ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಗೆ ಬಂದ ಹಣ್ಣುಗಳ ರಾಜ

Last Updated 21 ಏಪ್ರಿಲ್ 2014, 6:50 IST
ಅಕ್ಷರ ಗಾತ್ರ

ಕಾರವಾರ: ಹಣ್ಣುಗಳ ರಾಜ ‘ಮಾವು’ ನಗರದ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಹಣ್ಣುಗಳು ಈ ಬಾರಿ ಬಲು ದುಬಾರಿಯಾಗಿದೆ. ಬಾಯಲ್ಲಿ ನೀರೂರಿಸುವ ಮಾವನ್ನು ಖರೀದಿಸಲು ಹೋದರೆ ಗ್ರಾಹಕರಿಗೆ ಕೈ ಸುಡುವ ಅನುಭವವಾಗುತ್ತಿದೆ.

ಮಾವಿನ ಫಸಲು ಎಲ್ಲೆಡೆ ಕೈಕೊಟ್ಟಿದ್ದು ಹಾಗೂ ನಿರೀಕ್ಷಿತ ಪ್ರಮಾಣದಲ್ಲಿ ಮಾವಿನ ಹಣ್ಣು ಮಾರುಕಟ್ಟೆಗೆ ಬರದೇ ಇರುವುದರಿಂದ ಹಣ್ಣುಗಳ ಬೆಲೆ ಈ ಬಾರಿ ಏರಿಕೆಯಾಗಿದೆ.

ನಗರದ ಗಾಂಧಿ ಬಜಾರ್‌, ಸವಿತಾ ವೃತ್ತ, ಶಿವಾಜಿ ವೃತ್ತ ಹಾಗೂ ಸಂಡೇ ಮಾರ್ಕೆಟ್‌ನಲ್ಲಿ ಕರಿ ಇಶಾಡ್‌, ಪಯರಿ, ಆಲ್ಫಾನ್ಸೋ ಸೇರಿದಂತೆ ವಿವಿಧ ತಳಿಗಳ ಮಾವಿನ ಹಣ್ಣುಗಳು ಗ್ರಾಹಕರ ಗಮನಸೆಳೆಯುತ್ತಿತ್ತು. ಈ ಹಣ್ಣುಗಳು ಅಂಕೋಲಾ ಹಾಗೂ ಸುತ್ತಮುತ್ತ ಊರುಗಳಿಂದ ಮತ್ತು ಮಹಾರಾಷ್ಟ್ರದಿಂದಲೂ ಮಾವಿನ ಹಣ್ಣುಗಳು ಇಲ್ಲಿನ ಮಾರುಕಟ್ಟೆಗೆ ಬಂದಿವೆ. ಮಾರಾಟಗಾರರು ಹುಲ್ಲು ಹಾಸಿದ ಬಿದಿರಿನ ದೊಡ್ಡ ಬುಟ್ಟಿಗಳಲ್ಲಿ ಹಣ್ಣುಗಳನ್ನು ಮಾರಾಟ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಮಾವುಗಳನ್ನು ಖರೀದಿಸಲು ಮುಂದಾದ ಗ್ರಾಹಕರು ದರ ಕೇಳಿ ಬೆಚ್ಚಿಬೀಳುವಂತಾಗಿದೆ. ಅಂಕೋಲಾದ ಸ್ಥಳೀಯ ತಳಿಯಾದ ಕರಿ ಇಶಾಡ್‌

ಒಂದು ಡಜನ್‌ಗೆ (12 ಹಣ್ಣು) ರೂ. 400 ದರವಿದ್ದರೆ, ಪಯರಿ ಒಂದು ಡಜನ್‌ಗೆ ರೂ. 300 ದರವಿದೆ ಹಾಗೂ ಮಹಾರಾಷ್ಟ್ರದಿಂದ ಇಲ್ಲಿಗೆ ಬಂದಿರುವ ಆಲ್ಫಾನ್ಸೋ ಡಜನ್‌ಗೆ ರೂ. 800 ಇದೆ.

ದರ ದುಬಾರಿಯಾಗಿದ್ದರೂ ಮಾವಿನ ಪ್ರಿಯರು ಹಣ್ಣುಗಳ ಖರೀದಿಯಲ್ಲಿ ತೊಡಗಿದ್ದಾರೆ. ಪ್ರತಿ ವರ್ಷ ಮಾವಿನ ಸೀಜನ್‌ ಪ್ರಾರಂಭವಾಗುತ್ತಿದ್ದಂತೆ ಮಾವಿನ ದರ ಏರಿಕೆಯಲ್ಲಿದ್ದು, ಕ್ರಮೇಣ ಕಡಿಮೆಯಾಗುತ್ತದೆ. ಅದರಂತೆ ಸ್ಪಲ್ಪ ದಿನ ಕಳೆದರೆ ಹಣ್ಣುಗಳ ದರ ಕಡಿಮೆಯಾಗಬಹುದು ಎಂಬುದು ಕೆಲ ಗ್ರಾಹಕರ ಅನಿಸಿಕೆಯಾಗಿದೆ.

’ಕಳೆದ ಬಾರಿ ಮಾವಿನ ಸೀಜನ್‌ ಆರಂಭದಲ್ಲಿ ಮಾವಿನ ಹಣ್ಣುಗಳ ಬೆಲೆ ದುಬಾರಿಯಾಗಿತ್ತು. ನಂತರದಲ್ಲಿ ಕಡಿಮೆಯಾಗುತ್ತಾ ಬಂತು. ಆದರೆ,

ಮಾವಿನ ರುಚಿಯನ್ನು ಸವಿಯಲೇ ಬೇಕು ಎನ್ನುವ ಬಯಕೆಯಾಗಿರುವುದರಿಂದ ಮಾವನ್ನು ಖರೀದಿಸುತ್ತಿದ್ದೇನೆ’ ಎನ್ನುತ್ತಾರೆ ಗ್ರಾಹಕ ಶಾಂತಾ ನಾಯ್ಕ.

‘ಅಂಕೋಲಾದಿಂದ ಈ ಮಾರುಕಟ್ಟೆಗೆ ಮಾವಿನ ಹಣ್ಣುಗಳು ಬಂದಿವೆ. ನಾವು ಸಗಟು ವ್ಯಾಪಾರಿಗಳಿಂದ ಖರೀದಿಸಿ ಇಲ್ಲಿ ಮಾರಾಟ ಮಾಡುತ್ತಿದ್ದೇವೆ. ಈ ಬಾರಿ ಮಾವಿನ ಹಣ್ಣಿನ ಬೆಲೆ ದುಬಾರಿಯಾಗಿದೆ. ಆದರೂ ಮಾವು ಪ್ರಿಯರು ಬೆಲೆಯನ್ನು ಲೆಕ್ಕಿಸದೇ ಖರೀದಿಗೆ ಮುಂದಾಗಿದ್ದಾರೆ. ಆದರೂ ವ್ಯಾಪಾರ ಅಷ್ಟಕಷ್ಟೇ. ಬೆಳಿಗ್ಗೆಯಿಂದ ಸುಮಾರು 140 ಹಣ್ಣುಗಳು ಮಾರಾಟವಾಗಿದೆ. ನಿತ್ಯ ಒಂದೆರಡು ಕಾಸು ಲಾಭವಾಗುತ್ತಿದೆ’ ಎಂದು ರಾಜಮ್ಮ ಗೌಡ ‘ಪ್ರಜಾವಾಣಿ‘ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT