ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈನಿಂದ ಬಂದಳು ಮಲ್ಲಿಗೆ!

Last Updated 24 ಜುಲೈ 2014, 19:30 IST
ಅಕ್ಷರ ಗಾತ್ರ

ಶೀರ್ಷಿಕೆ ವಿಚಾರವಾಗಿ ವಿವಾದ ಸೃಷ್ಟಿಸಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದ ‘ಮಿಸ್ ಮಲ್ಲಿಗೆ’ ಚಿತ್ರ ಮುಂದಿನ ಶುಕ್ರವಾರ (ಆಗಸ್ಟ್ 1) ಬಿಡುಗಡೆ ಭಾಗ್ಯ ಕಾಣುತ್ತಿದೆ. ಕರ್ನಾಟಕದ ಪ್ರಾದೇಶಿಕ ಸೆನ್ಸಾರ್ ಮಂಡಳಿಯಲ್ಲಿ ಸದಸ್ಯರಿಲ್ಲದ ಕಾರಣ ಚಿತ್ರವನ್ನು ಮುಂಬೈನ ಸೆನ್ಸಾರ್ ಮಂಡಳಿ ಎದುರು ಪ್ರದರ್ಶಸಿದ್ದು, ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ದೊರೆತಿದೆ.

‘ನಮ್ಮ ಚಿತ್ರದಲ್ಲಿ ಅಶ್ಲೀಲ ದೃಶ್ಯಗಳಿವೆ ಎಂಬ ಕಾರಣಕ್ಕೆ ಸಾಕಷ್ಟು ವಿವಾದವಾಗಿದ್ದು ನಿಜ. ಆದರೆ ಚಿತ್ರದಲ್ಲಿ ಯಾವುದೇ ರೀತಿಯ ಅನವಶ್ಯಕ ದೃಶ್ಯಗಳನ್ನು ತೂರಿಸಿಲ್ಲ. ಒಂಟಿ ಮಹಿಳೆಯೊಬ್ಬಳು ಮುಖ್ಯಭೂಮಿಕೆಯಲ್ಲಿರುವ ಕಥೆ ‘ಮಿಸ್ ಮಲ್ಲಿಗೆ’ ಚಿತ್ರದ್ದು. ಒಂಟಿ ಮಹಿಳೆ ಸಮಾಜದಲ್ಲಿ ಯಾವೆಲ್ಲ ಶೋಷಣೆಗಳನ್ನು ಅನುಭವಿಸುತ್ತಾಳೆ ಎಂಬುದನ್ನು ಚಿತ್ರದಲ್ಲಿ ಸಮರ್ಥವಾಗಿ ತೋರಿಸುವ ಪ್ರಯತ್ನ ಮಾಡಿದ್ದೇನೆ. ಆದ್ದರಿಂದ ಸರ್ಟಿಫಿಕೇಟ್ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ’ ಎಂದರು ನಿರ್ದೇಶಕ ಆಸ್ಕರ್ ಕೃಷ್ಣ.

‘ಇಂದಿನ ತಂತ್ರಜ್ಞಾನವನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇನೆ. ಚಿತ್ರದಲ್ಲಿ ಶೃಂಗಾರ ರಸವೂ ಇದೆ. ಆದರೆ ಒಂದೇ ಒಂದು ದೃಶ್ಯಕ್ಕಾಗಲಿ, ಸಂಭಾಷಣೆಗಾಗಲಿ ಸೆನ್ಸಾರ್ ಮಂಡಳಿ ಕತ್ತರಿ ಹಾಕಿಲ್ಲ. ಅಶ್ಲೀಲ ದೃಶ್ಯಗಳಿದ್ದರೆ ಸೆನ್ಸಾರ್ ಮಂಡಳಿ ಕ್ರಮ ಕೈಗೊಳ್ಳದೇ ಇರುತ್ತಿರಲಿಲ್ಲ’ ಎನ್ನುವುದು ನಿರ್ದೇಶಕರ ಅನಿಸಿಕೆ. ಮುಂಬೈ ಸೆನ್ಸಾರ್ ಮಂಡಳಿಯಿಂದ ಹಸಿಬಿಸಿ ದೃಶ್ಯಗಳ ವಿಚಾರದಲ್ಲಿ ತಮಗೆ ಕೊಂಚ ವಿನಾಯಿತಿ ಸಿಕ್ಕಿದೆ ಎಂಬುದನ್ನು ಅವರು ಒಪ್ಪಿಕೊಳ್ಳುವುದಿಲ್ಲ.

ನಿರ್ದೇಶಕರ ಮಾತಿಗೆ ವ್ಯತಿರಿಕ್ತವಾಗಿ ಮಾತನಾಡಿದ ಸಂಕಲನಕಾರ ಜಿ. ಹರೀಶ್ ಅವರು, ‘ಕರ್ನಾಟಕದಲ್ಲಿ ಚಿತ್ರ ಸೆನ್ಸಾರ್ ಆಗಿದ್ದರೆ ಕೆಲ ದೃಶ್ಯಗಳು ಅದೃಶ್ಯವಾಗುತ್ತಿತ್ತೇನೋ. ಮುಂಬೈಗೆ ಹೋಗಿದ್ದು ಈ ನಿಟ್ಟಿನಲ್ಲಿ ಚಿತ್ರಕ್ಕೆ ವರದಾನವಾಗಿದ್ದರೂ ಆಗಿರಬಹುದು’ ಎಂದರು.
‘ಇದೊಂದು ರೊಮ್ಯಾಂಟಿಕ್ ಎಂಟರ್‌ಟೈನ್‌ಮೆಂಟ್ ಚಿತ್ರ’ ಎನ್ನುವುದು ನಾಯಕ ನಟ ರಂಜನ್ ಶೆಟ್ಟಿ ಬಣ್ಣನೆ. ಅಂದಹಾಗೆ, ಸುಮಾರು 100 ಚಿತ್ರಮಂದಿರಗಳಲ್ಲಿ ‘ಮಿಸ್ ಮಲ್ಲಿಗೆ’ ತೆರೆಕಾಣಲಿದೆ. ಚಿತ್ರದ ಕಾರ್ಯಕಾರಿ ನಿರ್ಮಾಪಕ ರಘುನಂದನ್, ನಾಯಕಿ ರೂಪಾ ನಟರಾಜ್, ಸಹ ಕಲಾವಿದೆ ಶ್ವೇತಾ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT