ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ವಿರುದ್ಧ ಶೌರಿ ಟೀಕಾಸ್ತ್ರ

Last Updated 2 ಮೇ 2015, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ, ಐಎಎನ್‌ಎಸ್‌): ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ವಿರುದ್ಧ ಕಿಡಿಕಾರಿರುವ ಬಿಜೆಪಿಯ ಹಿರಿಯ ನಾಯಕ, ಪತ್ರಕರ್ತ ಅರುಣ್ ಶೌ ರಿ ಅವರು, ಕೇಂದ್ರದ ಆರ್ಥಿಕ ನೀತಿ ಗುರಿಯಿಲ್ಲದ್ದು ಮತ್ತು ಈಗಿನ ಸಾಮಾಜಿಕ ವಾತಾವರಣ ಅಲ್ಪಸಂಖ್ಯಾತರಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ ಕಟುವಾಗಿ ಟೀಕಿಸಿದರು.

ಮೋದಿ ಸರ್ಕಾರದ ಒಂದು ವರ್ಷದ ಆಡಳಿತ ಕೆಲವು ಭಾಗಗಳಲ್ಲಿ ಉತ್ತಮವಾಗಿದೆ. ಅವರು ಪ್ರಧಾನಿ ಹುದ್ದೆಗೆ ಏರಿದ್ದು ವಿದೇಶಾಂಗ ನೀತಿ ದೃಷ್ಟಿಯಿಂದ ಅನುಕೂಲಕರವಾಗಿದೆ.  ಆದರೆ ಅವರು ಆರ್ಥಿಕತೆಗೆ ಸಂಬಂಧಿಸಿದಂತೆ ನೀಡಿರುವ ಭರವಸೆ ಯಾವುದೂ ಈಡೇರುತ್ತಿಲ್ಲ ಎಂದು ಅವರು ಹೇಳಿದರು.

ಸುದ್ದಿವಾಹಿನಿಯೊಂದಕ್ಕೆ ಶುಕ್ರವಾರ ನೀಡಿದ ಸಂದರ್ಶನದಲ್ಲಿ ಅವರು, ‘ನೀತಿಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವುದಕ್ಕಿಂತ ಮಾಧ್ಯಮಗಳಲ್ಲಿ ಸುದ್ದಿ ಮಾಡುವುದೇ ಸರ್ಕಾರಕ್ಕೆ ಮಹತ್ವವಾಗಿರುವಂತಿದೆ’ ಎಂದು ಟೀಕಿಸಿದರು.

‌‌ಹೂಡಿಕೆದಾರರು ಸ್ಥಿರತೆ ಮತ್ತು ಭವಿಷ್ಯದ ನಿರೀಕ್ಷೆಗಳನ್ನು ಬಯಸುತ್ತಾರೆ ಎಂದ ಅವರು, ಆರ್ಥಿಕ ತಜ್ಞ ದೀಪಕ್ ಪಾರೇಖ್ ಆರ್ಥಿಕ ನೀತಿಗಳು ತಳಮಟ್ಟದಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ವ್ಯಕ್ತಪಡಿಸಿದ್ದ ಆತಂಕವನ್ನು ಎಚ್ಚರಿಕೆಯ ಗಂಟೆ ಎಂಬುದಾಗಿ ವಿಶ್ಲೇಷಿಸಿದರು.
ಭಾರತವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಲು ಮೋದಿ ಸಾಕಷ್ಟು ಶ್ರಮ ವಹಿಸಿದ್ದಾರೆಯೇ ಎಂಬ ಪ್ರಶ್ನೆಗೆ ‘ಎಲ್ಲವೂ ಉತ್ಪ್ರೇಕ್ಷಿತಗೊಂಡಿವೆ’ ಎಂದರು.

‘ಅಂತಹ ಹೇಳಿಕೆಗಳನ್ನು ಮಾಧ್ಯಮಗಳಲ್ಲಿ ದೊಡ್ಡದಾಗಿ ಬಿಂಬಿಸಲಾಗುತ್ತವೆ. ಆದರೆ ಅವು ವಾಸ್ತವಕ್ಕೆ ದೂರವಾಗಿರುತ್ತವೆ’ ಎಂದು ನುಡಿದರು.

ವಿದೇಶಿ ಹೂಡಿಕೆದಾರರನ್ನು ದೂರ ಇರಿಸಿರುವ ತೆರಿಗೆ ಸಮಸ್ಯೆಗಳ ನಿರ್ವಹಣೆಯನ್ನೂ ಅವರು ಕಟುವಾಗಿ ಟೀಕಿಸಿದರು.
‘ಕ್ರೈಸ್ತರ ಮೇಲಿನ ದಾಳಿಗಳು, ಘರ್ ವಾಪಸಿ ಮತ್ತು ಲವ್ ಜಿಹಾದ್‌ ಚಳವಳಿಗಳಂತಹ  ಘಟನೆಗಳು ಅಲ್ಪಸಂಖ್ಯಾತರಲ್ಲಿ ತೀವ್ರ ಆತಂಕ ಮೂಡಿಸಿದೆ’ ಎಂದು ಹೇಳಿದರು.

ಪಕ್ಷದ ಸಂಸದರು ಮತ್ತು ಮುಖಂಡರ ಹೇಳಿಕೆಗಳು, ಬಲಪಂಥೀಯ ಸಂಘಟನೆಗಳ ಚಟುವಟಿಕೆಗಳಿಂದ ಉದ್ಭವವಾಗುತ್ತಿರುವ ಸಾಮಾಜಿಕ ಉದ್ವಿಗ್ನತೆ ಕುರಿತ ಮೋದಿ ಅವರ ಮೌನವನ್ನು ಅವರು ಖಂಡಿಸಿದರು.

‘ಸಾನಿಯಾ ಮಿರ್ಜಾ ಚಾಂಪಿಯನ್‌ಶಿಪ್ ಗೆದ್ದಾಗ ಟ್ವೀಟ್‌ ಮಾಡುತ್ತೀರಿ. ಅಥವಾ ಯಾರದ್ದಾದರೂ ಜನ್ಮದಿನಕ್ಕೆ ಶುಭಾಶಯ ಕೋರುತ್ತೀರಿ. ಆದರೆ ನೈತಿಕ ಪ್ರಶ್ನೆಗಳನ್ನು ಒಳಗೊಂಡಿರುವ ಸಂಗತಿಗಳಲ್ಲಿ ಯಾಕೆ ಹಾಗೆ ಮಾಡುವುದಿಲ್ಲ? ಅವರೇಕೆ ಮೌನ ವಹಿಸಿದ್ದಾರೆ ಎಂದು ಜನರು ಅನುಮಾನ ಪಡುತ್ತಾರೆ’ ಎಂದರು.

‘ಮೋದಿ, ಅಮಿತ್ ಷಾ ಮತ್ತು ಅರುಣ್ ಜೇಟ್ಲಿ ಪಕ್ಷವನ್ನು ನಡೆಸುತ್ತಿದ್ದಾರೆ. ಇದು ಪ್ರತಿಪಕ್ಷಗಳನ್ನು ಕೆರಳಿಸುತ್ತಿದ್ದರೆ, ಬಿಜೆಪಿ ಸದಸ್ಯರಲ್ಲಿಯೇ ದಿಗಿಲು ಹುಟ್ಟಿಸಿದೆ’ ಎಂದು ಅವರು ನುಡಿದರು.

‘ತಪ್ಪುಗಳಿಗೆ ಅವರೇ ಹೊಣೆಗಾರರು ಮತ್ತು ಅವರೇ ಸುಪ್ರೀಂಕೋರ್ಟ್‌. ಈ ಮೂವರು ನಾಯಕರಿಗೆ ಸೂಕ್ತ ಪ್ರತಿಕ್ರಿಯೆ ದೊರಕುತ್ತಿಲ್ಲ ಮತ್ತು ದೋಷ ಪರಿಹಾರದ ಕಾರ್ಯಗಳು ನಡೆಯುತ್ತಿಲ್ಲ’ ಎಂದು ಹೇಳಿದರು.

ಒಬಾಮ ಅವರ ಭೇಟಿ ವೇಳೆ ತಮ್ಮದೇ ಹೆಸರುಳ್ಳ ದುಬಾರಿ ಸೂಟ್‌ ಧರಿಸಿದ್ದ ಮೋದಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ‘ಮೋದಿ ಅದನ್ನು ಒಪ್ಪಿಕೊಂಡು ಏಕೆ ಧರಿಸಿದರು ಎಂದು ನನಗೆ ಅರ್ಥವಾಗುತ್ತಿಲ್ಲ. ಗಾಂಧೀಜಿ ಅವರ ಹೆಸರನ್ನು ಬಳಸಿಕೊಂಡು ಅಂತಹ ಉಡುಪನ್ನು ಧರಿಸಬಾರದು’ ಎಂದರು.

ಸ್ಪಷ್ಟತೆಯ ಕೊರತೆ: ಪಾಕಿಸ್ತಾನಕ್ಕೆ ಸಂಬಂಧಿಸಿದ ಮೋದಿ ಅವರ ನೀತಿಯಲ್ಲಿ ಸ್ಪಷ್ಟತೆಯ ಕೊರತೆಯಿದ್ದು, ಜಟಿಲ ಸಮಸ್ಯೆಗೆ ತಮ್ಮದೇ ದೃಷ್ಟಿಕೋನದಲ್ಲಿ ಪರಿಹಾರ ಕಂಡುಕೊಳ್ಳುವ ಭ್ರಮೆ ಅವರಲ್ಲಿದೆ ಎಂದು  ಶೌ ರಿ ಟೀಕಿಸಿದರು.

ಬಿಜೆಪಿ ಟೀಕೆ: ಶೌರಿ ಅವರ ಹೇಳಿಕೆಗೆ ಶನಿವಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಶೌ ರಿ ಅವರು ‘ಕಷ್ಟಕಾಲಕ್ಕೆ ಆಗದ ಮಿತ್ರ’ ಮತ್ತು ತಮಗೆ ಸೂಕ್ತ ಸ್ಥಾನ ಸಿಗದಿರುವುದಕ್ಕೆ ಗೊಣಗಾಡುತ್ತಿರಬಹುದು ಎಂದು ಟೀಕಿಸಿದೆ.

ಎಎಪಿ ಆಗ್ರಹ: ಅರುಣ್ ಶೌರಿ ಅವರ ಟೀಕೆಯನ್ನು ಸ್ವಾಗತಿಸಿರುವ ಆಮ್ ಆದ್ಮಿ ಪಕ್ಷ, ‘ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT