ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: 185 ಮನೆ ಭಾಗಶಃ ಕುಸಿತ

Last Updated 2 ಆಗಸ್ಟ್ 2014, 6:29 IST
ಅಕ್ಷರ ಗಾತ್ರ

ಹಾವೇರಿ: ಎರಡು ವಾರದ ಹಿಂದೆ ಬರದ ಛಾಯೆಯಲ್ಲಿದ್ದ ಹಾವೇರಿಯಲ್ಲಿ ಈಗ ಮಳೆಯ ಅಬ್ಬರ. ‘ಹುಯ್ಯೋ ಹುಯ್ಯೋ ಮಳೆರಾಯ...’ ಎಂದು ವರುಣನಿಗೆ ಪ್ರಾರ್ಥಿಸಿ ಪರವು ಮತ್ತಿತರ ಆಚರಣೆಗಳ ಮೊರೆ ಹೋದ ಜನತೆ ಈಗ ಮನೆಬಿಟ್ಟು ಹೊರಬರಲಾರದಷ್ಟು, ಹೊಲಕ್ಕೆ ಹೋಗಲು ಅಸಾಧ್ಯ ಎನ್ನುವಂತೆ ಮಳೆಯ ನರ್ತನ ಮುಂದುವರಿದಿದೆ. ಗುರುವಾರ ರಾತ್ರಿ 185 ಮನೆಗಳು ಭಾಗಶಃ ಕುಸಿದಿದ್ದು, ಒಂದು ಜಾನುವಾರು ಮೃತಪಟ್ಟಿದೆ.

ಹಾವೇರಿ–65, ಹಿರೇಕೆರೂರು–55, ರಾಣೆಬೆನ್ನೂರು–23, ಬ್ಯಾಡಗಿ–15, ಸವಣೂರು– 15, ಹಾನಗಲ್‌–9 ಹಾಗೂ ಶಿಗ್ಗಾವಿ–3 ಸೇರಿದಂತೆ ಒಟ್ಟು 185 ಮನೆಗಳು ತಾಲ್ಲೂಕಿನಲ್ಲಿ ಭಾಗಶಃ ಕುಸಿದು ಬಿದ್ದಿವೆ. ಹಿರೇಕೆರೂರಿನ ಕೆಂಚೂರಿನಲ್ಲಿ ರಾಮಪ್ಪ ದೊಡ್ಡಮನಿ ಎಂಬವರ ಕೊಟ್ಟಿಗೆ ಕುಸಿದು ಬಿದ್ದು ಜಾನುವಾರು ಮೃತಪಟ್ಟಿದೆ. ನಗರದ ಪುರಸಿದ್ಧರ ಓಣಿಯಲ್ಲಿ ಎರಡು ಬೈಕ್‌ಗಳಿಗೆ ಹಾನಿಯಾಗಿವೆ.

ಜಿಲ್ಲೆ ಹಾಗೂ ಶಿವಮೊಗ್ಗದಲ್ಲಿ ಸುರಿಯುತ್ತಿರುವ ಮಳೆಯ ಪರಿಣಾಮ  ತುಂಗಭದ್ರಾ, ವರದಾ, ಕುಮುದ್ವತಿ ಹಾಗೂ ಧರ್ಮಾ ನದಿಗಳು ಸೇರಿದಂತೆ ಹಳ್ಳಗಳೆಲ್ಲ ತುಂಬಿ ಹರಿಯುತ್ತಿವೆ. ಜಿಲ್ಲೆಯಲ್ಲಿ ಒಟ್ಟು 280 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಈ ಪೈಕಿ ಸವಣೂರಿನಲ್ಲಿ ಸುಮಾರು 200, ಹಿರೇಕೆರೂರು ಸುಮಾರು 80 ಹೆಕ್ಟೇರ್ ಬೆಳೆಹಾನಿ ವರದಿಯಾಗಿದೆ.

ಹಿರೇಕೆರೂರು ತಾಲ್ಲೂಕಿನ ಮಾಸೂರ ಗ್ರಾಮದ ತಿಪ್ಪಾಯಿಕೊಪ್ಪದಲ್ಲಿನ ಬಾಗಲಕೋಟೆ– ಬಿಳಿರಂಗನಬೆಟ್ಟ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಸೇತುವೆ ಮುಳುಗಿ ಸಂಚಾರ ಸ್ಥಗಿತಗೊಂಡಿದೆ. ಹಲವೆಡೆ ವಿದ್ಯುತ್‌ ಕಂಬಗಳು ಬಿದ್ದಿದ್ದು, ವಿದ್ಯುತ್‌ ಸಂಪರ್ಕ ಕೈ ಕೊಟ್ಟಿವೆ.

ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಶುಕ್ರವಾರ ಬೆಳಿಗ್ಗೆ 10ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಸುರಿದ ಮಳೆಯ ವಿವರ ಇಂತಿವೆ. ಬ್ಯಾಡಗಿ–49, ರಾಣೆಬೆನ್ನೂರು–39.4, ಹಾವೇರಿ–35, ಹಿರೇಕೆರೂರು–35, ಹಾನಗಲ್‌–28, ಶಿಗ್ಗಾವಿ–5.4, ಸವಣೂರು–4.8 ಮಿಲಿ ಮೀಟರ್‌ ಮಳೆಯಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ ಸರಾಸರಿ 28.1 ಮಿ.ಮೀ ಮಳೆಯಾಗಿದೆ.

ತಿಪ್ಪಾಯಿಕೊಪ್ಪ: ಸಂಚಾರ ಸ್ಥಗಿತ
ಹಿರೇಕೆರೂರ: ಕುಮುದ್ವತಿ ನದಿ ತುಂಬಿ ಹರಿಯುತ್ತಿರುವ ಪರಿಣಾಮ ತಾಲ್ಲೂಕಿನ ತಿಪ್ಪಾಯಿಕೊಪ್ಪ ಗ್ರಾಮದ ಸಮೀಪ ಮಾಸೂರು- ಶಿಕಾರಿಪುರ ರಾಜ್ಯ ಹೆದ್ದಾರಿಯ ಸೇತುವೆ ಮುಳುಗಿ ಸಂಚಾರ ಸ್ಥಗಿತಗೊಂಡಿದೆ.

ಬೆಳಿಗ್ಗೆಯಿಂದಲೇ ನದಿ ಹರಿವಿನ ಪ್ರಮಾಣ ಹೆಚ್ಚಿತ್ತು. ಕ್ರಮೇಣ ನೀರಿನ ಮಟ್ಟ ಸೇತುವೆ ಮೇಲೆ 2 ಅಡಿಗಿಂತ ಮೀರಿತು. ಕೂಡಲೇ  ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ  ಸಂಚಾರ ಸ್ಥಗಿತಗೊಳಿಸಿದರು. ಇದರಿಂದ ತಾಲ್ಲೂಕಿನ ದೋಣಿಸಾಲು ಭಾಗದ 20ಕ್ಕೂ ಅಧಿಕ ಹಳ್ಳಿಗಳು ಹಾಗೂ ಶಿಕಾರಿಪುರ ತಾಲ್ಲೂಕಿನ ಹಳ್ಳಿಗಳು ರಸ್ತೆಯ ನೇರ ಸಂಪರ್ಕವನ್ನು ಕಡಿದುಕೊಂಡಿತು. ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.  ಸ್ಥಳಕ್ಕೆ ಶಾಸಕ ಯು.ಬಿ. ಬಣಕಾರ, ತಹಶೀಲ್ದಾರ್ ಶಕುಂತಲಾ ಚೌಗಲಾ, ಪೊಲೀಸ್‌ ವೃತ್ತ ನಿರೀಕ್ಷಕ ಯೋಗೇಶ ಎಸ್.ಟಿ. ಭೇಟಿ ನೀಡಿ ಪರಿಶೀಲಿಸಿದರು.

ತುಂಬಿದ ತುಂಗಭದ್ರಾ, ಕುಮುದ್ವತಿ
ರಾಣೆಬೆನ್ನೂರು: ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ತುಂಗಭದ್ರಾ ಹಾಗೂ ಕುಮುದ್ವತಿ ನದಿಗಳ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತಾಲ್ಲೂಕಿನ ನದಿ ತೀರದ ಮಾಕನೂರು, ಮುಷ್ಟೂರು, ಬೇಲೂರು, ಮುದೇನೂರು, ಐರಣಿ, ಮೆಡ್ಲೇರಿ, ಕುಪ್ಪೇಲೂರು ಹಾಗೂ ಚಂದಾಪುರ, ಚೌಡಯ್ಯದಾನಪುರ ಸೇರಿದಂತೆ ಇನ್ನೂ ಅನೇಕ ಗ್ರಾಮಗಳು ಪ್ರವಾಹದ ಭೀತಿಯಲ್ಲಿವೆ.

ಗುರುವಾರ ರಾತ್ರಿ ಒಮ್ಮಿಂದಲೇ ತುಂಗಭದ್ರಾ ನದಿಯ ನೀರಿನ ಪ್ರಮಾಣ ಹೆಚ್ಚಾಗಿದ್ದು, ರೈತರ ಪಂಪ್  ಸೆಟ್‌ಗಳು, ಯಂತ್ರಗಳು, ಬೋರ್ಡ್‌ಗಳು   ಸಂಪೂರ್ಣ ಜಲಾವೃತಗೊಂಡಿವೆ.

ತಾಲ್ಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ರೈತರ ಹೊಲಗಳು ಭಾಗಶ: ಜಲಾವೃತಗೊಂಡಿವೆ. ನೀರಿನ ಪ್ರಮಾಣ ಇದೇ ರೀತಿ ಮುಂದುವರಿದರೆ ನದಿ ತೀರದ ಗ್ರಾಮಗಳ ರಸ್ತೆ ಸಂಪರ್ಕವು ಕಡಿತಗೊಳ್ಳಲಿದೆ. ಮುಂಜಾಗೃತಾ ಕ್ರಮವಾಗಿ ತಾಲ್ಲೂಕಿನ ಮುಷ್ಟೂರು, ಮಾಕನೂರು, ಕುಪ್ಪೇಲೂರು ಗ್ರಾಮಗಳಲ್ಲಿ ಗಂಜಿಕೇಂದ್ರವನ್ನು ತೆರೆಯಲು ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ನದಿ ತೀರದ ಜನತೆ ಮುಂಜಾಗೃತವಾಗಿ ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ತಹಶೀಲ್ದಾರ್‌ ಕೆ.ಶಿವಲಿಂಗು ತಿಳಿಸಿದ್ದಾರೆ.

ನಗರ ಹಾಗೂ ಗ್ರಾಮೀಣ ಭಾಗಗಳು ಸೇರಿದಂತೆ ೩೦ಕ್ಕೂ ಅಧಿಕ ಮನೆಗಳು ಭಾಗಶ ಬಿದ್ದಿವೆ ಎಂದರು.
ನಗರದ 9ನೇ ವಾರ್ಡಿನ ಕರಡೇರ ಓಣಿ ಮತ್ತು ಬದ್ನಿಕಾಯಿ ಓಣಿಯಲ್ಲಿ ಚಂದ್ರಕಾಂತ್ ಬಣಕಾರ, ಕೊಟ್ರೇಶ ಹನುಮಸಾಗರ, ಚಿದಾನಂದಪ್ಪ ಹೊನ್ನತ್ತಿ ಅವರ ಮನೆಗಳು ಭಾಗಶ ಕುಸಿದಿವೆ.

ಆನಿಶೆಟ್ಟರ್‌ ಓಣಿಯಲ್ಲಿ ಗದಿಗೆಯ್ಯ ರುದ್ರಯ್ಯ ನೀರಲಗಿಮಠ ಅವರ ಮನೆಯ ಆವರಣದ ಸುತ್ತಲೂ ಮಳೆ ನೀರು ಆವರಿಸಿಕೊಂಡಿದೆ. ನೀರನ್ನು ಬೇರೆ ಕಡೆ ಸಾಗಿಸಲು ನಗರಸಭೆ ಪೌರಾಯುಕ್ತರಿಗೆ ಶುಕ್ರವಾರ ಮನವಿ ಸಲ್ಲಿಸಿದ್ದಾರೆ.

ರಟ್ಟೀಹಳ್ಳಿ: ಸೇತುವೆ ಮುಳುಗಡೆ
ರಟ್ಟಹಳ್ಳಿ : ಸಮೀಪದ ಯಲಿವಾಳ ಸೇತುವೆ ಶುಕ್ರವಾರ ಕುಮುದ್ವತಿ ನದಿ ಪ್ರವಾಹದಲ್ಲಿ ಮುಳುಗಿದ ಕಾರಣ ಸಾರ್ವಜನಿಕರು ಶುಕ್ರವಾರ ಪಟ್ಟಣದಲ್ಲಿ ನಡೆಯುವ ಸಂತೆಗೆ ಬರಬೇಕಾದವರು ಪರದಾಡಬೇಕಾಯಿತು.

ಗುರುವಾರ ರಾತ್ರಿಯಿಂದಲೇ ನದಿಯಲ್ಲಿ ಪ್ರವಾಹ ಉಂಟಾಗಿ ಸೇತುವೆ ಮುಳುಗಿದೆ. ಚಪ್ಪರದಹಳ್ಳಿ ಗ್ರಾಮಸ್ಥರೂ ಇದೇ ಮಾರ್ಗವಾಗಿ ಬರಬೇಕಾದ ಕಾರಣ ಅವರೂ  ಸಮಸ್ಯೆಗೆ ಒಳಗಾದರು. ಕಣವಿಸಿದ್ಗೇರಿ ಗ್ರಾಮದ ಮಾರ್ಗವಾಗಿ 8 ಕಿ.ಮೀ. ಬಳಸಿಕೊಂಡು ಬಂದರೂ ತೋಟಗಂಟಿ ಬಳಿ ಹಳ್ಳ ತುಂಬಿದ ಕಾರಣ ಜನರು ಮತ್ತೆ ಪರದಾಡಿದರು.

ಮಳಗಿ ಗ್ರಾಮಸ್ಥರೂ  ನದಿ ಪ್ರವಾಹದಿಂದ ಸಂಪರ್ಕ ಕಳೆದುಕೊಂಡಿದ್ದಾರೆ. ಹಿರೇಮೊರಬ ಮತ್ತು ಚಿಕ್ಕಮೊರಬ ಗ್ರಾಮಗಳ ಮಧ್ಯೆಯ ಬ್ಯಾರೇಜು ಮುಳುಗಡೆಯಾಗಿದ್ದು ಚಿಕ್ಕಮೊರಬ ಗ್ರಾಮಸ್ಥರು ಚಾನಲ್ ದಾರಿ ಹಿಡಿದು ರಾಮತೀರ್ಥಕ್ಕೆ ಬಂದು ಪಟ್ಟಣಕ್ಕೆ ಬರಬೇಕಾದ ಪ್ರಮೇಯ ಒದಗಿ ಬಂದಿದೆ.

ಹಲವೆಡೆ ಸಂಚಾರ ಸ್ಥಗಿತ
ಅಕ್ಕಿಆಲೂರ: ಇಲ್ಲಿಗೆ ಸಮೀಪವಿರುವ ಸುರಳೇಶ್ವರ–ಹಾನಗಲ್ಲ ಮತ್ತು ಸುರಳೇಶ್ವರ–ಕುಂಟನಹೊಸಳ್ಳಿ–ಹಾನಗಲ್ಲ ರಸ್ತೆಯಲ್ಲಿ ರುವ ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ಸ್ಥಗಿತಗೊಂಡಿದೆ. ಸುತ್ತಲಿನ ಗ್ರಾಮಸ್ಥರು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಪರದಾಡುವಂತಾಗಿದೆ.

ಕಳೆದ 15–20 ದಿನಗಳಿಂದ ಈ ಪ್ರದೇಶದಲ್ಲಿ ಎಡಬಿಡದೇ ಮಳೆ ಸುರಿಯುತ್ತಿದೆ. ಜೊತೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ಭಾಗದ ರೈತರ ಜೀವನಾಡಿ ಎನಿಸಿರುವ ವರದಾ ನದಿ ನಿಧಾನವಾಗಿ ಉಕ್ಕಿ ಹರಿಯುತ್ತಿರುವ ಪರಿಣಾಮ ಇಲ್ಲಿನ ಸಣ್ಣ ಸಣ್ಣ ಸೇತುವೆಗಳು ನದಿಯಲ್ಲಿ ಮುಳುಗಿ ಹೋಗಿದ್ದು ಸಂಚಾರ ಸ್ಥಗಿತಗೊಂಡಿದೆ.

ಈ ಭಾಗದ ಸುತ್ತಲಿರುವ ಹಲವಾರು ಗ್ರಾಮಗಳಿಗೆ ಸುರಳೇಶ್ವರ–ಹಾನಗಲ್ಲ ರಸ್ತೆಯೇ ಪ್ರಮುಖ ಮಾರ್ಗ. ಇದೀಗ ರಸ್ತೆ ಮೇಲೆ ನೀರು ಹರಿಯಲಾರಂಭಿಸಿರುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರ ಸಂಚಾರ ಸ್ಥಗಿತಗೊಂಡಿದೆ.

ಅಕ್ಕಪಕ್ಕದ ಗ್ರಾಮಗಳಿಗೆ ತೆರಳುವುದು ಸಹ ಇದೀಗ ಕಷ್ಟಸಾಧ್ಯವಾಗಿದ್ದು, ಹೆಚ್ಚುವರಿಯಾಗಿ ಹಲವು ಕಿ.ಮೀ.ಗಳಷ್ಟು ದೂರವನ್ನು ಸುತ್ತಾಡಿಯೇ ತಲುಪಬೇಕಾಗಿದೆ. ಈ ಭಾಗದ ಹಳ್ಳಿಗಳ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ಹಾನಗಲ್ಲಿಗೆ ತೆರಳಲು ಪರದಾಡುವಂತಾಗಿದೆ.

ಇಲ್ಲಿಗೆ ಸಮೀಪದ ಮಲಗುಂದ ಗ್ರಾಮದಲ್ಲಿ ನೂರಾರು ಎಕರೆ ಹೊಲಗದ್ದೆಗಳು ಜಲಾವೃತಗೊಂಡಿದೆ.  ಗ್ರಾಮದಲ್ಲಿನ ಮಲಗುಂದ–ಕೂಸನೂರು ಮಧ್ಯದ ವರದಾ ನದಿಯ ಸೇತುವೆ ಅಕ್ಕಪಕ್ಕ ದಲ್ಲಿನ ಸುಮಾರು 115 ಎಕರೆ ಹೊಲಗದ್ದೆಗಳಲ್ಲಿ ನೀರು ನುಗ್ಗಿದ್ದು, ಬೆಳೆಗಳೆಲ್ಲವೂ ನೀರಿನಲ್ಲಿ ಮುಳುಗಡೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT