ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗ: ಸತ್ಯ - ಮಿಥ್ಯೆ

Last Updated 22 ಜೂನ್ 2015, 19:30 IST
ಅಕ್ಷರ ಗಾತ್ರ

ರೋಗದ ಮೂಲ ಅರಿತು ತಕ್ಕ ಚಿಕಿತ್ಸೆ ನೀಡದೆ, ಎಲ್ಲವೂ ಯೋಗ ಮಾತ್ರದಿಂದಲೇ ಗುಣವಾಗುತ್ತದೆ ಎಂದುಕೊಳ್ಳುವುದು ಸರಿಯಲ್ಲ.

ನಾವೆಲ್ಲ ಅತೀವ ಆಸಕ್ತಿಯಿಂದ ಆಚರಿಸಿದ ‘ವಿಶ್ವ ಯೋಗ ದಿನ’ದಿಂದ (ಜೂನ್‌ 21)  ಎಲ್ಲರಿಗೂ ಯೋಗದ ಬಗ್ಗೆ ಮನವರಿಕೆ ಆಗುವಂತಾಗಿದ್ದು ನಿಜ. ಆ ಪ್ರಮಾಣದ ಪ್ರಚಾರ, ಆಸಕ್ತಿ ಮತ್ತು ಸಹಭಾಗಿತ್ವಕ್ಕಾಗಿ ನಮ್ಮ ಸರ್ಕಾರಗಳು ಅಭಿನಂದನಾರ್ಹ. ಆದರೆ ಯೋಗದ ಬಗ್ಗೆ ತಿಳಿವಳಿಕೆ ನೀಡುವ ವಿಷಯದಲ್ಲಿ ಅನೇಕ ಕಡೆ ಆಗುತ್ತಿರುವುದೇ ಬೇರೆ.  ಮತ್ತದು ಅಪಾಯದ ಮುನ್ಸೂಚನೆ ಸಹ.

ಈಗಾಗಲೇ ವೈದ್ಯಕೀಯ ಕ್ಷೇತ್ರದ ಢೋಂಗಿ ವೈದ್ಯರಿಂದ ಸಾಕಷ್ಟು ಅವಘಡಗಳನ್ನು ಅನುಭವಿಸುತ್ತಿದ್ದೇವೆ. ಅದೇ ತೆರನಾಗಿ ಢೋಂಗಿ ಯೋಗ ತರಬೇತುದಾರರ ಬಗ್ಗೆಯೂ (ಸೂಕ್ತ ತರಬೇತಿ ರಹಿತ ಸ್ವಘೋಷಿತ ಯೋಗಪಟುಗಳು) ಎಚ್ಚರಿಕೆ ವಹಿಸಬೇಕಾಗಿದೆ. ಯಾವತ್ತೂ ಯಾವ ರೋಗವೂ (ಮಾನಸಿಕ ರೋಗದ ಕೆಲ ಸರಳ ಪ್ರಕಾರಗಳನ್ನು ಹೊರತುಪಡಿಸಿ) ಕೇವಲ ಯೋಗದಿಂದ ಗುಣ ಹೊಂದುವುದಿಲ್ಲ ಎಂಬುದು ಕಟು ಸತ್ಯ. ಅನೇಕ ರೋಗಗಳು ಗುಣಮುಖವಾಗಲು ಯೋಗ ಪೂರಕವಾಗಬಲ್ಲದೇ ಹೊರತು ರೋಗವನ್ನೇ ಹೋಗಲಾಡಿಸುವುದಿಲ್ಲ.

ಹೇಗಿದ್ದರೂ ಯೋಗದ ಬಗ್ಗೆ ಜನಸಾಮಾನ್ಯರು ಆಕರ್ಷಿತರಾಗಿದ್ದಾರೆ ಎಂದು ತಿಳಿದು ಇನ್ನು ಮುಂದೆ ಢೋಂಗಿ ಯೋಗ ಪಟುಗಳು ತರಬೇತಿ ಕೇಂದ್ರಗಳನ್ನು ತೆರೆಯುವುದರಲ್ಲಿ ಎರಡು ಮಾತಿಲ್ಲ. ಗಮನಿಸಬೇಕಾದ ಅಂಶವೆಂದರೆ, ಯಾರು ಬೇಕಾದರೂ ‘ಯೋಗ ತರಬೇತಿ ಕೇಂದ್ರ’ವನ್ನು ಎಲ್ಲಿ ಬೇಕೆಂದರಲ್ಲಿ ತೆಗೆಯಬಹುದು! ನಿಮಗೆ ಆಸನಗಳನ್ನು ಮಾಡುವುದು ಗೊತ್ತಿದ್ದರೆ, ಚೆನ್ನಾಗಿ ಮಾತನಾಡಲು ಬರುತ್ತಿದ್ದರೆ (ಮರುಳು ಮಾಡುವುದು!) ನೀವು ಯೋಗ ಗುರು ಆಗಿಬಿಡಬಹುದು. 

ಯೋಗಾಸನಗಳು ಮಾಂಸಪೇಶಿಗಳಿಗೆ ನಿಯಮಿತ ವ್ಯಾಯಾಮವನ್ನು ಕೊಡುವುದರ ಮೂಲಕ, ಆಯಾ ಅಂಗಾಂಶಗಳಿಗೆ  ರಕ್ತಪೂರೈಕೆ ಸಮರ್ಪಕವಾಗಿ ಆಗುವಂತೆ ಮಾಡುತ್ತವೆ. ಕೇವಲ ಒಂದು ದಿನ, ಒಂದು ವಾರದ ಯೋಗಾಸನ ಅಭ್ಯಾಸದಿಂದ ಇದು ಸಾಧ್ಯವಿಲ್ಲ. ನಿಯಮಿತವಾದ ಅಭ್ಯಾಸ  ಅವಶ್ಯ. ಆದರೆ ಮೂಲ ರಚನಾತ್ಮಕ ವಿಕೃತಿ ಇದ್ದಲ್ಲಿ ಅದು ಸರಿಹೋಗುವುದಿಲ್ಲ.

ಸರಳವಾಗಿ ತಿಳಿಸುವುದಾದರೆ, ರೋಗಕಾರಕ ಸೂಕ್ಷ್ಮಾಣುಜೀವಿಗಳು ದೇಹ ಸೇರುವುದರಿಂದ, ರೋಗ ನಿರೋಧಕ ಶಕ್ತಿಹೀನತೆಯಿಂದ, ವಯೋಸಹಜವಾಗಿ ನಾನಾ ಅಂಗಾಂಶಗಳ ಶಕ್ತಿ ಕಡಿಮೆಯಾಗುವುದರಿಂದ, ಆನುವಂಶೀಯತೆ,  ಹಾನಿಕಾರಕ ದುಶ್ಚಟ, ಅಸಮರ್ಪಕ ಜೀವನ ಶೈಲಿ, ಅನೈಸರ್ಗಿಕ ಆಹಾರ ಹಾಗೂ ಇನ್ನಿತರ ಹಲವಾರು ಕಾರಣಗಳಿಂದ ರೋಗಗಳು ಕಂಡು ಬರುತ್ತವೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಉತ್ತಮವಾಗಿದ್ದರೆ ಕೆಲವು ರೋಗಗಳು ಬರುವುದೇ ಇಲ್ಲ!

ಬಂದರೂ ಹೆಚ್ಚು ತೊಂದರೆ ಕೊಡದೇ ತಾವಾಗೇ ಗುಣವಾಗುತ್ತವೆ. ಆದರೆ ಬಹುತೇಕ ಸಂದರ್ಭಗಳಲ್ಲಿ ರೋಗದ ಮೂಲವನ್ನು ಸರಿಪಡಿಸದೆ ಅನ್ಯ ಉಪಾಯಗಳ ಮೂಲಕ ರೋಗದಿಂದ ಪಾರಾಗಲು ಯತ್ನಿಸುತ್ತೇವೆ. ಉದಾಹರಣೆಗೆ ರೋಗಕಾರಕ ಸೂಕ್ಷ್ಮಾಣುಜೀವಿಗಳ ಪ್ರವೇಶದಿಂದ ಶ್ವಾಸಕೋಶದ ಸೋಂಕುಂಟಾಗಿ ವ್ಯಕ್ತಿಯು ಶ್ವಾಸೋಚ್ವಾಸ ಸಮಸ್ಯೆಯಿಂದ ಬಳಲುತ್ತಿದ್ದಾಗ ರೋಗಾಣುಗಳನ್ನು ಆದಷ್ಟು ಬೇಗ ಸಾಯಿಸಿ, ಇನ್ನಷ್ಟು ಸೋಂಕು ಉಂಟುಮಾಡದಂತೆ ನೋಡಿಕೊಳ್ಳಬೇಕು. ಜೊತೆಗೆ ಲಕ್ಷಣಗಳಿಗೆ ಅನುಸಾರವಾಗಿ ಚಿಕಿತ್ಸೆ ಕೊಡಬೇಕು. ಆದರೆ ಇದನ್ನು ಬಿಟ್ಟು ಕೇವಲ ಪ್ರಾಣಾಯಾಮದಿಂದಲೇ ಇಂತಹ ಶ್ವಾಸ ಸಂಬಂಧಿ ರೋಗಗಳು ಗುಣವಾಗುವುದಿಲ್ಲ.

ಇದೇ ತೆರನಾಗಿ ಬಹುತೇಕರಲ್ಲಿ ಕಾಣಬರುವ ಸಂಧಿನೋವು ಸಹ ಯೋಗಮಾತ್ರದಿಂದಲೇ ಗುಣವಾಯಿತೆಂದು ಹೇಳಿದರೆ ಆಭಾಸವೆನಿಸುತ್ತದೆ. ಸಂಧಿನೋವಿಗೆ ಹಲವಾರು ಕಾರಣಗಳಿದ್ದು ವಯೋಸಹಜ ಮೂಳೆಗಳ ಸವಕಳಿ ಅತಿ  ಮುಖ್ಯ ಕಾರಣ. ಇನ್ನಷ್ಟು ಸವಕಳಿಯಾಗದಂತೆ ಎಚ್ಚರ ವಹಿಸಿ, ಮೂಳೆಗಳಲ್ಲಿ ಕ್ಯಾಲ್ಸಿಯಂ, ಮಾಂಸಪೇಶಿಗಳಿಗೆ, ಸ್ನಾಯುಗಳಿಗೆ ಬೇಕಾದ ಶಕ್ತಿ ಒದಗಿಸಬಲ್ಲ ಖನಿಜಾಂಶಯುಕ್ತ ಔಷಧಿ ಅಥವಾ ಆಹಾರ ಸೇವನೆ ಮೂಲಕ ಚಿಕಿತ್ಸೆ ಸಾಧ್ಯ. ಆದರೆ ನಿಯಮಿತವಾಗಿ ಪರಿಣತರಿಂದ ಕಲಿತು ಸಂಬಂಧಪಟ್ಟ ಆಸನಗಳನ್ನು ಮಾಡಿದ್ದೇ ಆದಲ್ಲಿ, ಸವಕಳಿ ಸರಿಪಡಿಸಲಾಗದಿದ್ದರೂ ಸ್ನಾಯು, ಪೇಶಿಗಳಲ್ಲಿ ಕಾರ್ಯಕ್ಷಮತೆಯನ್ನು ಹೆಚ್ಚಿಸಬಹುದು.

ಇದೇ ತೆರನಾಗಿ ಚರ್ಮವ್ಯಾಧಿಗಳಲ್ಲೂ ಮೂಲ ಕಾರಣದ ಸಮರ್ಪಕ ಚಿಕಿತ್ಸೆಯಿಂದ  ರೋಗ ಗುಣವಾಗಬಲ್ಲದು.  ದೇಹದ ತೂಕ ಹೆಚ್ಚಾಗಲು ಸಹ ತನ್ನದೇ ಆದ ಕಾರಣಗಳಿರುತ್ತವೆ. ಅವೆಂದರೆ ಆನುವಂಶೀಯತೆ, ಹಾರ್ಮೋನುಗಳ ವ್ಯತ್ಯಯ, ಅತಿಯಾದ ಕೊಬ್ಬಿನ ಅಂಶ ಇರುವ ಆಹಾರ ಸೇವನೆ, ಇಂಥ ಆಹಾರ ಸೇವಿಸಿಯೂ ದೇಹ ದಣಿಯುವಂತಹ ಕೆಲಸ ಮಾಡದೇ ಇದ್ದಾಗ ಬಹುಪಾಲು ಕೊಬ್ಬಿನಂಶ ದೇಹದಲ್ಲಿ ಶೇಖರಗೊಳ್ಳತೊಡಗಿ ತೂಕವನ್ನು ಹೆಚ್ಚು ಮಾಡುತ್ತದೆ. ದೇಹ ತೂಕ  ಹೆಚ್ಚಾಗಿದ್ದಕ್ಕೆ ಕಾರಣವನ್ನು ವೈದ್ಯರು ಪ್ರಶ್ನೆಗಳ ಮೂಲಕ, ಪರೀಕ್ಷೆಗಳಿಗೆ ಒಳಪಡಿಸುವುದರ ಮೂಲಕ ಕಂಡು ಹಿಡಿಯುತ್ತಾರೆ ಮತ್ತು ಅದಕ್ಕೆ ಸೂಕ್ತ ಚಿಕಿತ್ಸೆ ಕೊಡುತ್ತಾರೆ. ದೇಹದ ಚಟುವಟಿಕೆ ಹೆಚ್ಚಿಸಿಕೊಳ್ಳಲು ಸಲಹೆ ಕೊಡುತ್ತಾರೆ. ಅದರಲ್ಲಿ ನಿಯಮಿತವಾದ ವ್ಯಾಯಾಮ, ಯೋಗಾಸನ, ನಡಿಗೆ, ಈಜು ಇತ್ಯಾದಿ ಸೇರಿರುತ್ತದೆ.

ಇನ್ನು ಮಧುಮೇಹ ಮತ್ತು ಅಧಿಕ ರಕ್ತದೊತ್ತಡಕ್ಕೆ ಇರುವ ವಿವಿಧ ಕಾರಣಗಳಲ್ಲಿ  ಒತ್ತಡವೂ ಒಂದು. ಯೋಗ ಚಿಕಿತ್ಸೆ ಈ ಒಂದು ಅಂಶವನ್ನು ಮಾತ್ರ ತಿದ್ದಲು ಸಹಕಾರಿ ಎನಿಸಿದೆ. ಆದರೆ ಇದೊಂದು ಸರಿಯಾದಲ್ಲಿ ರೋಗದ ಮೂಲ ಕಾರಣ ಸರಿಯಾಗುವುದಿಲ್ಲ.

‘ಯೋಗ ಶಾಸ್ತ್ರ’ ತನ್ನದೇ ಆದ ಗೌರವವನ್ನು ಹೊಂದಿದೆ. ಅದರ ಪ್ರಾಮುಖ್ಯದ ಬಗ್ಗೆ ಎರಡು ಮಾತಿಲ್ಲ. ಆದರೆ ಅದನ್ನು ಚಿಕಿತ್ಸಾ ರೂಪದಲ್ಲಿ ನೋಡುವುದೇ ಆದಲ್ಲಿ ‘ಯೋಗ’ಕ್ಕೆ ತನ್ನದೇ ಆದ ಮಿತಿಗಳಿವೆ. ಯೋಗ ಸಾಧಕರು, ಸಾಧನೆಯ ಹಾದಿಯಲ್ಲಿರುವವರು ಈ ನಿಬಂಧನೆಗಳನ್ನು ಒಪ್ಪಿಕೊಂಡು ಮುಂದಿನ ಪೀಳಿಗೆಗೆ ಇದರ ಯಥಾವತ್ ಜ್ಞಾನವನ್ನು ಪಸರಿಸಬೇಕಾಗಿದೆ. ಅರೆಬರೆ ಕಲಿತ ಕೆಲ ಸ್ವಘೋಷಿತ ಯೋಗಪಟುಪುಂಗವರು ಜನರಲ್ಲಿ ತುಂಬುತ್ತಿರುವ ‘ಎಲ್ಲವೂ ಇದರಿಂದ ಸಾಧ್ಯ’ ಎನ್ನುವ  ಕಲ್ಪನೆಯನ್ನು ಹೊಡೆದೋಡಿಸಬೇಕಿದೆ.  ಜನಸಾಮಾನ್ಯರನ್ನು ವಂಚಿಸುವ ಇಂತಹ ತರಬೇತಿ ಅಥವಾ ಯೋಗ ಚಿಕಿತ್ಸಾ ಕೇಂದ್ರಗಳು ಅಣಬೆಗಳಂತೆ ಹುಟ್ಟಿಕೊಳ್ಳುವ ಮೊದಲೇ ಸರ್ಕಾರ ಈ ಬಗ್ಗೆ ನೀತಿ ನಿಯಮಾವಳಿಗಳನ್ನು ರೂಪಿಸಬೇಕಾಗಿದೆ.

ಶಾಲಾ ಮಕ್ಕಳಿಗೆ ಯೋಗ ಅನುಷ್ಠಾನ ಮಾಡುವುದಕ್ಕೂ ಸಮರ್ಪಕ ಕಾರಣಗಳಿಲ್ಲ. ಮಕ್ಕಳಿಗೆ ದೈಹಿಕ ಶಿಕ್ಷಣದ ಜೊತೆಗೆ ಪೌಷ್ಟಿಕ ಆಹಾರ ಅತಿ ಮುಖ್ಯ. ಕುಪೋಷಣಜನ್ಯ ರೋಗಗಳಿಂದ ದೇಶದಲ್ಲಿ ಮಕ್ಕಳು ಸಾವನ್ನಪ್ಪುತ್ತಿರುವುದರಿಂದ, ಮೊದಲು ಪೌಷ್ಟಿಕ ಆಹಾರ ಪೂರೈಕೆ ಬಗ್ಗೆ ಚಿಂತಿಸಬೇಕಿದೆ. ಇದರ ಜೊತೆಗೆ ಉತ್ತಮ ಆಟದ ಮೈದಾನ, ಒಳ್ಳೆಯ ದೈಹಿಕ ಶಿಕ್ಷಣ ಶಿಕ್ಷಕರಿದ್ದರೆ ಮನರಂಜನೆಯುಕ್ತ ಆಟಗಳಿಂದ ಮಗು ತಂತಾನೇ ಸದೃಢಗೊಳ್ಳುತ್ತದೆ. ಯೋಗ ತಾದಾತ್ಮ್ಯ, ಏಕತಾನತೆಯಿಂದ ಮಾಡುವುದಾಗಿದ್ದು, ಮಕ್ಕಳಿಗೆ ಇದು ಹೇರಿಕೆ ಆಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT