ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಹಾನಿ ತುಂಬಿಕೊಡುತ್ತೀರಾ?

ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮಠದ ಪ್ರಶ್ನೆ
Last Updated 24 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಎರಡು ಅತ್ಯಾಚಾರ ಪ್ರಕರಣಗಳು ಸುಳ್ಳು ಮತ್ತು ದುರುದ್ದೇಶಪೂರಿತ ಎಂದು ಸಾಬೀತುಪಡಿಸಲು ಮಠ ಸಿದ್ಧ ಮತ್ತು ಬದ್ಧ. ಹಾಗೆ ಸಾಬೀತಾದ ನಂತರ ಈ ಆರೋಪದಿಂದ ಉಂಟಾದ ಮಾನಹಾನಿಯನ್ನು ತಾವು ತುಂಬಿಕೊಡುತ್ತೀರಾ?’

ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಲಂ ಅವರಿಗೆ ರಾಮಚಂದ್ರಾಪುರ ಮಠದ ಪ್ರಶ್ನೆ ಇದು.

ಶ್ರೀಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸದೇ ಇರುವ ಬಗ್ಗೆ ಲಲಿತಾ ಕುಮಾರಮಂಗಲಂ ಇತ್ತೀಚೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅದನ್ನು ಪ್ರಶ್ನಿಸಿ  ಮಠದಿಂದ ಅವರಿಗೆ ಪತ್ರ ಬರೆಯಲಾಗಿದೆ.

‘ನೀವು ದೂರುದಾರರ ವಾದವನ್ನು ಮಾತ್ರ ಆಲಿಸಿದ್ದೀರಿ. ಮಠದ ಅಭಿಪ್ರಾಯವನ್ನೂ ನೀವು ಕೇಳಬೇಕಾಗಿತ್ತು. ಮಠದ ಪರವಾಗಿ ಹೇಳಿಕೆ ನೀಡಲು ಬಂದ ಮಹಿಳೆಯರನ್ನು ಅವಮಾನಿಸಿದ್ದೀರಿ. ದೇಶದಲ್ಲಿ ಲೆಕ್ಕವಿಲ್ಲದಷ್ಟು ಅತ್ಯಾಚಾರ ಪ್ರಕರಣಗಳು ನಡೆಯುತ್ತವೆ. ಅದನ್ನೆಲ್ಲಾ ಬಿಟ್ಟು ಈ ಪ್ರಕರಣದ ಬಗ್ಗೆ ಮಾತ್ರ ಯಾಕೆ ನಿಮಗೆ ಆಸಕ್ತಿ. ದೆಹಲಿಯಿಂದ ನೀವಾಗಿಯೇ ಬಂದಿದ್ದೋ ಅಥವಾ ಯಾರಾದರೂ ದೂಡಿ ಕಳುಹಿಸಿದ್ದೇ?’ ಎಂದು ಪತ್ರದಲ್ಲಿ ಪ್ರಶ್ನಿಸಲಾಗಿದೆ.

‘ತನಿಖೆ ಪ್ರಗತಿಯಲ್ಲಿರುವಾಗಲೇ ನೀವು ಹೇಳಿಕೆ ನೀಡಿ ತೀರ್ಪನ್ನೂ ಕೊಟ್ಟಿದ್ದೀರಿ. ಆ ಮೂಲಕ ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದೀರಿ. ತನಿಖೆಗೆ ಶ್ರೀಗಳು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಸಿಐಡಿ ಕಚೇರಿಗೆ 12 ಬಾರಿ ಭೇಟಿ ನೀಡಿ 60 ಗಂಟೆಗೂ ಹೆಚ್ಚು ಕಾಲ ವಿಚಾರಣೆ ಎದುರಿಸಿದ್ದಾರೆ. ಶ್ರೀಗಳು ಮುಖಮುಚ್ಚಿಕೊಂಡು ಓಡಾಡುವಂತಹ ಯಾವುದೇ ತಪ್ಪು ಮಾಡಿಲ್ಲ. ಅವರು ಸ್ವತಂತ್ರ ಭಾರತದ ಪ್ರಜೆ. ಅವರ ಹಕ್ಕನ್ನು ಪ್ರಶ್ನಿಸುವ ಹಕ್ಕು ನಿಮಗೆ ಇಲ್ಲ’ ಎಂದೂ ಪತ್ರದಲ್ಲಿ ಹೇಳಲಾಗಿದೆ. ‘ಮಠವನ್ನು ವಿನಾಶಗೊಳಿಸುವ ಷಡ್ಯಂತ್ರದಲ್ಲಿ ತಾವು ಭಾಗಿಯಾಗಬಾರದು’ ಎಂದು ಮನವಿ ಮಾಡಿಕೊಳ್ಳಲಾಗಿದೆ.
*
ಸರ್ಕಾರಕ್ಕೆ ಪತ್ರ
ಬೆಂಗಳೂರು: 
‘ರಾಘವೇಶ್ವರರ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆಯನ್ನು ಚುರುಕುಗೊಳಿಸುವಂತೆ ಗೃಹ ಇಲಾಖೆಗೆ ನಿರ್ದೇಶನ ನೀಡಬೇಕು‘ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

‘ರಾಘವೇಶ್ವರರ ವಿರುದ್ಧ ಮೊದಲ ಪ್ರಕರಣ ದಾಖಲಾಗಿ ವರ್ಷವಾದರೂ ಆರೋಪ ಪಟ್ಟಿ ಸಲ್ಲಿಸದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ತನಿಖೆ ತೀವ್ರಗೊಳಿಸುವಂತೆ ಗೃಹಸಚಿವರಿಗೆ ಪತ್ರ ಬರೆಯಲಾಗಿದೆ. ಆದರೂ, ತನಿಖೆ ಕುಂಟುತ್ತಾ ಸಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT