ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು

Last Updated 6 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಕಾರಂಜಿ (ವೈಚಾರಿಕ ಲೇಖನಗಳು)
ಲೇ: ಬಿ.ಪಿ. ಶಿವಾನಂದ ರಾವ್‌
ಪ್ರ: ಸಾಹಿತ್ಯ ಸುಗ್ಗಿ, ನಂ. 40, 1ನೇ ಮುಖ್ಯ ರಸ್ತೆ, 2ನೇ ಹಂತ, 3ನೇ ಬ್ಲಾಕ್‌, ನಾಗರಬಾವಿ, ಬೆಂಗಳೂರು– 560 072


ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಬಿ.ಪಿ. ಶಿವಾನಂದ ರಾವ್‌ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಬರೆದವರು. ಮುಖ್ಯವಾಗಿ ಅವರು ಕತೆಗಾರ, ಕಾದಂಬರಿಕಾರ. ನಗೆಲೇಖನ, ಶೈಕ್ಷಣಿಕ, ವೈಚಾರಿಕ ಪ್ರಬಂಧಗಳನ್ನೂ ಅವರು ಬರೆದಿದ್ದಾರೆ. ಪ್ರಸಕ್ತ ಕೃತಿ ‘ಕಾರಂಜಿ’ ವೈಚಾರಿಕ ಪ್ರಬಂಧಗಳನ್ನು ಒಳಗೊಂಡ ಸಂಗ್ರಹವಾಗಿದೆ. ಇಲ್ಲಿನ 23 ಲೇಖನಗಳು ಹಲವಾರು ವಿಷಯಗಳನ್ನು ಮಂಡಿಸುತ್ತವೆ. ಇಲ್ಲಿನ ಲೇಖನಗಳು ಸರಳವಾಗಿವೆ, ವಿಚಾರಪ್ರಚೋದಕವಾಗಿವೆ. ಅನಗತ್ಯ ಸಂಕೀರ್ಣತೆ ಅವುಗಳಿಗಿಲ್ಲ. ಅದಲ್ಲದೆ ಅವುಗಳಿಗೆ ಒಂದು ಬಗೆಯ ಬೋಧಪ್ರದವಾದ, ತಿಳಿವಳಿಕೆ ಹೇಳುವ ಹಿರಿಯನೊಬ್ಬನ ಧಾಟಿ ಇದೆ.

ಇಲ್ಲಿನ ಪ್ರಬಂಧಗಳ ವಸ್ತು ವಿಷಯಗಳು ನಮಗೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಗೊತ್ತಿರುವಂತಹವು. ‘ವೃತ್ತಿ ಮತ್ತು ಪ್ರವೃತ್ತಿ’, ‘ಕಲಾಪ್ರೇಮ’, ‘ಕರ್ತವ್ಯ ಪ್ರಜ್ಞೆ’, ‘ಕೊಂಕಣಿ ಗಾದೆಗಳಲ್ಲಿ ಸ್ವಾರಸ್ಯ’– ಹೀಗೆ ಅವರು ನಿರ್ವಹಿಸಿರುವ ವಸ್ತುಗಳು ಜೀವನದಿಂದಲೇ ಆಯ್ದುಕೊಂಡು ನೇಯ್ದ ಬರಹಗಳಾಗಿವೆ. ಓದುಗರನ್ನು ಗೊಂದಲಗೊಳಿಸುವ, ದಿಕ್ಕುತಪ್ಪಿಸುವ ಕೆಲಸವನ್ನು ತಮ್ಮ ಬರಹಗಳಲ್ಲಿ ಅವರು ಮಾಡುವುದಿಲ್ಲ. ಆದ್ದರಿಂದಲೇ ಅವರ ಬರಹಕ್ಕೆ ಸುಗಮವಾಗಿ ಸಾಗುವ ಶೈಲಿಯೊಂದು ಸಿಕ್ಕಿದೆ. ಅಲ್ಪಕಾಲದ್ದೇ ಆದರೂ ಮೇಲಕ್ಕೆ ಚಿಮ್ಮುವ ‘ಕಾರಂಜಿ’ಯ ಚೆಂದ, ಒನಪು, ಬಳುಕಾಟ ಅವರ ವಿಚಾರಗಳ ಹರಿವಿಗೆ ಇದೆ. ಓದುಗರ ಮನ ಮುಟ್ಟಬೇಕು ಎಂಬ ಉದ್ದೇಶದಿಂದಲೇ ಹೊರಟ ಇಲ್ಲಿ ಬರಹಗಳು ನಿಸ್ಸಂದೇಹವಾಗಿ ತಮ್ಮ ಉದ್ದೇಶದಲ್ಲಿ ವಿಫಲವಾಗುವುದಿಲ್ಲ.

ಪತ್ರ ಸಂವಾದ (ಚಿಂತಕ–ಸಂಶೋಧಕ ಶ್ರೀ ಮುಕುಂದ ಪ್ರಭು ಮಂಜೇಶ್ವರ ಇವರೊಡನೆ ಪತ್ರಮೂಲಕ ಜಿಜ್ಞಾಸೆ)
ಲೇ: ವಿಜಯನಾಥ ಶೆಣೈ
ಪ್ರ: ಅಭಿನವ, ನಂ, 7/18–2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ,
ವಿಜಯನಗರ, ಬೆಂಗಳೂರು– 560 040

ಮಣಿಪಾಲದ ಹಸ್ತ ಶಿಲ್ಪ ಹಾಗೂ ಸಂಸ್ಕೃತಿ ಗ್ರಾಮವನ್ನು ರೂಪಿಸಿದ ವಿಜಯನಾಥ ಶೆಣೈ ಕೆಲಕಾಲದ ಹಿಂದೆ ಹಲವು ರಂಗಗಳ ಪ್ರತಿಭಾವಂತರೊಂದಿಗೆ ನಡೆಸಿದ ಪತ್ರಸಂವಾದದ ಸಂಕಲನ ‘ಪತ್ರವಾತ್ಸಲ್ಯ’ವನ್ನು ಪ್ರಕಟಿಸಿದ್ದರು. ಈಗ ಅವರು ‘ಪತ್ರ ಸಂವಾದ’ವನ್ನು ಪ್ರಕಟಿಸಿದ್ದಾರೆ. ಇದು ಮುಕುಂದ ಪ್ರಭು ಮಂಜೇಶ್ವರ ಅವರೊಂದಿಗೆ ನಡೆಸಿದ ಪತ್ರಗಳ ಸಂವಾದವಾಗಿದೆ. ಇಲ್ಲಿ ಪ್ರಮುಖವಾಗಿ ಪ್ರಸ್ತಾಪಿತವಾಗಿರುವುದು ವಾಸ್ತುಶಿಲ್ಪದ ಬಗ್ಗೆ. ಅದರಲ್ಲೂ ಕರಾವಳಿಯ ವಾಸ್ತುಕಲೆಯ ಬಗ್ಗೆ ಅವರು ನಡೆಸಿದ ಪತ್ರ ವ್ಯವಹಾರ ನಮ್ಮ ಅನೇಕ ತಜ್ಞರ ಕಣ್ಣುತೆರೆಸುವಂತಿದೆ ಮಾತ್ರವಲ್ಲ, ಈ ಕ್ಷೇತ್ರದಲ್ಲಿನ ಈ ಇಬ್ಬರ ಅಪಾರ ಜ್ಞಾನ ಓದುಗರ ಅರಿವಿಗೆ ಬರುವಂತಿದೆ.

ಇಲ್ಲಿ ಕೇವಲ ವಾಸ್ತುಶಿಲ್ಪದ ಬಗ್ಗೆ ಮಾತ್ರ ಮಾತುಕತೆ ಇದೆ ಎಂದು ತಿಳಿದುಕೊಂಡರೆ ತಪ್ಪಾಗುತ್ತದೆ. ಬದಲಾಗುತ್ತಿರುವ ಸಂಸ್ಕೃತಿಯ ಬಗ್ಗೆ, ಕಮಲಾದೇವಿ ಚಟ್ಟೋಪಧ್ಯಾಯ ಅವರೂ ಸೇರಿದಂತೆ ಅನೇಕ ವ್ಯಕ್ತಿಗಳ ಬಗ್ಗೆ, ದಕ್ಷಿಣ ಕನ್ನಡದ ಹಲವು ಸ್ಥಳಗಳು ಮತ್ತಿತರ ಸಂಗತಿಗಳ ಬಗ್ಗೆ ಪತ್ರಗಳಲ್ಲಿ ಉಲ್ಲೇಖವಿದೆ. ಈ ಇಬ್ಬರೂ ವ್ಯಕ್ತಿಗಳಲ್ಲಿ ಕಾಣಸಿಗುವುದು ಅವರ ಸಮಾಜಕ್ಕೆ ಏನನ್ನಾದರೂ ಕೊಡಬೇಕು ಎನ್ನುಬ ಬದ್ಧತೆ ಮತ್ತು ಅದರಲ್ಲೇ ಮುಳುಗಿರುವ ಕ್ರಿಯಾಶೀಲ ಮನಸ್ಸು. ಮುಕುಂದ ಪ್ರಭುಗಳ ಹೆಸರು, ಪ್ರಸಿದ್ಧಿ, ಪ್ರಚಾರಗಳನ್ನು ಒಲ್ಲದ, ಅಪಾರ ಕ್ರಿಯಾಶೀಲ ವ್ಯಕ್ತಿತ್ವ ಇಲ್ಲಿನ ಬರವಣಿಗೆಯಲ್ಲಿ ಕಾಣುತ್ತದೆ. ವಿಜಯನಾಥ ಶೆಣೈ ಅವರು ಮರುನಿರ್ಮಾಣ ಮಾಡಿ ಉಳಿಸಿದ ಪಾರಂಪರಿಕ ಕಟ್ಟಡಗಳಷ್ಟೇ ಅಲ್ಲ ಈ ಪತ್ರ ಸಂವಾದಗಳು ಕೂಡ ಚರಿತ್ರೆಯ ಭಾಗವಾಗುತ್ತವೆ.
ನನ್ನ ಮಸೀದಿಯ ಧ್ವಂಸಗೈದವರಿಗೆ ಕೃತಜ್ಞ...

(ಸೂಫಿಯ ಕಣ್ಣಲ್ಲಿ ಹನಿಗಳು) (ಕವಿತೆಗಳು)
ಲೇ: ಬಿ.ಎಂ. ಬಶೀರ
ಪ್ರ: ಇರುವೆ ಪ್ರಕಾಶನ, ಮಾರ್ವೆಲ್‌ ಅಪಾರ್ಟ್‌ಮೆಂಟ್‌, ಮನೆ ಸಂಖ್ಯೆ 301, ಮೊದಲ ತಿರುವು, ಶಿವನಗರ, ಶ್ರೀನಿವಾಸ ಕಾಲೇಜು ಎದುರು ರಸ್ತೆ, ಪಾಂಡೇಶ್ವರ, ಮಂಗಳೂರು–575 001


ನಿಜವಾದ ದೇವರನ್ನು, ಧರ್ಮವನ್ನು ಕವಿಯೊಬ್ಬ ಹುಡುಕಲು ಹೊರಟರೆ ಏನಾಗುತ್ತದೆ ಎಂಬುದಕ್ಕೆ ಉತ್ತರ ಬಿ.ಎಂ. ಬಶೀರ ಅವರ ಇಲ್ಲಿನ ಕಿರುಗವನಗಳಲ್ಲಿ ಸಿಕ್ಕುತ್ತದೆ. ‘ತನ್ನನ್ನು ಸಹಿಸಿಕೊಳ್ಳಲಾಗದ ಮೌಲ್ವಿಗಳು ಮದ್ರಸದಿಂದ ಹೊರಹಾಕಿದ್ದರಿಂದ ಅಧ್ಯಾತ್ಮ’ವನ್ನು ಕಲಿಯಲು ಆರಂಭಿಸಿದ ಕವಿ ಅದನ್ನು ಕಾವ್ಯದಲ್ಲಿ ಹುಡುಕಿದ್ದಾರೆ. ‘ಹರಿಯುತ್ತಿರುವುದು ಬೆಂಕಿಯ ನದಿ/ ನಾನೋ ಕಾಗದದ/ ದೋಣಿಯನ್ನೇರಿದ್ದೇನೆ/ ನನ್ನ ದೊರೆಯೇ,/ ತೀರ ತಲುಪುವ ಕನಸು/ ಕಾಣುತ್ತಿದ್ದೇನೆ’ (ಪು. 40) ಎನ್ನುತ್ತಾರೆ ಕವಿ. ಮನುಷ್ಯನೊಬ್ಬನ ಜೀವಪರವಾದ ಆರ್ತ ಪ್ರಾರ್ಥನೆಯಂತಿರುವ ಈ ಕಿರುಕವನಗಳು ವರ್ತಮಾನವನ್ನು ಧ್ಯಾನಿಸಿವೆ. ಅವನ್ನು ಪುಟ್ಟ ಮಾತುಗಳಲ್ಲಿ ಹಿಡಿದಿಡಲು ಪ್ರಯತ್ನಿಸಿವೆ. ಆ ಮಾತುಗಳು ಸಂತನೊಬ್ಬನ ತಾತ್ವಿಕ ಮಾತುಗಳಂತಾಗಲು ಹವಣಿಸಿವೆ

ಈ ಸಂಕಲನಕ್ಕೆ ಹೆಸರು ಕೊಟ್ಟ ಪುಸ್ತಕದ ಕೊನೆಯ ಕವನದಲ್ಲಿ ‘ನನ್ನ ಮಸೀದಿಯ ಧ್ವಂಸಗೈದವರಿಗೆ ಕೃತಜ್ಞತೆಗಳು’ ಎನ್ನುವ ಕವಿ ‘ತೆರೆದ ಹಸಿರು ಬಯಲೇ ನನ್ನ ಮಸೀದಿ’ ಎನ್ನುತ್ತಾರೆ. ಪ್ರಕೃತಿಯಲ್ಲೇ ಮಸೀದಿಯನ್ನು ಕಾಣುವ, ಅದರ ವೈಭವಕ್ಕೆ ದಂಗಾಗಿರುವ ಕವಿ ‘ನನ್ನ ದೊರೆಗೆ ಬಾಗಿದ್ದೇನೆ’ ಎನ್ನುತ್ತಾರೆ. ಇದು ಎಲ್ಲ ಕವಿಗಳ ಸಾಮಾನ್ಯ ಆಶಯವೇ ಆದ್ದರಿಂದ ಈ ನುಡಿಗಳಲ್ಲಿ ಅಂತಹ ವಿಶೇಷವಿಲ್ಲ. ಹಂದಿಯಿರಲಿ, ಗೋಮಾಂಸವಿರಲಿ ಅವನ್ನು ಮಸೀದಿ, ದೇವಸ್ಥಾನದ ಮುಂದೆ ಎಸೆಯವ ಬದಲು ಹಸಿದ ಬಡವನ ಮನೆಯ ಮುಂದೆ ಎಸೆಯಿರಿ. ಅವನ ಮನೆಯ ಒಲೆ ಉರಿಸಿದ ಪುಣ್ಯ ನಿಮ್ಮದಾಗುತ್ತಿತ್ತು ಎಂದು ಅವರದೊಂದು ಕವಿತೆ ಹೇಳುತ್ತದೆ. ನಿಜವಾದ ಧರ್ಮ, ಮನುಷ್ಯತ್ವ ಎಲ್ಲಿದೆ ಎನ್ನುವುದನ್ನು ಈ ಮಾತುಗಳು ಸೂಚಿಸುವಂತಿವೆ. ಇವೇ ಇಲ್ಲಿನ ಕಿರುಕವಿತೆಗಳ ಆತ್ಮವಾಗಿದೆ. ಈ ಕಾಲಕ್ಕೆ ಬೇಕಾದ, ಎಲ್ಲ ಮನುಷ್ಯ ಜೀವಗಳನ್ನು ಪೊರೆಯುವ ಮಾತುಗಳಾಗಿ ಅವು ಇಲ್ಲಿ ಪ್ರಕಟವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT