ವೆಂಡಿ ಡೊನಿಗರ್ ಅವರ ‘ದಿ ಹಿಂದೂಸ್: ಆ್ಯನ್ ಆಲ್ಟರ್ ನೇಟಿವ್ ಹಿಸ್ಟರಿ’ ಪುಸ್ತಕದ ಎಲ್ಲಾ ಪ್ರತಿಗಳನ್ನು ಪೆಂಗ್ವಿನ್ ಪ್ರಕಾಶನ ಸಂಸ್ಥೆ ವಾಪಸ್ ಪಡೆಯಲು ನಿರ್ಧರಿಸಿದೆ. ಈ ಕೃತಿ ಉದ್ದೇಶಪೂರ್ವಕವಾಗಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ ಎಂಬ ದೂರನ್ನು ದೆಹಲಿ ನ್ಯಾಯಾಲಯವೊಂದರಲ್ಲಿ ‘ಶಿಕ್ಷಾ ಬಚಾವೊ ಆಂದೋಲನ’ ಎಂಬ ಹಿಂದೂ ಮೂಲಭೂತವಾದಿ ಗುಂಪೊಂದು ದಾಖಲಿಸಿತ್ತು. ದೂರುದಾರರ ಜೊತೆಗೆ ಕೋರ್ಟ್ ಹೊರಗೆ ಒಪ್ಪಂದವೊಂದನ್ನು ಮಾಡಿಕೊಂಡಿರುವ ಪೆಂಗ್ವಿನ್ ಸಂಸ್ಥೆ ಪುಸ್ತಕಗಳನ್ನು ಹಿಂತೆಗೆದುಕೊಂಡು ನಾಶಪಡಿಸುವುದಾಗಿ ಹೇಳಿದೆ. ನಾಲ್ಕು ವರ್ಷಗಳಿಂದ ಈ ವಿವಾದ ಕೋರ್ಟ್ನಲ್ಲಿತ್ತು. ಆದರೆ ತೀರ್ಪು ಬರುವ ಮೊದಲೇ ಪೂರ್ಣವಾಗಿ ಸೋಲೊಪ್ಪಿಕೊಂಡಿರುವ ಪೆಂಗ್ವಿನ್ ಕ್ರಮ, ಬೌದ್ಧಿಕ ವಲಯದ ಆಕ್ರೋಶಕ್ಕೆ ಕಾರಣವಾಗಿರುವುದು ಸಹಜವಾಗಿದೆ.

ಈ ವಿಚಾರ ಕೋರ್ಟ್ ನಲ್ಲಿ ಇತ್ಯರ್ಥವಾಗುವವರೆಗಾದರೂ ಕಾಯಬಹುದಿತ್ತು. ವಿರುದ್ಧದ ತೀರ್ಪು ಬಂದಿದ್ದಲ್ಲಿ ಉನ್ನತ ನ್ಯಾಯಾಲಯಗಳಿಗೆ ಪ್ರಕರಣವನ್ನು ಒಯ್ಯುವ ಅವಕಾಶ ಇದ್ದೇ ಇತ್ತು ಎಂಬಂತಹ ಭಾವನೆಗಳು ವ್ಯಕ್ತವಾಗಿವೆ. ಈ ಬೆಳವಣಿಗೆ ಭಾರತದ ಉತ್ಕೃಷ್ಟವಾದ ಬಹುಸಂಸ್ಕೃತಿಯ ಉದಾರವಾದಿ ಪರಂಪರೆಗೆ ಆದ ಹಿನ್ನಡೆ ಎಂಬುದರಲ್ಲಿ ಎರಡು ಮಾತಿಲ್ಲ. ಕಲುಷಿತಗೊಳ್ಳುತ್ತಿರುವ ರಾಜಕೀಯ ವಾತಾವರಣದಲ್ಲಿ ಮುಕ್ತ ಅಭಿವ್ಯಕ್ತಿಗೆ ಒದಗುತ್ತಿರುವ ಗಂಡಾಂತರಗಳಿಗೆ ಇದು ಸೂಚಕ.

ಇಂತಹದೊಂದು ಅಸಹನೆಯ ಪರಂಪರೆ ಆರಂಭವಾದದ್ದು ಎಂಬತ್ತರ ದಶಕದಲ್ಲಿ. ಆಗ ಸಲ್ಮಾನ್ ರಷ್ದಿ ಅವರ ‘ಸಟಾನಿಕ್ ವರ್ಸಸ್’ ಪುಸ್ತಕವನ್ನು ರಾಜೀವ್ ಗಾಂಧಿ ಸರ್ಕಾರ ಬಹಿಷ್ಕರಿಸಿತ್ತು. ನಂತರದ ವರ್ಷಗಳಲ್ಲಿ ಹಲವು ಪುಸ್ತಕಗಳು ಭಾರತದಲ್ಲಿ ನಿಷೇಧಕ್ಕೊಳಗಾಗಿವೆ. ಎ.ಕೆ. ರಾಮಾನುಜನ್ ಅವರ ‘ತ್ರೀ ಹಂಡ್ರೆಡ್ ರಾಮಾಯಣಾಸ್’ ಪ್ರಬಂಧ ಹಿಂತೆಗೆದುಕೊಳ್ಳುವ ಒತ್ತಡಗಳಿಗೆ ಆಕ್ಸಫರ್ಡ್ ಯೂನಿವರ್ಸಿಟಿ ಪ್ರೆಸ್ ಮಣಿದಿತ್ತು. ಮಹಾರಾಷ್ಟ್ರ ಸರ್ಕಾರ ಶಿವಾಜಿ ಕುರಿತ ಜೇಮ್ಸ್ ಲೈನ್ ಅವರ ಪುಸ್ತಕ ಬಹಿಷ್ಕರಿಸಿತ್ತು. ಹಾಗೆಯೇ ಎನ್ ಸಿ ಇ ಆರ್ ಟಿ ಪಠ್ಯಪುಸ್ತಕಗಳಿಂದ ಬಿ. ಆರ್. ಅಂಬೇಡ್ಕರ್ ಅವರ ಕುರಿತಾದ ಕಾರ್ಟೂನ್ ಹಿಂತೆಗೆದುಕೊಳ್ಳುವ ಅನಿವಾರ್ಯಕ್ಕೆ ಸರ್ಕಾರ ಸಿಲುಕಿದ್ದುದನ್ನು ಸ್ಮರಿಸಬಹುದು. ಮುಕ್ತ ಅಭಿವ್ಯಕ್ತಿಗೆ ಪ್ರತಿರೋಧದ ದನಿಗಳು ರಾಜ್ಯದಲ್ಲೂ ಅನೇಕ ಪುಸ್ತಕಗಳನ್ನು ಕುರಿತಂತೆ ಎದ್ದಿವೆ.

ಭಾರತದ ರಾಜಕಾರಣದಲ್ಲಿ ವಿವಿಧ ಸಮುದಾಯಗಳು, ಗುಂಪುಗಳ ಅಸ್ಮಿತೆ ರಾಜಕೀಯ ಬಲ ಪಡೆದುಕೊಳ್ಳುತ್ತಿರುವಂತೆಯೇ ಸಂವೇದನೆಗಳು ಹೆಚ್ಚು ಹೆಚ್ಚು ಸೂಕ್ಷ್ಮವಾಗುತ್ತಿವೆ. ಈ ಅಸಹನೆಯ ಶಕ್ತಿಗಳು ಮೇಲುಗೈ ಪಡೆಯುವುದು ಸಂವಿಧಾನದ 19 (1) (ಎ) ವಿಧಿ ಅಡಿ ಮುಕ್ತ ಅಭಿವ್ಯಕ್ತಿ ರಕ್ಷಿಸುವ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಧಕ್ಕೆ ತರುವಂತಹದ್ದು ಎಂಬುದನ್ನು ಗಮನಿಸಬೇಕು. ವಾಸ್ತವವಾಗಿ ವೆಂಡಿ ಡೊನಿಗರ್ ಅವರು ಹಿಂದೂ ಧರ್ಮದ ದೊಡ್ಡ ವಿದ್ವಾಂಸರೆಂಬ ಖ್ಯಾತಿ ಪಡೆದಿದ್ದಾರೆ. 2009ರಲ್ಲಿ ಪ್ರಕಟವಾದ 800 ಪುಟಗಳ ಅವರ ಪುಸ್ತಕ, ದಾಖಲಾದ ಇತಿಹಾಸ ಹಾಗೂ ಕಾಲ್ಪನಿಕ ವಿಶ್ವಗಳ ಮಧ್ಯದ ಕೊಂಡಿಯನ್ನು ನಿರೂಪಿಸಲು ಯತ್ನಿಸುತ್ತದೆ. ಸಂಶೋಧನೆ, ಅಧ್ಯಯನ ನಡೆಸಿ ಬರೆದ ಒಳನೋಟಗಳ ಕೃತಿಗಳು ಮತಾಂಧ ಶಕ್ತಿಗಳ ಸಂಕುಚಿತ ಸಿದ್ಧಾಂತಗಳಿಗೆ ಆಹುತಿಯಾಗುವುದು ಸರ್ಕಾರಗಳ ದೌರ್ಬಲ್ಯಗಳನ್ನೂ ಬಿಂಬಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.