ ಇತರೆ ಸ್ವಚ್ಛತೆಗಳಿಗೆ ಅರ್ಥವಿರುವುದಿಲ್ಲ. ಹಳ್ಳಿಗಳು ನೋಡಲಿಕ್ಕೆ ಹೊಲಸಾಗಿ ಕಾಣುತ್ತಿದ್ದವು ನಿಜ; ಆದರೆ ಅವರ ಕಾಯಕ ಬಹಳ ಶುದ್ಧವಾಗಿತ್ತು. ಅಭಿವೃದ್ಧಿಯ ಮಾಯಾಜಿಂಕೆಯ ಬೆನ್ನಟ್ಟಿರುವ ದಾರಿಯಲ್ಲಿ ಉತ್ಪಾದನೆ­ಯಾಗುತ್ತಿರುವ ರಾಶಿರಾಶಿ ಕಸವನ್ನು ಹಿಂದಿನ ಹಳ್ಳಿಗಳು ಮಾಡಿ­­ರಲಿಲ್ಲ. ಮಹಾನಗರಗಳ ಕಸಕ್ಕೀಗ ಹಳ್ಳಿಗಳು ಬಲಿ­ಯಾಗು­ತ್ತಿವೆ. ಆಧುನಿಕತೆ ಹೆಚ್ಚಿದಂತೆಲ್ಲ ಸುಶಿಕ್ಷಿತರ ಮನದೊಳಗೆ ಅಸಾಧ್ಯ ಕಸ ಬೆಳೆಯುತ್ತಿದೆ.

ಕಸವನ್ನೇ ಬೆಳೆ ಎಂದು ಬೀಗುವುದಾದರೆ ಮುಂದಿನ ಪೀಳಿಗೆಗೆ ನಿಜಕ್ಕೂ ಭಾರತದಲ್ಲಿ ಸ್ವಚ್ಛತೆಯ ಸಮಾಜ ಬರಲು ಸಾಧ್ಯವೇ? ಲೂಟಿಯೂ ಒಂದು ಹೊಲಸಲ್ಲವೆ, ಹೇಸಿಗೆಯಲ್ಲವೆ? ಈ ಹೊಲಸನ್ನು ಯಾರು ತೊಳೆಯಬೇಕು? ನಿಜವಾದ ಸ್ವಚ್ಛತೆ ಎಂದರೆ ಯಾವುದು? ಗಾಂಧೀಜಿ ಹೇಳಿದ ಸರಳತೆಯ ಸ್ವಚ್ಛತೆ ಈಗಿನವರಿಗೆ ಅರ್ಥವಾಗುತ್ತಿದೆಯೇ? ‘ಹಿಂದ್ ಸ್ವರಾಜ್’ ಮೂಲಕ ಗಾಂಧಿ ಹೇಳುವ ನೈತಿಕತೆಯ ಅಭಿವೃದ್ಧಿಯ ಬದ್ಧತೆ ಸರ್ಕಾರಗಳಿಗಿದೆಯೆ?

ಇಷ್ಟು ಕಾಲದ ತನಕ ಭೌತಿಕವಾಗಿಯೂ ಮಾನಸಿಕ ವಾಗಿಯೂ ಜಾತಿನಿಷ್ಠ ಸಮಾಜಗಳ ಕೊಳೆಯನ್ನು ತೊಳೆದ ದಲಿತರಿಗೆ ಸಿಕ್ಕಿರುವ ಗೌರವವಾದರೂ ಏನು? ಈಗಲೂ ಮಲ ಹೊರುವವರು ಮಲ ಹೊರುತ್ತಲೇ ಇದ್ದಾರೆ. ಯಾರಾದರೂ ಮಹಾತ್ಮರೆಂದುಕೊಳ್ಳುವ ಸ್ವಾಮೀಜಿಗಳು ಕನಿಷ್ಠ ಒಂದು ಬಾರಿ­ಯಾದರೂ ಮಲಹೊತ್ತು ಮಲ ಹೊರುವ ದಲಿತರಿಗೆ ನೈತಿಕ ಸಾಂತ್ವನ ನೀಡಿರುವುದು ಉಂಟೆ? ಇಷ್ಟು ಕಾಲವೂ ಮಹಿಳೆ­ಯರು ಮನೆ ಮಂದಿಯ ಎಂಜಲು ಎತ್ತಿ, ಮಕ್ಕಳ ಮಲಮೂತ್ರ ತೊಳೆದು ಮನೆಯ ಕಸವನ್ನೆಲ್ಲ ಗುಡಿಸಿ ಬೀದಿ ಬೀದಿಗಳ ಕಸ­ದಂತೆಯೇ ಬದುಕಿದ್ದಾರಲ್ಲಾ... ಇವರಾರೂ ಈತನಕ ಭಾರತ ಮಾತೆಯನ್ನು ಸ್ವಚ್ಛಗೊಳಿಸಲೇ ಇಲ್ಲವೇ?

ಇವರ ಬಾಳನ್ನು ಯಾರು ಸ್ವಚ್ಛಗೊಳಿಸಬೇಕು? ಭಾರತದ ಬಹುಪಾಲು ಸಮಾಜ­ಗಳನ್ನು ತಿಪ್ಪೆ ಕಸದಂತೆ ಮಾಡಿ ಅವುಗಳ ಮೇಲೆ ನಿತ್ಯವೂ ಸಾಮಾ­ಜಿಕ ಶಾಪಗಳ ಕಸವನ್ನು ಸುರಿಯುತ್ತಲೇ ಬರಲಾಗಿದೆ­ಯಲ್ಲಾ... ಇದನ್ನು ತಡೆಯುವವರು ಯಾರು? ಬರಿದೆ
ಬೀದಿ­ಗಳನ್ನು ಗುಡಿಸಿ ಅದನ್ನೊಂದು ರಾಷ್ಟ್ರೀಯ ಆಂದೋಲನ ಎಂದು ಬೀಗುವುದು ತರವೆ?

ಮೊನ್ನೆ ತಮ್ಮ ಊರಿನ ಒಂದು ಘಟನೆಯನ್ನು ಮಿತ್ರ­ರೊಬ್ಬರು ವಿವರಿಸಿದರು. ಅವರ ಹಳ್ಳಿಗೆ ಸ್ವಚ್ಛತಾ ಅಭಿಯಾನದ ಕಾರ್ಯಕರ್ತರು ಹೋಗಿದ್ದರು. ಅವರು ಸ್ವಚ್ಛತಾ ಕಾರ್ಯಕ್ಕೆ ಆಯ್ದುಕೊಂಡದ್ದು ದಲಿತರ ಕೇರಿಯನ್ನು. ಊರಿದ್ದಲ್ಲಿ ಹೊಲ­ಗೇರಿ ಎಂಬ ಮಾತಿದೆಯಲ್ಲಾ; ಅಂದರೆ ಊರಿದ್ದಲ್ಲಿ ಹೊಲಸು ಇದೆ ಎಂಬ ಅರ್ಥದಲ್ಲಿ ಆ ಸ್ವಯಂ ಸೇವಕರು ಯುವ ದಲಿತರ ಜೊತೆ ಸೇರಿ ಕಸ ಗುಡಿಸಿದರು. ಅಯ್ಯೋ ದೊಡ್ಡವರೇ ಬಂದು ಕಸ ಗುಡಿಸುತ್ತಿದ್ದಾರೆ ಎಂದು ದಲಿತರು ಮುಂದಾಗಿ ಸಾರಿಸಿ ಗುಡಿಸಿ ಸ್ನಾನ ಮಾಡಿದರು.

ಆದರೆ  ಮರುದಿನವೆ ಆ ಕಾರ್ಯ­ಕರ್ತ ಸ್ವಯಂಸೇವಕರು ದಲಿತ ಯುವಕರಿಗೆ ತಮ್ಮ ಯೂನಿ­ಫಾರಂ ತೊಡಿಸಿ ಅವರ ನಾಯಕರ ಫೋಟೊಗಳನ್ನು ಮನೆ­ ಯ­ಲ್ಲಿ­ಟ್ಟುಕೊಳ್ಳಲು ಕೊಟ್ಟು,  ‘ಇನ್ನು ಮುಂದೆ ಮಾಂಸ ತಿನ್ನುವು­ದನ್ನು ನಿಲ್ಲಿಸಿ’ ಎಂದು ಬೋಧಿಸಿ ಹೋದರಂತೆ. ಇದು ದಲಿತರ ಮುಗ್ಧತೆಯನ್ನು ಹೊಲಸಾಗಿಸುವ ಕೆಲಸ ಅಲ್ಲವೆ? ದಲಿತರ ಪ್ರಜ್ಞೆಯಾದ ಅಂಬೇಡ್ಕರ್ ಅವರ ವಿಚಾರಗಳನ್ನು ಅಪ್ರಸ್ತುತಗೊಳಿಸುವುದಲ್ಲವೆ? ಗಾಂಧೀಜಿ ಹೇಳಿದ್ದು ಈ ಬಗೆಯ ಸ್ವಚ್ಛ­ತೆಯ ಅಭಿಯಾನವೇ? ಕಸದಲ್ಲಿ ಮುಳುಗಿ ಹೋಗಿರುವ­ವರನ್ನು ಮೇಲೆತ್ತುವ ಕಾಯಕವೇ ಇದು? ಸ್ವಚ್ಛತೆಯು ಆಗಬೇಕಾದ ರೀತಿಯಲ್ಲಿ ಆಗಬೇಕು. ತೊಳೆದುಕೊಳ್ಳುವುದನ್ನು ರಾಜಕೀಯ ಮಾಡುವ ಮಟ್ಟಕ್ಕೆ ಪ್ರಜಾಪ್ರಭುತ್ವವನ್ನು ಬಳಸಲಾಗುತ್ತಿ­ದೆಯೆ?

ಗಾಂಧೀಜಿ ಬಯಸಿದ್ದು ಬಹಿರಂಗದ ಶುದ್ಧಿಯನ್ನು. ಅಂಬೇಡ್ಕರ್ ಆಗ್ರಹಿಸಿದ್ದು ವಿವೇಕದ ಶುದ್ಧಿಯನ್ನು. ಇವೆರಡೂ ಮಾನವತ್ವಕ್ಕೆ ಸಂಬಂಧಪಟ್ಟವು. ಹಾಗೆಯೇ ಆತ್ಮಶುದ್ಧಿಯ ಗುಣಗಳು ಇವರಿಬ್ಬರ ಸ್ವಚ್ಛತೆಯ ವಿಚಾರಗಳಿಗಿವೆ. ‘ಸ್ವಚ್ಛವಾದ ಮನಸ್ಸೇ ಬೆಳಕು’ ಎಂಬುದು ಬುದ್ಧತತ್ವದ ಸಂದೇಶ. ಸಾಂಪ್ರ­ದಾಯಿಕ ದುಡಿಮೆಗಳಲ್ಲಿ ತೊಡಗಿರುವ ಅನೇಕ ಸಮುದಾಯ­ಗಳು ಈಗಲೂ ಸ್ವಚ್ಛತೆಯ ಕೆಲಸಗಳಲ್ಲಿ ತೊಡಗಿವೆ. ಮಡಿವಾ­ಳರು ಬಟ್ಟೆ ತೊಳೆಯುತ್ತಲೇ ಇದ್ದಾರೆ.

ಕ್ಷೌರಿಕರು ಕ್ಷೌರ ಮಾಡು­ತ್ತಲೇ ಇದ್ದಾರೆ. ಸತ್ತ ಪ್ರಾಣಿಗಳ ಎತ್ತಿ ಹಸನು ಮಾಡು ವವರು ಅದನ್ನೇ ಮಾಡುತ್ತಿದ್ದಾರೆ. ಜಾಡಮಾಲಿಗಳು, ಭಂಗಿ­ಗ­ಳಂತೂ ಹುಟ್ಟುತ್ತಲೇ ಆ ಕಾಯಕದಲ್ಲಿ ತೊಡಗಿದ್ದಾರೆ. ಭಾರತ­ವನ್ನು ಸ್ವಚ್ಛಗೊಳಿಸುವುದೇ ಘನ ಉದ್ದೇಶವಾಗಿದ್ದರೆ, ಮೊದಲು ಸನಾತನ ಕೊಳೆಯನ್ನು ತೊಳೆಯಿರಿ. ಮೌಢ್ಯಗಳ ಮನದ ಕಸದ ರಾಶಿಯನ್ನು ಅವರವರೇ ವಿಲೇವಾರಿ ಮಾಡಿ­ಕೊಳ್ಳಲು ಕಡ್ಡಾಯ ಕಾನೂನು ಕ್ರಮವನ್ನು ಜಾರಿಗೊಳಿಸಿ. ಸ್ವಚ್ಛ ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಮಾನವೀಯ ತತ್ವಗಳನ್ನು ಪಾಲಿಸಿ.

ಇಪ್ಪತ್ತೊಂದನೇ ಶತಮಾನದ ಯುವ ಜನಾಂಗದ ಮನಸ್ಸು ಅತ್ತ ಪಶ್ಚಿಮ ಇತ್ತ ಭಾರತದ ತಾಕಲಾಟದಲ್ಲಿದೆ. ಯುವ ಜನಾಂಗದ ಆಧುನಿಕ ಮನಸ್ಸಿನಲ್ಲೂ ಕೊಳೆ ಆವರಿಸಿಕೊಳ್ಳು­ತ್ತಿದೆ. ಅತ್ತ ಆಧುನಿಕತೆಯ ಕೊಳೆ; ಇತ್ತ ಸನಾತನ ಪರಂಪರೆಗಳ ಕೊಳೆ ಎರಡೂ ಕೂಡಿದರೆ ಭಾಗಶಃ ಮುಂದೆ ಎಂದೂ ಭಾರತ ಕೊಳೆಯಿಂದ ಪಾರಾಗುವುದೇ ಇಲ್ಲವೇನೊ. ನಿಸರ್ಗವನ್ನೇ ಕೊಳಕಾಗಿಸುವ ಪರಿಸರದಲ್ಲಿ ನಾಳಿನ ಸಮಾಜಗಳಿಗಾಗಿ ನಾವು ಅಂತಃಕರಣದ ಪರಿಸರವನ್ನು ರೂಪಿಸಬೇಕು. ಈಗಾಗಲೇ ಪರಿ­ಸರವು ಸಾಕಷ್ಟು ವಿಷವಾಗಿ ಕೃಷಿಯೂ ಹೊಲಸಾಗಿದೆ; ಉದ್ಯ-­ಮ­ಗಳೂ ಗಲೀಜಾಗಿವೆ.

ಇನ್ನು ಅಂತರ್ಜಾಲಗಳಲ್ಲಿ ಹರಿದಾಡು­ತ್ತಿರುವ ಕಸವನ್ನು ಗಮನಿಸಿದರೆ, ನಾಳಿನ ಭಾರತದ ಅಭಿವ್ಯಕ್ತಿಯ ನೈತಿಕತೆ ಯಾವ ಗುಂಡಿಗಳಲ್ಲಿ ಮುಲುಗುವುದೊ ಎಂದು ಭಯ­ವಾಗುತ್ತದೆ. ಮಾಧ್ಯಮಗಳು ‘ಕಸ’ವನ್ನು ಪ್ರಸಾರ ಮಾಡು­ತ್ತಲೇ ಇವೆ. ಈ ಕಸಗಳು ಯಾವ ಬಗೆಯ ದೇಶವನ್ನು ರೂಪಿಸಬಲ್ಲವು? ಇಂತೆಲ್ಲ ನಿಜವಾಗಿಯೂ ಶತಮಾನಗಳ ಕಾಲ ಸ್ವಚ್ಛತೆಯ ಕಾಯಕವನ್ನೇ ನಂಬಿ ಕಸದಲ್ಲಿ ರಸವೇ ಆಗಿದ್ದವರು ಹಾಗೂ ಅವರ ಮಕ್ಕಳು ಮುಂದೆ ಯಾವ ದಡ ತಲುಪುವರು? ಅಂಥವರಿಗೆಲ್ಲ ನಾಳೆಗಳು ಇವೆಯೆ?

ಸ್ವಚ್ಛತೆಯು ಬಹಳ ಮುಖ್ಯ ನಿಜ. ಯಾವುದೂ ಇಲ್ಲಿ ಹೊಲ­ಸಾಗಿರಬಾರದು. ಅದಕ್ಕಾಗಿ ಮಾಡಬಹುದಾದ ಕ್ರಮಗಳು ಸ್ವಚ್ಛ ಮನಸ್ಸಿನಿಂದಲೇ ರೂಪುಗೊಳ್ಳಬೇಕು. ಜಾತಿ ವಿನಾಶ­ಕ್ಕಂತೂ, ಲಿಂಗತಾರತಮ್ಯಗಳ ಪೂರ್ವಗ್ರಹಗಳ ನಿವಾರಣೆ­ಗಂತೂ ಸ್ವಚ್ಛ ಮನಸ್ಸು ಬೇಕೇಬೇಕು. ಆ ಮಟ್ಟಿಗೆ ಆಧುನಿಕ ಭಾರತದ ರಾಜಕಾರಣಕ್ಕೆ ಸ್ವಚ್ಛತೆಯೇ ನಿಜವಾದ ಧರ್ಮ­ವಾಗಬೇಕು. ಇದು ನಿಜವಾಗಿಯೂ ಕಸವನ್ನು ತೊಳೆಯಲು ಸರಿ­ಯಾದ ಕಾಲ. ಈ ಕಾಯಕವನ್ನು ಗಾಂಧಿ ಮತ್ತು ಅಂಬೇಡ್ಕರ್ ಸಂವೇ­ದನೆಯಲ್ಲಿ ಸ್ವತಃ ಕಸದಲ್ಲಿ ಕಸವಾಗಿರುವ ತಳ ಸಮು­ದಾಯ­­ಗಳೇ ಮಾಡಬೇಕಾಗಿದೆ. ಆಗ ಸ್ವಚ್ಛತೆಗೆ ಘನವಾದ ಅರ್ಥ ಸಾಧ್ಯ.
ಮೊಗಳ್ಳಿ ಗಣೇಶ್‌, ವಿದ್ಯಾರಣ್ಯ, ಹಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT