ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇವಾಡದ ಚಿತ್ತ ಯಾರತ್ತ...?

Last Updated 26 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಉದಯಪುರ (ರಾಜಸ್ತಾನ): ರಾಜಸ್ತಾನ ರಾಜಕೀಯ­­ದಲ್ಲಿ ಆದಿವಾಸಿ­ಗಳದ್ದೇ ನಿರ್ಣಾಯಕ ಪಾತ್ರ. ಆದಿವಾಸಿಗಳ ಪ್ರಾಬಲ್ಯವಿರುವ ದಕ್ಷಿಣ ರಾಜಸ್ತಾನದ ‘ಮೇವಾಡ’ ಪ್ರಾಂತ್ಯದಲ್ಲಿ ಅಧಿಕ ಸ್ಥಾನ ಪಡೆಯುವ ಪಕ್ಷ ಅಧಿಕಾರಕ್ಕೆ ಬರಲಿದೆ ಎನ್ನುವುದು ಬಲವಾದ ನಂಬಿಕೆ.

ಉದಯಪುರ, ಬನ್ಸವಾಡ, ಡುಂಗರಪುರ, ಚಿತ್ತೋಡಗಡ, ರಾಜಸಮಂದ್‌ ಮತ್ತು ಪ್ರತಾಪಗಡ ಜಿಲ್ಲೆಗಳನ್ನು ಒಳಗೊಂಡಿರುವ ದಕ್ಷಿಣ ಭಾಗದಲ್ಲಿ ವಿಧಾನಸಭೆಯ 28 ಸ್ಥಾನಗಳಿವೆ. 20 ಪರಿಶಿಷ್ಟ ಪಂಗಡಕ್ಕೆ. ಒಂದು ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಉಳಿದಿದ್ದು ಸಾಮಾನ್ಯ ಕ್ಷೇತ್ರ.

ಮೇವಾಡ ಕಾಂಗ್ರೆಸ್ ಭದ್ರಕೋಟೆ. ಈ ಕೋಟೆಗೆ  ಎರಡು ದಶಕದ ಹಿಂದೆ ಬಿಜೆಪಿ ಮುತ್ತಿಗೆ ಹಾಕಿದೆ. ಅನಂತರ ಅಧಿಕಾರ 20 ವರ್ಷದಲ್ಲಿ ಎರಡು ಪಕ್ಷಗಳ ನಡುವೆ ಸಮಾನವಾಗಿ ಹಂಚಿಕೆ ಆಗುತ್ತಿದೆ. 1993ರಲ್ಲಿ ಮೊದಲ ಸಲ ಕಾಂಗ್ರೆಸ್ ಕೋಟೆ ಉರುಳಿ­ದಾಗ ಭೈರೋನ್‌ಸಿಂಗ್‌ ಶೆಖಾವತ್‌ ಅಧಿಕಾರಕ್ಕೆ ಬಂದರು. 98ರಲ್ಲಿ ಮತ್ತೆ ಕಾಂಗ್ರೆಸ್ ರಾಜ್ಯ ಮರಳಿತು. 2003ರಲ್ಲಿ ವಸುಂಧರಾ ರಾಜೆ ಮುಖ್ಯಮಂತ್ರಿ ಆದರು. ಅಧಿಕಾರ ಸದ್ಯ ಕಾಂಗ್ರೆಸ್‌ ಕೈಯಲ್ಲಿದೆ. ಕಿತ್ತುಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ.

ಕಳೆದೆರಡು ಚುನಾವಣೆಗಿಂತ ಇದು ಸ್ವಲ್ಪ ವಿಭಿನ್ನವಾದ ಚುನಾವಣೆ. ಆದಿವಾಸಿ ಸಮುದಾಯದ ಮುಖಂಡ, ಲೋಕಸಭೆ ಪಕ್ಷೇತರ ಸದಸ್ಯ ಕಿರೋರಿ­ಲಾಲ್‌ ಮೀನಾ ಅವರ ‘ನ್ಯಾಷನಲ್‌ ಪೀಪಲ್‌ ಪಾರ್ಟಿ’ (ಎನ್‌ಪಿಪಿ) ಅಭ್ಯರ್ಥಿ­ಗಳು ಕಣಕ್ಕಿಳಿದಿದ್ದಾರೆ. ಮೀನಾ ಅವರಿಗೆ ಆದಿವಾಸಿ ಸಮಾಜದ ಮೇಲೆ ಪ್ರಾಬಲ್ಯ­ವಿದೆ.  ಎನ್‌ಪಿಪಿ ಎರಡು ಪಕ್ಷಗಳಿಗೂ ಹಾನಿ ಮಾಡಲಿದೆ ಎನ್ನುವುದು ರಾಜ­ಕೀಯ ತಜ್ಞರ ವಿಶ್ಲೇಷಣೆ. ಕಳೆದ ಚುನಾ­ವಣೆ­ಯಲ್ಲೂ ಮೀನಾ ಬಂಡಾಯ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿದ್ದರು.

ಆದಿವಾಸಿ ಸಮಾಜ ಕೈಬಿಟ್ಟು ಹೋಗದಂತೆ ಕಾಂಗ್ರೆಸ್ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಉಚಿತ ಔಷಧ, ಒಂದು ರೂಪಾಯಿಗೆ ಕೆ.ಜಿ ಅಕ್ಕಿ, ಹೊಸ ರೈಲು ಮಾರ್ಗ ಮಂಜೂರು ಇತ್ಯಾದಿ... ಎಐಸಿಸಿ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್‌ ಮೇವಾಡ ಭಾಗದಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಿದ್ದಾರೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಚಾರ ಮಾಡಿದ್ದಾರೆ.

ಮೇವಾಡ ಪ್ರಾಂತ್ಯ ನಾಲ್ವರು ಮುಖ್ಯಮಂತ್ರಿ­ಗಳನ್ನು ಕೊಟ್ಟಿದೆ. ಮೋಹನಲಾಲ್‌ ಸುಖಾಡಿಯಾ, ಹರಿ­ದೇವ್‌ ಜೋಶಿ, ಶಿವಚರಣ್‌ ಮಾಥೂರ್‌ ಮತ್ತು ಹೀರಲಾಲ್‌ ದೇವ­ಪುರ ಈ ಭಾಗದಿಂದ ಬಂದವರು. ಕೇಂದ್ರ ಸಚಿವರಾದ ಸಿ.ಪಿ. ಜೋಶಿ ಮತ್ತು ಗಿರಿಜಾ ವ್ಯಾಸ್‌ ಮೇವಾಡ ಪ್ರಾಂತ್ಯ­ದ­ವರು. ಬಿಜೆಪಿ ನಾಯಕ ಗುಲಾಬ್‌­ಚಂದ್‌ ಕಟಾರಿಯಾ ಅವರೂ ಇಲ್ಲಿಯವರು.

ಕಟಾರಿಯಾ ಮೂರನೇ ಸಲ ಉದಯಪುರ­ದಿಂದ ಸ್ಪರ್ಧಿಸಿದ್ದಾರೆ. ರಾಜಸಮಂದ್‌ ವಿಧಾನ­ಸಭಾ ಕ್ಷೇತ್ರದಲ್ಲಿ ಬಿಜೆಪಿ ಉಪಾಧ್ಯಕ್ಷೆ ಕಿರಣ್‌ ಮಹೇಶ್ವರಿ ಕಣದಲ್ಲಿದ್ದಾರೆ. ಇವೆರಡೂ ಕ್ಷೇತ್ರ ಬಿಟ್ಟರೆ  ಪ್ರಮುಖ ಅಭ್ಯರ್ಥಿಗಳು ಈ ಭಾಗದಲ್ಲಿ ಅಖಾಡದಲ್ಲಿ ಇಲ್ಲ. ಎಲ್ಲ ಕಡೆಗಳಂತೆ ಮೇವಾಡ­ದಲ್ಲೂ ಕಾಂಗ್ರೆಸ್, ಬಿಜೆಪಿಯೊಳಗೆ ಗುಂಪು ಗಾರಿಕೆ ಇದೆ. ವಸುಂಧರಾ ಮತ್ತು ಕಟಾರಿಯಾ ನಡುವೆ ಶೀತಲ ಸಮರ ನಡೆದಿದೆ.

ಆರು ತಿಂಗಳ ಹಿಂದೆ ಮೇವಾಡ ಭಾಗದಲ್ಲಿ ಗುಲಾಬ್‌ಚಂದ್‌ ಕಟಾ ರಿಯಾ ‘ಜನ ಜಾಗರಣ ಯಾತ್ರೆ’ ಕೈ ಗೊಳ್ಳಲು ನಿರ್ಧರಿಸಿದಾಗ ವಸುಂಧರಾ ರಾಜೆ ಪ್ರಬಲವಾಗಿ ವಿರೋಧಿಸಿದರು. ದೆಹಲಿ ವರಿಷ್ಠರು ಯಾತ್ರೆ ನಡೆಸದಂತೆ ಕಟಾರಿಯಾ ಅವರಿಗೆ ಸೂಚಿಸಿದರು. ಆಗ­ವರು ರಾಜ್ಯ ಬಿಜೆಪಿ ಅಧ್ಯಕ್ಷ. ವಸುಂಧರಾ ವಿರೋಧಪಕ್ಷದ ನಾಯಕಿ. ಆನಂತರ ಇಬ್ಬರ ಸ್ಥಾನಗಳು ಅದಲು­ಬದಲಾಗಿವೆ. ಪಟ್ಟು ಬಿಡದೆ ಮಾಜಿ ಮುಖ್ಯ ಮಂತ್ರಿ ಅಧ್ಯಕ್ಷ ಸ್ಥಾನ ಪಡೆದಿ­ದ್ದಾರೆ. ಅವರೀಗ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ.

ಮೇವಾಡ ಪ್ರಾಂತ್ಯದ ಬಹುತೇಕ ಬಿಜೆಪಿ ಅಭ್ಯರ್ಥಿಗಳು ಕಟಾರಿಯಾ ಅವರ ಆಯ್ಕೆ. ವಸುಂಧರಾ ಮಾತು ನಡೆದಿಲ್ಲ. ವಲ್ಲಭನಗರ ವಿಧಾನಸಭೆ ಕ್ಷೇತ್ರದಲ್ಲಿ ರಾಜಮನೆತನಕ್ಕೆ ಸೇರಿದ ರಣಧೀರ್‌ಸಿಂಗ್‌ ಅವರಿಗೆ ಟಿಕೆಟ್‌ ಕೊಡಿಸಲು ಮಾಜಿ ಮುಖ್ಯಮಂತ್ರಿ ಪ್ರಯತ್ನಿಸಿ ವಿಫಲರಾದರು. ಈಗ ಸಿಂಗ್‌ ಬಂಡಾಯ ಬಿಜೆಪಿ ಅಭ್ಯರ್ಥಿ.

ಬಿಜೆಪಿಯಲ್ಲಿಬಂಡಾಯ: ಮಾವಲಿಯಲ್ಲಿ ಮಾಜಿ ಮುಖ್ಯಮಂತ್ರಿ ಅವರಿಗೆ ನಿಷ್ಠರಾದ ಧರ್ಮನಾರಾ­ಯಣ ಜೋಶಿ ಅವರಿಗೆ ಟಿಕೆಟ್‌ ನಿರಾಕರಿಸಲಾಗಿದೆ. ಕಳೆದ ಚುನಾವಣೆಯಲ್ಲಿ ಬ್ರಾಹ್ಮಣ ಸಮಾಜದ ಜೋಶಿ ಈ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು. ಜೋಶಿ ಅವರಿಗೆ ಟಿಕೆಟ್‌ ಕೊಡದಿರುವುದರಿಂದ ಬ್ರಾಹ್ಮಣ ಸಮಾಜ ಸಿಟ್ಟಿಗೆದ್ದಿದೆ ಎಂದು ಹೇಳಲಾಗುತ್ತಿದೆ. ಬೇರೆ ಭಾಗದಲ್ಲಿ ಕಟಾರಿಯಾ ಅನೇಕ ಬೆಂಬಲಿಗರಿಗೆ ವಸುಂಧರಾ ಟಿಕೆಟ್‌ ನೀಡಿಲ್ಲ ಎಂಬ ಟೀಕೆಗಳಿವೆ. ಬಿಜೆಪಿ ಗುಂಪುಗಾರಿಕೆಗೆ ಇದೊಂದು ಉದಾಹರಣೆ.
ಮೇವಾಡದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ, ಅಪರಾಧ ಹಿನ್ನೆಲೆಯ ಅನೇಕರಿಗೆ ಟಿಕೆಟ್‌ ನೀಡಿವೆ. ಗಣಿ ಉದ್ಯಮಿಗಳು, ಮದ್ಯದ ದೊರೆಗಳು ಅಖಾಡಕ್ಕೆ ಇಳಿದಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಉಭಯ ಪಕ್ಷಗಳೂ ಬಂಡಾಯ ಎದುರಿಸುತ್ತಿವೆ.

ಮೋದಿ ಪ್ರಭಾವ?: ಮೇವಾಡ ಗುಜ ರಾತ್‌ ಗಡಿಗೆ ಹೊಂದಿಕೊಂಡಿರುವ ಭಾಗ. ಆ ಭಾಗದಲ್ಲಿ ಮೋದಿ ಪ್ರಭಾವ ಬೀರಬಹುದೇ ಎನ್ನುವ ಕುತೂಹಲವಿದೆ. ಹಿಂದಿನ ಚುನಾವಣೆಯಲ್ಲೂ ಗುಜ­ರಾತ್‌ ಮುಖ್ಯ­ಮಂತ್ರಿ ನಾಲ್ಕು ಸಭೆ ನಡೆಸಿ­ದ್ದರು. ಆದರೆ, ಬಿಜೆಪಿಗೆ ಆದಿವಾಸಿ ಮತಗಳನ್ನು ಸೆಳೆಯಲು ವಿಫಲರಾಗಿ­ದ್ದರು. ಈ ಸಲವೂ ಮೋದಿ ಆದಿವಾಸಿ­ಗಳನ್ನು ಓಲೈಸಲು ಪ್ರಯತ್ನ ಮಾಡಿ­ದ್ದಾರೆ.

ಮೋದಿ ಜನಪ್ರಿಯತೆ ಮತ ಆಗಿ ಪರಿವರ್ತನೆ ಆಗಬಹುದು ಎಂದು ಬಿಜೆಪಿ ಭಾವಿಸಿದೆ. ರಾಜಸ್ತಾನದ ಬೇರೆ ಭಾಗ­ಗಳ ಜನ ಮೇವಾಡದಲ್ಲಿ ಮೋದಿ ಅಲೆ ಇದೆ ಎನ್ನುತ್ತಾರೆ. ಆದರೆ, ಮೋದಿ ಅಲೆ ಇಲ್ಲ ಎಂದು ಚಿತ್ತೋಡಗಡದ ಭುವ­ನೇಶ್‌ ವ್ಯಾಸ್‌, ಉದಯಪುರದ ಶಾಂತಿ­ಲಾಲ್‌ ಸಿರೋಯ ಅಭಿಪ್ರಾಯ­ಪಡುತ್ತಾರೆ.

ಕಾಂಗ್ರೆಸ್ ಹಿಂದಿನ ಚುನಾವಣೆಯಲ್ಲಿ ಪಡೆ­ದಿರುವ ಸ್ಥಾನಗಳನ್ನು ಉಳಿಸಿ­ಕೊಳ್ಳುವ ಪ್ರಯತ್ನ ಮಾಡುತ್ತಿದೆ. ಸೋನಿಯಾ ಮತ್ತು ರಾಹುಲ್‌ ಪ್ರಚಾರ ಕಾಂಗ್ರೆಸ್‌ಗೆ ಬಲ ತಂದುಕೊಡಲಿದೆ ಎಂದು ಸ್ಥಳೀಯ ಕಾಂಗ್ರೆಸ್‌ ಮುಖಂಡರು ವಿಶ್ಲೇಷಿಸುತ್ತಾರೆ.

ಬಿಜೆಪಿ ಗುಲಾಬ್‌ಚಂದ್‌ ಕಟಾರಿಯಾ ಬಿಡುವಿಲ್ಲದ ಪ್ರಚಾರ ಕೈಗೊಂಡಿದ್ದಾರೆ. ಮೇವಾಡ ಮತದಾರರು ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಲಿದ್ದಾರೆ ಎಂದು ಪ್ರತಿಪಾದಿಸುತ್ತಿದ್ದಾರೆ. ಮೇವಾಡದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಹಣಾಹಣಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT