ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಮಾರಿದ 50 ರೂಪಾಯಿ ‘ಬೊಗಳೆ ಸತ್ಯಪ್ಪ’

ಕಟಕಟೆ–16
Last Updated 21 ಮೇ 2016, 19:51 IST
ಅಕ್ಷರ ಗಾತ್ರ

ಸುಮಾರು ಹತ್ತು ವರ್ಷಗಳ ಹಿಂದಿನ ಮಾತು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದ ಸಂದರ್ಭ. ಸತ್ಯಪ್ಪ (ಇವರ ಸತ್ಯವಾದ ಹೆಸರು ಬೇಡ ಬಿಡಿ) ಎಂಬುವವರು ಕೈಯಲ್ಲೊಂದು ಫೋಟೊ ಹಿಡಿದುಕೊಂಡು ನಮ್ಮ ಕಚೇರಿಗೆ ಬಂದರು. ಅವರ ಹೆಗಲ ಮೇಲೆ ಮಾಜಿ ಪ್ರಧಾನಿ ದೇವೇಗೌಡ ಅವರು ಕೈಹಾಕಿ ನಿಂತಿದ್ದ ಫೋಟೊ ಅದು. ಅದನ್ನು ನನ್ನ ಹಿರಿಯ ವಕೀಲರ (ಸೀನಿಯರ್‌) ಬಳಿ ತೋರಿಸಿ  ‘ನನಗೆ ದೇವೇಗೌಡರು ಬಹಳ ಆತ್ಮೀಯರು. ನನ್ನದೊಂದು ಕೇಸ್ ಇದೆ. ನೀವೇ ನಡೆಸಿಕೊಡಬೇಕು’ ಎಂದರು. ಸೀನಿಯರ್‌ ನನ್ನನ್ನು ಕರೆದು, ‘ಇವರು ದೇವೇಗೌಡರಿಗೆ ಬಹಳ ಬೇಕಾದವರಂತೆ. ಏನು ಕೇಸು ಎಂದು ಕೇಳಿ ನೋಡಿ’ ಎಂದರು.

ದೇವೇಗೌಡರಿಗೆ ಆತ್ಮೀಯರಾದವರ ಕೇಸು ನಾನು ನಡೆಸಿಕೊಡಬೇಕು ಎಂದು ಕೇಳಿ ಸಂತೋಷವಾಯಿತು. ಏನೋ ಗಂಭೀರವಾದ ವಿಷಯವೇ ಇರಬೇಕು ಎಂದು ಏನಾಯಿತೆಂದು ವಿಚಾರಿಸಿದೆ. ಅದಕ್ಕೆ ಸತ್ಯಪ್ಪ ‘ನೋಡಿ ಇವ್ರೆ... ನನ್ನ ಪಕ್ಕದ ಮನೆಯಲ್ಲೊಬ್ಬ ಬ್ಯಾಂಕ್‌ ಉದ್ಯೋಗಿ ರಾಜು (ಇವರ ನಿಜ ಹೆಸರೂ ಬೇಡ) ಎಂಬಾತ ಇದ್ದಾನೆ. ಅವನಿಗೆ ನನ್ನ ಕಂಡರೆ ಆಗದು. ಅವನ ಮನೆಯಲ್ಲೊಂದು ದೊಡ್ಡ ನಾಯಿ ಇದೆ. ನನ್ನನ್ನು ಆತ ಕಂಡಾಗಲೆಲ್ಲ ಆ ನಾಯಿಯನ್ನು ಛೂ ಬಿಟ್ಟು ಹೆದರಿಸುತ್ತಾನೆ. ಅಷ್ಟೇ ಅಲ್ಲ. ನನ್ನ ಮನೆ ಬಳಿ ಅವನ ಬೈಕ್‌ ನಿಲ್ಲಿಸಿ ನನಗೆ ತೊಂದರೆ ನೀಡಲೆಂದೇ ದೊಡ್ಡದಾಗಿ ಹಾರ್ನ್ ಮಾಡುತ್ತಾನೆ.

ಮಧ್ಯರಾತ್ರಿಯವರೆಗೂ ಟಿ.ವಿ ಶಬ್ದವನ್ನು ಜೋರಾಗಿ ಇಟ್ಟು ನಿದ್ದೆ ಕೆಡಿಸುತ್ತಾನೆ. ಇವೆಲ್ಲಾ ಮಿತಿ ಮೀರಿದಾಗ ನಾನು ದೇವೇಗೌಡರಿಗೆ ಹೇಳಿದೆ. ಅವರು ರಾಜು ವಿರುದ್ಧ ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ಸೂಚಿಸಿದರು. ಅದರಂತೆ ಕೇಸ್‌ ಕೂಡ ಆಗಿದೆ. ಆದರೆ ರಾಜುಗೆ ಸೆಷನ್ಸ್ ಕೋರ್ಟ್‌ ನಿರೀಕ್ಷಣಾ ಜಾಮೀನು ಕೊಟ್ಟುಬಿಟ್ಟಿದೆ. ಹೇಗಾದರೂ ಮಾಡಿ ಆ ಜಾಮೀನನ್ನು ರದ್ದು ಮಾಡುವ ಸಂಬಂಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕಿದೆ’ ಎಂದರು. ಇವರ ಮಾತು ಸ್ವಲ್ಪ ವಿಚಿತ್ರ ಎನಿಸಿತು. ಆದರೂ ‘ಸರಿ. ನಿಮ್ಮ ಕೇಸನ್ನು ಸ್ಟಡಿ ಮಾಡುವೆ’ ಎಂದೆ. ಅವರು ನನ್ನ ಬೆನ್ನು ತಟ್ಟಿ, ‘ನೀವೆಲ್ಲಾ ಚೆನ್ನಾಗಿ ಬೆಳೀಬೇಕು ಎಂದರೆ ಇಂಥ ಕೇಸನ್ನೆಲ್ಲ ಹ್ಯಾಂಡಲ್‌ ಮಾಡಬೇಕು. 

ಒಳ್ಳೇದಾಗಲಪ್ಪ’ ಎಂದು ಹೇಳಿಹೋದರು. ಹೋಗುವಾಗ ನಮ್ಮ ಕಚೇರಿಯ ಅಟೆಂಡರ್‌ನನ್ನು ಕರೆದು ಐದು ರೂಪಾಯಿಯ ಗರಿಗರಿ ನೋಟು ನೀಡಿ, ‘ನೋಡಪ್ಪ ಹೋಗಿ ಕಾಫಿ ಕುಡಿ’ ಎಂದರು. ‘ಎಂಥ ಒಳ್ಳೆಯ ಮನುಷ್ಯನಪ್ಪ’ ಎಂದು ನಾನು ಅಂದುಕೊಳ್ಳುವಷ್ಟರಲ್ಲಿ ನನಗೂ ಒಂದು ಲಕೋಟೆ ಕೊಟ್ಟು ‘ನಿಮ್ಮ ಫೀಸು’ ಎಂದರು. ಇಷ್ಟು ಬೇಗ ನನಗೂ ಫೀಸ್‌ ನೀಡಿದರಲ್ಲ ಎಂದು ಖುಷಿಯಿಂದ ಲಕೋಟೆ ತೆರೆದೆ. ಅದರಲ್ಲಿ ಐದು ರೂಪಾಯಿಗಳ ಹತ್ತು ನೋಟುಗಳು ಇದ್ದವು! 50 ರೂಪಾಯಿ ನೋಡಿ ನನ್ನ ಮುಖ ಪೆಚ್ಚಾದರೂ ದೊಡ್ಡವರು ಹೀಗೇನೆ,  ಬಹುಶಃ ನನ್ನ ಹಿರಿಯ ವಕೀಲರಿಗೆ ಶುಲ್ಕ ಕೊಟ್ಟಿರಬಹುದೇನೋ... ಎಂದುಕೊಂಡು ಸಮಾಧಾನ ಪಟ್ಟುಕೊಂಡೆ (ಕೊನೆಗೆ ಗೊತ್ತಾದದ್ದು ಎಲ್ಲರಿಗೂ ಈ ‘ದೊಡ್ಡ ಮನುಷ್ಯ’ ಕೊಡುವುದು 50 ರೂಪಾಯಿ ಮಾತ್ರ ಎಂದು!)

ಜಾಮೀನು ರದ್ದತಿ ಪ್ರಕರಣ ಹೈಕೋರ್ಟ್ ಮುಂದೆ ಬಂತು. ‘ನೋಡಿ ಇವ್ರೆ...  ಚೆನ್ನಾಗಿ ವಾದ ಮಾಡಿ. ಮಧ್ಯಾಹ್ನ ಊಟಕ್ಕೆ ಕರೆದುಕೊಂಡು ಹೋಗ್ತೇನೆ’ ಎಂದರು. ಅವರು ಅಂದು ಕೊಟ್ಟಿದ್ದ 50 ರೂಪಾಯಿ ಕಣ್ಣ ಮುಂದೆ ಬಂತು. ಇನ್ನು ಊಟ ಹೇಗೆ ಇರುತ್ತದೋ ದೇವರೇ ಅಂದುಕೊಂಡು, ‘ಅದೆಲ್ಲಾ ಬೇಡ. ನಾನು ಮನೆಯಿಂದಲೇ ಊಟ ತಂದಿದ್ದೇನೆ. ನೀವು ಊಟ ಮಾಡಿ’ ಎಂದು ತಪ್ಪಿಸಿಕೊಂಡೆ. ಜಾಮೀನು ರದ್ದತಿಗೆ ಸಂಬಂಧಿಸಿದ ನನ್ನ ವಾದವನ್ನು ಮಾನ್ಯ ಮಾಡಿದ ನ್ಯಾಯಮೂರ್ತಿಗಳು ರಾಜು ಅವರಿಗೆ ಸಿಕ್ಕ ಜಾಮೀನನ್ನು ರದ್ದು ಮಾಡಿದರು. ಹಿರಿಹಿರಿ ಹಿಗ್ಗಿದರು ಸತ್ಯಪ್ಪ. ‘ನೋಡಿ ಇವ್ರೆ... ನಾನು ಹಾಗೆಲ್ಲಾ ಯಾರನ್ನಾದರೂ ಸುಖಾಸುಮ್ಮನೆ ಹೊಗಳೋದಿಲ್ಲ.

ನಿಮ್ಮ ವಾಕ್ಚಾತುರ್ಯ ನನ್ನನ್ನು ಇಂಪ್ರೆಸ್‌ ಮಾಡಿದೆ’ ಎಂದು ಹೊಗಳಿ ಹೋದರು. ಆದರೆ ರಾಜು ಅವರು ಪುನಃ ಸೆಷನ್ಸ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಜಾಮೀನು ಪಡೆದುಕೊಂಡರು. ಅದನ್ನು ಪುನಃ ರದ್ದು ಮಾಡಿಸಿಕೊಡುವಂತೆ ಸತ್ಯಪ್ಪ ನನಗೆ ದುಂಬಾಲು ಬಿದ್ದರು. ನಾನು ಒಪ್ಪಿಕೊಂಡೆ. ಈ ಮಧ್ಯೆಯೇ ಸತ್ಯಪ್ಪ ಹೈಕೋರ್ಟ್‌ನಲ್ಲಿ ನನ್ನನ್ನು ಭೇಟಿಯಾಗಿ ‘ನೋಡಿ ಇವ್ರೆ... ಇವತ್ತೊಂದು ಮಜಾ ನಡೆಯಿತು. ಅದೇನೆಂದ್ರೆ ನಾನು ಎಂ.ಜಿ. ರೋಡ್ ಕಡೆ ನಡೆದುಕೊಂಡು ಹೋಗ್ತಾ ಇದ್ನಾ. ಎದುರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕಾರು ಬಂತು. ನನ್ನನ್ನು ನೋಡಿ ಕಾರು ನಿಲ್ಲಿಸಿದರು. ಅವರ ಸೆಕ್ರೆಟರಿ ಬಂದು, ಸಿ.ಎಂ ನಿಮ್ಮನ್ನು ಕರೆಯುತ್ತಿದ್ದಾರೆ ಎಂದರು.

ಕುಮಾರಸ್ವಾಮಿಯವರು ತಮ್ಮ ಪಕ್ಕ ನನ್ನನ್ನು ಕುಳ್ಳಿರಿಸಿಕೊಂಡು, ಕುಶಲೋಪರಿ ವಿಚಾರಿಸಿದರು. ನಾನು ಅವರ ತಂದೆ ದೇವೇಗೌಡರ ಸ್ನೇಹಿತ ಅಲ್ಲವೇ? ಅದಕ್ಕೇನೆ ಕುಮಾರಸ್ವಾಮಿ ಅವರಿಗೂ ನಾನೆಂದರೆ ಬಹಳ ಪ್ರೀತಿ. ಅದೂ ಇದೂ ಮಾತಾಡುತ್ತಿರುವಾಗ ನಾನು ರಾಜು ಬಗ್ಗೆ ಪ್ರಸ್ತಾಪಿಸಿದೆ. ಇದನ್ನು ಕೇಳಿದ ಅವರು ಕೂಡಲೇ ಬ್ಯಾಂಕ್‌ ನಿರ್ದೇಶಕರಿಗೆ ಕರೆ ಮಾಡಿ ರಾಜುವನ್ನು ಅಮಾನತು ಮಾಡಿಸಿಯೇ ಬಿಟ್ಟರು. ಇದೇ ಖುಷಿಗೆ ನನ್ನನ್ನು ಅವರೇ ವಿಧಾನಸೌಧಕ್ಕೆ ಕರೆದುಕೊಂಡು ಹೋಗಿ ಊಟ ಮಾಡಿಸಿ ಕಳುಹಿಸಿಕೊಟ್ಟರು’ ಎಂದರು. ಇಂಥ ಶಿಫಾರಸು ಇರುವ ಇವರು ಸಾಮಾನ್ಯ ಮನುಷ್ಯನಲ್ಲ ಅಂದುಕೊಂಡೆ.

ಆದರೆ ಅದೇ ಕ್ಷಣದಲ್ಲಿ ಬೆಳಿಗ್ಗೆ ಪತ್ರಿಕೆಯಲ್ಲಿ ಓದಿದ್ದ ಸುದ್ದಿ ನೆನಪಾಯಿತು. ಅದೇನೆಂದರೆ ಕುಮಾರಸ್ವಾಮಿಯವರು ಗ್ರಾಮವಾಸ್ತವ್ಯಕ್ಕೆಂದು ಹಳ್ಳಿಯೊಂದಕ್ಕೆ ಹೋದ ಸುದ್ದಿ. ಹಾಗಿದ್ದರೆ ಅವರು ಇಷ್ಟು ಬೇಗ ಬೆಂಗಳೂರಿಗೆ ಬಂದುಬಿಟ್ಟರೇ ಎಂದು ಅನುಮಾನ ಬಂತು. ಕುಮಾರಸ್ವಾಮಿಯವರ ಸ್ನೇಹಿತರಾದ ನನ್ನ ವಕೀಲ ಮಿತ್ರರ ಬಳಿ ವಿಚಾರಿಸಿದೆ.  ಅವರು ಫೋನ್‌ ಮಾಡಿ ವಿಚಾರಿಸಿದಾಗ ಕುಮಾರಸ್ವಾಮಿಯವರು ಇನ್ನೂ ಅದೇ ಹಳ್ಳಿಯಲ್ಲಿ ಇದ್ದುದು ತಿಳಿಯಿತು. ಈ ‘ಬೊಗಳೆ ಸತ್ಯಪ್ಪ’ ನಿಜವಾಗಿಯೂ ಅಸಾಮಾನ್ಯ ಮನುಷ್ಯ ಅನ್ನಿಸಿತು ನನಗೆ! ನಾನು ಸುಮ್ಮನಾಗಲಿಲ್ಲ. ಅವರನ್ನು ಕರೆದು ಚೆನ್ನಾಗಿ ಬೈದೆ.

ಇದರಿಂದ ಸಿಟ್ಟುಗೊಂಡ ಅವರು ಕಚೇರಿಗೆ ಬಂದು ನನ್ನ ಸೀನಿಯರ್‌ ಬಳಿ ದೂರು ಹೇಳಿದರು. ನನ್ನ ಸೀನಿಯರ್‌ ನನ್ನನ್ನು ಕರೆದು ವಿಚಾರಿಸಿದರು. ಆಗ ನಾನು ‘ಇಲ್ಲ ಸರ್‌, ದೇವೇಗೌಡರ ಆತ್ಮೀಯರಾದ ಇವರನ್ನು ನಾನು ಹೇಗೆ ಬೈಯಲಿ’ ಎಂದೆ. ಆಗ ಸೀನಿಯರ್‌ ಸತ್ಯಪ್ಪನವರನ್ನು ಉದ್ದೇಶಿಸಿ, ‘ಬಹುಶಃ ನೀವು ಅವರು ಹೇಳಿದ್ದನ್ನು ಏನೋ ತಪ್ಪು ತಿಳಿದುಕೊಂಡಿರಬೇಕು’ ಎಂದರು. ಸತ್ಯಪ್ಪ ವಾಪಸ್‌ ಹೋಗುವಾಗ ನನ್ನ ಚೇಂಬರ್‌ಗೆ ಬಂದರು. ಅವರು ಹೇಳಿದ್ದ ಸುಳ್ಳನ್ನೆಲ್ಲಾ ನೆನಪಿಸಿ ಸ್ವಲ್ಪ ಕೆಟ್ಟ ಭಾಷೆಯಲ್ಲಿಯೇ ಬೈದೆ. ಪುನಃ ಅವರು ನನ್ನ ಸೀನಿಯರ್‌ ಬಳಿ ಅಲವತ್ತುಕೊಂಡರು. ಆಗ ನಾನು ಸೀನಿಯರ್‌ ಬಳಿ, ‘ನೋಡಿ ಸರ್‌.

ಇವರು ಆ ರಾಜುವಿನಿಂದಾಗಿ ತುಂಬಾ ತಲೆಕೆಡಿಸಿಕೊಂಡುಬಿಟ್ಟಿದ್ದಾರೆ. ನೀವೇ ನೋಡಿದ್ರಲ್ಲ. ನಾನು ಇಲ್ಲೇ ಇದ್ದೇನೆ. ಇವರಿಗೆ ಬೈಯುವುದಾದರೂ ಹೇಗೆ’ ಎಂದೆ. ಸತ್ಯಪ್ಪನವರ ಸುಳ್ಳಿನ ಕುರಿತು ನನ್ನ ಸೀನಿಯರ್‌ಗೆ ನಾನು ಹೇಳಿರಲಿಲ್ಲ. ಅದಕ್ಕೆ ಅವರು ಸುಖಾಸುಮ್ಮನೆ ನಾನ್ಯಾಕೆ ಬೈಯುತ್ತೇನೆ ಎಂದುಕೊಂಡು ಸತ್ಯಪ್ಪನವರನ್ನೇ ಅನುಮಾನದಿಂದ ನೋಡಿದರು. ಸತ್ಯಪ್ಪ ನನ್ನನ್ನು ದುರುಗುಟ್ಟಿಕೊಂಡು ನೋಡುತ್ತಾ ಹೋದರು. ನಮ್ಮನ್ನೇ ಯಾಮಾರಿಸುವ ಸತ್ಯಪ್ಪಂಗೆ ತಕ್ಕ ಶಾಸ್ತಿ ಕಲಿಸಲೇಬೇಕು ಎಂದುಕೊಂಡೆ. ಹೇಗೂ ರಾಜು ಅವರ ಕೇಸು ನನ್ನ ಬಳಿ ಇತ್ತಲ್ಲ. ಸೂಕ್ತ ಸಮಯಕ್ಕೆ ಕಾಯುತ್ತಿದ್ದೆ. ಇನ್ನೇನು ಕೇಸು ಎರಡು ದಿನ ಇದೆ ಎನ್ನುವಾಗಲೇ ನನಗೊಂದು ಕರೆ ಬಂತು.

‘ನಾನು ಎಂ.ಎನ್.ವೆಂಕಟಾಚಲಯ್ಯ’ ಎಂದರು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದವರು ಕರೆ ಮಾಡಿದ್ದು ನೋಡಿ ನನಗೆ ಅಚ್ಚರಿಯಾಗಿ, ‘ನಮಸ್ತೆ ಸರ್’ ಎಂದೆ. ಆಗ ಅವರು ‘ನೋಡಿ, ನಿಮ್ಮ ಬಳಿ ಸತ್ಯಪ್ಪ ಅವರ ಕೇಸು ಇದೆ. ಅವರು ನನಗೆ ಬೇಕಾದವರು. ಕೇಸನ್ನು ತುಂಬಾ ಮುತುವರ್ಜಿ ವಹಿಸಿ ನಡೆಸಿಕೊಡಿ. ಅದನ್ನು ಹೇಳುವುದಕ್ಕಾಗಿಯೇ ಕರೆ ಮಾಡಿದ್ದು’ ಎಂದರು. ನಾನು ‘ಅಬ್ಬಾ, ಈ ‘ಸುಳ್ಳಪ್ಪ’ನಿಗೆ ನ್ಯಾಯಮೂರ್ತಿಗಳ ಶಿಫಾರಸು ಬೇರೆ ಎಂದು ಅಚ್ಚರಿಪಟ್ಟೆ. ಆದರೆ ಏನೋ ಎಡವಟ್ಟು ಇದೆ ಎನ್ನಿಸಿತು. ಈ ಫೋನ್‌ ಕರೆ ಕುರಿತು ಮತ್ತೊಮ್ಮೆ ಸ್ಮರಿಸಿಕೊಂಡೆ. ಫೋನಿನಲ್ಲಿ ಕರೆ ಮಾಡಿದ್ದ ವ್ಯಕ್ತಿ ‘ನೋಡಿ ಇವ್ರೆ...’ ಎಂದು ಮಾತು ಆರಂಭಿಸಿದ್ದು ನೆನಪಾಯಿತು.

ಆಗ ಗೊತ್ತಾಯ್ತು. ಈ ಕಿತಾಪತಿ ಸತ್ಯಪ್ಪನವರದ್ದೇ ಎಂದು.  ಏಕೆಂದರೆ ‘ನೋಡಿ ಇವ್ರೆ...’ ಎಂದು ಮಾತು ಆರಂಭಿಸುವುದು ಸತ್ಯಪ್ಪನವರ ರೂಢಿಯಾಗಿತ್ತು. ಮುಖ್ಯ ನ್ಯಾಯಮೂರ್ತಿಗಳನ್ನೂ ಬಿಟ್ಟಿಲ್ವಲ್ಲ ಈ ಆಸಾಮಿ, ಹೀಗೇ ಇವರನ್ನು ಬಿಡಬಾರದು ಎಂದುಕೊಂಡೆ. ಮಾರನೆಯ ದಿನ ಸತ್ಯಪ್ಪ ಬಂದಾಗ ನಾನು, ‘ಏನ್‌ ಸರ್‌ ನಿಮ್ಮ ಶಿಫಾರಸು? ನಿನ್ನೆ ಚೀಫ್ ಜಸ್ಟೀಸೇ ಕಾಲ್ ಮಾಡಿದ್ರು’ ಎಂದೆ. ಅದಕ್ಕೆ ಅವರು, ‘ಹೌದು. ನಿನ್ನೆ ಯಾವುದೋ ಕೆಲಸಕ್ಕೆ ಅವರ ಬಳಿ ಹೋಗಿದ್ದೆ. ಹೀಗೆ ಮಾತಿನ ಮಧ್ಯೆ ಈ ವಿಷಯವನ್ನೂ ಹೇಳಿದೆ. ಅದಕ್ಕೇ ಅವರು ನಿಮಗೆ ಕಾಲ್ ಮಾಡಿರಬೇಕು’ ಎಂದರು. ಬಂದ ಕೋಪವನ್ನು ನುಂಗಿಕೊಂಡು ಸುಮ್ಮನಾದೆ. 

ಪ್ರಕರಣದ ವಿಚಾರಣೆ ನ್ಯಾಯಮೂರ್ತಿ ಮೋಹನ ಶಾಂತನಗೌಡರ್ ಅವರ ಮುಂದೆ ಬಂತು. ಸತ್ಯಪ್ಪ ಹಿಂದುಗಡೆ ಕುಳಿತಿದ್ದರು. ಸುಮಾರು ಅರ್ಧ ಗಂಟೆ ಸತ್ಯಪ್ಪ ಅವರ ಪರವಾಗಿ ವಾದ ಮಂಡಿಸಿದೆ. ನನ್ನ ವಾದವನ್ನು ಆಲಿಸಿ ನ್ಯಾಯಮೂರ್ತಿಗಳು ಇನ್ನೇನು ರಾಜು ಅವರಿಗೆ ಸೆಷನ್ಸ್‌ ಕೋರ್ಟ್‌ ನೀಡಿದ್ದ ಜಾಮೀನನ್ನು ರದ್ದು ಮಾಡುವುದರಲ್ಲಿದ್ದರು. ಆಗ ನಾನು ಕೊನೆಯಲ್ಲಿ ‘ಯುವರ್ ಆನರ್, ನನ್ನ ಕ್ಲೈಂಟ್ ಇಲ್ಲಿಯೇ ಇದ್ದಾರೆ. ಅದಕ್ಕಾಗಿ ನಾನು ಅವರ ಪರ ಇಷ್ಟು ಹೊತ್ತು ವಾದ ಮಂಡಿಸಿದೆ. ಆದರೆ ಈ ಸಂಪೂರ್ಣ ವಾದವನ್ನು ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ಮಾಡಿದ್ದೇನೆ’ ಎಂದು ಮೆಲುದನಿಯಲ್ಲಿ ಹೇಳಿದೆ. ನ್ಯಾಯಮೂರ್ತಿಗಳಿಗೆ ಪರಿಸ್ಥಿತಿ ಅರ್ಥವಾಯಿತು.

‘ಕೋರ್ಟ್ ಅರ್ಜಿಯನ್ನು ವಜಾ ಮಾಡಿದೆ’ ಎಂದರು. ವಾಸ್ತವದಲ್ಲಿ ನಾನು ಸಲ್ಲಿಸಿದ್ದ (ಸತ್ಯಪ್ಪನವರ) ಅರ್ಜಿ  ವಜಾ ಆಗಿತ್ತು. ಆದರೆ ಸತ್ಯಪ್ಪ ಅವರು, ರಾಜು ಅವರ ಜಾಮೀನು ಅರ್ಜಿಯೇ ವಜಾ ಆಗಿದೆ ಎಂದು ತಪ್ಪಾಗಿ ತಿಳಿದುಕೊಂಡು ಬೀಗಿದರು. ಕೋರ್ಟ್ ಆದೇಶದ ಬಗ್ಗೆ ನನಗೆ ಹೇಳಲೂ ಅವಕಾಶ ನೀಡದೆ ನನ್ನನ್ನು ಹಾಡಿ ಕೊಂಡಾಡಿದರು. ನಾನೂ ಸುಮ್ಮನಾದೆ. ಐವತ್ತು ರೂಪಾಯಿಗಷ್ಟೇ ಸೀಮಿತಗೊಂಡಿದ್ದ ಈ ಆಸಾಮಿ ಕಚೇರಿಗೆ ಬಂದು ಸಿಹಿಯನ್ನೂ ಹಂಚಿಬಿಟ್ಟರು (ಕೇಸು ಗೆದ್ದರೆ ಸ್ಟಾರ್ ಹೋಟೆಲ್‌ನಲ್ಲಿ  ನನಗೆ ಊಟ ಕೊಡಿಸುವೆ ಎಂದದ್ದು ಮಾತ್ರ ಅವರಿಗೆ ಆ ಕ್ಷಣದಲ್ಲಿ ನೆನಪಾಗಲಿಲ್ಲ ಅನ್ನಿ!). ಅದಾಗಲೇ ಅವರ ಸಂಪೂರ್ಣ ಜಾತಕವನ್ನು ನನ್ನ ಸೀನಿಯರ್‌ ಎದುರು ಬಿಚ್ಚಿಟ್ಟಿದ್ದೆ ನಾನು.

ಅದಕ್ಕೆ ಅವರೂ ಏನು ಹೇಳದೆ ಸುಮ್ಮನಾದರು. ಎರಡು ದಿನ ಬಿಟ್ಟು ಕೋರ್ಟ್ ಕೇಸು ತಮ್ಮ ವಿರುದ್ಧವೇ ಆಗಿದ್ದು ತಿಳಿದು ಕರೆ ಮಾಡಿ ಬೈಯಲು ಶುರುವಿಟ್ಟುಕೊಂಡರು ಸತ್ಯಪ್ಪ. ‘ದೇವೇಗೌಡ, ಕುಮಾರಸ್ವಾಮಿ, ಮುಖ್ಯ ನ್ಯಾಯಮೂರ್ತಿ ಅವರ ಹೆಸರನ್ನೆಲ್ಲಾ ಹೇಳಿ ನಮ್ಮನ್ನೇ ಯಾಮಾರಿಸಲು ನೋಡ್ತೀರಾ. ನಿಮ್ಮದೆಲ್ಲ ಸುಳ್ಳುಗಳು ನಮಗೆ ತಿಳಿದಿವೆ. ನಾನು ನಿಮ್ಮ ಪರವಾಗಿಯೇ ವಾದ ಮಾಡಿದ್ದೆ. ನಿಮಗೇ ಗೊತ್ತಿಲ್ಲ. ಕೋರ್ಟ್‌ ನಿಮ್ಮ ಅರ್ಜಿ ವಜಾ ಮಾಡಿದರೆ ನಾನೇನು ಮಾಡಲು ಆಗುತ್ತದೆ’ ಎಂದೆ. ಮರು ಮಾತನಾಡದೆ ಫೋನ್ ಇಟ್ಟರು ಸತ್ಯಪ್ಪ.

ಆಮೇಲೆ ನನ್ನ ವಕೀಲ ಮಿತ್ರರೊಬ್ಬರಿಂದ ತಿಳಿದದ್ದು ಇಷ್ಟೇ. ದೇವೇಗೌಡರ ಮನೆಗೆ ಕಾಲಿಡಬೇಡ ಎಂದರೂ ಅವರ ಮನೆಗೆ ಕಳ್ಳಬೆಕ್ಕಿನಂತೆ ಪದೇ ಪದೇ ಹೋಗುತ್ತಿದ್ದ ಸತ್ಯಪ್ಪ, ಅವಕಾಶ ಸಿಕ್ಕಾಗೆಲ್ಲಾ ಅವರ ಬಳಿ ನಿಂತು ಫೋಟೊ ತೆಗೆಸಿಕೊಂಡು ಹೀಗೆ ಎಲ್ಲರನ್ನೂ ಯಾಮಾರಿಸುತ್ತಾರೆ ಎನ್ನುವುದು. ವೈಯಕ್ತಿಕ ವಿಚಾರವೊಂದಕ್ಕೆ ಸಂಬಂಧಿಸಿದಂತೆ ರಾಜು ಅವರನ್ನು ದ್ವೇಷಿಸುತ್ತಿದ್ದ ಇವರು ಅವರಿಗೊಂದು ಗತಿ ಕಾಣಿಸಬೇಕೆಂಬ ಕಾರಣಕ್ಕೆ ಈ ರೀತಿ ಕಿರಿಕಿರಿ ಕೊಡುತ್ತಿದ್ದರು. ಆದರೆ ನಾನು ಕೋರ್ಟ್‌ನಲ್ಲಿ ಮೆಲುದನಿಯಲ್ಲಿ ಮಾಡಿದ ವಾದದ ಬಗ್ಗೆ ಮಾತ್ರ ಈ ‘ಬೊಗಳೆ ಸತ್ಯಪ್ಪ’ನವರಿಗೆ ಕೊನೆಗೂ ತಿಳಿಯಲಿಲ್ಲ!

(ಲೇಖಕ ಹೈಕೋರ್ಟ್‌ ವಕೀಲ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT