ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಿಗೂ ಗೊತ್ತಿರಲಿ ಹಣಕಾಸಿನ ಲೆಕ್ಕ

Last Updated 26 ಜುಲೈ 2016, 19:30 IST
ಅಕ್ಷರ ಗಾತ್ರ

'ಕೈ ತುಂಬಾ ದುಡಿಯುತ್ತಾರೆ, ಆದರೆ ತಿಂಗಳ ಕೊನೆಯಲ್ಲಿ ದುಡ್ಡಿಗಾಗಿ ಪರದಾಡುತ್ತಾರೆ. . .' ಉತ್ತಮ ಆದಾಯವಿದ್ದರೂ, ಸರಿಯಾದ  ಹಣಕಾಸಿನ ಯೋಜನೆ ಇಲ್ಲದವರನ್ನು ಕಂಡು ಅವರ ಕುಟುಂಬದವರು, ಆಪ್ತರು ಹೇಳುವ ಈ ಮಾತನ್ನು ನೀವೂ ಕೇಳಿರುತ್ತೀರಿ.  ಸಾಕಷ್ಟು ದುಡಿಯುವವರ ಕಥೆಯೇ ಹೀಗಾದರೆ ಇನ್ನು ಕಡಿಮೆ ವೇತನ ಇರುವವರ ಪರಿಸ್ಥಿತಿ ಏನು?

ದುಡ್ಡು ಎಷ್ಟು ಇದೇ ಅನ್ನುವುದೇ ಮುಖ್ಯವಲ್ಲ, ಎಷ್ಟೇ ಇದ್ದರೂ ಅದನ್ನು ಸಂಭಾಳಿಸುವುದು ಮುಖ್ಯ. ಯಾವುದೇ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗದೆ, ಜೀವನವನ್ನು ಸುಗಮವಾಗಿ ನಡೆಸುವಂತೆ ಹಾಗೂ ಯಾವುದಕ್ಕೆ ಆದ್ಯತೆ ನೀಡಬೇಕು ಎಂದು ನಿರ್ಧರಿಸಿಕೊಂಡು ಆರ್ಥಿಕ ಯೋಜನೆ ಹಾಕಿಕೊಳ್ಳುವುದು ಉತ್ತಮ ಅಲ್ಲವೇ?

ಬೆಟ್ಟದಷ್ಟು ಆಸೆಗಳು ಎಲ್ಲರಿಗೂ ಇರುತ್ತವೆ. ಆದರೆ ಎಲ್ಲವನ್ನೂ ಪೂರೈಸಿಕೊಳ್ಳಲು ಸಾಧ್ಯವೇ ಇಲ್ಲ. ನಮ್ಮ ಬಳಿ ಇರುವ ದುಡ್ಡಿನಲ್ಲಿ ಯಾವುದಕ್ಕೆ ಖರ್ಚು ಮಾಡಬೇಕು, ಯಾವುದನ್ನು ತಡೆಹಿಡಿಯಬೇಕು, ನಮ್ಮ ಇತಿಮಿತಿಯೇನು? ಯಾವುದಕ್ಕೆ ಪ್ರಾಮುಖ್ಯ ನೀಡಬೇಕು ಎಂಬುದನ್ನು ಮುಖ್ಯವಾಗಿ ತಿಳಿದುಕೊಳ್ಳಬೇಕು. ಪ್ರಮುಖವಾದುದನ್ನು ಪಟ್ಟಿ ಮಾಡಿಕೊಂಡು ಅದರ ಕಡೆ ಗಮನ ಹರಿಸಬೇಕು.

ನಮ್ಮ ಅಮ್ಮಂದಿರು ಎಷ್ಟು ಚೆನ್ನಾಗಿ ಸಂಸಾರ ತೂಗಿಸಿಕೊಂಡು ಹೋಗುತ್ತಿದ್ದರು. ಹೆಚ್ಚು ಓದಿಲ್ಲದ, ಹೆಚ್ಚೇನು, ಕೆಲವೊಂದು ಅಮ್ಮಂದಿರು ಏನೂ ಓದಿರದಿದ್ದರೂ ಸಂಸಾರವನ್ನು ಸರಿಯಾಗಿ ನಡೆಸಿಕೊಂಡು ಹೋಗುವುದರಲ್ಲಿ ಜಾಣೆಯರು. ಗಂಡ ಎಷ್ಟೇ ದುಡ್ಡು ಕೊಟ್ಟರೂ ಅಷ್ಟರಲ್ಲೇ ಮನೆಯ ಎಲ್ಲಾ ಖರ್ಚನ್ನೂ ಜಾಣತನದಿಂದ ನೀಗಿಸುತ್ತಿದ್ದ ಆ ಅಮ್ಮಂದಿರು ನಮಗೆ ಮಾದರಿಯಾಗಬೇಕು.

ನಾವು ಮಕ್ಕಳಿಗೆ ಆಸ್ತಿ ಮಾಡಬೇಕಾಗಿಲ್ಲ, ಮಕ್ಕಳನ್ನೇ ಆಸ್ತಿ ಮಾಡಬಹುದು, ಅದು ಅವರಿಗೆ ಸರಿಯಾದ ಶಿಕ್ಷಣ ಕೊಟ್ಟಾಗ ಮಾತ್ರ. ಹೌದಲ್ಲವೇ ಈಗ ಮನೆಯ ಖರ್ಚಿನಲ್ಲಿ ಮಕ್ಕಳ ವಿದ್ಯಾಭ್ಯಾಸದ್ದೇ ಸಿಂಹಪಾಲು. ಆದಾಯ ಎಷ್ಟೇ ಇದ್ದರೂ ನಾವು ಶಿಕ್ಷಣಕ್ಕೆ ಪ್ರಾಮುಖ್ಯ ನೀಡಲೇಬೇಕು.

ಹೀಗಾಗಿ ಮನೆಯಲ್ಲಿ ಎಲ್ಲರಿಗೂ ಹಣಕಾಸಿನ ಬಳಕೆಯ ಅರಿವು ಇದ್ದರೆ ಉತ್ತಮ. ಕೆಲವೊಂದು ಮನೆಯಲ್ಲಿ  ಹಣಕಾಸಿನ ವ್ಯವಹಾರವೆಲ್ಲಾ ಒಬ್ಬರಿಗೇ ಸೀಮಿತವಾಗಿರುತ್ತದೆ.ವ್ಯವಹಾರವೇನೋ ಒಬ್ಬರಿಗೇ ಸೀಮಿತವಾಗಿರಲಿ, ಆದರೆ ಅದರ ಬಗೆಗಿನ ಅರಿವು ಮನೆಯವರೆಲ್ಲರಿಗೂ ಇರಬೇಕಲ್ಲವೇ?

ಗಂಡನಿಂದ ಹೆಂಡತಿಗೆ, ಹೆಂಡತಿಯಿಂದ ಮಕ್ಕಳಿಗೆ ಹಣಕಾಸಿನ ಅರಿವು ಹರಿದುಬಂದರೆ ಮಕ್ಕಳು ಸಣ್ಣ ವಯಸ್ಸಿನಲ್ಲೇ ದುಡ್ಡಿನ ಮಹತ್ವವನ್ನು ಅರಿತು ಅದನ್ನು ನಿಭಾಯಿಸುವುದನ್ನು ಕಲಿಯುತ್ತಾರೆ.

ಆದರೆ ಬಹಳಷ್ಟು ಮನೆಗಳಲ್ಲಿ ದುಡ್ಡಿನ ಬಗ್ಗೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಹೆಚ್ಚು ತಿಳಿವಳಿಕೆಯೇ ಇರುವುದಿಲ್ಲ. ಜೀವನದಲ್ಲಿ ಏನೇ ತೊಂದರೆಯಾದರೂ ಅದಕ್ಕೆ ಮೊದಲು ಗುರಿಯಾಗುವುದು ಮಹಿಳೆಯೇ. ಆದ್ದರಿಂದ ಮಹಿಳೆ ಹಣಕಾಸಿನ ವಿಷಯವಾಗಿ ಹೆಚ್ಚು ಜಾಗ್ರತೆಯಿಂದ ಇರಬೇಕು ಹಾಗೂ ಜಾಣತನವನ್ನು ಹೊಂದಿರಬೇಕು.

ಕುಟುಂಬದ ಏಕೈಕ ದುಡಿಯುವ ವ್ಯಕ್ತಿ  ಆಕಸ್ಮಾತ್‌ ಆಗಿ ಮೃತಪಟ್ಟರೆ, ಅಪಘಾತವಾಗಿ ದುಡಿಯುವ ಶಕ್ತಿ ಕಳೆದುಕೊಂಡರೆ,  ಹಠಾತ್ತಾಗಿ ಹಣಕಾಸಿನ ಸಮಸ್ಯೆ ಉದ್ಭವಿಸುತ್ತದೆ.  ಹಲವಾರು ಕಾರಣಗಳಿಗೆ ಗೃಹಿಣಿಯರು ಗಂಡನಿಂದ ದೂರಾಗುವ ಪರಿಸ್ಥಿತಿ ಬರಬಹುದು. ಆಗ ಹಣಕಾಸಿನ ವ್ಯವಹಾರದ ಬಗ್ಗೆ ಅವರಲ್ಲಿ ಅಜ್ಞಾನ ಇದ್ದರೆ, ಯಾವುದೇ ಉಳಿತಾಯದ ಮೊತ್ತ ಇರದಿದ್ದರೆ  ತೊಂದರೆಗೆ ಸಿಲುಕಬೇಕಾಗುತ್ತದೆ.

ಈಗ ಹೆಣ್ಣು ಕೇವಲ ಮನೆ ನಡೆಸುವವಳಲ್ಲ, ಅವಳು ಎಲ್ಲಾ ಕ್ಷೇತ್ರಗಳಲ್ಲೂ ಮುನ್ನುಗ್ಗುತ್ತಿರುವವಳು, ಆರ್ಥಿಕ ಸ್ವಾತಂತ್ರ್ಯ ಪಡೆದವಳು, ತನ್ನ ಜೀವನದ ಭದ್ರತೆಯನ್ನು ತಾನೇ ಕಂಡುಕೊಂಡವಳು... ಎಂದೆಲ್ಲಾ ಹೇಳುತ್ತೇವೆ. ಹೌದು, ಇದು ನಿಜ. ಆದರೆ ಇದರ ಪ್ರಮಾಣ ತೀರಾ ಕಡಿಮೆ.

ಎಲ್ಲದರಲ್ಲೂ ಮುಂದಿದ್ದು, ಹಣಕಾಸಿನ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಬಹಳಷ್ಟು ಮಹಿಳೆಯರು ಸೋಲುತ್ತಿದ್ದಾರೆ. ಇದಕ್ಕೆ ಬೇಕಾದ ಸಾಮರ್ಥ್ಯ ಅವರಲ್ಲಿಲ್ಲ ಎಂಬುದು ಕಾರಣವಲ್ಲ, ಅವರು ಅದರಲ್ಲಿ ಆಸಕ್ತಿ ವಹಿಸದೇ ಇರುವುದೇ ಮುಖ್ಯ ಕಾರಣವಾಗಿದೆ. ‘ಅಯ್ಯೋ ಅದೆಲ್ಲಾ ತಲೆಬಿಸಿ ನನಗ್ಯಾಕೆ’  ಎನ್ನುವವರ ಸಂಖ್ಯೆಯೇ ದೊಡ್ಡದಿದೆ.

ಮಹಿಳೆಯರಲ್ಲಿನ ಇಂತಹ ಪ್ರವೃತ್ತಿ ಬದಲಾಗಬೇಕಾಗಿದೆ. ಪ್ರತಿಯೊಬ್ಬರೂ ಹಣಕಾಸಿನ ವಿಷಯವಾಗಿ ಎಚ್ಚರದಿಂದ ಇರಬೇಕು. ತಮ್ಮ ಭದ್ರತೆಯನ್ನೂ ತಾವೇ ನೋಡಿಕೊಳ್ಳಬೇಕಾಗುತ್ತದೆ. ಮಹಿಳೆಯರು ಈ ವಿಷಯವಾಗಿ ವಿಶೇಷವಾಗಿ ಜಾಗೃತರಾಗಬೇಕು ಎನ್ನುತ್ತಾರೆ ಆರ್ಥಿಕ ತಜ್ಞರು. ಮಹಿಳೆ ಗಂಡನ ಜೊತೆಯಿರಲಿ, ತಂದೆ-ತಾಯಿಯರೊಂದಿಗೆ ಇರಲಿ, ಮಕ್ಕಳ ಅಧೀನದಲ್ಲಿರಲಿ ಯಾರೊಂದಿಗೇ ಇದ್ದರೂ ತನ್ನ ಭವಿಷ್ಯಕ್ಕೆ, ತನ್ನ ಆರ್ಥಿಕ ಜೀವಕ್ಕೆ ನೆರವಾಗುಂತಹ ವ್ಯವಸ್ಥೆ ಮಾಡಿಕೊಂಡಿರಬೇಕು. ಇದಕ್ಕೆ ಮಹಿಳೆ ಕೆಲ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ತಿಂಗಳಲ್ಲಿ ಉಳಿಯುವ ಅಲ್ಪ ಸ್ವಲ್ಪ ದುಡ್ಡನ್ನು ಕೂಡಿಟ್ಟರೆ ಏನು ಪ್ರಯೋಜನ ಎಂದು ಎಲ್ಲವನ್ನೂ ಖರ್ಚು ಮಾಡುವುದು ಸಲ್ಲ. ಸಣ್ಣ ಮೊತ್ತದಿಂದಲೇ ದೊಡ್ಡ ಮೊತ್ತಾಗುವುದು.ಹಾಗಾಗಿ ಒಂದು ರೂಪಾಯಿಯೂ ಉಳಿತಾಯವೇ. ಒಮ್ಮೆ  ಒಂದು ರೂಪಾಯಿ ಉಳಿದರೆ ಇನ್ನೊಮ್ಮೆ 100 ರೂಪಾಯಿ  ಆಮೇಲೆ ಸಾವಿರ ರೂಪಾಯಿಗಳು ಉಳಿಯಬಹುದು.

ದುಡ್ಡು ಗಂಟಾಗುವುದೇ ಹೀಗೆ. ಹಾಗಾಗಿ ಮನೆ ಖರ್ಚಿನ ದುಡ್ಡಿನಲ್ಲಿ ಸ್ವಲ್ಪವನ್ನಾದರೂ ಉಳಿಸಿ, ಉಳಿತಾಯ ಖಾತೆಗೆ ಹಾಕುವಂತಾಗಬೇಕು. ಖಾತೆ ತೆರೆದ ಮೇಲೆ ಸುಮ್ಮನಾದರೆ ಪ್ರಯೋಜನವಿಲ್ಲ. ಪ್ರತಿ ತಿಂಗಳು ಸ್ವಲ್ಪ ಮಟ್ಟಿಗೆ ದುಡ್ಡು ಉಳಿಸುವುದರ ಜೊತೆಗೆ ಯಾವುದಾದರೂ ಹೂಡಿಕೆಯಲ್ಲಿ ಹಣ ತೊಡಗಿಸುವುದು ಮೇಲು. ಈಗ ಹೂಡಿಕೆ ಸಾಧನಗಳು ಬೇಕಾದಷ್ಟಿವೆ. ಸೂಕ್ತವೆನಿಸುವುದನ್ನು ಆಯ್ಕೆ ಮಾಡಿಕೊಳ್ಳಬಹುದು.

ಬ್ಯಾಂಕ್ ಠೇವಣಿ, ಮ್ಯೂಚುಯಲ್ ಫಂಡ್‌ನ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ), ಸರ್ಕಾರಿ ಬಾಂಡ್‌ಗಳು, ಅಂಚೆ ಕಚೇರಿ ಉಳಿತಾಯ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ, ಜೀವ ವಿಮೆ, ಚಿನ್ನ ಖರೀದಿ ಹೀಗೆ ವಿಭಿನ್ನ ಬಗೆಯಲ್ಲಿ  ಹಣ ಉಳಿಸಬಹುದು.

ಮಹಿಳೆಯರ ಬಳಿ ದುಡ್ಡಿಲ್ಲದಿದ್ದರೂ ಸ್ವಲ್ಪ ಚಿನ್ನವಾದರೂ ಇದ್ದೇ ಇರುತ್ತದೆ. ಕಷ್ಟಕಾಲದಲ್ಲಿ ನೆರವಿಗೆ ಬರುವುದೇ ಅದು. ಬೇರೆ ಹೂಡಿಕೆ ಸಾಧನಗಳ ಮೇಲೆ ಹಣ ತೊಡಗಿಸಲು ಸಾಧ್ಯವಾಗದಿದ್ದರೆ ಕಡೇಪಕ್ಷ ಚಿನ್ನವನ್ನಾದರೂ ಖರೀದಿಸಿ ಇಟ್ಟುಕೊಳ್ಳಬಹುದು. ಇದು ಇಷ್ಟೇ ದುಡ್ಡಿನದು ಇರಬೇಕು ಎಂದೇನಿಲ್ಲ. ಹುಟ್ಟುಹಬ್ಬಕ್ಕೆ, ಮದುವೆ ವಾರ್ಷಿಕೋತ್ಸವಕ್ಕೆ, ಮಗುವಿನ ಹುಟ್ಟುಹಬ್ಬಕ್ಕೆ, ಹಬ್ಬಗಳ ಸಂದರ್ಭಗಳಲ್ಲಿ ಹೆಚ್ಚಿನ ಖರ್ಚನ್ನು ಕಡಿತಗೊಳಿಸಿ ಚಿನ್ನವನ್ನು ಖರೀದಿಸಿ ಇಟ್ಟುಕೊಳ್ಳಬಹುದು.

ಗಂಡನ ಆದಾಯ, ವಿಮೆ ಬಗ್ಗೆ ಹೆಂಡತಿಗೆ ಅರಿವು ಇರಬೇಕು. ಕುಟುಂಬದ ಭವಿಷ್ಯಕ್ಕಾಗಿ ಕೈಗೊಂಡಿರುವ ಪ್ರಮುಖ ಆರ್ಥಿಕ ಯೋಜನೆಗಳನ್ನು ತಿಳಿದುಕೊಳ್ಳುವುದರೊಂದಿಗೆ ಅವುಗಳಲ್ಲಿ  ಮಹಿಳೆಯರು ಭಾಗಿಯಾಗಬೇಕು. ಮಹಿಳೆಯರು  ತಮ್ಮ  ಆರೋಗ್ಯ  ವಿಮೆ ಬಗ್ಗೆಯೂ ಗಮನಹರಿಸಬೇಕು.

ಆರ್ಥಿಕ ನೆರವು ಯೋಜನೆಗಳ ಬಗ್ಗೆಯೂ ತಿಳಿದುಕೊಳ್ಳಬೇಕು. ಎಷ್ಟೋ ಬ್ಯಾಂಕುಗಳು ಮಹಿಳೆಯರಿಗೆಂದೇ ವಿಶೇಷ ಯೋಜನೆಗಳನ್ನು ಆರಂಭಿಸಿವೆ. ದುಡಿಯುವ ಮಹಿಳೆಯರಿಗೆ ಅನೇಕ ಬ್ಯಾಂಕುಗಳು ಸಾಲ ನೀಡುತ್ತವೆ. ಕೆಲ ಸಂಘ-ಸಂಸ್ಥೆಗಳು ಉದ್ಯಮಶೀಲತಾ ತರಬೇತಿಗಳನ್ನು ನೀಡಿ ದುಡಿಯಲು ತೊಡಗುವ ಮಹಿಳೆಯರಿಗೆ ಹಣಕಾಸಿನ ನೆರವನ್ನು ಒದಗಿಸಿಕೊಡುತ್ತವೆ. ಇವುಗಳನ್ನು ಬಳಸಿಕೊಂಡು ಆರ್ಥಿಕ ಸ್ವಾವಲಂಬನೆ ಪಡೆಯಬಹುದು. ಜೀವನದಲ್ಲಿ ಬೇಗನೆ ಹಣಕಾಸಿನ ಗುರಿ ಮುಟ್ಟಬಹುದು.

ಗಂಡ ಚೆನ್ನಾಗಿ ದುಡಿಯುತ್ತಿದ್ದು, ಸದ್ಯಕ್ಕೆ ಏನೂ ತೊಂದರೆ ಇಲ್ಲದಿದ್ದರೂ ಮಹಿಳೆಯರು ಸಣ್ಣಮಟ್ಟದಲ್ಲಾದರೂ ದುಡಿಯಲಿಕ್ಕೆ ತೊಡಗಬೇಕು. ತಮ್ಮ ಹವ್ಯಾಸಗಳಿಂದಲೇ ಹಣ ಸಂಪಾದನೆ ಮಾಡಬಹುದು. ಬರುವ ಕೈಕೆಲಸವೇ ಕೈ ತುಂಬಾ ದುಡ್ಡು ತಂದುಕೊಡಬಹುದು. ಕನಿಷ್ಠ ಮಕ್ಕಳು ಕೇಳುವ ವಸ್ತುಗಳನ್ನು ಕೊಡಿಸುವಷ್ಟಾದರೂ ಸಂಪಾದನೆ ಮಾಡಿಕೊಳ್ಳಬಹುದು. ಹೊಲಿಗೆ, ಚಿತ್ರಕಲೆ, ಎಂಬ್ರಾಯಡರಿ, ಕಸೂತಿ, ಮನೆ ಪಾಠ, ಅಡುಗೆ ಪದಾರ್ಥಗಳ ತಯಾರಿಕೆ ಯಾವುದೇ ಆದರೂ ಅಡ್ಡಿಯಿಲ್ಲ. ದುಡಿಯಲು ಮುಂದಾಗಬೇಕು. ಹೀಗೆ ಮಹಿಳೆ ಮತ್ತು ಎಲ್ಲರೂ ಹಣಕಾಸಿನ ವಿಷಯವಾಗಿ ಆಸಕ್ತಿ ಬೆಳೆಸಿಕೊಂಡರೆ ಆರ್ಥಿಕ ಜೀವನ ಸುಗಮವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಉಳಿತಾಯದ ನಿಯಮಗಳು

* ಕುಟುಂಬದ ಹಣಕಾಸು ನಿರ್ವಹಣೆ ಸುಗಮವಾಗಿರಲು  ಗಂಡ ಹೆಂಡತಿ ಹೆಸರಲ್ಲಿ ಬ್ಯಾಂಕ್‌ನಲ್ಲಿ ಜಂಟಿ  ಖಾತೆ ತೆರೆಯಬೇಕು
* ಮಹಿಳೆಯರು ತಮ್ಮ ಹೆಸರಿನಲ್ಲಿಯೂ ಪ್ರತ್ಯೇಕ ಖಾತೆ ತೆರೆಯಬೇಕು
* ದುಡಿಯುವ ಮಹಿಳೆಯರು ತಮ್ಮ ದುಡಿತದ ಸ್ವಲ್ಪ ಭಾಗವನ್ನಾದರೂ ನಿಯಮಿತವಾಗಿ ತಮ್ಮ ಬ್ಯಾಂಕ್‌ ಖಾತೆಗೆ ಹಾಕಬೇಕು
* ಮನೆಯಲ್ಲೇ ಯಾರಿಗೂ ಗೊತ್ತಾಗದಂತೆ ಹಣ ಉಳಿಸಬೇಕು
* ಕಷ್ಟ ಕಾಲದಲ್ಲಿ ನೆರವಾಗಲು ಗೃಹಿಣಿಯರು ತಿಂಗಳ ಖರ್ಚಿನ    ಮೊತ್ತದಲ್ಲಿ  ಸ್ವಲ್ಪವನ್ನಾದರೂ ಉಳಿಸಿ ಕೂಡಿಟ್ಟುಕೊಳ್ಳಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT