ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ಚರ್ಚೆಗೆ ಸಿದ್ದರಾಮಯ್ಯಗೆ ಆಹ್ವಾನ

ನಿದ್ದೆಯಲ್ಲಿರುವ ಸಿಎಂಗೆ ಕೇಂದ್ರ ಸರ್ಕಾರದ ಸಾಧನೆಗಳ ಅರಿವಿಲ್ಲ: ಆಯನೂರು
Last Updated 26 ಮೇ 2015, 6:34 IST
ಅಕ್ಷರ ಗಾತ್ರ

ದಾವಣಗೆರೆ:  ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಯಾವುದೇ ಪ್ರಗತಿ ಕಂಡಿಲ್ಲ ಎಂದು ಟೀಕಿಸುವ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು ಮುಕ್ತ ಚರ್ಚೆಗೆ ಬರಲಿ ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್‌ ಆಹ್ವಾನ ನೀಡಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಚರ್ಚೆಗೆ ಬಂದರೆ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತ ಕುಮಾರ್‌, ಜಿ.ಎಂ.ಸಿದ್ದೇಶ್ವರ ಅವರನ್ನು ಕಳುಹಿಸುತ್ತೇವೆ ಎಂದ ಅವರು, ಸಿದ್ದರಾಮಯ್ಯ ಅವರಿಗೆ ಮನೆಕಸ ಹೊಡೆಯುವುದು ಮಾತ್ರ ಕಾಯಕವಾದರೆ, ಕೇಂದ್ರ ಸರ್ಕಾರ ಎಲ್ಲರ ಮನೆಯ ಕಸವನ್ನು ಹೊಡೆಯಬೇಕು ಅಲ್ಲವೇ? (ಸಿದ್ದರಾಮಯ್ಯಗೆ ರಾಜ್ಯದ ಜವಾಬ್ದಾರಿ ಮಾತ್ರ, ಕೇಂದ್ರಕ್ಕೆ ಇಡೀ ರಾಷ್ಟ್ರದ ಜವಾಬ್ದಾರಿ ಎನ್ನುವ ಅರ್ಥ) ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷವಾಗಿದೆ. ಇನ್ನೂ ನಾಲ್ಕು ವರ್ಷವಿದ್ದು, ಇಷ್ಟುವರ್ಷಗಳಲ್ಲಿ ಕಾಂಗ್ರೆಸ್‌ ಕೈಯಲ್ಲಿ ಆಗದ ಕೆಲಸಗಳನ್ನು ಮಾಡಿ ತೋರಿಸುತ್ತೇವೆ ಎಂದು ಹೇಳಿದರು.

ಒಂದು ವರ್ಷದಲ್ಲಿ ಸಾಕಷ್ಟು ಭೌತಿಕ ಪ್ರಗತಿ ಕಂಡಿದೆ. ಜನರ ನಿರೀಕ್ಷೆಗಳು ಹುಸಿಗೊಂಡಿಲ್ಲ. ಆಡಳಿತ ಯಂತ್ರ ಚುರುಕುಗೊಂಡಿದೆ. ಕಾಂಗ್ರೆಸ್‌ ಆಡಳಿತದಲ್ಲಿ ಕಚೇರಿಗಳಲ್ಲಿ ಕೆಲಸದ ವೇಳೆ ನೌಕರರೇ ಕಾಣಿಸುತ್ತಿರಲಿಲ್ಲ. ಇದೀಗ ಸಮಯಕ್ಕೆ ಸರಿಯಾಗಿ ನೌಕರರು ಕೆಲಸಕ್ಕೆ ಹಾಜರಾಗುತ್ತಿದ್ದಾರೆ ಎಂದು ಹೇಳಿದರು.
ನೇಪಾಳದಲ್ಲಿ ಸಂಭವಿಸಿದ ಭೂಕಂಪ ಅಲ್ಲಿನ ಅಧ್ಯಕ್ಷರಿಗೆ ತಿಳಿದಿರಲಿಲ್ಲ.

ಕ್ಷಣ ಮಾತ್ರದಲ್ಲಿ ಮಾಹಿತಿ ಪಡೆದ ಮೋದಿ, ನೆರವು ನೀಡುವುದಾಗಿ ಘೋಷಣೆ ಮಾಡಿದ್ದರು. ಸೇನೆ, ಆಡಳಿತ ವ್ಯವಸ್ಥೆ ಚುರುಕುಗೊಂಡಿರುವ ಕಾರಣ ಅಷ್ಟು ಶೀಘ್ರವೇ ಮಾಹಿತಿ ತಿಳಿಯಿತು. ಅಮೆರಿಕ, ರಷ್ಯಾ, ಜಪಾನ್‌ಗೆ ಸ್ಪರ್ಧೆಯೊಡ್ಡುವ ಚೀನಾ ರಾಷ್ಟ್ರದ ಅಧ್ಯಕ್ಷರೇ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವ ಭಾರತದ ಪ್ರಧಾನಿ ಮೋದಿ ಅವರನ್ನು ಆಹ್ವಾನಿ ಸಿದರು. ನೆರೆಯ ರಾಷ್ಟ್ರಗಳ ಸಂಬಂಧ ಉತ್ತಮ ಪಡಿಸಿಕೊಳ್ಳುವ ತವಕ ಮೋದಿ ಅವರಿಗಿದೆ. ಶತ್ರು ರಾಷ್ಟ್ರಗಳೂ ಮಿತ್ರ ರಾಷ್ಟ್ರಗಳಾಗುತ್ತಿವೆ ಎಂದು ಹೇಳಿದರು.

ಹಿಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನು ಪಾಕಿಸ್ತಾನ ‘ಅಳೊ ಹೆಂಗಸು’, ‘ಹಳ್ಳಿ ಹೆಂಗಸು’ ಎಂದು ಟೀಕೆ ಮಾಡುತ್ತಿದ್ದವು. ಮೋದಿ ನಡೆ ನೋಡಿ ಇಡೀ ವಿಶ್ವವೇ ಹೊಗಳುತ್ತಿದೆ. ಅದನ್ನು ಕಾಂಗ್ರೆಸ್‌ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದ ದೂರಿದರು. ಮೋದಿ ಅವರ ವಿದೇಶ ಪ್ರವಾಸದ ಬಗ್ಗೆ ಕಟುವಾಗಿ ಟೀಕಿಸುವ ಖರ್ಗೆಗೆ ಅವರದ್ದೇ ಪಕ್ಷದ ಯುವರಾಜನ ಅಜ್ಞಾತ ವಾಸದ ಮಾಹಿತಿ ಇರಲಿಲ್ಲವೇ? ಸೌಜನ್ಯಕ್ಕೆ, ಸಜ್ಜನಿಕೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಕಾರಣಕ್ಕೆ ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ಸ್ಥಾನವನ್ನು ಖರ್ಗೆಗೆ ನೀಡಲಾಯಿತು ಎಂದು ಹೇಳಿದರು.

ಖರ್ಗೆ ಕಾರ್ಮಿಕ ಮಂತ್ರಿಯಾಗಿದ್ದ ವೇಳೆ ಕಾರ್ಮಿಕರಿಗೆ ಯಾವುದೇ ನೆರವು ನೀಡಲಿಲ್ಲ. ಪುಡಿಗಾಸು ನೀಡಲಾಯಿತು. ಮೋದಿ ಜನಧನ್‌ ಯೋಜನೆ ರೂಪಿಸಿ 50ರಿಂದ 60 ಕೋಟಿ ಹೊಸ ಖಾತೆಗಳು ತೆರೆದವು. ₨ 16 ಸಾವಿರ ಕೋಟಿ ರೂಪಾಯಿ ಬಂಡವಾಳ ಹರಿದುಬಂತು. ಸಬ್ಸಿಡಿ ದುರುಪಯೋಗ ಆಗಬಾರದು ಎನ್ನುವ ಕಾರಣಕ್ಕೆ ಗ್ರಾಹಕರಿಕೆ ನೇರವಾಗಿ ನೀಡಲಾಗುತ್ತಿದೆ ಎಂದು ಹೇಳಿದರು.

ಕಾಯ್ದೆ ರೈತರಿಗೆ ನೆರವಿಗೆ: 2013ರಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಭೂಸ್ವಾಧೀನ ಕಾಯಿದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರುವ ಮೂಲಕ ರೈತರಿಗೆ ನೆರವಾಗುತ್ತಿದೆ. ಆದರೆ, ಕಾಂಗ್ರೆಸ್‌ನವರು ಕಿತಾಪತಿ ನಡೆಸು ತ್ತಿದ್ದಾರೆ ಎಂದರು. 8125 ಕಿ.ಮೀ. ಹೆದ್ದಾರಿಯನ್ನು ಮೇಲ್ದರ್ಜೆಗೇರಿಸುತ್ತೇನೆ ಎಂದು ಸಚಿವ ಮಹದೇವ ಪ್ರಸಾದ್‌ ಹೇಳಿದ್ದಾರೆ.

ಅದಕ್ಕೆ ಭೂಮಿ ಬೇಡವೇ? ಐಐಟಿ ಸ್ಥಾಪನೆಗೆ ಜಮೀನು ಬೇಡವೇ? ಕೈಗಾರಿಕೆ ಸ್ಥಾಪನೆಗೆ ಜಮೀನನ್ನು ಹೇಗೆ ವಶಕ್ಕೆ ಪಡೆ ಯುವುದು? ಎಲ್ಲ ವಿಚಾರಕ್ಕೂ ವಿರೋಧ ವ್ಯಕ್ತಪಡಿಸುವುದು ಸಲ್ಲದು ಎಂದು ಎಚ್ಚರಿಸಿದರು.

ಮೋದಿ ಎಸಿ ಮನೆಯಲ್ಲಿ ಜನಿಸಿದವರಲ್ಲ; ಬೆಳ್ಳಿ ತೊಟ್ಟಿಲಲ್ಲಿ ತೂಗಿಸಿಕೊಂಡವರಲ್ಲ; ಅವರ ಕಚೇರಿಯೂ ಎಸಿಯಲ್ಲ, ಹೀಗಾಗಿ ಅವರ ಮನಸ್ಸು ಸದಾ ಬಡವರ ಪರವಾಗಿ ತುಡಿಯುತ್ತಲೇ ಇರುತ್ತದೆ. ಟೀ ಮಾರಾಟ ನಡೆಸುತ್ತಿದ್ದ ಹುಡುಗನಿಗೆ ಮಾತ್ರ ದೇಶದ ಅಭಿವೃದ್ಧಿಯ ಕಲ್ಪನೆ ಸಾಧ್ಯ ಎಂದು ಹೇಳಿದರು.

ಕೇಂದ್ರದ ಭಾರಿ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ರಾಜ್ಯ ಖಾತೆ ಸಚಿವ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಶೋಷಿತ ವರ್ಗದ ಜನರಿಗೆ ಸಾಮಾಜಿಕ ಭದ್ರತೆ, ಯುವಕರಿಗೆ ಕೌಶಲ ತರಬೇತಿ, ಆರ್ಥಿಕ ಅಭಿವೃದ್ಧಿ, ತ್ವರಿತ ಬೆಳವಣಿಗೆ ಬಡತನ ನಿರ್ಮೂಲನೆ ಆಡಳಿತದಲ್ಲಿ ಆಧುನಿಕತೆ ತರುವುದೇ ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

ಮೋದಿ ವಿದೇಶ ಪ್ರವಾಸ ಮಾಡಿ ಅಮೆರಿಕ, ಫ್ರಾನ್ಸ್‌, ಜಪಾನ್‌, ಚೀನಾ, ಜರ್ಮನಿ, ಆಸ್ಟ್ರೇಲಿಯ, ಕೆನಡಾ, ಸಿಂಗಾಪುರ ರಾಷ್ಟ್ರಗಳ ಉದ್ಯಮಿಗಳಿಗೆ ಭಾರತದಲ್ಲಿ ಬಂಡವಾಳ ಹೂಡುವಂತೆ ಆಹ್ವಾನ ನೀಡಿದ್ದಾರೆ. ನೆರೆಯ ರಾಷ್ಟ್ರಗಳಿಗೆ ಸಹಾಯಹಸ್ತ ನೀಡಿದ್ದಾರೆ ಎಂದು ಶ್ಲಾಘಿಸಿದರು. ಕೆನಡಾ ಭೇಟಿಯಿಂದ 254 ಮಿಲಿಯನ್‌ ಡಾಲರ್‌ ಮೊತ್ತದ 3 ಸಾವಿರ ಮೆಟ್ರಿಕ್‌ ಟನ್‌ ಯುರೇನಿಯಂ ಭಾರತಕ್ಕೆ ರಫ್ತು ಮಾಡುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ದಕ್ಷಿಣಾ ಕೋರಿಯಾದಿಂದ 66 ಸಾವಿರ ಕೋಟಿ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆಯಾಗಿದೆ ಎಂದು ಹೇಳಿದರು.

ಸಾಕಷ್ಟು ಬದಲಾವಣೆ: ಆಡಳಿತದಲ್ಲಿ ಸಾಕಷ್ಟು ಸುಧಾರಣೆ ಮಾಡಲಾಗಿದೆ. ಒಂದು ವರ್ಷದಲ್ಲಿ ಹಗರಣ ಮುಕ್ತ ಸರ್ಕಾರ ನೀಡಲಾಗಿದೆ. ಸಚಿವಾಲಯದ ಸಿಬ್ಬಂದಿ ನೇಮಕದಲ್ಲಿ ಸ್ವಜನಪಕ್ಷಪಾತಕ್ಕೆ ಅವಕಾಶ ನೀಡಿಲ್ಲ. ಯೋಜನಾ ಆಯೋಗ ರದ್ದು ಮಾಡಿ, ನೀತಿ ಆಯೋಗ ರಚಿಸಲಾಗಿದೆ. ತರಂಗಾಂತರಗಳ ಹರಾಜಿನಲ್ಲಿ ₨ 1 ಲಕ್ಷ ಕೋಟಿ ಆದಾಯ ಬಂದಿದೆ ಎಂದು ವರ್ಷ ಸಾಧನೆ ವಿವರಿಸಿದರು.

ರೈಲ್ವೆ ಬಜೆಟ್‌ನಲ್ಲಿ ಘೋಷಣೆ ಮಾಡಿದ 39 ಭರವಸೆಗಳನ್ನು 36 ದಿನಗಳಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಮುಂಬೈ– ಅಹಮದಾಬಾದ್‌ ನಡುವೆ ಬುಲೆಟ್‌ ಟ್ರೈನ್‌ಗೆ ಜಪಾನ್‌ ಬಂಡವಾಳ ಹೂಡಿಕೆ. ದೆಹಲಿ– ಚೆನ್ನೈ ನಡುವೆ ಬುಲೆಟ್ ಟ್ರೈನ್‌ಗೆ ಚೀನಾ ದೇಶ ಬಂಡವಾಳ ಹೂಡಿಕೆ ಮಾಡಿದೆ. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಜೀವನ್‌ ಜ್ಯೋತಿ ಬಿಮಾ ಯೋಜನೆ, ಅಟಲ್‌ ಪಿಂಚಣಿ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ಜನ್‌ಧನ್‌ ಯೋಜನೆ ಜಾರಿಗೆ ತರಲಾಗಿದೆ ಎಂದು ಹೇಳಿದರು.

ಮಾಜಿ ಸಚಿವ ಎಸ್‌.ಎ. ರವೀಂದ್ರ ನಾಥ್‌, ಮಾಡಾಳ್‌ ವಿರೂಪಾಕ್ಷಪ್ಪ, ಬಸವರಾಜನಾಯ್ಕ, ಎಸ್‌.ಎ. ರಾಮಚಂದ್ರ, ಶಿವ ಯೋಗಿ ಸ್ವಾಮಿ, ಯಶವಂತರಾವ್‌ ಜಾಧವ್‌, ಎಚ್‌.ಎನ್‌. ರಾಜಶೇಖರ್‌, ಕೊಂಡಜ್ಜಿ ಜಯಪ್ರಕಾಶ್‌, ಕಲ್ಲೇಶ್‌, ಲಿಂಗಣ್ಣ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT