ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗ: ರಾಜಕೀಯ ಬೆರೆಸುವುದು ಬೇಡ

Last Updated 12 ಜೂನ್ 2015, 19:30 IST
ಅಕ್ಷರ ಗಾತ್ರ

ಯೋಗ, ಪ್ರಾಣಾಯಾಮಗಳ ಮುಖ್ಯ ಗುರಿ ವ್ಯಕ್ತಿಯ ಸರ್ವಾಂಗೀಣ ಆರೋಗ್ಯ. ಆದರೆ ಅಂಥ ಯೋಗ ಈಗ ವಿನಾಕಾರಣ ವಿವಾದಕ್ಕೆ ಕಾರಣವಾಗಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯದ ವಿಷಯದಲ್ಲಿಯೂ ಧರ್ಮದ ಹೆಸರಿನಲ್ಲಿ ಅಪಸ್ವರಗಳು ಕೇಳಿಬರುತ್ತಿವೆ. ಒಂದಿಷ್ಟು ಸರಳ ಯೋಗಾಸನಗಳನ್ನು ಮಾಡುವ ಮೂಲಕ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು ಎಂಬುದನ್ನು ನಮ್ಮ ಹಿಂದಿನವರು ತೋರಿಸಿಕೊಟ್ಟಿದ್ದಾರೆ. ಇಂದಿನ ಧಾವಂತದ ಬದುಕಿನಲ್ಲಿ ದೈಹಿಕ ಮತ್ತು ಮಾನಸಿಕ ಒತ್ತಡಗಳೆರಡೂ ಮನುಷ್ಯರನ್ನು ಹೈರಾಣ ಮಾಡುತ್ತಿವೆ. ಅವೆರಡನ್ನೂ  ಪರಿಣಾಮಕಾರಿಯಾಗಿ ನಿಯಂತ್ರಿಸುವ ಸಾಮರ್ಥ್ಯ ಯೋಗಕ್ಕೆ ಇದೆ ಎಂಬು ದನ್ನು ಜನ ಕಂಡುಕೊಂಡಿದ್ದಾರೆ. ಅದನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ.

ಇಂಥ ಅಮೂಲ್ಯ ಜ್ಞಾನದ ಪ್ರಯೋಜನ ಎಲ್ಲರಿಗೂ ದೊರಕಬೇಕು, ವಿಶ್ವದ ಎಲ್ಲೆಡೆ ಯೋಗದ ಮಹತ್ವ ಗೊತ್ತಾಗಬೇಕು ಎಂಬ ಕಾರಣದಿಂದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಯೋಗಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ದೊರೆಯುವಂತೆ ಮಾಡುವಲ್ಲಿ ಯಶಸ್ವಿ ಯಾಗಿದೆ. ಅದರ ಫಲವಾಗಿ ಜೂನ್ 21ನ್ನು ಅಂತರರಾಷ್ಟ್ರೀಯ ಯೋಗ ದಿನ ಎಂದು ವಿಶ್ವಸಂಸ್ಥೆ ಘೋಷಿಸಿದೆ. ಅಂದು ಕೇಂದ್ರ ಸರ್ಕಾರ ದೆಹಲಿಯ ರಾಜಪಥದಲ್ಲಿ ಹಮ್ಮಿ ಕೊಂಡಿರುವ ಯೋಗಾಸನದಲ್ಲಿ ಶ್ಲೋಕ ಪಠಣ, ಸೂರ್ಯ ನಮಸ್ಕಾರಕ್ಕೆ ಕೆಲ ಮುಸ್ಲಿಂ ಪ್ರಮು ಖರು, ಧಾರ್ಮಿಕ ಮುಖಂಡರಿಂದ ಆಕ್ಷೇಪಣೆ ವ್ಯಕ್ತವಾಗಿದೆ. ಅದನ್ನು ಪರಿಗಣನೆಗೆ ತೆಗೆದು ಕೊಂಡ ಸರ್ಕಾರ ಈಗ ಶ್ಲೋಕ ಪಠಣ ಕಡ್ಡಾಯವಲ್ಲ ಎಂದು ಸ್ಪಷ್ಟನೆ ನೀಡಿದೆ. ಸೂರ್ಯ ನಮಸ್ಕಾರದಂಥ ಕಠಿಣ ಆಸನಗಳು ಯೋಗ ದಿನಾಚರಣೆಯಲ್ಲಿ ಇರುವುದಿಲ್ಲ ಎಂದು ತಿಳಿಸಿದೆ.

ಹೀಗಾಗಿ ಇನ್ನು ಆಕ್ಷೇಪಣೆಗೆ ಅರ್ಥವಿರುವುದಿಲ್ಲ. ಈ ಆಕ್ಷೇಪಣೆಗಳ ಹಿಂದಿನ ರಾಜ ಕೀಯವನ್ನು ವಿಸ್ತೃತ ನೆಲೆಯಲ್ಲಿ ಗ್ರಹಿಸುವುದೂ ಅಗತ್ಯ. ಅಲ್ಪಸಂಖ್ಯಾತರ ಅಭದ್ರತೆ ನಿವಾರಿಸುವಲ್ಲಿ ಎನ್‌ಡಿಎ ಆಡಳಿತ ಯಶಸ್ವಿಯಾಗಿಲ್ಲ. ಗೋಮಾಂಸ ನಿಷೇಧದ ವಿವಾದಗಳು ಹಾಗೂ ಬಿಜೆಪಿ ನಾಯಕರ ಅತಿರೇಕದ ಹೇಳಿಕೆಗಳು ವಾತಾವರಣವನ್ನು ಕಲು ಷಿತಗೊಳಿಸಿವೆ. ಇವೆಲ್ಲದರ ನಡುವೆ ಮುಸ್ಲಿಂ ಸಂಘಟ ನೆಗಳ ಕೆಲ ಮುಖಂಡರು ಯೋಗ ಕಾರ್ಯಕ್ರಮಕ್ಕೆ ಪೂರ್ಣ ಬೆಂಬಲ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ. ‘ಯೋಗ ವಿರೋಧಿಸುವವರು ಮಾನ ವೀಯತೆಯ ವಿರೋಧಿಗಳು; ಯೋಗವನ್ನು ಧರ್ಮ ದೊಂದಿಗೆ ತಳಕು ಹಾಕಬಾರದು’ ಎಂಬ ಅವರ ಹೇಳಿಕೆಯಲ್ಲಿ ವಿವೇಕ ಎದ್ದು ಕಾಣುತ್ತದೆ.  ಯೋಗ ವನ್ನು ಆರೋಗ್ಯದ ದೃಷ್ಟಿಯಿಂದ ಸಕಾರಾತ್ಮಕವಾಗಿ ಸ್ವೀಕರಿಸಬೇಕು ಎಂಬ ರಾಜ್ಯದ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಮಾತು ಯೋಗವನ್ನು ವಿರೋಧಿಸುವವರ ಕಣ್ಣು ತೆರೆಸಬೇಕು. ಆದರೆ, ‘ಯೋಗ ವಿರೋಧಿಸುವವರು ಸಮುದ್ರಕ್ಕೆ ಹೋಗಿ ಬೀಳಲಿ’ ಎಂಬ ಬಿಜೆಪಿ ಸಂಸದ ಯೋಗಿ ಆದಿತ್ಯ ನಾಥ ಅವರ ಹೇಳಿಕೆ ಸರಿಯಲ್ಲ. ಅದು ಖಂಡನೆಗೆ ಯೋಗ್ಯವಾದುದು.

ಹಿಂದೂ ಧಾರ್ಮಿಕ ಪಠ್ಯಗಳಿಂದ ಅದರಲ್ಲೂ ಬಹುಮುಖ್ಯವಾಗಿ ಪತಂಜಲಿ ಯೋಗಸೂತ್ರಗಳಿಂದ ಯೋಗ ಪ್ರೇರಿತವಾಗಿದೆ ಎಂಬುದು ನಿಜ. ಆದರೆ ಇದು ಧಾರ್ಮಿಕ ಗಡಿ ದಾಟಿ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಮಾನ್ಯತೆ ಗಳಿಸಿಕೊಳ್ಳುತ್ತಿದೆ. ಯೋಗ ಎಂಬುದು ಇಂದು ನೂರಾರು ಕೋಟಿ ರೂಪಾಯಿ ಗಳ ಉದ್ಯಮವೂ ಆಗಿದೆ. ಅನೇಕ ಯೋಗ ಗುರುಗಳು ತಮ್ಮದೇ ಬ್ರ್ಯಾಂಡ್ ಸೃಷ್ಟಿಸಿ ಯೋಗವನ್ನು ಮತ್ತಷ್ಟು ಜನಪ್ರಿಯಗೊಳಿಸಲು ಕಾರಣರಾಗಿದ್ದಾರೆ. ಇದಕ್ಕೆ ಸಾಕ್ಷಿ, ದೊಡ್ಡ ನಗರಗಳಲ್ಲಿ ಯೋಗ ಕೇಂದ್ರ ಗಳ ಹೆಚ್ಚಳ.  ಭಾರತೀಯ ಆರೋಗ್ಯ ಪದ್ಧತಿಯಲ್ಲಿ ದೈಹಿಕ ಸ್ವಾಸ್ಥ್ಯದ ಜತೆ ಮಾನಸಿಕ, ಆಧ್ಯಾತ್ಮಿಕ ಸ್ವಾಸ್ಥ್ಯಕ್ಕೂ ಮಹತ್ವ ನೀಡಲಾಗಿದೆ. ಯೋಗ ಎಂಬುದು ದೇಹ, ಮನಸ್ಸುಗಳ ಸಮನ್ವಯ ಸಾಧಿಸುವಂತಹದ್ದು. ಅದಕ್ಕೀಗ ವಿಶ್ವ ಮಟ್ಟದಲ್ಲಿ ಗೌರವ ಸಿಕ್ಕಿದೆ.  ವಿಶ್ವಕ್ಕೆ ಭಾರತದ ಕೊಡುಗೆ ಎಂಬುದಾಗಿ ಯೋಗವನ್ನು ಪರಿಗಣಿಸಲಾಗುತ್ತಿದೆ. ಅಲ್ಲದೆ ಯೋಗಾಸನ, ಸೂರ್ಯ ನಮಸ್ಕಾರ, ಪ್ರಾಣಾಯಾಮಗಳು ಕಡ್ಡಾಯವೇನಲ್ಲ. ದೈಹಿಕ ವ್ಯಾಯಾಮ ಎಂದುಕೊಂಡರಂತೂ ಯಾವ ಸಮಸ್ಯೆಯೂ ಇರುವುದಿಲ್ಲ. ಹೀಗಾಗಿ ಆರೋಗ್ಯಕರ ಜೀವನಶೈಲಿಗೆ ಪೂರಕವಾಗುವ ಯೋಗದ ವಿಚಾರದಲ್ಲಿ ರಾಜಕೀಯ ಬೆರೆಸುವುದು ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT