ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಸುರಕ್ಷತೆ ವರ್ಷದ ಆಶಯ

ರಾಷ್ಟ್ರಪತಿ ಸೇರಿದಂತೆ ಹಲವು ಗಣ್ಯರಿಂದ ಹೊಮ್ಮಿದ ಧ್ವನಿ
Last Updated 31 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಚಲಿಸುತ್ತಿದ್ದ ಬಸ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳು ಸಾಮೂಹಿಕ ಅತ್ಯಾಚಾರಕ್ಕೀಡಾಗಿ ದುರಂತ ಸಾವು ಕಂಡ ಪ್ರಕರಣ ಜಗತ್ತಿನಾದ್ಯಂತ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ, 2013ನೇ ಹೊಸ ವರ್ಷವನ್ನು `ಮಹಿಳಾ ಸುರಕ್ಷತಾ ವರ್ಷ' ವನ್ನಾಗಿ ಆಚರಿಸಬೇಕೆಂಬ ಆಶಯ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ವಲಯದಿಂದ ಹೊರಹೊಮ್ಮಿದೆ.

ನೂತನ ವರ್ಷಾಗಮನದ ಸಂದರ್ಭದಲ್ಲಿ ಹೃದಯಸ್ಪರ್ಶಿ ಸಂದೇಶ ನೀಡಿರುವ ಪ್ರಣವ್ ಅವರು, `2013ನೇ ವರ್ಷವನ್ನು ಮಹಿಳೆಯರ ಸುರಕ್ಷತೆ ಮತ್ತು ಅಭಿವೃದ್ಧಿಗೆ ಸಮರ್ಪಿಸಬೇಕು' ಎಂದು ಕರೆ ನೀಡಿದ್ದಾರೆ.

`ಬರ್ಬರ ಅತ್ಯಾಚಾರಕ್ಕೆ ಬಲಿಯಾದ ಯುವತಿಯ ಸಾವಿನ ಶೋಕವು ಇಡೀ ರಾಷ್ಟ್ರವನ್ನು ಮುಸುಕಿರುವ ಹೊತ್ತಿನಲ್ಲಿ ಹೊಸ ವರ್ಷ ಕಾಲಿಡುತ್ತಿದೆ. ಈ ಸಂದರ್ಭವನ್ನು ನಾವು ಆತ್ಮಾವಲೋಕನಕ್ಕೆ ಮೀಸಲಿಡುವ ಅಗತ್ಯವಿದೆ. ರಾಷ್ಟ್ರದಲ್ಲಿ ಮಹಿಳಾ ಸಮಾನತೆ ಹಾಗೂ ಘನತೆ ಸಾಧಿಸುವುದಕ್ಕೆ ಪೂರಕವಾಗಿ, ದುಷ್ಟ ಮನಃಸ್ಥಿತಿಯ ನಿರ್ಮೂಲನೆಗೆ ಮನಃಪೂರ್ವಕ ಪ್ರಯತ್ನ ಮಾಡಬೇಕು' ಎಂದು ಹೇಳಿದ್ದಾರೆ.

ಮೃತ ಯುವತಿಯ ಗೌರವಾರ್ಥ 2013ನೇ ಇಸವಿಯನ್ನು `ಮಹಿಳಾ ಸುರಕ್ಷಿತ ವರ್ಷ'ವನ್ನಾಗಿ ಘೋಷಿಸಬೇಕು ಎಂದು ಸಿಪಿಎಂ ರಾಜ್ಯಸಭಾ ಸದಸ್ಯೆ ಟಿ.ಎನ್.ಸೀಮಾ ಅವರೂ ಕೂಡ ತಿರುವನಂತಪುರದಲ್ಲಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಅಧಿವೇಶನ ಕರೆಯಿರಿ:  ಸ್ತ್ರೀಯರ ಮೇಲಿನ ದೌರ್ಜನ್ಯಗಳ ವಿರುದ್ಧ ಪರಿಣಾಮಕಾರಿ ಕಾಯ್ದೆ ರಚಿಸಲು ಸಂಸತ್ ವಿಶೇಷ ಅಧಿವೇಶನ ಕರೆಯಬೇಕೆಂಬ ಬೇಡಿಕೆಯನ್ನು ಪ್ರತಿಪಕ್ಷ ಬಿಜೆಪಿ ಪುನರುಚ್ಚರಿಸಿದೆ.

ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಸೂಕ್ತ ಕಾನೂನು ತಿದ್ದುಪಡಿ ಬಗ್ಗೆ ಶಿಫಾರಸು ಮಾಡುವುದಕ್ಕಾಗಿ ನೇಮಕಗೊಂಡ ನ್ಯಾಯಮೂರ್ತಿ ಜೆ.ಎಸ್. ವರ್ಮಾ ಸಮಿತಿಯು ವರದಿ ನೀಡಿದ ನಂತರ ಅಧಿವೇಶನ ಕರೆಯುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಹಣಕಾಸು ಸಚಿವ ಪಿ. ಚಿದಂಬರಂ ಸೋಮವಾರ ಹೇಳಿದ್ದಾರೆ. ಡಿ.23ರಂದು ರಚಿಸಲಾಗಿರುವ ಈ ಸಮಿತಿಗೆ ಒಂದು ತಿಂಗಳ ಒಳಗಾಗಿ ವರದಿ ನೀಡಲು ಸೂಚಿಸಲಾಗಿದೆ.

2013ನೇ ವರ್ಷವನ್ನು ಮಹಿಳಾ ರಕ್ಷಣೆ ಕಾನೂನು ಬಲಪಡಿಸಲು ಬಳಸಬೇಕು ಎಂದು ಬಿಜೆಪಿ ಸಲಹೆ ನೀಡಿದೆ. `ಹೊಸ ವರ್ಷದಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಎಲ್ಲಾ ಕಾನೂನುಗಳನ್ನು ಪುನರ್ ಪರಿಶೀಲಿಸಿ, ಕಠಿಣ ನಿಯಮ ಜಾರಿಗೊಳಿಸಬೇಕು. ಅತ್ಯಾಚಾರ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು ಅವಕಾಶ ನೀಡಬಾರದು' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಯುವತಿಗೆ ಶ್ರದ್ಧಾಂಜಲಿ ಸಲ್ಲಿಸಲು ಬಿಜೆಪಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿ, ಇಂತಹ ಪ್ರಕರಣಗಳನ್ನು ತ್ವರಿತ ನ್ಯಾಯಾಲಯಗಳಿಗೆ ಒಪ್ಪಿಸಿ ಆರು ತಿಂಗಳ ಒಳಗೆ ಪ್ರಕರಣ ಇತ್ಯರ್ಥಗೊಳಿಸಬೇಕು ಎಂದು  ಒತ್ತಾಯಿಸಿದ್ದಾರೆ.

ಅತ್ಯಾಚಾರ ವಿರೋಧಿ ಕಾನೂನುಗಳಿಗೆ ತಿದ್ದುಪಡಿ ತರಲು ಆದಷ್ಟು ಬೇಗ ಸಂಸತ್ ಅಧಿವೇಶನ ನಡೆಸಲು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಒತ್ತಾಯಿಸಿದ್ದಾರೆ.

ಅತ್ಯಾಚಾರಿಗಳಿಗೆ ಔಷಧಿ ಕೊಟ್ಟು ಪುರುಷತ್ವ ಹರಣ ಮಾಡಬೇಕು ಇಲ್ಲವೇ ಗಲ್ಲು ಶಿಕ್ಷೆ ವಿಧಿಸಬೇಕು ಎಂದೂ ಬಿಜೆಪಿ ಸಲಹೆ ನೀಡಿದೆ. `ಈ ಕುರಿತು ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು ಗೃಹ ಸಚಿವಾಲಯಕ್ಕೆ ಶಿಫಾರಸು ಸಲ್ಲಿಸಿದೆ. ಗೃಹ ಮತ್ತು ಕಾನೂನು ಸಚಿವಾಲಯಗಳಿಂದ ಅಭಿಪ್ರಾಯ ನಿರೀಕ್ಷಿಸಲಾಗಿದೆ' ಎಂದು ಈ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಪಕ್ಷದ ಮುಖಂಡ ವೆಂಕಯ್ಯ ನಾಯ್ಡು ಕೊಚ್ಚಿನ್‌ನಲ್ಲಿ ಹೇಳಿದ್ದಾರೆ.

ಅತ್ಯಾಚಾರಿಗಳ ಪುರುಷತ್ವ ಹರಣದ ಜೊತೆಗೆ 30 ವರ್ಷಗಳ ಕಾಲ ಜೈಲು ಶಿಕ್ಷೆಗೆ ಅನುವು ಮಾಡಿಕೊಡುವ ಶಾಸನ ಜಾರಿಗೊಳಿಸಬೇಕು ಎಂದು ಕಾಂಗ್ರೆಸ್ ಸಲಹೆ ನೀಡಿದ ಬೆನ್ನಲ್ಲೇ ಬಿಜೆಪಿಯಿಂದಲೂ ಅದೇ ರೀತಿಯ ಆಗ್ರಹ ಕೇಳಿಬಂದಿದೆ.

ಪತ್ರ ಬರೆಯಲಿರುವ ಶಿಂಧೆ
ಪ್ರಸ್ತುತ ಜಾರಿಯಲ್ಲಿರುವ ಅತ್ಯಾಚಾರ ವಿರುದ್ಧದ ಕಾನೂನಿನಲ್ಲಿ ಸೂಕ್ತ ಬದಲಾವಣೆ ಮಾಡುವ ಸಂಬಂಧ ಸಲಹೆ ನೀಡಲು ಕೋರಿ ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಪತ್ರ ಬರೆಯಲಿದ್ದಾರೆ.

ಜಂತರ್ ಮಂತರ್‌ನಲ್ಲಿ ನಿಲ್ಲದ ಪ್ರತಿಭಟನೆ
ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಇನ್ನಿತರ ದೌರ್ಜನ್ಯಗಳ ವಿರುದ್ಧ ಕಠಿಣ ಕಾನೂನಿಗೆ ಒತ್ತಾಯಿಸಿ ದೆಹಲಿಯ ಹೃದಯ ಭಾಗ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಸೋಮವಾರವೂ ಮುಂದುವರಿಯಿತು. ವಿಶೇಷವಾಗಿ ಯುವಜನ ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಪಾಲ್ಗೊಂಡಿದ್ದರು.

ಇವರಲ್ಲಿ ಇಬ್ಬರು ಉಪವಾಸ ಕುಳಿತಿದ್ದಾರೆ. `ಮೂರು ದಿನಗಳಿಂದ ಉಪವಾಸ ಕುಳಿತಿದ್ದೇನೆ. ಲೈಂಗಿಕ ಪ್ರಕರಣಗಳ ವಿಚಾರಣೆಗಾಗಿ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವ ತನಕ ಉಪವಾಸ ಮುಂದುವರಿಸುತ್ತೇನೆ' ಎಂದು ಬಾಬುಸಿಂಗ್ ರಾಂ ಎಂಬವವರು ಹೇಳಿದರು.

ಈ ಮಧ್ಯೆ, ಸಾಮೂಹಿಕ ಅತ್ಯಾಚಾರದ ಪ್ರಕರಣದ ಹಿನ್ನೆಲೆಯಲ್ಲಿ ತೀವ್ರ ಟೀಕೆಗೆ ಗುರಿಯಾಗಿರುವ ದೆಹಲಿ ಪೊಲೀಸ್ ಮುಖ್ಯಸ್ಥ ನೀರಜ್ ಕುಮಾರ್ ಭಾನುವಾರ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮತ್ತು ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ ಅವರನ್ನು ಭೇಟಿ ಮಾಡಿದ್ದರು.

ಅತ್ಯಾಚಾರ ಘಟನೆ ಹಿನ್ನೆಲೆಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಪೊಲೀಸರು ನಿಭಾಯಿಸಿದ ರೀತಿಯ ಬಗ್ಗೆ ಸ್ವತಃ ಶೀಲಾ ದೀಕ್ಷಿತ್ ಆಕ್ಷೇಪಿಸಿದ್ದರು. ದೆಹಲಿ ಪೊಲೀಸ್ ಇಲಾಖೆ ಕೇಂದ್ರ ಗೃಹ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿದ್ದು, ಅದರ ಮುಖ್ಯಸ್ಥರು ಮುಖ್ಯಮಂತ್ರಿಯನ್ನು ಸಾಮಾನ್ಯವಾಗಿ ಭೇಟಿಯಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT