ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌನ ಭಾಷಾ ಕಲಿಕೆ

Last Updated 31 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

‘ನಮ್ಮ ಸಂಕಷ್ಟ, ಸಮಸ್ಯೆ ಮತ್ತು ಯಾತನೆ ನಮ್ಮೊಂದಿಗೆ ಕೊನೆಯಾಗಲಿ. ನಮ್ಮ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕಿದ್ದೇವೆ. ಮೂಕಜೀವಿಗಳಾದ ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಜೀವನ ಸವೆಸಿದ್ದೇವೆ. ಎದೆಯೆತ್ತರ ಬೆಳೆದಿರುವ ಅವರು ಒಂದು ತೊಟ್ಟು ಕಣ್ಣೀರು ಹರಿಸಿದರೂ ಸಹಿಸೊಲ್ಲ. ಎಷ್ಟೇ ಕಷ್ಟವಾಗಲಿ ಇಲ್ಲವೇ ಆರ್ಥಿಕ ನಷ್ಟವಾಗಲಿ, ನಮ್ಮ ಮುದ್ದಿನ ಮಕ್ಕಳನ್ನು ಒಂದು ದಡಕ್ಕೆ ಸೇರಿಸುವವರೆಗೆ ನಾವು ಕೊನೆಯುಸಿರು ಎಳೆಯೊಲ್ಲ. ಎಲ್ಲರಂತೆ ದೊಡ್ಡ ಕೆಲಸ ಹಿಡಿದು ಹೆಚ್ಚಿನ ಸಂಬಳ ತಾರದಿದ್ದರೂ ಚಿಂತೆಯಿಲ್ಲ, ನೆಮ್ಮದಿಯಿಂದ ಬದುಕಿದರೆ ಸಾಕು’

ಮೂಕ, ಕಿವುಡ ಮಕ್ಕಳ ಪೋಷಕರ ಮಾತಿವು. ವಾಕ್‌ ಮತ್ತು ಶ್ರವಣ ದೋಷವುಳ್ಳ ಮಕ್ಕಳು ಮತ್ತು ಯುವಜನರನ್ನು ಕೇಂದ್ರೀಕರಿಸಿ ಚಿಕ್ಕಬಳ್ಳಾಪುರದಲ್ಲಿ ದಿ ಅಸೋಸಿಯೇಷನ್‌ ಆಫ್‌ ಪೀಪಲ್‌ ವಿತ್ ಡಿಸೆಬಿಲಿಟಿ (ಎಪಿಡಿ) ಸಂಸ್ಥೆಯು ಸರ್ಕಾರಿ ಇಲಾಖೆಗಳ ಜೊತೆ ಕೈಜೋಡಿಸಿ ನಡೆಸುವ ಉಚಿತ ವಸತಿ ಸಹಿತ ತರಬೇತಿ ಮತ್ತು ಮಾರ್ಗದರ್ಶನ ಶಿಬಿರಗಳಲ್ಲಿ  ಕೇಳಿಬರುವ ಮಾತುಗಳಿವು.

ಕನ್ನಡ, ತೆಲುಗು, ಇಂಗ್ಲಿಷ್‌ ಮುಂತಾದ ಭಾಷೆಗಳನ್ನು ಚೆನ್ನಾಗಿ ಮಾತನಾಡಲಿಕ್ಕೆ ಬಂದರೂ ತಮ್ಮ ಮುದ್ದಿನ ಮಕ್ಕಳಿಗೆ ಮಾತು ಬಾರದ ಮತ್ತು ಕಿವಿ ಕೇಳದ ಕಾರಣ ಪೋಷಕರು ಸಹ ಒಂದರ್ಥದಲ್ಲಿ ಮೌನಧರಿಸುತ್ತಾರೆ. ಮಕ್ಕಳೊಂದಿಗೆ ಸಂಜ್ಞಾ ಭಾಷೆಯಲ್ಲೇ ಮಾತನಾಡಿ ಮಕ್ಕಳ ಸಂತಸ–ಸಂಭ್ರಮ ಹಂಚಿಕೊಳ್ಳಲು ಪ್ರಯತ್ನಿಸುತ್ತಾರೆ. ಅವರ ಪಾಲಿಗೆ ಮೌನವೇ ಭಾಷೆ ಮತ್ತು ಕಣ್ಣೋಟವೇ ಸಂಜ್ಞೆ. ಮಕ್ಕಳು ಕಣ್ಣು ರಪ್ಪೆ ಮುಚ್ಚಿ–ತೆರೆದು ತಮ್ಮ ಭಾವನೆಗಳನ್ನು ಹಂಚಿಕೊಂಡರೆ, ಅದನ್ನು ಪೋಷಕರು ಅರ್ಥೈಸಿಕೊಳ್ಳಬೇಕು.

ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ ಮತ್ತು ಆಂಧ್ರಪ್ರದೇಶದ ಮದನಪಲ್ಲಿಯಿಂದ ಬರುವ ಪೋಷಕರು ತಮ್ಮ ಮೂಕ ಮಕ್ಕಳೊಂದಿಗಿನ ಸಹಜೀವನದ ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ. ಸುಮಾರು 300ಕ್ಕೂ ಹೆಚ್ಚು ಪೋಷಕರು ಒಂದೆಡೆ ಸೇರಿ, ತಮ್ಮ ಮೂಕ ಮಕ್ಕಳ ತುಂಟಾಟ ಮತ್ತು ಬೆಳವಣಿಗೆಯ ದಿನಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಮಕ್ಕಳು ನೇರವಾಗಿ ಏನನ್ನೂ ಹೇಳಲು ಸಾಧ್ಯವಾಗದಿದ್ದರೂ ಅವರ ಭಾವನೆಗಳನ್ನು ತಟ್ಟನೇ ಅರಿಯುವ ಪೋಷಕರು, ‘ನಮ್ಮ ಮಕ್ಕಳು ಎಲ್ಲರಂತಲ್ಲ. ಎಲ್ಲರಗಿಂತ ಭಿನ್ನವಾಗಿದ್ದರೂ ಅವರು ನಮ್ಮ ಪ್ರೀತಿಯ ಮಕ್ಕಳು’ ಎನ್ನುತ್ತಾರೆ.

‘ನನಗೆ ಇಬ್ಬರು ಹುಡುಗಿಯರು ಮತ್ತು ಒಬ್ಬ ಹುಡುಗನಿದ್ದಾನೆ. ಆದರೆ ಮೂವರೂ ಮೂಕರು. ಅವರನ್ನು ಶಾಲೆಗೆ ಕಳುಹಿಸುತ್ತಿದ್ದೇನೆ. ಬಡತನವಿದ್ದರೂ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮತ್ತು ಬೇಕಿರುವುದನ್ನು ನೀಡಲು ಪ್ರಯತ್ನಿಸುತ್ತಿದ್ದೇನೆ. ಅವರಲ್ಲಿ ಖಿನ್ನತೆ ಆವರಿಸದಿರಲೆಂದೇ ನಾನೂ ಮೌನವಾಗಿ ಪ್ರತಿಕ್ರಿಯಿಸುತ್ತೇನೆ. ಸಂಜ್ಞಾ ಭಾಷೆಯಲ್ಲೇ ಸಂಭಾಷಿಸುತ್ತೇನೆ. ಇತ್ತೀಚಿನ ಕೆಲ ವರ್ಷಗಳಿಂದ ನಮ್ಮ ಮನೆಯಲ್ಲಿ ಮೌನವೇ ಭಾಷೆಯಾಗಿದೆ’ ಎಂದು ಮದನಪಲ್ಲಿಯ ಸುಗುಣಾ ಹೇಳುತ್ತಾರೆ.

‘ಮಕ್ಕಳು ಚಿಕ್ಕವರಿದ್ದಾಗ, ಶಿಕ್ಷಣ ಕೊಡಲು ಹಂಬಲಿಸಿದೆ. ಮುಂದೆ ಅವರನ್ನು ಕಾಲೇಜಿಗೂ ಕಳುಹಿಸುತ್ತೇನೆ. ನಮ್ಮ ನಂತರವೂ ಅವರು ನೆಮ್ಮದಿಯಿಂದ ಬಾಳಬೇಕು ಎಂಬ ಆಸೆ ನನ್ನದು. ಅವರ ಜೀವನಕ್ಕೆ ಪೂರಕವಾದ ಸೌಲಭ್ಯಗಳನ್ನು ಸರ್ಕಾರ ಮತ್ತು ಸಂಘಸಂಸ್ಥೆಗಳಿಂದ ಕೊಡಿಸಲು ಪ್ರಯತ್ನಿಸುತ್ತೇನೆ. ನನಗೂ ವಯಸ್ಸಾಗುತ್ತಿದೆ. ಮುಂದೆ ಓಡಾಡಲು ಕಷ್ಟವಾಗಬಹುದು. ಅದಕ್ಕೆ ಈಗಲೇ ಅವರಿಗೆ ಸೌಕರ್ಯಗಳನ್ನು ಒದಗಿಸಲು ಸಾಧ್ಯವಿದ್ದೆಡೆಯೆಲ್ಲ ನೆರವು ಪಡೆಯುತ್ತಿದ್ದೇನೆ’ ಎಂದು ಅವರು ತಿಳಿಸಿದರು.

ಕಿವುಡ ಮತ್ತು ಮೂಕ ಮಕ್ಕಳನ್ನು   ಹೊಂದಿರುವ ಕೆಲ ಪೋಷಕರಲ್ಲಿ ಖಿನ್ನತೆ ಆವರಿಸಿಕೊಂಡಿರುತ್ತದೆ. ತಮ್ಮ ಕನಸು  ನನಸಾಗುವುದು ಕಷ್ಟ ಎಂಬ ಬೇಸರವೂ ಅವರಲ್ಲಿ ಇರುತ್ತದೆ. ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಮತ್ತು ಸಹ ಜೀವನ ನಡೆಯುವಂತೆ ಮಾಡಲು ಪೋಷಕರಿಗೆ ಅಗತ್ಯ ತರಬೇತಿ ಮತ್ತು ಮಾರ್ಗದರ್ಶನ ಬೇಕು. ಕೆಲ ಪೋಷಕರು ಬೇಗನೇ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಆದರೂ ಕೆಲವರು ಆಘಾತದಿಂದ ಹೊರಬರುವುದು ಕಷ್ಟ. ವಾಕ್‌ ಮತ್ತು ಶ್ರವಣ ದೋಷವುಳ್ಳ ಮಕ್ಕಳನ್ನು ಮತ್ತು ಪೋಷಕರನ್ನು ಒಂದೆಡೆ ಸೇರಿಸಿ, ಅವರಿಗೆ ಅಗತ್ಯ ಮಾರ್ಗದರ್ಶನ ನೀಡುತ್ತಿದ್ದೇವೆ. ಶಿಬಿರದ ವೇಳೆ ಪೋಷಕರಿಗೆ ಸಂಜ್ಞಾಭಾಷೆಯ ಪುಸ್ತಕ, ಪರಿಕರಗಳನ್ನು ನೀಡುತ್ತೇವೆ ಎಂದು ಎಪಿಡಿ ಸಂಸ್ಥೆಯ ಪ್ರತಿನಿಧಿ ಮುನಿನಾರಾಯಣ ಹೇಳುತ್ತಾರೆ.

ಒಮ್ಮೆ ತರಬೇತಿ ಪಡೆದ ಮಕ್ಕಳ ಮನೆಗೆ ಎಪಿಡಿ ಸಂಸ್ಥೆಯವರು ಎರಡು ಅಥವಾ ಮೂರು ತಿಂಗಳಿಗೊಮ್ಮೆ ಭೇಟಿ ನೀಡುತ್ತಾರೆ. ಮಕ್ಕಳ ಚಲನವಲನದ ಬಗ್ಗೆ ಮಾಹಿತಿ ಪಡೆಯುತ್ತಾರೆ. ಸಂಜ್ಞಾ ಭಾಷೆಯಲ್ಲಿ ಬೆಳವಣಿಗೆ ಕಾಣುತ್ತಿರುವ ಮತ್ತು ಆತ್ಮವಿಶ್ವಾಸ ವೃದ್ಧಿಸಿಕೊಳ್ಳುತ್ತಿರುವ ಬಗ್ಗೆಯೂ ಗಮನಹರಿಸುತ್ತೇವೆ. ಬೆಳವಣಿಗೆಗೆ ಅನುಸಾರವಾಗಿ ತರಬೇತಿ ಹಂತವನ್ನು ನಿರ್ಧರಿಸುತ್ತೇವೆ. ಮಕ್ಕಳು ಯಾವ್ಯಾವ ಶಾಲೆಗೆ ಹೋಗುತ್ತಾರೋ, ಆಯಾ ಶಾಲಾ ಶಿಕ್ಷಕರಿಗೂ  ತರಬೇತಿ ನೀಡುತ್ತೇವೆ. ಕಲಿಕಾ ಪ್ರಕ್ರಿಯೆ ವರ್ಷಪೂರ್ತಿ ನಡೆಯುತ್ತದೆ ಎಂದು ಅವರು ಹೇಳುತ್ತಾರೆ.

ಎಪಿಡಿ ಸಂಸ್ಥೆಯಲ್ಲಿ ವಾಕ್‌–ಶ್ರವಣ ದೋಷದಿಂದ ಬಳಲುತ್ತಿರುವ ಶಿಕ್ಷಕರಿದ್ದು, ದೋಷವುಳ್ಳ ಮಕ್ಕಳಿಗೆ ಯಾವುದೆಲ್ಲ ಸಮಸ್ಯೆಗಳು ಕಾಡುತ್ತಿವೆಯೆಂದು ಬೇಗನೇ ಗ್ರಹಿಸುತ್ತಾರೆ. ತರಬೇತಿ, ಉಪನ್ಯಾಸ ನೀಡುವ ವೇಳೆ ಮಕ್ಕಳ ಹಾವಭಾವ ಅರಿತು ಶಿಕ್ಷಕರು ಪಾಠ ಮಾಡುತ್ತಾರೆ. ಅತ್ಯಂತ ಸರಳ ಮತ್ತು ಸ್ನೇಹಪರವಾಗಿ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತೇವೆ ಎಂದು ಹೇಳುತ್ತಾರೆ.

ಮೌನವೇ ಜೀವಾಳ, ಸಂಜ್ಞೆಯೇ ಪರಿಭಾಷೆ
ಬಹುತೇಕ ಕಿವುಡು ಮತ್ತು ಮೂಗ ಮಕ್ಕಳು ಹಲವಾರು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಸಾಮಾನ್ಯ ಮಕ್ಕಳ ಜೊತೆ ಬೆರೆಯಲಾಗದೇ ಮತ್ತು ತಮ್ಮ ಇಂಗಿತವನ್ನು ಮುಕ್ತವಾಗಿ ಅಭಿವ್ಯಕ್ತಪಡಿಸಲಾಗದೇ ಅವರು ಸಂಕಟಪಡುತ್ತಾರೆ. ಆದರೂ ಒಂದಿಲ್ಲೊಂದು ದಿನ ‘ಗದ್ದಲ’ದ ಜಗತ್ತಿನಲ್ಲಿ ನನ್ನದೊಂದು ಮೌನಧ್ವನಿ ಇರುತ್ತದೆ ಎಂಬ ಸಣ್ಣ ಆಶಾಕಿರಣದೊಂದಿಗೆ ಅವರು ಬದುಕುತ್ತಿದ್ದಾರೆ.

ವಾಕ್‌–ಶ್ರವಣದೋಷದ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿದ್ದು, ಬೇರೆ ಬೇರೆ ಕಾರಣಗಳಿಂದಾಗಿ ಅವರು ಈ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅತ್ಯಾಧುನಿಕ ಸಾಧನದ ನೆರವು ಮತ್ತು ತರಬೇತಿಯಿಂದ ಸಾಮಾನ್ಯರಂತೆ ಬದುಕಲು ಹಂಬಲಿಸಿದರೂ ಅವರಿಗೆ ಕೆಲವೊಮ್ಮೆ ಪ್ರೋತ್ಸಾಹ, ಮಾರ್ಗದರ್ಶನ ಸಿಗುವುದಿಲ್ಲ. ಇದರಿಂದ ಖಿನ್ನರಾಗುತ್ತಾರೆ. ತಮ್ಮೊಳಗಿನ ಸಾಮರ್ಥ್ಯ ಮತ್ತು ಪ್ರತಿಭಾ ಶಕ್ತಿಯನ್ನೇ ಮರೆತುಬಿಡುತ್ತಾರೆ.

‘ಒಂದೇ ಕುಟುಂಬದವರು ಮತ್ತು ಒಂದೇ ರಕ್ತ ಸಂಬಂಧವುಳ್ಳವರು ಮದುವೆಯಾದರೆ, ಅಂಗವಿಕಲ ಮಕ್ಕಳು ಹುಟ್ಟುವ ಸಾಧ್ಯತೆ ಹೆಚ್ಚಿರುತ್ತದೆ. ತಂದೆ–ತಾಯಿ ಎಷ್ಟೇ ಆರೋಗ್ಯವಂತರಾಗಿದ್ದರೂ ಮಕ್ಕಳು ಅಂಗವೈಕಲ್ಯದಿಂದ ಪಾರಾಗುವುದು ತುಂಬಾನೇ ಕಷ್ಟ. ನಗರಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಈ ರೀತಿಯ ವಿವಾಹಗಳು ನೆರವೇರುವ ಸಾಧ್ಯತೆಗಳು ಹೆಚ್ಚಿವೆ. ಮಕ್ಕಳು ಹುಟ್ಟಿನಿಂದಲೇ ಒಂದಿಲ್ಲೊಂದು ರೀತಿಯ ಅಂಗವೈಕಲ್ಯಕ್ಕೆ ತುತ್ತಾಗುತ್ತಾರೆ’ ಎಂದು ಹೇಳುತ್ತಾರೆ ಶಿಬಿರದ ಆಯೋಜಕರು.

ಮಕ್ಕಳು ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ ಎಂಬ ವಿಷಯ ಗೊತ್ತಾದರೆ ಸಾಕು, ಅಂತಹವರು ಮನೆಗೆ ಭಾರ ಎಂಬಂತೆ ಪೋಷಕರು ವರ್ತಿಸಲು ಆರಂಭಿಸುತ್ತಾರೆ. ಕೆಲವರು ಮಕ್ಕಳನ್ನು ಮನೆಯಲ್ಲೇ ಉಳಿಸಿಕೊಂಡು ಹೊರಗಿನ ಸಮಾಜದ ಸಂಪರ್ಕವನ್ನೇ ಕಡಿದು ಹಾಕುತ್ತಾರೆ. ಇನ್ನೂ ಕೆಲವರು ವಿಶೇಷ ತರಬೇತಿ ಶಾಲೆಗಳಿಗೆ ಸೇರಿಸಿ, ಮಕ್ಕಳನ್ನು ಉತ್ತಮ ರೀತಿಯಲ್ಲಿ ಬೆಳೆಸಲು ಪ್ರಯತ್ನಿಸುತ್ತಾರೆ. ಎಲ್ಲವೂ ಆಯಾ ಕುಟುಂಬದ ಮೇಲೆ ಅವಲಂಬಿಸುತ್ತದೆ’ ಎಂದು ಮುನಿನಾರಾಯಣ ಹೇಳುತ್ತಾರೆ.

ಮಾಹಿತಿಗೆ ಸಂಪರ್ಕಿಸಿ: 84534 04087

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT