ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಮಾಪನ ಅಕ್ರಮದಲ್ಲಿ ಅಧ್ಯಾಪಕರು

ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಮಾಜಿ ಸದಸ್ಯನೂ ಭಾಗಿ
Last Updated 21 ಏಪ್ರಿಲ್ 2014, 20:26 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾ­ಲಯದ ಪದವಿ ವಿದ್ಯಾರ್ಥಿಗಳಿಂದ ಹಣ ಪಡೆದು ಪರೀಕ್ಷೆಯಲ್ಲಿ ಉತ್ತೀರ್ಣ ಮಾಡಿಸುತ್ತಿದ್ದ ಜಾಲವನ್ನು ಭೇದಿಸಿರುವ ನಗರದ ಹಲಸೂರು­ಗೇಟ್‌ ಪೊಲೀಸರು ವಿ.ವಿಯ ದಿನ­ಗೂಲಿ ನೌಕರರನ್ನು ಬಂಧಿಸಿದ್ದು, ಪ್ರಕರಣದಲ್ಲಿ ಸಿಂಡಿಕೇಟ್‌ನ ಮಾಜಿ ಸದಸ್ಯ ಹಾಗೂ ಹಲವು ಉಪನ್ಯಾಸ­ಕರು ಭಾಗಿಯಾಗಿರುವುದನ್ನು ಪತ್ತೆ ಹಚ್ಚಿದ್ದಾರೆ.

ವಿಶ್ವವಿದ್ಯಾಲಯದ ಮೌಲ್ಯ­ಮಾಪನ ವಿಭಾಗದಲ್ಲಿ ದಿನಗೂಲಿ ನೌಕರರಾಗಿದ್ದ ಗಂಗಾಧರಯ್ಯ, ಬಸವ­ರಾಜು ಹಾಗೂ ಮಧ್ಯವರ್ತಿ ಚಂದ್ರಶೇಖರ್‌ ಬಂಧಿತರು. ಸಿಂಡಿ­ಕೇಟ್‌ನ ಮಾಜಿ ಸದಸ್ಯ ವೇದಮೂರ್ತಿ, ಉಪನ್ಯಾಸಕರಾದ ಪ್ರಭು ಉಪಾಸೆ, ಡಾ.ಕೊಟ್ರಯ್ಯ, ಸುರೇಶ್‌ ಮತ್ತಿತರರು ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾಗಿದೆ. ಅವರನ್ನು ವಶಕ್ಕೆ ತೆಗೆದು­ಕೊಂಡು ವಿಚಾರಣೆ ನಡೆಸಲಾಗುತ್ತಿದೆ.

ಈ ಅಕ್ರಮದ ಬಗ್ಗೆ ಪೊಲೀಸ್‌ ಮಾಹಿತಿದಾರರಿಂದ ಸುಳಿವು ಸಿಕ್ಕಿತ್ತು. ಆ ಮಾಹಿತಿ ಆಧರಿಸಿ ಹತ್ತು ದಿನಗಳ ಹಿಂದೆ ಗಂಗಾಧರಯ್ಯ, ಬಸವರಾಜು ಮತ್ತು ಚಂದ್ರಶೇಖರ್‌ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಇಡೀ ಪ್ರಕರಣ ಬೆಳಕಿಗೆ ಬಂತು ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳು ಹಣ ಕೊಟ್ಟ ವಿದ್ಯಾರ್ಥಿಯ ನೋಂದಣಿ ಸಂಖ್ಯೆಯ ವಿವರವನ್ನು ಪಡೆದುಕೊಳ್ಳುತ್ತಿದ್ದರು. ನಂತರ ಆ ನೋಂದಣಿ ಸಂಖ್ಯೆಯ ಉತ್ತರಪತ್ರಿಕೆಗೆ ಮೌಲ್ಯಮಾಪಕರಿಂದ ಹೆಚ್ಚಿನ ಅಂಕಗಳನ್ನು ಹಾಕಿಸುತ್ತಿದ್ದರು. ಅಲ್ಲದೇ, ಮೌಲ್ಯಮಾಪನದ ನಂತರ ಅಂಕಗಳನ್ನು ತಿದ್ದಿಸಿ ಹೆಚ್ಚು ಅಂಕ ಹಾಕಿಸುತ್ತಿದ್ದರು. ಇದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳಿಂದ ಪಡೆದ ಹಣದಲ್ಲಿ ಮೌಲ್ಯಮಾಪಕರಿಗೂ ಪಾಲು ಕೊಡು­ತ್ತಿದ್ದರು’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆಜೆಪಿ ಮುಖಂಡರಾದ ವೇದ­ಮೂರ್ತಿ ಅವರು ಮಾಗಡಿ ಮುಖ್ಯ­ರಸ್ತೆಯ ಬಳಿ ಖಾಸಗಿ ಕಾಲೇಜು ನಡೆಸುತ್ತಿದ್ದಾರೆ. ಕೊಟ್ರಯ್ಯ ಅವರು ರಾಜಾಜಿನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ಬಂಧಿತರ ವಿರುದ್ಧ ವಂಚನೆ, ನಕಲಿ ದಾಖಲೆಪತ್ರಗಳ ಸೃಷ್ಟಿ, ವಂಚನೆ ಉದ್ದೇಶಕ್ಕಾಗಿ ನಕಲಿ ದಾಖಲೆಪತ್ರಗಳ ಸೃಷ್ಟಿ ಆರೋಪದಡಿ ಪ್ರಕರಣ ದಾಖಲಿಸ­ಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT