ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಪೆ ಬೀಚ್: ಒಂದೇ ಮಾದರಿಯ ಗೂಡಂಗಡಿ

Last Updated 3 ಮೇ 2016, 6:25 IST
ಅಕ್ಷರ ಗಾತ್ರ

ಉಡುಪಿ: ಮಲ್ಪೆ ಕಡಲ ಕಿನಾರೆಯಲ್ಲಿರುವ ಎಲ್ಲ ಗೂಡಂಗಡಿಗಳನ್ನು ತೆರವುಗೊಳಿಸಿ ಒಂದೇ ಮಾದರಿಯ ಗೂಡಂಗಡಿಗಳನ್ನು ಫೈಬರ್‌ನಲ್ಲಿ ನಿರ್ಮಾಣ ಮಾಡಿ ಅರ್ಹ ಫಲಾನುಭವಿಗಳಿಗೆ ನೀಡಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸೋಮವಾರ ನಡೆದ ಮಲ್ಪೆ ಅಭಿವೃದ್ಧಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.

3ಡಿಯಲ್ಲಿ ಗೂಡಂಗಡಿ ಮಾದರಿಯನ್ನು ಮೊದಲು ತಯಾರಿಸಿ ಅದನ್ನು ಶಾಸಕರು, ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಫಲಾನುಭವಿಗಳಿಗೆ ತೋರಿಸಿ, ಅವರಿಂದ ಒಪ್ಪಿಗೆ ಪಡೆದ ನಂತರ ಕಾರ್ಯಗತಗೊಳಿಸಿ. ಸ್ವ ಸಹಾಯ ಸಂಘದವರು ನಿರ್ವಹಣೆ ಮಾಡುವ ಶೌಚಾಲಯಗಳು ಬೆಳಿಗ್ಗೆ 6 ಗಂಟೆಗೆ ಬಾಗಿಲು ತೆರೆಯಬೇಕು. ಮಲ್ಪೆಯಲ್ಲಿ ಆಕರ್ಷಕ ಸ್ವಾಗತ ಗೋಪುರ ನಿರ್ಮಾಣ ಮಾಡಲು ಹಾಗೂ ಆಟೊ ನಿಲ್ದಾಣ ನಿರ್ಮಿಸಲು ಯೋಜನೆ ತಯಾರಿಸಿ ಎಂದು ಎಂದು ಜಿಲ್ಲಾಧಿಕಾರಿ ಡಾ. ಆರ್‌. ವಿಶಾಲ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶೌಚಾಲಯ ದುರಸ್ತಿ, ಸಿ.ಸಿ. ಟಿ.ವಿ ಕ್ಯಾಮೆರಾ ಅಳವಡಿಕೆ, ಪ್ರವಾಸಿಗರಿಗೆ ಮಾಹಿತಿ ನೀಡುವ ಕೊಠಡಿ ಹಾಗೂ ಮೂಲ ಸೌಕರ್ಯ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ಈ ವಾರಾಂತ್ಯದಲ್ಲಿ ಜಲೋತ್ಸವ ಆಯೋಜಿಸುವ ಮೂಲಕ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವ ಬಗ್ಗೆ ಯೋಚಿಸಿ ಎಂದರು.

ಮಲ್ಪೆ ಕಡಲ ತೀರದಲ್ಲಿ ಕಸ ವಿಲೇವಾರಿಗಾಗಿ ತಿಂಗಳಿಗೆ ₹500 ಸಂಗ್ರಹಿಸಲು ಮಲ್ಪೆ ಅಭಿವೃದ್ಧಿ ಸಮಿತಿಗೆ ಅನುಮತಿ ನೀಡುವ ಬಗ್ಗೆ ಚರ್ಚೆ ನಡೆಯಿತು. ₹500 ಹೆಚ್ಚಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾದ ಕಾರಣ ₹250 ನಿಗದಿಪಡಿಸಲು ತೀರ್ಮಾನಿಸಲಾಯಿತು.     ಮಲ್ಪೆ ಬೀಚ್ ಬಳಿಯಿರುವ ಸ್ಮಶಾನದ ದುರಸ್ತಿಗೆ ಈಗಾಗಲೇ ಟೆಂಡರ್ ಕರೆದಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಸ್ಮಶಾನದ ಬಳಿಯಿರುವ ಜಾಗವನ್ನು ವಾಹನ ನಿಲುಗಡೆಗೆ ಬಳಸುವ ಕುರಿತು ಹಾಗೂ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡುವ ಮೂರು ದೊಡ್ಡ ಹೋರ್ಡಿಂಗ್‌ ಅಳವಡಿಸುವ ಕುರಿತು ಸಹ ಚರ್ಚೆ ನಡೆಯಿತು.

ಕೃಷ್ಣ ಮಠ ಹಾಗೂ ಮಲ್ಪೆ ಬೀಚ್‌ನಲ್ಲಿ ತಿರುಗಾಟ ನಡೆಸಲು ಎರಡು ‘ಟೂರಿಸ್ಟ್‌ ಚೀತಾ’ (ಬೈಕ್‌) ನೀಡಲಾಗಿದೆ. ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ ವಿಶಾಲ್‌ ಹೇಳಿದರು.

ಉಡುಪಿ ನಗರಸಭೆ ಪೌರಾಯುಕ್ತ ಡಿ. ಮಂಜುನಾಥಯ್ಯ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್‌ ಕುಮಾರ್‌, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ, ನಗರಸಭೆಯ ಸದಸ್ಯರಾದ ಪ್ರಶಾಂತ್ ಅಮಿನ್‌, ಯಶ್‌ಪಾಲ್‌ ಸುವರ್ಣ ಹಾಗೂ ವಿಜಯ ಕರ್ಕೇರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT