ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರು ಎಷ್ಟು ಎತ್ತರ!

ಪಂಚರಂಗಿ
Last Updated 3 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬಿಟೌನ್ ಮಂದಿಯ ಬಗ್ಗೆ ನಮ್ಮಲ್ಲಿ ಯಾವತ್ತಿಗೂ ಒಂದು ಕುತೂಹಲ ಇದ್ದೇ ಇರುತ್ತದೆ. ಅದರಲ್ಲೂ ನಟ–ನಟಿಯರ ಸುತ್ತ ಎಲ್ಲರ ಚಿತ್ತ. ಅವರೇನು ತಿನ್ನುತ್ತಾರೆ, ಹೇಗಿರುತ್ತಾರೆ, ಅವರ ನಿಜವಾದ ರೂಪ, ಬಣ್ಣ, ಎತ್ತರ ಏನು ಎತ್ತ... ಎಂಬ ಬಗ್ಗೆ ತಿಳಿದುಕೊಳ್ಳಲು ಯಾರಿಗೆ ತಾನೆ ಇಷ್ಟ ಇರಲ್ಲ? ನಿಮ್ಮ ನೆಚ್ಚಿನ ನಟಿಯ ನಿಜವಾದ ಎತ್ತರ, ಅದರ ಸುತ್ತ ಇರುವ ಕಥೆಗಳಿಗೆ ಇಲ್ಲಿದೆ ಉತ್ತರ...

ಭಾರತದಲ್ಲಿ ಒಬ್ಬ ಪುರುಷನ ಅಂಗಸೌಷ್ಠವವನ್ನು ವರ್ಣಿಸುವಾಗ ಮೊಟ್ಟ ಮೊದಲು ಅವನ ಎತ್ತರವನ್ನು ಗುರುತಿಸುವ ಪರಿಪಾಠವಿದೆ. ಬಾಲಿವುಡ್‌ನಲ್ಲೂ ಈ ಸಂಗತಿಯನ್ನು ಕಡೆಗಣಿಸುವಂತಿಲ್ಲ. ಎತ್ತರ ನಿಲುವಿನ ನಾಯಕಿಯರ ನಡುವೆ ಅಷ್ಟುದ್ದ ಇಲ್ಲದ ಅನೇಕ ನಟರು ಪೇಚಾಡಿಕೊಂಡ ಪ್ರಸಂಗಗಳೂ ಸಾಕಷ್ಟಿವೆ. ಅಗತ್ಯಕ್ಕಿಂತ ಹೆಚ್ಚಿನ ಎತ್ತರ ಹೊಂದಿದ ತಪ್ಪಿಗೆ ಹೈ ಹೀಲ್ಡ್ ಧರಿಸುವ ಕನಸಿಗೆ ಗುಡ್‌ಬೈ ಹೇಳಿದ ನಟನಾ ಮಣಿಯರ ಕಣ್ಣೀರ ಕಥೆಗಳೂ ಇಲ್ಲಿವೆ.

ಹಿಂದಿ ಚಿತ್ರರಂಗದಲ್ಲಿ ಎತ್ತರದ ನಟಿಯರ ಸಾಲಿನಲ್ಲಿ ಮೊದಲು ನಿಲ್ಲುವವರು ಡಯಾನಾ ಪೆಂಟಿ. ಅವರ ಎತ್ತರ ಬರೋಬ್ಬರಿ 5 ಅಡಿ 10 ಇಂಚು. ಅಂದರೆ 177ಸೆ.ಮೀ. ಡಯಾನಾ ಹಿಂದೆಯೇ ಬರುವ ಹೆಸರು ಸುಶ್ಮಿತಾ ಸೇನ್. ಅವರ ಎತ್ತರ 5 ಅಡಿ 9.5 ಇಂಚು. ನಂತರದ ಸ್ಥಾನ ಕನ್ನಡತಿ ದೀಪಿಕಾ ಪಡುಕೊಣೆ ಅವರಿಗಿದೆ (5 ಅಡಿ 9 ಇಂಚು). ಅನುಷ್ಕಾ ಶರ್ಮಾ ಕೂಡ ದೀಪಿಕಾ ಸರಿಸಮ ಎನ್ನುತ್ತಾರೆ.

ಕತ್ರಿನಾ ಕೈಫ್, ಬಿಪಾಶಾ ಬಸು, ಮಲ್ಲಿಕಾ ಶೆರಾವತ್, ಶಿಲ್ಪಾ ಶೆಟ್ಟಿ ಕೇವಲ ಅರ್ಧ ಇಂಚು ಅಂತರದಲ್ಲಿ ಒಂದು ಹೆಜ್ಜೆ ಹಿಂದೆ ಉಳಿದ ನಟಿಯರ ಸಾಲಿನಲ್ಲಿದ್ದಾರೆ. ಇವರ ಎತ್ತರ 5 ಅಡಿ 8.5 ಇಂಚು. 

ನಂತರದ ಸ್ಥಾನದಲ್ಲಿ ಟಬು, ಲಾರಾ ದತ್ತ, ಸೋನಾಲಿ ಬೇಂದ್ರೆ ಹಾಗೂ ಸೋನಂ ಕಪೂರ್ ನಿಲ್ಲುತ್ತಾರೆ. ಇವರ ಎತ್ತರ 5 ಅಡಿ 8 ಇಂಚು. ಇನ್ನು 5 ಅಡಿ 7.5 ಇಂಚು ಎತ್ತರದ ಸುಂದರಿಯರ ಸಾಲಿನಲ್ಲಿ ಐಶ್ವರ್ಯ ರೈ, ಇಷಾ ಗುಪ್ತಾ ಇದ್ದಾರೆ. 5 ಅಡಿ 6 ಇಂಚಿನ ಬೆಡಗಿಯ­ರೆಂದರೆ ಕರಿಷ್ಮಾ, ಕರೀನಾ, ಪ್ರಿಯಾಂಕಾ, ಸೋನಾಕ್ಷಿ, ಅದಿತಿ... ಇತ್ಯಾದಿ.

ಚೋಟುದ್ದ ನಟಿಯರು

ಇನ್ನು ಕಡಿಮೆ ಎತ್ತರ ಇರುವ ನಟಿಯರ ಸಾಲಿನಲ್ಲಿ 5 ಅಡಿ ಎತ್ತರದ ಜಯಾ ಆಂಟಿ ಮೊದಲು ನಿಲ್ಲುತ್ತಾರೆ. ಈಗಿನ ಬೆಡಗಿಯರಲ್ಲಿ ಅಮೃತಾ ರಾವ್, ಅಮೀಷಾ ಪಟೇಲ್, ಪ್ರೀತಿ ಜಿಂಟಾ ಮತ್ತು ಕೊಂಕಣಾ ಸೇನ್ ನಿಲ್ಲುತ್ತಾರೆ.  ಕ್ರಮವಾಗಿ ಅಮೃತಾ 5 ಅಡಿ 1 ಇಂಚು, ಅಮಿಷಾ ಹಾಗೂ ಪ್ರೀತಿ ಜಿಂಟಾ 5 ಅಡಿ 2 ಇಂಚು ಹಾಗೂ ಕೊಂಕಣಾ, ಅಲಿಯಾ ಭಟ್, 5 ಅಡಿ 3 ಇಂಚು.

ಹೀರೊ ನಂಬರ್ ಒನ್
ನಾಯಕ ನಟರ ವಿಚಾರಕ್ಕೆ ಬಂದಾಗ ಜನಮನದಲ್ಲಿ ಬಂದು ನಿಲ್ಲುವ ಮೊದಲ ಹೆಸರು ಬಚ್ಚನ್ಸ್. ಹೌದು ಅಮಿತಾಭ್ (6 ಅಡಿ 2.5) ಹಾಗೂ ಅಭಿಷೇಕ್ (6.3) ಬಚ್ಚನ್ ಎತ್ತರದ ನಾಯಕ ನಟರು ಎನ್ನುವ ಮಾತು ನಿಜ. ಆದರೆ ಅವರಿಬ್ಬರಿಗಿಂತ ಎತ್ತರ ಇರುವುದು ಅರುಣೋದಯ್ ಸಿಂಗ್. ಅವರ ಎತ್ತರ 6 ಅಡಿ 4 ಇಂಚು.

ನಂತರ ಸಿದ್ಧಾರ್ಥ ಮಲ್ಹೋತ್ರಾ (6 ಅಡಿ 2.2 ಇಂಚು), ಅರ್ಜುನ್ ರಾಮ್ ಪಾಲ್ (6 ಅಡಿ 2 ಇಂಚು) ಅಕ್ಷಯ್ ಕುಮಾರ್ (6 ಅಡಿ1ಇಂಚು) ಬಾಬಿ ಡಿಯೊಲ್ (6 ಅಡಿ 0.2 ಇಂಚು ), ಇರ್ಫಾನ್ ಖಾನ್ (6 ಅಡಿ), ರಣಬೀರ್ ಕಪೂರ್ (5 ಅಡಿ 11.5 ಇಂಚು).

ಹೈ ಹೀಲ್ಡ್ ಹೀರೊ
ಆದರೆ ಸಾಮಾನ್ಯವಾಗಿ ತಮ್ಮ ಸಹ ನಟಿಯರಿಗಿಂತ ಕಡಿಮೆ ಎತ್ತರ ಹೊಂದಿದ್ದರೂ ಬಾಕ್ಸ್‌ ಆಫೀಸ್‌ನಲ್ಲಿ ಜಾದೂ ಮಾಡುವ ನಟರೂ ಇದ್ದಾರೆ.

ತಮ್ಮ ಜೊತೆ ನಟಿಸುತ್ತಿರುವ ಎತ್ತರದ ನಟಿಯರ ಸಮಕ್ಕೇರಲು ಹೈ ಹೀಲ್ಡ್ ಅವರಿಗೆ ಅನಿವಾರ್ಯ. ಅಂತವರ ಸಾಲಿನಲ್ಲಿ ಬಾಲಿವುಡ್‌ನ ಸೂಪರ್‌ ಸ್ಟಾರ್‌ಗಳಾದ ಖಾನ್‌ಗಳಿದ್ದಾರೆ ಎನ್ನುವುದು ಗಮನಾರ್ಹ.

ಕೇವಲ 5 ಅಡಿ 6 ಇಂಚು ಅಂದರೆ 168 ಸೆ.ಮೀ. ಎತ್ತರ ಹೊಂದಿರುವ ಅಮೀರ್ ಖಾನ್ ಧೂಮ್‌ನಲ್ಲಿ ಬರೊಬ್ಬರಿ 5 ಅಡಿ 8.5 ಇಂಚು ಎತ್ತರದ ಕತ್ರಿನಾ ಕೈಫ್ಗೆ ನಾಯಕನಾಗಲಿಲ್ಲವೇ?

ದೇವರು ಕೊಟ್ಟ ಎತ್ತರವನ್ನು ಈಗಂತೂ ಹೆಚ್ಚಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಬಾಡಿ ಫಿಟ್ ಆಗಿರುವಂತೆ ನೋಡಿಕೊಳ್ಳುವುದು ಕೈಯಲ್ಲಿದೆ ಎನ್ನುವುದು ಅಮೀರ್ ವಾದ.

ಇನ್ನು ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಸಹ ಇತ್ತೀಚೆಗೆ ತಮಗಿಂತ ಎತ್ತರದ ನಟಿಯರೊಂದಿಗೆ ಸ್ಕ್ರೀನ್‌ ಹಂಚಿಕೊಳ್ಳುವಾಗ ಈ ಮುಜುಗರ ಎದುರಿಸಿದ್ದುಂಟು. ಕ್ಯಾಮೆರಾ ಕೈಚಳಕದಿಂದ ಈ ಅಂತರ ನೋಡುಗರ ಅರಿವಿಗೆ ಬರಲಿಕ್ಕಿಲ್ಲ. ಆದರೆ ವೇದಿಕೆ ಮೇಲೆ ಮಾತ್ರ ಅದನ್ನು ಮರೆಮಾಚುವುದು ಸಾಧ್ಯವಾಗುವುದಿಲ್ಲ.


ಸಲ್ಲು ವ್ಯಕ್ತಿತ್ವ ಮೆಚ್ಚಿಕೊಂಡ ಸೇನ್‌

ಬೀವಿ ನಂಬರ್–1 ಚಿತ್ರದ ಶೂಟಿಂಗ್ ಸಮಯದಲ್ಲಿ ನಿರ್ದೇಶಕರು ನನ್ನ ಬಳಿ ಬಂದು ಹೀಲ್ಡ್ ಧರಿಸಬಾರದು ಎಂದು ಹೇಳಿದರು. ಅದನ್ನು ಕೇಳಿದ ಸಲ್ಮಾನ್‌ ಖಾನ್ ‘ನಿಮಗೆ ಹೀಲ್ಡ್ ಧರಿಸುವುದು ಇಷ್ಟವಾದರೆ ಧರಿಸಿ. ಕಡಿಮೆ ಎತ್ತರ ಇರುವುದು ನನ್ನ ಸಮಸ್ಯೆ, ಅದನ್ನು ನಾನು ನಿರ್ವಹಿಸುತ್ತೇನೆ. ಅದಕ್ಕಾಗಿ ನೀವೇಕೆ ರಾಜಿ ಆಗಬೇಕು’ ಎಂದರು. ನಿಜಕ್ಕೂ ಅವರೊಬ್ಬ ಅತ್ಯುತ್ತಮ ಮನುಷ್ಯ. ಅವರು ವ್ಯಕ್ತಿತ್ವದಲ್ಲಿ ನನಗಿಂತ ಎತ್ತರದಲ್ಲಿ ನಿಂತಂತೆ ಅನಿಸಿತು ನನಗೆ.
-ಸುಶ್ಮಿತಾ ಸೇನ್

ಮುಖವಾಡ ಒಲ್ಲೆ

ನಾನು ಇರುವುದೇ ಕೇವಲ 5.3 ಎತ್ತರ. ನನಗೆ ಒಪ್ಪುವ ಪಾತ್ರಗಳನ್ನಷ್ಟೇ ನಾನು ಆಯ್ಕೆ ಮಾಡಿಕೊಳ್ಳುತ್ತೇನೆ. ಚಿತ್ರಗಳಲ್ಲಿ ನನ್ನ ಎತ್ತರದ ಬಗ್ಗೆ ಡೈಲಾಗ್‌ಗಳಿದ್ದರೂ ನಾನು ಏನೂ ಅಂದುಕೊಳ್ಳುವುದಿಲ್ಲ. ಆದರೆ ಸ್ಟೂಲ್ ಮೇಲೆ ನಿಲ್ಲು ಎಂದರೆ ಮಾತ್ರ ನಾನು ಚಿತ್ರದಿಂದಲೇ ಒಂದು ಹೆಜ್ಜೆ ಹಿಂದೆ ಸರಿಯುತ್ತೇನೆ.

ನನ್ನ ಎತ್ತರದಿಂದಲೇ ನನಗೊಂದು ಐಡೆಂಟಿಟಿ ಇದೆ. ಹೀಗಾಗಿ ನಾನು ನನ್ನ ಅಭಿಮಾನಿಗಳ ಎದುರು ಮುಖವಾಡ ಧರಿಸಲು ಇಷ್ಟಪಡುವುದಿಲ್ಲ. ಅಮೀರ್ ಖಾನ್, ಸಲ್ಮಾನ್ ಖಾನ್ ಕಡಿಮೆ ಎತ್ತರ ಇದ್ದರೂ ನಂಬರ್ ಒನ್ ಸ್ಥಾನದಲ್ಲಿಲ್ಲವೇ?
–ರಾಜ್‌ಪಾಲ್ ಯಾದವ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT