ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ನಲ್ಲಿ ಕನ್ನಡ ತಂತ್ರಾಂಶ ಅಭಿವೃದ್ಧಿಪಡಿಸಿ

ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಒತ್ತಾಯ
Last Updated 5 ಮಾರ್ಚ್ 2015, 19:43 IST
ಅಕ್ಷರ ಗಾತ್ರ

ಬೆಂಗಳೂರು: ‘ಮೊಬೈಲ್‌ನಲ್ಲಿ ಕನ್ನಡ ತಂತ್ರಾಂಶ ಅಭಿವೃದ್ಧಿ ಮಾಡುವಂತೆ ನಾವು ಹಲವು ಮುಖ್ಯಮಂತ್ರಿ­ಗಳ ಮೇಲೆ ಒತ್ತಡ ಹೇರಿದೆವು. ಆದರೆ, ಅವರೆಲ್ಲ ನಮ್ಮೊಂದಿಗೆ ಫೋಟೊಗೆ ಪೋಸು ಕೊಟ್ಟರೆ ಹೊರತು ಇದರ ಬಗೆಗೆ ಒಂದಿಷ್ಟೂ ತಲೆ ಕೆಡಿಸಿಕೊಳ್ಳಲಿಲ್ಲ’ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಟೀಕಿಸಿದರು.

ಜಯಕರ್ನಾಟಕ ಸಂಘಟನೆಯು ಗುರುವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಡಿಸಿದ್ದ ‘ರಾಜ್ಯ ಮುಂಗಡ ಪತ್ರ: ಕನ್ನಡ ಮತ್ತು ಕನ್ನಡಿಗನ ಅಭಿವೃದ್ಧಿ’ ಕುರಿತು ಚರ್ಚೆ ಹಾಗೂ ‘ಭೂ ಸ್ವಾಧೀನ ಸುಗ್ರೀವಾಜ್ಞೆ ಬಗ್ಗೆ ಒಂದು ಚಿಂತನೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಮೊಬೈಲ್‌ನಲ್ಲಿ ಕನ್ನಡ ಭಾಷೆ ಬಳಸಲು ಸರಳ­ವಾದ ತಂತ್ರಾಂಶವನ್ನು  ಸರ್ಕಾರವು ಅಭಿವೃದ್ಧಿಪಡಿಸ­ಬೇಕು. ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ₨ 2 ಕೋಟಿ ಅನುದಾನ ನೀಡ­ಲಾಗಿತ್ತು, ಆದರೆ, ಈವರೆಗೂ ಅಭಿವೃದ್ಧಿ ಕಾರ್ಯಕ್ಕೆ ಆ ಅನುದಾನ ಬಳಸಿಕೊಂಡಿಲ್ಲದಿರುವುದು ಅಧಿಕಾರಿಗಳ ಕಾರ್ಯದಕ್ಷತೆಗೆ ಹಿಡಿದ ಕನ್ನಡಿಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಮುಖಂಡ ಎಚ್‌. ವಿಶ್ವನಾಥ್‌, ‘ರಾಜ್ಯದಲ್ಲಿ ಕನ್ನಡ ಮತ್ತು ತಂತ್ರಜ್ಞಾನ ಎಂಬ ಇಲಾಖೆ ಇದೆ. ಇದಕ್ಕೆ ಹಿರಿಯ ಐಎಎಸ್ ಅಧಿಕಾರಿಯನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡ­ಲಾಗಿದೆ. ಈ ಇಲಾಖೆಯಲ್ಲಿ ಬಿ.ಎಸ್.ಯಡಿಯೂರಪ್ಪ ಇಂದಿಗೂ ಮುಖ್ಯಮಂತ್ರಿಯಾಗಿದ್ದಾರೆ. ಇದನ್ನು ಬದಲಾಯಿಸಬೇಕೆಂಬ ಜವಾಬ್ದಾರಿ ಅಧಿಕಾರಿಗಳಿಗಿಲ್ಲ’ ಎಂದರು.

‘ಕೇಂದ್ರ ಸರ್ಕಾರ ಭೂ ಸ್ವಾಧೀನ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ಅಧಿಸೂಚನೆ  ಹೊರಡಿಸಿದೆ.  ಲಭ್ಯವಿರುವ ಕೃಷಿ ಭೂಮಿಯನ್ನು ಹಾಳು ಮಾಡಿ ವಿದೇಶಗಳಿಂದ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣ ಮಾಡಲು ಹೊರಟಿರುವುದು ಸರಿಯಲ್ಲ’ ಎಂದು ಟೀಕಿಸಿದರು.

‘ಕೇಂದ್ರ ಸರ್ಕಾರದ ಭೂ ಸ್ವಾಧೀನ ಕಾಯ್ದೆಯ ಸುಗ್ರೀವಾಜ್ಞೆ ಅಧಿಸೂಚನೆ ವಿರೋಧಿಸಿ ಮಾ.11ರಂದು ದೇವರಾಜ ಅರಸು ಅವರ ಹುಟ್ಟೂರಾದ  ಹುಣಸೂರಿನ ಕಲ್ಲಹಳ್ಳಿಯಿಂದ ರೈತ ರಥಯಾತ್ರೆಯನ್ನು ಆರಂಭಿಸಿ ನಗರದ ಸ್ವತಂತ್ರ್ಯ ಉದ್ಯಾನದವರೆಗೆ ಜಾಥಾ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್‌  ಮಾತನಾಡಿ,  ‘ಕನ್ನಡ ಸಾಹಿತಿಗಳಿಂದು ಸೈನಿಕರಿಲ್ಲದ ಸೇನಾಧಿಪತಿಗಳಾಗಿದ್ದಾರೆ. ಅವರು ಬರೆಯುವ ಕಾದಂಬರಿಗಳು ಗ್ರಂಥಾಲಯಗಳಿಗೆ ಮಾತ್ರ ಸೀಮಿತವಾಗಿರುವುದು ದುರದೃಷ್ಟ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT