ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯ­ಮಾಪನ ವ್ಯವಸ್ಥೆ ಕುಲಗೆಟ್ಟ ಪರಿ

ವಿಷಯ ತಜ್ಞರು ಬೇಡ: ನಮ್ಮವರೇ ಸಾಕು!
Last Updated 30 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಮುಖ್ಯ ಪರೀಕ್ಷೆ ಉತ್ತರ ಪತ್ರಿಕೆ­ಗಳನ್ನು ಮೌಲ್ಯಮಾಪನ ಮಾಡಲು ತಜ್ಞರ ಅಗತ್ಯವೇ ಇಲ್ಲ. ಯಾರಿಂದ ಬೇಕಾದರೂ ಮೌಲ್ಯ­ಮಾಪನ ಮಾಡಿಸಬಹುದು ಎನ್ನುವು­ದನ್ನು ಸಿಐಡಿ ಪೊಲೀಸರು ದಾಖಲೆ ಸಮೇತ ಪತ್ತೆ ಮಾಡಿದ್ದಾರೆ.

2011ರ 362 ಗೆಜೆಟೆಡ್‌ ಪ್ರೊಬೇಷ­ನರಿ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆ­ಯಲ್ಲಿ ಮುಖ್ಯ ಪರೀಕ್ಷೆ ಮೌಲ್ಯಮಾಪನ ಮಾಡಲು ಕೆಪಿಎಸ್‌ಸಿ ಬಳಿ ಸಾಕಷ್ಟು ಮಂದಿ ವಿಷಯ ತಜ್ಞರಿದ್ದರೂ ಮೌಲ್ಯ­ಮಾಪನವನ್ನು ಮಾತ್ರ ಯಾರ್‍ಯಾ­ರಿಂದಲೋ ಮಾಡಿಸಿದ ಉದಾಹರಣೆ­ಗಳು ಸಾಕಷ್ಟು ಇವೆ. ತಜ್ಞ ಮೌಲ್ಯ­ಮಾಪಕರ ಹೆಸರನ್ನು ಕೊಡಿ ಎಂದು ಕೆಪಿಎಸ್‌ಸಿ ಬೇರೆ ಬೇರೆ ವಿಶ್ವವಿದ್ಯಾ­ಲ­ಯಗಳಿಗೆ ಪತ್ರ ಬರೆದಿದೆ. ವಿಶ್ವವಿದ್ಯಾಲ­ಯಗಳೂ ಕೂಡ ವಿಷಯ ತಜ್ಞರ ಪಟ್ಟಿಯನ್ನು ಕಳುಹಿಸಿ ಕೊಟ್ಟಿವೆ. ಅದರ ಆಧಾರದಲ್ಲಿ ವಿಷಯ ತಜ್ಞರ ಪಟ್ಟಿಯನ್ನು ಕೆಪಿಎಸ್‌ಸಿ ಸಿದ್ಧಪಡಿಸಿದೆ. ಆದರೆ, ಈ ಪಟ್ಟಿಯಲ್ಲಿ ಇದ್ದ ಬಹಳಷ್ಟು ತಜ್ಞರನ್ನು ಮೌಲ್ಯಮಾಪನಕ್ಕೆ ಬಳಸಿ­ಕೊಂಡಿಲ್ಲ. ನಿವೃತ್ತ­ರಾದವರು, ಪದವಿ ಕಾಲೇಜಿನ ಪ್ರಾಧ್ಯಾಪಕರನ್ನು ಮೌಲ್ಯ­ಮಾಪನಕ್ಕೆ ಬಳಸಿಕೊಳ್ಳಲಾಗಿದೆ ಎನ್ನುವು­ದನ್ನು ವರದಿ ಸ್ಪಷ್ಟವಾಗಿ ಹೇಳಿದೆ.

ಕೆಪಿಎಸ್‌ಸಿ ಮೌಲ್ಯಮಾಪನಕ್ಕೆ ಬಳಸಿದ 155 ಮಂದಿ ಮೌಲ್ಯಮಾಪ­ಕರು ‘ಕೆಪಿಎಸ್‌ಸಿ’ಯೇ ಸಿದ್ಧಪಡಿಸಿದ ಮೌಲ್ಯಮಾಪಕರ ಪಟ್ಟಿಯಲ್ಲಿ ಇಲ್ಲದವ­ರಾಗಿದ್ದಾರೆ. ಇದರಿಂದ ಇಡೀ ಮೌಲ್ಯ­ಮಾಪನ ಪ್ರಕ್ರಿಯೆಯೇ ಹದಗೆಟ್ಟು ಹೋಗಿದೆ. ತಮಗೆ ಬೇಕಾದವರಿಗೆ ಹೆಚ್ಚಿನ ಅಂಕ ಕೊಡಿಸುವುದಕ್ಕಾಗಿಯೇ ಹೀಗೆ ಮಾಡಲಾಗಿದೆ ಎನ್ನುವುದನ್ನು ವರದಿಯಲ್ಲಿ ಸ್ಪಷ್ಟ ಮಾತಿನಲ್ಲಿ ಹೇಳ­ಲಾಗಿದೆ.

ಭೂಗೋಳ ವಿಜ್ಞಾನದ ಉತ್ತರ ಪತ್ರಿಕೆಗಳನ್ನು ವಿಶ್ವವಿದ್ಯಾಲಯಗಳು ಕಳುಹಿಸಿದ ತಜ್ಞರ ಪಟ್ಟಿಯಲ್ಲಿ ಇಲ್ಲದ 15 ಮಂದಿ ಮೌಲ್ಯಮಾಪನ ಮಾಡಿ-­ದ್ದಾರೆ. ಇವರಲ್ಲಿ ಇಬ್ಬರು ನಿವೃತ್ತ ಪ್ರಾಧ್ಯಾಪಕರೂ ಸೇರಿದ್ದಾರೆ. ಈ 15 ಮಂದಿ 47 ಅಭ್ಯರ್ಥಿಗಳ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿದ್ದು ಎಲ್ಲ 47 ಮಂದಿಯೂ ಸಂಭವನೀಯ ನೇಮಕಾತಿ ಪಟ್ಟಿಯಲ್ಲಿ ಸ್ಥಾನ ಪಡೆದು­ಕೊಂಡಿದ್ದಾರೆ ಎಂದು ಸಿಐಡಿ ವರದಿ ಹೇಳಿದೆ.
ರಾಜಕೀಯ ವಿಜ್ಞಾನ, ಅಂತರ­ರಾಷ್ಟ್ರೀಯ ಸಂಪರ್ಕ ಮತ್ತು ಸಾರ್ವ­ಜನಿಕ ಆಡಳಿತ, ಸಾಮಾನ್ಯ ವಿಜ್ಞಾನ ಪೇಪರ್‌–2 ಪಾರ್ಟ್‌– ಎ ಗೆ ಸಂಬಂಧಿಸಿದಂತೆ   ವಿಶ್ವವಿದ್ಯಾಲಯಗಳು ಕಳುಹಿಸಿದ 493 ತಜ್ಞ ಮೌಲ್ಯಮಾಪ­ಕರಿದ್ದರು. ಆದರೆ, ಅದರಲ್ಲಿ 104 ಮಂದಿಗೆ ಮಾತ್ರ ಮೌಲ್ಯ­ಮಾಪನಕ್ಕೆ ಅವಕಾಶ ನೀಡಲಾಗಿದೆ. ಇದರಲ್ಲಿ 40 ಮಂದಿ ಈ ಹಿಂದೆಯೂ ಮೌಲ್ಯಮಾಪ­ಕರಾಗಿ ಕೆಲಸ ಮಾಡಿದವರಾಗಿದ್ದಾರೆ.
ರಸಾಯನ ಶಾಸ್ತ್ರ ವಿಭಾಗದಲ್ಲಿ 1047 ಮಂದಿ ತಜ್ಞ ಮೌಲ್ಯಮಾಪಕ­ರಿದ್ದರೂ ‘ಕೆಪಿಎಸ್‌ಸಿ’ ಬಳಸಿಕೊಂಡಿದ್ದು ಕೇವಲ ಇಬ್ಬರನ್ನು ಮಾತ್ರ. ಈ ಇಬ್ಬರೂ ಕೂಡ ಈ ಹಿಂದೆ ಮೌಲ್ಯಮಾಪನ ಮಾಡಿದವರೇ ಆಗಿದ್ದರು. ವಾಣಿಜ್ಯ ವಿಷಯದಲ್ಲಿ 1508 ವಿಷಯ ತಜ್ಞರಿ­ದ್ದರು. ಬಳಸಿಕೊಂಡಿದ್ದು ಮೂವರನ್ನು ಮಾತ್ರ. ಅವರಲ್ಲಿ ಇಬ್ಬರು ಈ ಹಿಂದೆ ಮೌಲ್ಯಮಾಪನ ಕಾರ್ಯಕ್ಕೆ ಬಂದವರೇ ಆಗಿದ್ದರು. ಮೆಕ್ಯಾನಿಕಲ್‌ ಎಂಜಿನಿಯರ್‌ ವಿಷಯದಲ್ಲಿ 1,537 ತಜ್ಞರಿದ್ದರೆ ‘ಕೆಪಿಎಸ್‌ಸಿ’ ಬಳಸಿಕೊಂಡಿದ್ದು ಕೇವಲ ಒಬ್ಬರನ್ನು ಮಾತ್ರ. ಸಾಮಾನ್ಯ ವಿಜ್ಞಾನ ಪೇಪರ್‌–1 ಪಾರ್ಟ್–ಎ, ಇತಿಹಾಸ ಪಾರ್ಟ್‌–ಬಿ, ಪ್ರಸ್ತುತ ವಿದ್ಯಮಾನಗಳು ಮತ್ತು ಐಚ್ಛಿಕ ಇತಿಹಾಸ ಪೇಪರ್‌–1 ಮತ್ತು ಎರಡಕ್ಕೆ ಸಂಬಂಧಿಸಿದಂತೆ 705 ತಜ್ಞರಿದ್ದರು. ಬಳಸಿಕೊಂಡಿದ್ದು 90 ಮಂದಿ ಮಾತ್ರ. ಅರ್ಥಶಾಸ್ತ್ರ, ಗ್ರಾಮೀಣಾಭಿವೃದ್ಧಿ ಮತ್ತು ಸಾಮಾನ್ಯ ವಿಜ್ಞಾನ ಪಾರ್ಟ್‌–ಬಿ ಗೆ ಸಂಬಂಧಿ­ಸಿದಂತೆ 647 ತಜ್ಞರಿದ್ದರು. ಬಳಕೆಯಾ­ಗಿದ್ದು 100 ಮಂದಿ. ಆಡಳಿತ ಶಾಸ್ತ್ರದಲ್ಲಿ 657 ತಜ್ಞರಿದ್ದರು.
ಬಳಕೆಯಾಗಿದ್ದು ಕೇವಲ 3 ಮಂದಿ.

ಇಂಗ್ಲಿಷ್‌ ಸಾಹಿತ್ಯದಲ್ಲಿ 528 ತಜ್ಞರಿದ್ದರು. ಬಳಕೆಯಾಗಿದ್ದು ಕೇವಲ ಮೂವರು. ಗಣಿತದಲ್ಲಿ 1,133 ತಜ್ಞರಿದ್ದರು. ಬಳಕೆಯಾಗಿದ್ದು ಮೂವರು ಮಾತ್ರ. ಸಮಾಜ ವಿಜ್ಞಾನ ಮತ್ತು ಮಾನವ ಶಾಸ್ತ್ರ ಪೇಪರ್‌–2 ವಿಷಯಕ್ಕೆ ಸಂಬಂಧಿಸಿದಂತೆ 432 ತಜ್ಞರಿದ್ದರು. ಬಳಕೆಯಾಗಿದ್ದು 71 ಮಂದಿ. ಸಾಮಾನ್ಯ ವಿಜ್ಞಾನ ಪೇಪರ್‌–2 ಪಾರ್ಟ್‌–3 ಮತ್ತು ಭೂಗರ್ಭಶಾಸ್ತ್ರ­ದಲ್ಲಿ 174 ತಜ್ಞರಿದ್ದರು. ಬಳಕೆಯಾಗಿದ್ದು 45 ಮಂದಿ. ಭೌತಶಾಸ್ತ್ರ­ದಲ್ಲಿ 683 ಮಂದಿ ತಜ್ಞರಿದ್ದರೂ ಯಾರನ್ನೂ ಮೌಲ್ಯ­ಮಾಪ­ನಕ್ಕೆ ಬಳಸಿಕೊಂಡಿಲ್ಲ. ಈ ಹಿಂದೆ ಮೌಲ್ಯಮಾಪನ ಮಾಡಿದ ಇಬ್ಬರಿಂದ ಈ ಬಾರಿಯೂ ಮೌಲ್ಯಮಾಪನ ಮಾಡಿಸಲಾಗಿದೆ. ಸಾಮಾನ್ಯ ವಿಜ್ಞಾನದ ಪೇಪರ್‌–1 ಮೌಲ್ಯಮಾಪನಕ್ಕೆ 149 ಮಂದಿ ತಜ್ಞರು ಇದ್ದರು. ಬಳಸಿ­ಕೊಂಡಿದ್ದು 47 ಮಂದಿಯನ್ನು. ಸಾಮಾನ್ಯ ವಿಜ್ಞಾನ ಪೇಪರ್‌–2, ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದಲ್ಲಿ 1047 ತಜ್ಞರಿದ್ದರು. ಬಳಸಿಕೊಂಡಿದ್ದು 36 ಮಂದಿಯನ್ನು ಮಾತ್ರ.

ಕೃಷಿ, ಕೃಷಿ ಮಾರುಕಟ್ಟೆ ಮತ್ತು ರೇಷ್ಮೆ ವಿಷಯದಲ್ಲಿ 36 ತಜ್ಞರಿದ್ದರು. ಬಳಸಿಕೊಂಡಿದ್ದು 29 ಮಂದಿ. ಪಶು ಸಂಗೋಪನೆ, ಪಶು ವಿಜ್ಞಾನ ಮತ್ತು ಮೀನುಗಾರಿಕೆ ವಿಷಯದಲ್ಲಿ 9 ತಜ್ಞರಿದ್ದು 8 ಮಂದಿಯನ್ನು ಬಳಸ­ಲಾಗಿದೆ. ಅಪರಾಧ ವಿಜ್ಞಾನದಲ್ಲಿ 13 ಮಂದಿ ವಿಷಯ ತಜ್ಞರಿದ್ದು ಒಬ್ಬರನ್ನು ಮಾತ್ರ ಬಳಸಲಾಗಿದೆ. ಕಾನೂನು ಶಾಸ್ತ್ರದಲ್ಲಿ 276 ತಜ್ಞರಿದ್ದು 3 ಮಂದಿ ಬಳಕೆಯಾಗಿದ್ದಾರೆ. ತತ್ವಶಾಸ್ತ್ರದಲ್ಲಿ 48 ಮಂದಿ ತಜ್ಞರಿದ್ದು ಮೂವರು ಮೌಲ್ಯ­ಮಾಪನಕ್ಕೆ ಹಾಜರಾಗಿದ್ದರು. ಮನಶಾಸ್ತ್ರ­­ದಲ್ಲಿ 48 ತಜ್ಞರಿದ್ದು ಬಳಕೆಯಾಗಿದ್ದು ಮೂವರು. ಕನ್ನಡ ಸಾಹಿತ್ಯದಲ್ಲಿ 1,030 ತಜ್ಞರಿದ್ದು ಬಳಕೆ­ಯಾಗಿದ್ದು 74 ಮಂದಿ. ಸಸ್ಯ ವಿಜ್ಞಾನದಲ್ಲಿ 216 ಮಂದಿ ತಜ್ಞರಿದ್ದು ಒಬ್ಬರನ್ನೂ ಮೌಲ್ಯ­ಮಾಪನಕ್ಕೆ ಬಳಸಿ­ಕೊಂಡಿಲ್ಲ. ಎಲೆಕ್ಟ್ರಿಕಲ್‌ ಎಂಜಿನಿಯ­ರಿಂಗ್‌ ವಿಷಯದಲ್ಲಿ 593 ವಿಷಯ ತಜ್ಞರಿದ್ದು ಒಬ್ಬ­ರನ್ನು ಮಾತ್ರ ಬಳಸಲಾಗಿದೆ. ಭೂಗರ್ಭ ವಿಜ್ಞಾನ­ದಲ್ಲಿ 45 ಮಂದಿ ವಿಷಯ ತಜ್ಞರಿದ್ದರೂ ಬಳಕೆಯಾಗಿದ್ದು ಇಬ್ಬರು. ಪ್ರಾಣಿ ವಿಜ್ಞಾನದಲ್ಲಿ 179 ತಜ್ಞರಿದ್ದರೆ ಬಳಕೆಯಾಗಿದ್ದು 5 ಮಂದಿ. ಹಿಂದಿ ವಿಷಯದಲ್ಲಿ 302 ತಜ್ಞರಿದ್ದರೂ ಬಳಕೆ­ಯಾಗಿದ್ದು ಮೂವರು. ಉರ್ದು ಸಾಹಿತ್ಯದಲ್ಲಿ 130 ತಜ್ಞರಿದ್ದರೂ ಬಳಕೆಯಾಗಿದ್ದು ಇಬ್ಬರು.

‘ಕೆಪಿಎಸ್‌ಸಿ’ ಬಳಿ ವಿವಿಧ ವಿಷಯ­ಗಳಿಗೆ ಸಂಬಂಧಿಸಿದಂತೆ ವಿವಿಧ ವಿಶ್ವವಿದ್ಯಾಲಯಗಳು ಕಳುಹಿಸಿಕೊಟ್ಟ 13,663 ಮಂದಿ ವಿಷಯ ತಜ್ಞರ ಪಟ್ಟಿ ಇತ್ತು. ಆದರೆ ಇದರಲ್ಲಿ ಬಳಕೆಯಾಗಿದ್ದು ಕೇವಲ 639 ಮಂದಿ. 266 ತಜ್ಞರು ಈ ಹಿಂದೆ ಕೆಪಿಎಸ್‌ಸಿ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದವರೇ ಆಗಿದ್ದರು.

ಸಾಕಷ್ಟು ಮಂದಿ ತಜ್ಞ ಮೌಲ್ಯ­ಮಾಪಕರಿದ್ದರೂ ತಮಗೆ ಬೇಕಾದವರಿಗೆ ಅತಿ ಹೆಚ್ಚಿನ ಅಂಕ ಕೊಡುವುದಕ್ಕಾಗಿಯೇ ಕೆಪಿಎಸ್‌ಸಿ ತಜ್ಞ ಮೌಲ್ಯಮಾಪಕರನ್ನು ಬಿಟ್ಟು ಇತರರನ್ನು ಮೌಲ್ಯಮಾಪನಕ್ಕೆ ಬಳಸಿಕೊಂಡಿದೆ. ಕೆಲವು ಪ್ರಾಧ್ಯಾಪಕ­ರನ್ನು ಪ್ರತೀ ಬಾರಿಯೂ ಮೌಲ್ಯ­ಮಾಪನಕ್ಕೆ ಕರೆಯಲಾಗುತ್ತದೆ. ಗ್ರಾಮೀಣಾ­ಭಿವೃದ್ಧಿ ವಿಷಯದಲ್ಲಿ ಸಾಕಷ್ಟು ಮಂದಿ ವಿಷಯ ತಜ್ಞರು ಇದ್ದರೂ ಯಾರನ್ನೂ ಕರೆಯದೆ ಅರ್ಥಶಾಸ್ತ್ರದ ಪ್ರಾಧ್ಯಾಪಕರಿಂದ ಮೌಲ್ಯ­ಮಾಪನ ಮಾಡಿಸಲಾಗಿದೆ.

ಮಾನವ ವಿಜ್ಞಾನ ಪೇಪರ್‌–1 ಉತ್ತರಪತ್ರಿಕೆ­ಗಳನ್ನು ಮೌಲ್ಯಮಾಪನ ಮಾಡಲು 18 ಮಂದಿ ತಜ್ಞರು ಲಭ್ಯವಿದ್ದರೂ ಕೇವಲ 5 ಮಂದಿಯಿಂದ 633 ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿಸಲಾಗಿದೆ. ಈ ಐದು ಮಂದಿಯಲ್ಲಿ ಮೂವರು ನಿವೃತ್ತ ಪ್ರಾಧ್ಯಾಪಕರು ಸೇರಿದ್ದಾರೆ. ಇನ್ನೂ ಅಚ್ಚರಿಯ ಅಂಶ ಎಂದರೆ ಮಾನವ ವಿಜ್ಞಾನದ ಪೇಪರ್‌–2ರ ಉತ್ತರ ಪತ್ರಿಕೆಗಳನ್ನು ಸಮಾಜ ವಿಜ್ಞಾನದ ಪ್ರಾಧ್ಯಾಪಕರೇ ಮೌಲ್ಯಮಾಪನ ಮಾಡಿದ್ದಾರೆ.

ರಸಾಯನ ಶಾಸ್ತ್ರ ವಿಷಯದಲ್ಲಿ 1047 ವಿಷಯ ತಜ್ಞರಿದ್ದರು. ಯಾರನ್ನೂ ಮೌಲ್ಯ­ಮಾಪನಕ್ಕೆ ಬಳಸಿ­ಕೊಳ್ಳದೇ ಇಬ್ಬರು ನಿವೃತ್ತ ಪ್ರಾಧ್ಯಾ­ಪಕರೇ ಎಲ್ಲ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದ್ದಾರೆ. ಈ ಇಬ್ಬರು ಮೌಲ್ಯಮಾಪಕರನ್ನೇ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯ­ಮಾಪನಕ್ಕೆ ಪದೇ ಪದೇ ಕರೆಯಲಾಗುತ್ತಿದೆ.

ಮೊದಲನೇ ಮೌಲ್ಯಮಾಪಕರು ಮತ್ತು ಎರಡನೇ ಮೌಲ್ಯಮಾಪಕರು ನೀಡಿದ ಅಂಕ 45ಕ್ಕಿಂತ ಹೆಚ್ಚು ಕಮ್ಮಿ ಆದರೆ ಮೂರನೇ ಮೌಲ್ಯಮಾಪಕರಿಂದ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಿಸಬೇಕು ಎಂದು ‘ಕೆಪಿಎಸ್‌ಸಿ’ ನಿಯಮ ಹೇಳುತ್ತದೆ. ಆದರೆ ಭೌತಶಾಸ್ತ್ರ, ಭೂಗರ್ಭ ವಿಜ್ಞಾನ, ರಸಾಯನ­ಶಾಸ್ತ್ರ, ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ವಿಷಯ­ಗಳಲ್ಲಿ ಇಬ್ಬರು ಮೌಲ್ಯಮಾಪಕರನ್ನು ಮಾತ್ರ ಬಳಸಲಾಗಿದೆ. ಹೀಗೆ ಇಡೀ ಮೌಲ್ಯ­ಮಾಪನ ವ್ಯವಸ್ಥೆಯನ್ನೇ ಕುಲಗೆಡಿ­ಸಿದ ಪರಿಯನ್ನು ಸಿಐಡಿ ಪೊಲೀಸರು ವಿವರವಾಗಿ ಪತ್ತೆ ಮಾಡಿ ತಮ್ಮ ವರದಿಯಲ್ಲಿ ಹೇಳಿದ್ದಾರೆ.

(ಮೂರನೇ ಮೌಲ್ಯಮಾಪನದ ಕರಾಮತ್ತು: ಮುಂದೆ ನಿರೀಕ್ಷಿಸಿ...)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT