ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಂಚಿದ ಅಡಕೆ, ಡೆಲ್ಲಿಗೆ ಸಂಭ್ರಮ

ಪ್ರೊ ಕಬಡ್ಡಿ: ಬೆಂಗಾಲ್‌ ವಾರಿಯರ್ಸ್‌ ಕಳಾಹೀನ
Last Updated 24 ಜುಲೈ 2016, 23:30 IST
ಅಕ್ಷರ ಗಾತ್ರ

ನವದೆಹಲಿ: ಕಾಶಿಲಿಂಗ ಅಡಕೆ ತವರಿನ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಲಿಲ್ಲ. ಪ್ರೊ ಕಬಡ್ಡಿಯ ನಾಲ್ಕನೇ ಆವೃತ್ತಿಯ ಭಾನುವಾರದ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ ತಂಡ 41–20ರಿಂದ ಬೆಂಗಾಲ್‌ ವಾರಿಯರ್ಸ್‌ ತಂಡವನ್ನು ಸೋಲಿಸುವಲ್ಲಿ ಮುಖ್ಯ ಪಾತ್ರ ವಹಿಸಿದರು.

ಪ್ಲೇಆಫ್‌ ಹಂತ ತಲುಪುವುದು ಕಷ್ಟ ಸಾಧ್ಯವೆಂದು ಗೊತ್ತಿದ್ದರೂ ದೆಹಲಿ ಆಟಗಾರರು ಈ ಪಂದ್ಯದಲ್ಲಿ ರೋಚಕವಾಗಿ ಆಡಿದರು. ಹೀಗಾಗಿ ಪ್ಲೇಆಫ್‌ ಹಂತ ತಲುಪುವ ಆಸೆಗೆ ಕುಟುಕು ಜೀವ ಬಂದಂತಾಗಿದೆ. ಈಗ ಒಟ್ಟು 26 ಪಾಯಿಂಟ್ಸ್‌ ಗಳಿಸಿದ ಡೆಲ್ಲಿ ಇನ್ನು ಮೂರು ಪಂದ್ಯಗಳಲ್ಲಿ ಸತತವಾಗಿ ಗೆಲ್ಲಲೇ ಬೇಕಿದೆ.

ಆದರೆ ತೆಲುಗು ಟೈಟನ್ಸ್‌ ಎರಡನೇ ಪಂದ್ಯದಲ್ಲಿ ಗೆದ್ದುದರಿಂದ ಡೆಲ್ಲಿ ಆಸೆ ಕೈಗೂಡುವುದು ಮರೀ ಚಿಕೆಯೇ. ಆದರೂ ಈ ಕನಸಿನ ಬೆನ್ನತ್ತಿದ ಡೆಲ್ಲಿ ಈ ಪಂದ್ಯದಲ್ಲಿ ಆರಂಭದ ಕ್ಷಣದಿಂದಲೂ ಗಮನ ಸೆಳೆಯಿತು.

ರೈಡಿಂಗ್‌ನಲ್ಲಿ ಮಿಂಚಿದ ಕಾಶಿಲಿಂಗ ಅಡಕೆ ಮತ್ತು ನಾಯಕ ಇರಾನ್‌ನ ಮೆರಾಜ್‌ ಷೇಕ್‌ ಎದುರಾಳಿ ಆಟಗಾರ ರನ್ನು ಇನ್ನಿಲ್ಲದಂತೆ ಕಾಡಿದರು. ವಿರಾಮದ ವೇಳೆಗೆ ಡೆಲ್ಲಿ ತಂಡ ಸಾಧಿಸಿದ್ದ 21–10ರ ಮುನ್ನಡೆಯಲ್ಲಿ ಅಡಕೆ ಮತ್ತು ಮೆರಾಜ್‌ ಆಟವೇ ಮುಖ್ಯ ಪಾತ್ರ ವಹಿಸಿತ್ತು.

ವಿರಾಮದ ವೇಳೆಗಾಗಲೇ ಎರಡು ಸಲ ಆಲ್‌ಔಟ್‌ ಮಾಡಿದ ಡೆಲ್ಲಿಯ ಎದುರು ಬೆಂಗಾಲ್‌ ಕಂಗಾಲಾಗಿತ್ತು. 6–2 ಪಾಯಿಂಟ್‌ಗಳಿಂದ ಮುಂದಿದ್ದಾಗ ಬೆಂಗಾಲ್‌ ಕೋರ್ಟ್‌ನಲ್ಲಿ ಕೊರಿಯಾದ ಜಂಗ್‌ ಕುನ್‌ಲೀ ಮಾತ್ರ ಇದ್ದರು. ಕಾಶಿಲಿಂಗ ಅವರನ್ನು ಲೀಲಾಜಾಲವಾಗಿ ಮುಟ್ಟಿ ವಾಪಸಾದರು.

ಇನ್ನೊಮ್ಮೆ  17–9ರಿಂದ ಡೆಲ್ಲಿ ಮುನ್ನಡೆಯಲ್ಲಿದ್ದಾಗ ಕೂಡಾ ಬೆಂಗಾಲ್‌ ಇನ್ನಿಲ್ಲದಂತೆ ಪರದಾಡಿತು. ಬೆಂಗಾಲ್‌ ಅಂಗಣದಲ್ಲಿ ನಾಯಕ ನಿತಿನ್‌ ಮದಾನೆ ಮತ್ತು ರವಿ ದಲಾಲ್‌ ಇದ್ದರು. ಅಡಕೆ ರೈಡಿಂಗ್‌ನಲ್ಲಿ ನಿತಿನ್‌ ಹೊರ ನಡೆದರೆ, ರೈಡಿಂಗ್‌ ಹೋದ ರವಿ ದಲಾಲ್‌ ಡೆಲ್ಲಿ ಆಟಗಾರರ ಬಲೆಗೆ ಬಿದ್ದರು.

ಉತ್ತರಾರ್ಧದ ಆಟ ಮುಗಿಯಲು 6 ನಿಮಿಷಗಳಿದ್ದಾಗ ಮೂರನೇ ಬಾರಿಗೆ ಬೆಂಗಾಲ್‌ ಕೋರ್ಟ್‌ ಖಾಲಿಯಾಯಿತು. ಅಡಕೆ ರೈಡಿಂಗ್‌ಗೆ ಹೋದಾಗ ಅರುಣ್‌ ಮತ್ತು ಗಿರೀಶ್‌ ಮಾರುತಿ ಕರಾರುವಾಕ್ಕಾಗಿ ಸುತ್ತುವರಿದರಾದರೂ, ಅನುಭವಿ ಅಡಕೆ ಅತೀವ ಜಾಣ್ಮೆಯಿಂದ ಹಿಂದಕ್ಕೆ ಜಿಗಿದು ಮಧ್ಯಗೆರೆಯನ್ನು ದಾಟಿದರು.

ಆಗ ಏಕಾಂಗಿ ಜಂಗ್‌ ಕುನ್‌ಲೀ ರೈಡಿಂಗ್‌ಗೆ ಹೋಗಿ ಡೆಲ್ಲಿ ‘ಚಕ್ರವ್ಯೂಹ’ದೊಳಗೆ ಬಂಧಿಯಾದರು. ಡೆಲ್ಲಿಯ ಪಾಯಿಂಟ್ಸ್‌ 30–13ಕ್ಕೇರಿದಾಗ ತವರಿನ ಪ್ರೇಕ್ಷಕರು ಹುಚ್ಚೆದ್ದು ಕುಣಿದರು.

ಮೊದಲಾರ್ಧದ 16ನೇ ನಿಮಿಷದಲ್ಲಿ ರೈಡಿಂಗ್‌ ಬಂದ ಮೆರಾಜ್‌ ಅವರನ್ನು ನಿತಿನ್‌ ಮದಾನೆ, ಸುರ್ಜಿತ್‌ ನರ್ವಾಲ್‌, ಅರುಣ್‌ ಸುತ್ತುವರಿದು ಹಿಡಿದು ಹಾಕಿದ್ದು ಮತ್ತು ಉತ್ತರಾರ್ಧದ 5ನೇ ನಿಮಿಷದಲ್ಲಿ ರೈಡರ್‌ ಕಾಶಿಲಿಂಗ ಅವರನ್ನು ಹಿಡಿದದ್ದೇ ಬೆಂಗಾಲ್‌ ತಂಡದ ಅತ್ಯುತ್ತಮ ಯತ್ನವಾಗಿತ್ತಷ್ಟೆ.

ಪಂದ್ಯ ಮುಗಿಯಲು ಎರಡು ನಿಮಿಷಗಳಿವೆ ಎನ್ನುವಾಗ ರೈಡಿಂಗ್‌ ಬಂದ ನಿತಿನ್‌ ಮದಾನೆಯನ್ನು ‘ಚೈನ್‌ ಕ್ಯಾಚ್‌’ನಲ್ಲಿ ಬಂಧಸಲು ಡೆಲ್ಲಿ ಆಟ ಗಾರರು ಯತ್ನಿಸಿದರು. ಆಗ ಮದಾನೆ ಮೇಲಕ್ಕೆ ಜಿಗಿದು ಮಧ್ಯಗೆರೆ ತಲುಪಲು ಉತ್ತಮ ಯತ್ನ ನಡೆಸಿದರಾದರೂ ಅದರಲ್ಲಿ ಯಶಸ್ಸು ಪಡೆಯಲಿಲ್ಲ.

ಈ ಪಂದ್ಯದಲ್ಲಿ ಡೆಲ್ಲಿ ಆಟಗಾರರೇ ಸಂಪೂರ್ಣ ಮೇಲುಗೈ ಸಾಧಿಸಿದ್ದರು. ಟ್ಯಾಕ್ಲಿಂಗ್‌ನಲ್ಲಂತೂ ಬೆಂಗಾಲ್‌ ಆಟಗಾರರು ಇನ್ನಿಲ್ಲದಂತೆ ವೈಫಲ್ಯ ಕಂಡರು. ವಿಜಯೀ ತಂಡದ ಕಾಶಿಲಿಂಗ ಅಡಕೆ ರೈಡಿಂಗ್‌ನಲ್ಲೇ 13 ಪಾಯಿಂಟ್ಸ್‌ ತಂದಿತ್ತರೆ, ಟ್ಯಾಕ್ಲಿಂಗ್‌ನಲ್ಲೂ ಮುಖ್ಯ ಪಾತ್ರ ವಹಿಸಿದರು.

ಸೆಲ್ವಮಣಿ ಕೂಡಾ ಬೆಂಗಾಲ್‌ ತಂಡವನ್ನು ರೈಡಿಂಗ್‌ನಲ್ಲಿ ಕಾಡಿದರು. ಇವರು ತಮ್ಮ ತಂಡಕ್ಕೆ 7 ಪಾಯಿಂಟ್ಸ್‌ ಸೇರಿಸಿದರು.  ಬೆಂಗಾಲ್‌ ತಂಡದ ನಿತಿನ್‌ ಮದಾನೆ ಆಟ ಮಸುಕಾಗಿತ್ತು. ಅವರು ರೈಡಿಂಗ್‌ನಲ್ಲಿ ಗಳಿಸಲು ಸಾಧ್ಯವಾಗಿದ್ದು ಕೇವಲ 1 ಪಾಯಿಂಟ್ ಅಷ್ಟೆ. ಆದರೆ ಮೋನು ಗೊಯತ್‌ ರೈಡಿಂಗ್‌ನ 8 ಪಾಯಿಂಟ್‌ ಸೇರಿದಂತೆ ಒಟ್ಟು 11 ಪಾಯಿಂಟ್‌ ಗಳಿಸಿ  ಬೆಂಗಾಲ್‌ ಮಾನ ಉಳಿಸಲು ಯತ್ನಿಸಿದರು.

ಕಬಡ್ಡಿ ಅತ್ಯಂತ ಜನಪ್ರಿಯವಾಗಿರುವ ನಜಾಫ್‌ಗಡ, ಸೋನೆಪತ್‌ಗಳಿಂದ ನೂರಾರು ಮಂದಿ ದೆಹಲಿ ಆಟಗಾರರ ಆಟ ನೋಡಲು ತ್ಯಾಗರಾಜ ಕ್ರೀಡಾಂಗಣಕ್ಕೆ ಬಂದಿದ್ದರು. ಪಂಜಾಬ್‌ನ ಜನಪ್ರಿಯ ಚಿತ್ರನಟ ದಿಲ್‌ಜಿತ್‌ ಘೋಷಾಲ್‌ ಕೂಡಾ ದೆಹಲಿ ಆಟಗಾರರನ್ನು ಹುರಿದುಂಬಿಸಿದರು.

ಮಿಂಚಿದ ತೆಲುಗು ಟೈಟನ್ಸ್‌: ಮೊದಲ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದ ಹೆಗ್ಗಳಿಕೆಯ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತನ್ನ ಘನತೆಗೆ ತಕ್ಕ ಆಟವಾಡಲಿಲ್ಲ.  ಎಲ್ಲಾ ವಿಭಾಗಗಳಲ್ಲೂ ಮಿಂಚಿದ ಟೈಟನ್ಸ್‌ 35–23  ರಿಂದ ಗೆಲುವು ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT