ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವತ್ವ: ಕೌಶಲ, ಮಾದರಿಗಳ ಸತ್ವ

Last Updated 29 ಜುಲೈ 2015, 19:30 IST
ಅಕ್ಷರ ಗಾತ್ರ

ಮೂರು ವರ್ಷಗಳ ಹಿಂದಿನ ಮಾತು. ಮೈದಾನದಲ್ಲಿ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳು ಅದಾಗಲೇ ಪಿಚ್ ಬಳಿ ಬಂದಿದ್ದರು. ಯಾರ್ಯಾರನ್ನು ಎಲ್ಲೆಲ್ಲಿ ಫೀಲ್ಡಿಂಗ್ ನಿಲ್ಲಿಸುವುದು ಎಂಬ ಲೆಕ್ಕಾಚಾರದಲ್ಲಿ ಮುಳುಗಿದ್ದ ಹಂಗಾಮಿ ನಾಯಕ ಅಪ್ಪಿತಪ್ಪಿಯೂ ‘ಬೌಂಡರಿ ಗೆರೆ ಬಳಿ ಹೋಗು’ ಎಂಬ ಆಣತಿಯನ್ನು ನೀಡಲಿಲ್ಲ. ಮೊದಲ ಸರ್ಕಲ್‌ನಲ್ಲಿಯೇ ಫೀಲ್ಡಿಂಗ್ ಮಾಡುವುದು ಅನಿವಾರ್ಯ. ಹಾಗೆ ನೋಡಿದರೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಸರ್ಕಲ್‌ನಲ್ಲಿ ಫೀಲ್ಡಿಂಗ್ ಮಾಡುವವರೆಲ್ಲರ ಕಣ್ಣು, ಪಾದಗಳು ಚುರುಕಾಗಿರುತ್ತವೆ.

ಮೂವತ್ತೈದು ದಾಟಿದ ಹೊತ್ತಿನಲ್ಲಿ ದೂರದಿಂದ ಚೆಂಡನ್ನು ವಿಕೆಟ್‌ನತ್ತ ಪಕ್ಕಾ ಎಸೆಯುವುದರಲ್ಲಿ ವಿಫಲನಾಗುತ್ತೇನೆ ಎನ್ನುವುದೇ ನನ್ನ ದೌರ್ಬಲ್ಯವಾಗಿತ್ತು. ಆದರೂ ಯುವತ್ವ ಸಾಬೀತುಪಡಿಸಬೇಕಲ್ಲ; ಮೊದಲ ಸರ್ಕಲ್ ದಾಟದಂತೆ ಚೆಂಡನ್ನು ತಡೆಯುವುದರ ಮೂಲಕ ಅದು ಸಾಧ್ಯವಾಗುತ್ತಿತ್ತು. ಚೆಂಡು ಕೈಕಾಲುಗಳಿಂದ ನುಸುಳಿ ಹೋದರಂತೂ ತಕ್ಷಣ ಹೊಮ್ಮುತ್ತಿದ್ದ ಪ್ರತಿಕ್ರಿಯೆ: ‘ಅಣ್ಣನಿಗೆ ವಯಸ್ಸಾಯಿತು’.

ಯುವತ್ವದ ಅವಧಿ ಎಷ್ಟೆಂಬ ಜಿಜ್ಞಾಸೆ ಹೀಗೆ ಬದುಕಿನಲ್ಲಿ ಆಗೀಗ ಕಾಡುತ್ತಲೇ ಇರುತ್ತದೆ. ಆಗ, ಅಂದರೆ ಕ್ಷೇತ್ರರಕ್ಷಣೆಯಲ್ಲಿ ಯುವಕ ನಾನಲ್ಲ ಎನ್ನುವುದನ್ನು ಕೆಲವರು ರುಜುವಾತು ಪಡಿಸಲು ಕಾರಣಗಳನ್ನು ಪಟ್ಟಿ ಮಾಡಿದ ಹೊತ್ತಿನಲ್ಲಿ ಸರ್ಕಾರವು ದೇಶದಲ್ಲಿ ಯುವಜನತೆಯ ಗರಿಷ್ಠ ಸರಾಸರಿ ವಯಸ್ಸು 30 ಎಂದು ಮಿತಿಗೊಳಿಸಿತ್ತು. ಅದಕ್ಕೂ ಮೊದಲು ಆ ಮಿತಿ 32 ವರ್ಷ ಆಗಿತ್ತು. ಅಂದರೆ ಯುವತ್ವದ ಗಡಿ ದಾಟಿ ಅದಾಗಲೇ ಮೂರು ವರ್ಷ ಮೀರಿದ ವಯಸ್ಸು ನನ್ನದೆಂದು ಸ್ಪಷ್ಟಪಡಿಸಲು ಕ್ರಿಕೆಟ್ ತಂಡದ ಯುವಜನತೆ ಕೈಲಿ ಒಂದು ಇಂಗ್ಲಿಷ್ ಪತ್ರಿಕೆ ಇತ್ತು.

ಅದರಲ್ಲಿ ಯುವತಿಯೇ ಆಗಿರಬಹುದಾಗಿದ್ದ ಪತ್ರಕರ್ತೆಯೊಬ್ಬರು ಯುವತ್ವದ ಕುರಿತು ನಟಿ, ಚಿಂತಕ, ಬರಹಗಾರರನ್ನೆಲ್ಲಾ ಮಾತನಾಡಿಸಿದ್ದರು. ನಟಿ ರಿಚಾ ಛಡ್ಡಾ ಆಗ, ‘ಮನಸ್ಸಿಗೆ ತೋಚಿದ್ದನ್ನೆಲ್ಲಾ ಮಾಡುವ ಸ್ವೇಚ್ಛೆ ಯಾವ ಅವಧಿಯವರೆಗೆ ಸಾಧ್ಯವೋ ಅದೇ ಯುವತ್ವದ ಅವಧಿ’ ಎಂದಿದ್ದರು. ಲೇಖಕ ಸಮಿತ್ ಬಸು ಅಭಿಪ್ರಾಯವೇ ಬೇರೆಯಾಗಿತ್ತು: ‘ಯುವತ್ವ ಎನ್ನುವುದು ನಿರ್ದಿಷ್ಟ ಜೈವಿಕ ವಯಸ್ಸು. ಇಪ್ಪತ್ತು ಚಿಲ್ಲರೆ ಅಷ್ಟೆ ಎನ್ನುವುದು ನನ್ನ ಅಭಿಪ್ರಾಯ. 30 ದಾಟಿ 40 ತಲುಪುತ್ತಿರುವ ಅನೇಕರು ಹೃದಯದಲ್ಲಿ ಯುವತ್ವದ ಬಡಿತ ಇರುವ ಯಾರೂ ಯುವಜನರೇ ಎಂದೆಲ್ಲಾ ಹೇಳುವುದು ತಮ್ಮ ತಮ್ಮ ಅನುಕೂಲಕ್ಕಷ್ಟೆ’.

‘ಇಪ್ಪತ್ತು ವಯಸ್ಸಿನಲ್ಲಿ ಜಗತ್ತೇ ಮುಗಿದುಹೋಯಿತು ಎಂಬಂತೆ ಇರುವವರನ್ನು ನೋಡಿದ್ದೇನೆ. 40ರಲ್ಲಿ ಸಾಹಸ ಕ್ರೀಡೆಗಳನ್ನು ಆಡುತ್ತಾ, ಉತ್ಸಾಹದ ಚಿಲುಮೆಗಳಂತೆ ಇರುವವರನ್ನೂ ಕಂಡಿದ್ದೇನೆ. ನನ್ನ ಪ್ರಕಾರ ಹೀಗೆ ಚಿಮ್ಮುವ ಉತ್ಸಾಹ ಇರುವ ಯಾವುದೇ ವಯಸ್ಸಿನವರು ಯುವಕರೇ’ ಎಂದು ನಟಿ ಪೂಜಾ ಬೇಡಿ ಅಭಿಪ್ರಾಯಪಟ್ಟಿದ್ದರು.

ಸೋಷಿಯಾಲಜಿಸ್ಟ್ ಶಿವ್ ವಿಶ್ವನಾಥನ್ ಗಮನಿಸಿದ್ದೇ ಬೇರೆ: ‘ನಮ್ಮ ದೇಶದಲ್ಲಿ ಯುವತ್ವ ವಿಭಿನ್ನಾರ್ಥಗಳನ್ನು ಕೊಡುವ ವಿಭಾಗಕ್ಕೆ ಸೇರುತ್ತದೆ. ಅದು ಬಾಲ್ಯ ಹಾಗೂ ದೊಡ್ಡವರಾಗುವ ನಡುವಿನ ಘಟ್ಟ. ಆಸಕ್ತಿಕರ ವಿಷಯವೆಂದರೆ, ಬಾಲ್ಯದಲ್ಲಿ ಹಾಗೂ ದೊಡ್ಡವರಾದ ಮೇಲೆಯೂ ಯುವತ್ವ ಒಂದು ರೀತಿಯಲ್ಲಿ ಓವರ್‌ಲ್ಯಾಪ್ ಆಗುತ್ತದೆ. ಇದಕ್ಕೆ ಅವರ ವೃತ್ತಿಯ ಆಯ್ಕೆ ಹಾಗೂ ಅಕಾಡೆಮಿಕ್ಸ್ ಕಾರಣವಾಗಿರುತ್ತದೆ. ಅದು ಜೀವನಶೈಲಿಗೆ ಸಂಬಂಧಿಸಿದ್ದು.

ಉದಾಹರಣೆಗೆ, ಪದವಿ ಮುಗಿಸಿ ಬೇಗ ಕೆಲಸ ಹಿಡಿಯುವ ಒಬ್ಬ ಮೂವತ್ತು ತಲುಪುವ ಹೊತ್ತಿಗೇ ಬದುಕಿನಲ್ಲಿ ನೆಲೆಗೊಳ್ಳಬಹುದು. ಅದೇ, ಸಂಶೋಧನೆ ಅದೂ ಇದೂ ಎಂದು ಹಚ್ಚಿಕೊಂಡು ಪಿಎಚ್‌.ಡಿ. ಮಾಡುವವರು ಇಪ್ಪತ್ತೊಂಬತ್ತು ಮೂವತ್ತಾದರೂ ಓದುತ್ತಲೇ ಇರುತ್ತಾರೆ. ಅವರು ಕೆಲಸಕ್ಕೆ ಸೇರಿ, ಮದುವೆ ಆಗಿ ಸಂಸಾರ ಕಟ್ಟಿಕೊಳ್ಳುವುದು ಮೂವತ್ತು ದಾಟಿದ ಮೇಲೆಯೇ. ಅವರೂ ಯುವಜನತೆಯೇ ಅಲ್ಲವೇ? ಸಾಮಾಜಿಕವಾಗಿ, ಭಾರತದ ಸ್ಥಿತಿಗತಿಯಲ್ಲಿ ಯುವತ್ವವನ್ನು ಅನೇಕರು ತಪ್ಪಾಗಿ ಅರ್ಥೈಸುತ್ತಿದ್ದಾರೆ.

ಭಾರತದಲ್ಲಿ ಸಾಮಾಜಿಕ ಹಾಗೂ ಆರ್ಥಿಕವಾಗಿ ಬಹು ವರ್ಗಗಳು ಇರುವುದರಿಂದ ಯುವತ್ವದ ಅವಧಿಯನ್ನು ಏಕರೀತಿಯಲ್ಲಿ ಪರಿಭಾವಿಸಲು ಸಾಧ್ಯವಿಲ್ಲ’. ಶಿವ್ ಹೇಳಿದ ಇದೊಂದು ಅಭಿಪ್ರಾಯ ಸಮರ್ಥನೆಗೆ ಸಾಕಿತ್ತು.  ಮೊದಲು ಟೀಕಿಸಿದ ಕೆಲವರು, ಆ ಪಂದ್ಯದಲ್ಲಿ ಎರಡು ವಿಕೆಟ್‌ಗಳು ಬಿದ್ದಮೇಲಷ್ಟೆ ಯುವತ್ವದ ಒಂದಿಷ್ಟಾದರೂ ಅಂಶ ನನ್ನಲ್ಲಿ ಇದೆ ಎಂದು ಒಪ್ಪಿದರು. ಇನ್ನು ಕೆಲವರು ಹುಸಿನಗೆ ನಕ್ಕರು. ‘ಅದು ಯುವತ್ವ ಅಲ್ಲ, ಅನುಭವ ಅಷ್ಟೆ’ ಎನ್ನುವುದು ನಕ್ಕವರ ಇನ್ನೊಂದು ವಾದ.

ಸಿನಿಮಾ ಮಾದರಿಗಳು
ಆರು ವರ್ಷಗಳ ಹಿಂದೆ, ಅಂದರೆ 2009ರಲ್ಲಿ ಗೋವಾದಲ್ಲಿ ನಡೆದ ಭಾರತೀಯ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಚೀನಾದ ಜನಪ್ರಿಯ ನಿರ್ದೇಶಕ ಪೀಟರ್ ಚಾಂಗ್ ಬಂದಿದ್ದರು. ಹಾಲಿವುಡ್‌ನಲ್ಲಿ ಎಲ್ಲಾ ಸೂಪರ್‌ಸ್ಟಾರ್‌ಗಳ ವಯಸ್ಸು ನಲವತ್ತೈದು ದಾಟಿರುವುದನ್ನು ಅವರು ಉದಾಹರಣೆಗಳ ಸಹಿತ ಪಟ್ಟಿ ಮಾಡಿದ್ದರು. ಬಾಲಿವುಡ್ ಸಿನಿಮಾಗಳ ಉತ್ಪ್ರೇಕ್ಷಿತ ವೈಭವವನ್ನು ಕುತೂಹಲದಿಂದ ಬಣ್ಣಿಸಿದ್ದ ಅವರು, ಇಲ್ಲಿ ಸೂಪರ್‌ಸ್ಟಾರ್‌ಗಳ ವಯಸ್ಸು ಎಷ್ಟಿದೆಯೋ ಎಂಬ ಪ್ರಶ್ನೆಯನ್ನೂ ಉಳಿಸಿದ್ದರು. ಈಗ ನೋಡಿದರೆ, ಅವರು ಹೇಳಿದಂತೆಯೇ ಬಾಲಿವುಡ್‌ನಲ್ಲೂ ಆಗಿದೆ. ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಸಲ್ಮಾನ್ ಖಾನ್‌ಗೆ 49 ತುಂಬಿದೆ.

ಶಾರುಖ್ ಖಾನ್ 50 ದಾಟಿ ಆಯಿತು. ಈಗಲೂ ಭುಜಬಲ ಪರಾಕ್ರಮ ನೆಚ್ಚಿಕೊಂಡೇ ಸಿನಿಮಾಗಳನ್ನು ಮಾಡುತ್ತಿರುವ ಅಜಯ್ ದೇವಗನ್, ಅಕ್ಷಯ್ ಕುಮಾರ್ ವಯಸ್ಸು ಕ್ರಮವಾಗಿ 46 ಹಾಗೂ 47 ವರ್ಷ. ಮಾಡೆಲ್, ಸಾಂಪ್ರದಾಯಿಕ ಕುಟುಂಬದ ಹುಡುಗ, ಗೂನುಬೆನ್ನಿನ ಆಸಾಮಿ ಹೀಗೆ ಯಾವ ಪಾತ್ರಗಳಿಗೂ ಒಡ್ಡಿಕೊಳ್ಳಬಲ್ಲ ತಮಿಳಿನ ನಟ ವಿಕ್ರಮ್‌ಗೆ 49 ವರ್ಷ ಆಗಿದೆ ಎಂದರೆ ಅನೇಕರು ಹುಬ್ಬೇರಿಸುತ್ತಾರೆ. ಯುವತ್ವದ ಒಂದಂಶ ತಮ್ಮಲ್ಲಿ ಇದೆ ಎಂದೇ ಭಾವಿಸಿರುವ ಸೂಪರ್‌ಸ್ಟಾರ್ ರಜನಿಕಾಂತ್ 64 ದಾಟಿದವರು. ಕಮಲ ಹಾಸನ್‌ಗೇ 60 ಆಯಿತಲ್ಲವೇ? ಈಗಲೂ ಚುರುಕಾಗಿ ಕುಣಿಯುವ ಕನ್ನಡದ ನಟ ಶಿವರಾಜ್‌ಕುಮಾರ್ ಕೂಡ ಇದೇ ಕ್ಯಾಟಗರಿಯವರಲ್ಲವೇ?

ಹಾಗಿದ್ದರೆ ಈ ನಟರಲ್ಲಿ ಇರುವುದು ಯುವತ್ವವೇ ಎಂಬೊಂದು ಪ್ರಶ್ನೆಯನ್ನು ಇಪ್ಪತ್ತೆರಡರ ಹುಡುಗನಿಗೆ ಹಾಕಿದಾಗ, ಅವನು ಹೇಳಿದ್ದು ಹೀಗೆ: ‘ಇವರೆಲ್ಲಾ ಯುವಕರ ರೋಲ್ ಮಾಡೆಲ್‌ಗಳಷ್ಟೆ. ಅವರಂತೆ ದೇಹ ಮಾಡಬೇಕು, ಅಷ್ಟು ಅಭಿಮಾನಿಗಳು ಶಿಳ್ಳೆ ಹಾಕುವಂತೆ ಬೆಳೆಯಬೇಕು. ಈ ವಯಸ್ಸಿನಲ್ಲೇ ಅಷ್ಟೊಂದು ವರ್ಕ್‌ಔಟ್ ಮಾಡುತ್ತಾರೆಂದರೆ ಮೊದಲೆಲ್ಲಾ ಹೇಗೆ ಕಸರತ್ತು ಮಾಡಿರಬೇಕು... ಹುಡುಗಿಯರು ಅವರಿಗೆ ಎಷ್ಟು ಸಲೀಸಾಗಿ ಬೀಳುತ್ತಾರಲ್ಲ...’ ಇತ್ಯಾದಿ.

ಕ್ರೀಡಾ ಮಾದರಿಗಳು
ಯುವತ್ವದ ಸಮರ್ಥನೆಗೆ ಕ್ರೀಡಾಕ್ಷೇತ್ರದಲ್ಲಿ ಕೆಲವಾದರೂ ಉದಾಹರಣೆಗಳು ಸಿಗುತ್ತವೆ. ನಮ್ಮ ಅನಿಲ್ ಕುಂಬ್ಳೆ ಬೌಲ್ ಮಾಡಲು ಹೆದರುತ್ತಿದ್ದ ಶ್ರೀಲಂಕಾದ ಬ್ಯಾಟ್ಸ್‌ಮನ್ ಅರವಿಂದ ಡಿಸಿಲ್ವ 2002ರಲ್ಲಿ ಬಾಂಗ್ಲಾದೇಶದ ವಿರುದ್ಧ ಕೊನೆಯ ಟೆಸ್ಟ್ ಪಂದ್ಯ ಆಡಿದರು. ತಾವು ಮಾಡಿದ ಕೊನೆಯ ಎಸೆತದಲ್ಲಿ ಒಂದು ವಿಕೆಟ್ ಪಡೆದ ಅವರು, ಆ ಪಂದ್ಯದಲ್ಲಿ ಒಂದು ದ್ವಿಶತಕ ಕೂಡ ದಾಖಲಿಸಿದ್ದನ್ನು ಮರೆಯಲಾಗದು. ಆಗ ಅವರಿಗೆ 37 ವರ್ಷ ವಯಸ್ಸಾಗಿತ್ತು. ಟೊಣಪನಂತೆ ಇದ್ದ ಅವರ ದೇಹಾಕಾರ ಎಂದೂ ಅವರ ಬ್ಯಾಟ್ಸ್‌ಮನ್ ಕೌಶಲಕ್ಕೆ ಮುಳುವಾಗಲಿಲ್ಲ.

ಟೆನಿಸ್‌ನಲ್ಲಿ ದಣಿದ ಕಾಲುಗಳ ಹಲವು ಘಟಾನುಘಟಿ ಆಟಗಾರರು ನೆನಪಾಗುತ್ತಾರಾದರೂ ಮಾರ್ಟಿನಾ ನವ್ರಾಟಿಲೋವಾ ಅವರೆಲ್ಲರಲ್ಲಿ ಎದ್ದುಕಾಣುತ್ತಾರೆ. ಚೆಕ್ ಗಣರಾಜ್ಯದಲ್ಲಿ ಹುಟ್ಟಿದ ಮಾರ್ಟಿನಾ ಮೂರು ವರ್ಷ ತುಂಬುವಷ್ಟರಲ್ಲಿ ಸಿಮೆಂಟ್ ನೆಲಕ್ಕೆ ಟೆನಿಸ್ ಬಾಲ್ ಹಾಕಿ, ಪುಟಿದೆದ್ದ ಚೆಂಡನ್ನು ಹಿಡಿಯುತ್ತಿದ್ದರು. ಏಳನೇ ವಯಸ್ಸಿನಲ್ಲಿ ವೃತ್ತಿಪರ ಟೆನಿಸ್ ಅಭ್ಯಾಸದಲ್ಲಿ ತೊಡಗಿದರು. 15 ತುಂಬಿದ್ದೇ ಚೆಕ್ ರಾಷ್ಟ್ರೀಯ ಟೆನಿಸ್ ಚಾಂಪಿಯನ್ ಆದರು. ಆಮೇಲೆ ಅಮೆರಿಕ ಪ್ರಜೆಯಾದ ಅವರು ಸಿಂಗಲ್ಸ್‌ನಲ್ಲಿ 332 ವಾರ ಸತತವಾಗಿ ನಂಬರ್ ಒನ್ ರ‍್ಯಾಂಕ್‌ ನ ಆಟಗಾರ್ತಿ ಎನಿಸಿಕೊಂಡರು. 1974ರಲ್ಲಿ ಅವರು ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆದ್ದಿದ್ದು. ಅದಾದ 32 ವರ್ಷಗಳ ನಂತರ ಯುಎಸ್‌ ಓಪನ್‌ ಟೆನಿಸ್‌ ಚಾಂಪಿಯನ್‌ಷಿಪ್‌ನ ಮಿಕ್ಸ್ಡ್ ಡಬಲ್ಸ್‌ನಲ್ಲಿ ಅವರು ಗೆದ್ದು, ಟೆನಿಸ್‌ನಿಂದ ನಿವೃತ್ತರಾದರು. 2006ರಲ್ಲಿ ಆ ಪ್ರಶಸ್ತಿ ಎತ್ತಿಹಿಡಿದಾಗ ಅವರಿಗೆ ಐವತ್ತರ ಪ್ರಾಯ.

ಯುವತ್ವದ ವಿಷಯ ಬಂದಾಗ ಕೆಲವು ಭಾರತೀಯರು ಲಿಂಗಕ್ಕೂ ವಯಸ್ಸಿಗೂ ಸಂಬಂಧ ಕಲ್ಪಿಸಿ ಮಾತನಾಡುತ್ತಾರೆ. ‘ಹೆಣ್ಣುಮಕ್ಕಳಿಗೆ ಗಂಡುಮಕ್ಕಳಿಗಿಂತ ಬೇಗ ವಯಸ್ಸಾಗುತ್ತದೆ. ಗಂಡಿಗಿಂತ ಹತ್ತು ಹನ್ನೆರಡು ವರ್ಷ ಮುಂದಕ್ಕೆ ಹೆಣ್ಣು ಯೋಚಿಸುವಷ್ಟು ಪ್ರಬುದ್ಧಳು’ ಎಂದು ಸಿನಿಮಾ ನಿರ್ದೇಶಕ ಯೋಗರಾಜ್ ಭಟ್ ಒಂದೊಮ್ಮೆ ಹೇಳಿದ್ದರು. ಅದಕ್ಕೇ ಮದುವೆಯಾಗಿ, ಮಗಳ ಹಡೆದು ಆಮೇಲೆ ಇನ್ನೊಂದು ಟೆನಿಸ್ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಕಿಮ್ ಕ್ಲೈಸ್ಟರ್ಸ್‌ಳನ್ನು ನಾವು ಬೆರಗುಗಣ್ಣಿನಿಂದ ನೋಡುವುದು. ಹಾಗೆ ನೋಡಿದರೆ, ಕಿಮ್ ಆ ಪ್ರಶಸ್ತಿ ಗೆದ್ದಾಗ ಎಷ್ಟೋ ಟೆನಿಸ್ ಆಟಗಾರರಿಗಿಂತ ಚಿಕ್ಕವರೇ ಆಗಿದ್ದರು.

ಕ್ರೀಡೆ, ಸಿನಿಮಾ ಯುವಜನತೆಗೆ ಮಾದರಿ ವ್ಯಕ್ತಿತ್ವಗಳನ್ನು ಕಟ್ಟಿಕೊಡುವಂತೆ ರಾಜಕೀಯ ಓಣಿಯಲ್ಲೂ ಆಗೀಗ ಕೆಲವು ಮುಖಗಳು ಕಾಣುತ್ತವೆ. 45ರ ಹರೆಯದ ರಾಹುಲ್ ಗಾಂಧಿ ಈಗ ರಾಜಕೀಯದಲ್ಲಿ ಯುವಕ. ಚೆಸ್ ಬೋರ್ಡಿನ ಎದುರು ಕುಳಿತು ತಮಗಿಂತ ಅರ್ಧದಷ್ಟು ಚಿಕ್ಕ ವಯಸ್ಸಿನವರ ಚುರುಕು ಕಣ್ಣುಗಳು, ಆಲೋಚನಾ ಕ್ರಮ ನೋಡಿ ಕಲಿಯುವ ವಿಶ್ವನಾಥನ್ ಆನಂದ್ ಈಗಲೂ ವಿದ್ಯಾರ್ಥಿ ಎನ್ನುವುದರಲ್ಲಿಯೇ ಯುವತ್ವ ಇದೆ ಅಲ್ಲವೇ? ನಲವತ್ತು ದಾಟಿದ, ಮೂರ್ನಾಲ್ಕು ಕಥಾ ಸಂಕಲನಗಳನ್ನು ಪ್ರಕಟಿಸಿದ ಕಥೆಗಾರರನ್ನು ಉದಯೋನ್ಮುಖ ಎನ್ನುವಾಗಲೆಲ್ಲಾ, 55 ದಾಟಿದ ಮೇಲೆ ಉದರ ಭಾಗವನ್ನು ಗಿರಗಿರನೆ ತಿರುಗಿಸುತ್ತಾ ಯೋಗ ಮಾಡುತ್ತಿದ್ದ ನಟ ರಾಜ್‌ಕುಮಾರ್ ನೆನಪಾಗುತ್ತಾರೆ.

ಇಷ್ಟೆಲ್ಲವನ್ನೂ ನಾವು ನೋಡಿದ ಮೇಲೆ, ಕೇಳಿದ ಮೇಲೆ ಯುವತ್ವದ ಅವಧಿ ಎಷ್ಟು ಎಂದು ಏನಾದರೂ ಗೊತ್ತಾಯಿತೇ? ‘ಬಾಹುಬಲಿ’ ಸಿನಿಮಾದ ಪ್ರಭಾಸ್‌, ರಾಣಾ ದಗ್ಗುಬಾಟಿ ಇಬ್ಬರಲ್ಲಿ ಯಾರು ದೊಡ್ಡವರು ಎಂದು 18ರ ಹುಡುಗನನ್ನು ಪ್ರಶ್ನಿಸಿದಾಗ ‘ರಾಣಾ ದೊಡ್ಡವನು’ ಎಂಬ ಉತ್ತರ ಬಂತು. ಆದರೆ, ಪ್ರಭಾಸ್‌ಗಿಂತ (35 ವರ್ಷ) ರಾಣಾ ಐದು ವರ್ಷ ಚಿಕ್ಕವರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT