ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಮಳೆ ತರಲಿ ಸಮೃದ್ಧ ಬೆಳೆ

Last Updated 20 ಜೂನ್ 2016, 19:30 IST
ಅಕ್ಷರ ಗಾತ್ರ

ಹಿಂದಿನ ಹಾಗೂ ಪ್ರಸಕ್ತ ಮಳೆಯ ಮಾಹಿತಿಯನ್ನು ಆಧರಿಸಿ ಮಾಡಿರುವ ಅಧ್ಯಯನದ ಪ್ರಕಾರ ಮುಂದಿನ ವರ್ಷಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಅದರಂತೆ ಮುಂಬರುವ ವರ್ಷಗಳಲ್ಲಿ ಮುಂಗಾರು, ಹಿಂಗಾರು ಮಳೆ ಹಾಗೂ ಬೇಸಿಗೆ ಮಳೆಯ ಪ್ರಮಾಣವು ಹೆಚ್ಚಾಗುವ ಸಾಧ್ಯತೆಯಿದೆ. ಸಹಜವಾಗಿ ರೈತರಿಗೆ ಇದು ಸಂತಸದ ಸುದ್ದಿ. ಅಧ್ಯಯನದ ಪ್ರಕಾರ 2025ರ ಸುಮಾರಿಗೆ ಮಳೆಯ ಪ್ರಮಾಣವು ಏರಿಕೆಯಾಗಲಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಸರಾಸರಿ 100 ಮಿ.ಮೀಟರ್‌ ಹೆಚ್ಚಳವಾಗಲಿದೆ.

ಕರಾವಳಿಯ ಕೆಲವು ಜಿಲ್ಲೆಗಳಲ್ಲಿ ಸರಾಸರಿ 300 ಮಿ.ಮೀಟರ್‌ ಮಳೆ ಹೆಚ್ಚಾಗಬಹುದು. ಈ ನಿಟ್ಟಿನಲ್ಲಿ ರೈತರು ಬೆಳೆ ಯೋಜನೆ ಬದಲಿಸಿಕೊಂಡು ಬೆಳೆ ವಿಮೆ ಮಾಡಿಸಿಕೊಂಡರೆ ಉತ್ತಮ. ಕಳೆದ ಸಾಲಿನಲ್ಲಿ ಮಳೆ ಪ್ರಮಾಣವು ವಾಡಿಕೆಗಿಂತ ಕಡಿಮೆಯಾಗಿದೆ (ವಾಡಿಕೆ-858.9 ಮಿ.ಮೀ. ಆದರೆ ಬಿದ್ದದ್ದು 714ಮಿ.ಮೀ).  ಆದರೆ ಈ ಬಾರಿ ಮುಂಗಾರಿನಲ್ಲಿ ವಾಡಿಕೆಗಿಂತ ಜಾಸ್ತಿ ಮಳೆಯಾಗಬಹುದು (900ಮಿ.ಮೀಗಿಂತ ಜಾಸ್ತಿ). ರಾಜ್ಯದಲ್ಲಿ ಈ ಬಾರಿ ಗರಿಷ್ಠ ಉಷ್ಣಾಂಶ ದಾಖಲಾಗಿದ್ದು ಏಪ್ರಿಲ್-ಮೇನಲ್ಲಿ ವಾಡಿಕೆಗಿಂತ 2.30ಸೆಲ್ಸಿಯಸ್ ಏರಿಕೆಯಾಗಿದೆ. ಇದು ಮುಂಗಾರಿಗೆ ವರವಾಗಿ ಪರಿಣಮಿಸಲಿದೆ. ಬಿಸಿಲಿನ ಹೆಚ್ಚಳವು ಮುಂಗಾರಿನಲ್ಲಿ ಅಧಿಕ ಮಳೆ ತರುವ ಸಾಧ್ಯತೆಯಿದೆ.

ಈ ಸಾಲಿನಲ್ಲಿ ಎಲ್-ನೀನೋ ಪ್ರಭಾವ ಕುಸಿಯುವ ಸಾಧ್ಯತೆಯಿದ್ದು ಜೂನ್-ಸೆಪ್ಟೆಂಬರ್‌ವರೆಗೂ ಉತ್ತಮ ಮಳೆಯಾಗಬಹುದು. ಇಂಥ ಸಂದರ್ಭದಲ್ಲಿ ರೈತರು ಸೂಕ್ತಬೇಸಾಯ ಕ್ರಮ ಅನುಸರಿಸಿ ಅದಕ್ಕೆ ತಕ್ಕ ಕೃಷಿ ಪರಿಕರಗಳನ್ನು ಒದಗಿಸಿಕೊಳ್ಳಬೇಕು. ಮುಂಗಾರಿನಲ್ಲಿ ಪ್ರಮುಖವಾಗಿ ಬೆಳೆಯುವ ಜೋಳ, ಸಜ್ಜೆ, ನವಣೆ, ತೊಗರಿ, ಸೂರ್ಯಕಾಂತಿ, ಔಡಲ, ಎಳ್ಳು, ಅಗಸೆ ಮತ್ತು ಹುರುಳಿ ಏಕಬೆಳೆ ಪದ್ಧತಿಗೆ ಹೆಚ್ಚು ಉಪಯುಕ್ತ. ಸೂಕ್ತ ಮಿಶ್ರ/ಅಂತರ ಬೆಳೆಗಳ ಆಯ್ಕೆಯಿಂದ ಭೂ ಬಳಕೆಯ ದಕ್ಷತೆಹೆಚ್ಚಿಸುವುದಲ್ಲದೆ ಮಳೆಯ ವ್ಯೆಪರೀತ್ಯದಿಂದ ಒಂದೇ ಬೆಳೆಯಿಂದಾಗುವ ಹಾನಿಯ ಪ್ರಮಾಣವನ್ನು ತಗ್ಗಿಸುತ್ತದೆ.

ಜೂನ್ -ಸೆಪ್ಟೆಂಬರ್‌ ಬೆಳೆಗಳು: ಮಧ್ಯದ ಒಣ ಪ್ರದೇಶ (ಕೃಷಿ ವಲಯ-4): ಜೂನ್ ತಿಂಗಳಲ್ಲಿ ಮುಂಗಾರು ಜೋಳ, ತೊಗರಿ+ಜೋಳ( 1:2 ), ನೆಲಗಡಲೆ+ತೊಗರಿ (8:1) ಸಾಲುಗಳ ಪ್ರಮಾಣದಲ್ಲಿ ಅಂತರ ಬೆಳೆಯಾಗಿ, ಎರಡು ಬೆಳೆ ಪದ್ಧತಿಯನ್ನು ಅನುಸರಿಸಿದ್ದಲ್ಲಿ ಮೊದಲನೆ ಬೆಳೆಯಾಗಿ ಹೈಬ್ರಿಡ್ ಸಜ್ಜೆ, ಹೆಸರು, ಅಲಸಂದೆ ಅಥವಾ ಉದ್ದು ಬೆಳೆಗಳನ್ನು ಬಿತ್ತನೆ ಮಾಡಿ. ಜುಲೈ ಮೂರನೇ ವಾರದೊಳಗೆ ನೆಲಗಡಲೆ, ತೊಗರಿ+ನೆಲಗಡಲೆ (4:1 ಅಥವಾ 8:2 ಸಾಲುಗಳ ಪ್ರಮಾಣದಲ್ಲಿ), ಮಧ್ಯಮವಾಧಿ ತಳಿ ರಾಗಿ, ಹಾರಕ, ಸಾಮೆ, ಬರಗು, ಹರಳು ಹಾಗೂ ಕೊನೆಯ ವಾರದಲ್ಲಿ ಹತ್ತಿ ಬೆಳೆಯನ್ನು ಬಿತ್ತನೆ ಮಾಡುವುದು ಸೂಕ್ತ.

ಆಗಸ್ಟ್‌ನಲ್ಲಿ ಅಲ್ಪಾವಧಿ ಹಾಗೂ ಚಳಿಗಾಲಕ್ಕೆ ಸೂಕ್ತ ರಾಗಿ ತಳಿಗಳಾದ ಜಿ.ಪಿ.ಯು-28,45,48 ಇಂಡಾಪ್-9, ಎಚ್.ಆರ್-911, ಎಂ.ಎಲ್-365, ಪಿ.ಆರ್-202 ಅಥವಾ ಸಸಿ ಮಡಿಗಳಲ್ಲಿ ಬೆಳೆಸಿರುವ ರಾಗಿ ಪೈರನ್ನು ನಾಟಿ ಮಾಡುವುದು ಉತ್ತಮ. ಸೆಪ್ಟೆಂಬರ್‌ನಲ್ಲಿ ಅಲಸಂದೆ, ಹುಚ್ಚೆಳ್ಳು,ಅಲ್ಪಾವಧಿ ಸೂರ್ಯಕಾಂತಿಯನ್ನು ಏಕ ಬೆಳೆಯಾಗಿ ಬೆಳೆಯುವುದು ಲಾಭ. ಪೂರ್ವ ಒಣ ಪ್ರದೇಶಗಳಲ್ಲಿ (ಕೃಷಿ ವಲಯ 5) ಜೂನ್‌ನಲ್ಲಿ ಮುಸುಕಿನ ಜೋಳ, ಮುಸುಕಿನ ಜೋಳ+ತೊಗರಿ(1:1ಸಾಲುಗಳ ಪ್ರಮಾಣದಲ್ಲಿ), ನೆಲಗಡಲೆಯಲ್ಲಿ +ತೊಗರಿ ಪ್ರತಿ 8 ಸಾಲಿಗೆ 2 ಸಾಲಿನಂತೆ ಅಂತರ ಬೆಳೆಯಾಗಿ,

ಸುಧಾರಿತ ತಳಿಗಳಾದ ಇಂಡಾಫ್-8 ಅಥವಾ ಎಂ.ಆರ್-1 ರಾಗಿ ತಳಿಗಳನ್ನು, ರಾಗಿ+ತೊಗರಿ (8:2) ಮತ್ತು ಮೇನಲ್ಲಿ ಸುಮಾರು 60ಮಿ.ಮೀ.ನಷ್ಟು ಮಳೆಯಾಗಿ, 30ಸೆಂ.ಮೀ.ನಷ್ಟು ಮೇಲ್ಪದರದ ಮಣ್ಣು ನೆನೆದಿದ್ದಲ್ಲಿ ಅಲಸಂದೆ ಬಿತ್ತನೆ ಮಾಡಿ. ತುಮಕೂರಿನಲ್ಲಿ ಅಲಸಂದೆಗೆ ಬದಲಾಗಿ ಹೆಸರು ಅಥವಾ ಉದ್ದು ಬಿತ್ತಬಹುದು. ಜುಲೈ ಮೂರನೇ ವಾರದವರೆಗೆ ಇಂಡಾಫ್-8 ಅಥವಾ ಎಮ್.ಆರ್-1 ರಾಗಿ ತಳಿಗಳನ್ನು, ನಂತರ ಜಿ.ಪಿ.ಯು-28 ಅಥವಾ ಎಚ್.ಆರ್-911, ಮುಸುಕಿನ ಜೋಳ, ನೆಲಗಡಲೆ, ನೆಲಗಡಲೆ+ತೊಗರಿ (4:1 ಅಥವಾ 8:2 ಸಾಲುಗಳ ಪ್ರಮಾಣದಲ್ಲಿ) ಏಕಕಾಲದಲ್ಲಿ ಬಿತ್ತುವುದು ಉತ್ತಮ.

ಆಗಸ್ಟ್ ಮೂರನೇ ವಾರದೊಳಗೆ ಮಧ್ಯಮಾವಧಿ ತಳಿಗಳನ್ನು ಎಚ್.ಆರ್-911, ಪಿ.ಆರ್-202 ಅಥವಾ ಜಿ.ಪಿ.ಯು- 28 ರಾಗಿ ತಳಿಗಳನ್ನು ಬಿತ್ತನೆ ಮಾಡಿ. ನಂತರ ಸಸಿ ಮಡಿಗಳಲ್ಲಿ ಬೆಳೆಸಿರುವ ರಾಗಿ ಪೈರನ್ನು ನಾಟಿ ಮಾಡಿ. ಹಾರಕ, ಸೂರ್ಯಕಾಂತಿ (ಅಲ್ಪಾವಧಿ ತಳಿ ಮಾರ್ಡೆನ್), ತೇವಾಂಶವಿರುವ ಪ್ರದೇಶಗಳಲ್ಲಿ ಹರಳ ಬಿತ್ತನೆಯನ್ನು ಮುಗಿಸಬೇಕು. ಸಾಧ್ಯವಾದ ಕಡೆ ಮೆಣಸಿನಕಾಯಿ ಪೈರನ್ನು ನಾಟಿ ಮಾಡಿ. ಇದು ಲಾಭದಾಯಕ. ಈ ಬೆಳೆ ಬೆಳೆದಲ್ಲಿ ಸಸ್ಯ ಸಂರಕ್ಷಣೆ ಕಡೆ ಗಮನ ಅಗತ್ಯ. ಸೆಪ್ಟೆಂಬರ್‌ನಲ್ಲಿ ಮರಳು ಮಿಶ್ರಿತ ಭೂಮಿಯಲ್ಲಿ ಅಲಸಂದೆ, ಹುರುಳಿ, ಅಲ್ಪಾವಧಿ ಸೂರ್ಯಕಾಂತಿ, ಹುಚ್ಚೆಳ್ಳು ಅಥವಾ ಹರಳು ಬೆಳೆಗಳನ್ನು ಬಿತ್ತನೆ ಮಾಡಿ.

ದಕ್ಷಿಣ ಒಣ ಪ್ರದೇಶಗಳಲ್ಲಿ (ಕೃಷಿ ವಲಯ 6) ಸುಧಾರಿತ ಸಿ.ಎಸ್.ಎಚ್-5 ಜೋಳದ ತಳಿ ಜೂನ್ ತಿಂಗಳ ಕೊನೆಯ ವಾರದೊಳಗೆ ಬಿತ್ತಿ. ಜೋಳ ಮತ್ತು ತೊಗರಿಯನ್ನು 2:1 ಸಾಲುಗಳ ಪ್ರಮಾಣದಲ್ಲಿ ಅಂತರ ಬೆಳೆಯಾಗಿ, ನೆಲಗಡಲೆ ಮತ್ತು ತೊಗರಿಯನ್ನು (4:1 ಅಥವಾ 8:2 ಸಾಲುಗಳ ಪ್ರಮಾಣದಲ್ಲಿ) ಬಿತ್ತುವುದು ಸೂಕ್ತ. ಜುಲೈ ತಿಂಗಳ ಮೂರನೇ ವಾರದವರೆಗೆ ಇಂಡಾಫ್-8 ಅಥವಾ ಎಂ.ಆರ್-1 ರಾಗಿತಳಿಗಳನ್ನು, ತಿಂಗಳ ಕೊನೆ ವಾರದಲ್ಲಿ ಬಿತ್ತಲು ಜಿ.ಪಿ.ಯು-28 ಪಿ.ಆರ್-202 ಅಥವಾ ಎಚ್.ಅರ್-911 ತಳಿಗಳನ್ನು ಉಪಯೋಗಿಸಿ. ನೆಲಗಡಲೆ ಮತ್ತು ತೊಗರಿಯನ್ನು ಪೂರ್ಣ/ಅಂತರ ಬೆಳೆಯಾಗಿ,

ಸೂರ್ಯಕಾಂತಿ, ನವಣೆ ಮತ್ತು ಹರಳನ್ನು ತೇವಾಂಶ ಚೆನ್ನಾಗಿರುವ ಪ್ರದೇಶಗಳಲ್ಲಿ ಜುಲೈ 15ರ ಒಳಗೆ ಬಿತ್ತನೆ ಮಾಡುವುದರ ಜೊತೆಗೆ ಸಸಿ ಮಡಿಗಳಲ್ಲಿ ರಾಗಿ ಪೈರನ್ನು ಬೆಳೆಸಿ. ಆಗಸ್ಟ್ ತಿಂಗಳಲ್ಲಿ ಕೊಯ್ಲಾದ ಮುಂಗಾರು ಜೋಳದ ಪ್ರದೇಶದಲ್ಲಿ ಅಲಸಂದೆ ಅಥವಾ ಹುರುಳಿ ಬಿತ್ತನೆ ಮಾಡಿ. ಹಾಸನ ತಾಲ್ಲೂಕಿನಲ್ಲಿ ಆಲೂಗಡ್ಡೆ ಕೊಯ್ಲಾದ ನಂತರ ಮುಸುಕಿನ ಜೋಳ ಅಥವಾ ಅಲಸಂದೆ ಹಾಗೂ ಅನುಕೂಲದ ತೇವಾಂಶವಿರುವ ಭೂಮಿಯಲ್ಲಿ ತೃಣಧಾನ್ಯ, ಸೂರ್ಯಕಾಂತಿ ಅಥವಾ ಹುರುಳಿ ಬಿತ್ತಿ, ಸೆಪ್ಟೆಂಬರ್ ತಿಂಗಳಲ್ಲಿ ಆಲೂಗಡ್ಡೆ ಕಿತ್ತಮೇಲೆ ಅಥವಾ ಮುಂಗಾರು ಜೋಳದ ನಂತರ ಅಲಸಂದೆ ಅಥವಾ ಹುರುಳಿ  ಬಿತ್ತನೆ ಮಾಡಿ.

ಮುಂಗಾರಿನಲ್ಲಿ ದ್ವಿದಳ ಧಾನ್ಯ ಬೆಳೆಗಳನ್ನು ಬಿತ್ತುವ ಮುನ್ನ ಜೈವಿಕ ಗೊಬ್ಬರ ರೈಜೋಬಿಯಮ್‌ನಿಂದ ಬೀಜೋಪಚಾರ ಮಾಡುವುದು ಉತ್ತಮ. ಎರಡು ಬೆಳೆ ಪದ್ಧತಿ ಅನುಸರಿಸುವ ರೈತರು ಸದಾ ಜಾಗರೂಕರಾಗಿ, ಬೀಳುವ ಮಳೆಯನ್ನು ರಕ್ಷಣೆ ಮಾಡಿಕೊಂಡು, ವರ್ಷದಲ್ಲಿ ಎರಡು ಬೆಳೆಯನ್ನು ಖುಷ್ಕಿ ಪ್ರದೇಶದಲ್ಲಿಯೂ ತೆಗೆದುಕೊಳ್ಳಬಹುದು. ಮಿಶ್ರ ಬೆಳೆಯಾಗಿ ಬೆಳೆಯಲು ಅನುಕೂಲವಾದ ಬೆಳೆಗಳಲ್ಲಿ ತೊಗರಿ ಪ್ರಮುಖ. ಆಳವಾಗಿ ಬೇರಿಳಿಯುವ ತೊಗರಿ, ಮಳೆ ಕಡಿಮೆಯಾದ ವರ್ಷಗಳಲ್ಲಿಯೂ ನೆಲದಾಳದಿಂದ ನೀರನ್ನು ಹೀರಿಕೊಂಡು ಸಾಮಾನ್ಯವಾದ ಇಳುವರಿ ಕೊಡುವುದರಿಂದ ತೊಗರಿಗೆ ಖುಷ್ಕಿ ಬೇಸಾಯದಲ್ಲಿ ವಿಶಿಷ್ಟ ಸ್ಥಾನವಿದೆ.

ಮಿಶ್ರ ಬೆಳೆ ಬಿತ್ತುವಾಗ ಮುಖ್ಯ ಬೆಳೆಯ ಸಸ್ಯಗಳ ಸಂಖ್ಯೆ ಕಡಿಮೆ ಮಾಡದೆ(ಸಾಲಿನಲ್ಲಿ ಗಿಡದಿಂದ ಗಿಡಕ್ಕೆ ಅಂತರ ಕಡಿಮೆ ಮಾಡಬೇಕು.) ಯಾವುದು ಮುಖ್ಯ ಬೆಳೆಯೋ ಆ ಬೆಳೆಗೆ ಶಿಫಾರಸ್ಸು ಮಾಡಿರುವ ರಾಸಾಯನಿಕ ಗೊಬ್ಬರಗಳನ್ನು ಬೆಳೆಗೆ ಕೊಡುವುದರ ಜತೆ ಸಾರಜನಕವನ್ನು ಮೇಲು ಗೊಬ್ಬರವಾಗಿ ಏಕದಳ ಧಾನ್ಯದ ಬೆಳೆಗೆ ಮಾತ್ರ ಕೊಡಬೇಕು. ಈ ಬಾರಿ ಮುಂಗಾರಿನಲ್ಲಿ ಸೂಕ್ತ ಬೆಳೆಗಳನ್ನು ಬೆಳೆದರೆ ಬಂಪರ್ ಇಳುವರಿ ಪಡೆಯಬಹುದು. 

(ಲೇಖಕರು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹವಾಮಾನ ವಿಭಾಗದ ತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT