ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಕ್ಕೆ ಮನಸೋತ ಸೋಗಿ

Last Updated 27 ಸೆಪ್ಟೆಂಬರ್ 2014, 7:05 IST
ಅಕ್ಷರ ಗಾತ್ರ

ಮೈಸೂರು: ಪ್ರಸಕ್ತ ನವರಾತ್ರಿ ಉತ್ಸವವನ್ನು ವಿಶಿಷ್ಟವಾಗಿ ಆಚರಿಸುತ್ತಿರುವ ಇಲ್ಲಿನ ರಂಗಾಯಣವು ಶುಕ್ರವಾರ ಸಂಜೆ ದಾವಣಗೆರೆಯ ಬಿ. ನಾಗರತ್ನಾ ಸೋಗಿ ಅವರಿಗೆ ಸನ್ಮಾನ ಮಾಡುವ ಮೂಲಕ ವೈಶಿಷ್ಟ್ಯತೆ ಮೆರೆಯಿತು.

ಎಲೆ ಮರೆಯ ಕಾಯಾಗಿ ಯಾರ ಗಮನಕ್ಕೂ ಬಾರದೇ ಪ್ರಶಸ್ತಿ, ಪುರಸ್ಕಾರಗಳ ಲಾಬಿಗಳಿಂದ ದೂರ ಉಳಿದ ರಾಜ್ಯದ ಕಲಾವಿದರನ್ನು ಗುರುತಿಸಿ ಸನ್ಮಾನಿಸುವುದು ರಂಗಾಯಣದ ವಿಶೇಷ. ಇದರಡಿ ಶುಕ್ರವಾರ ನಡೆದಿದ್ದು ಬಿ. ನಾಗರತ್ನಾ ಸೋಗಿ ಅವರ ಸನ್ಮಾನ ಕಾರ್ಯಕ್ರಮ.

ಮೂಲತಃ ಹೂವಿನ ಹಡಗಲಿ ಜಿಲ್ಲೆಯ ಸೋಗಿ ಹಳ್ಳಿಯವರಾದ ಇವರು ಬಡತನದಲ್ಲೇ ಬೆಳೆದವರು. ಚಿಕ್ಕವಯಸ್ಸಿನಲ್ಲೇ ರಂಗಭೂಮಿಯ ಆಕರ್ಷಣೆ ಹೊಂದಿದ್ದ ಇವರು ಹತ್ತನೇ ವಯಸ್ಸಿನಲ್ಲೇ ‘ದಕ್ಷಬ್ರಹ್ಮ’  ಬಯಲಾಟ­ದಲ್ಲಿ ಅಭಿನಯಿಸಿ ರಂಗಪ್ರವೇಶ ಮಾಡಿದರು. ನಂತರ 1966ರಲ್ಲಿ ‘ಮಲಮಗಳು’ ನಾಟಕದಲ್ಲಿ ಅಭಿನಯಿಸುವ ಮೂಲಕ ಅಭಿನಯವನ್ನು ವೃತ್ತಿಯಾಗಿ ಸ್ವೀಕರಿಸಿದರು. ವೃತ್ತಿ ರಂಗಭೂಮಿಯ ದಿಗ್ಗಜರಾದ ಹಾಲಪ್ಪಸ್ವಾಮಿ, ಗಡ್ಡಿ ಪತ್ರೆಪ್ಪ, ವಾಕರ್ ಗವಾಯಿಗಳು ಮತ್ತು ಸಿದ್ಧವೀರಪ್ಪ ಮಾಸ್ತರ ಇವರ ಗುರುಗಳಾಗಿದ್ದರು.

ಚಿತ್ರದುರ್ಗದ ಶ್ರೀ ಕುಮಾರಸ್ವಾಮಿ ಅವರ ನಾಟಕ ಕಂಪನಿ, ಸೂಡಿ ಶೇಖರಯ್ಯ ಅವರ ಕಂಪನಿ, ಸೊರಬ ಕಂಪನಿ ಮೊದಲಾದ ಕಡೆಯಲ್ಲಿ ವೃತ್ತಿ ನಟಿಯಾಗಿ ರಂಗಕಾಯಕವನ್ನು ಮಾಡಿದ್ದಾರೆ. ರಕ್ತರಾತ್ರಿ, ಹೇಮರಡ್ಡಿ ಮಲ್ಲಮ್ಮ, ಕುರುಕ್ಷೇತ್ರ, ಉತ್ತರಭೂಪ, ಸತ್ಯ ಹರಿಶ್ಚಂದ್ರ, ಪಾಶುಪತಾಸ್ತ್ರ, ಸರ್ವಮಂಗಳ, ಚಿನ್ನದಗೊಂಬೆ, ಧರ್ಮದೇವತೆ ಮೊದಲಾದ ನಾಟಕಗಳಲ್ಲಿ ಅಭಿನಯಿಸಿ ಶ್ರೇಷ್ಠ ನಟಿ ಎಂಬ ಪ್ರಶಂಸೆಗೆ ಪಾತ್ರರಾದರು.

ಇಂದಿಗೂ ಗ್ರಾಮೀಣ ಹವ್ಯಾಸಿ ರಂಗಭೂಮಿಯಲ್ಲಿ ನಟಿಸುತ್ತಾ ರಂಗಭೂಮಿಯ ಚಲನಶೀಲತೆಯಲ್ಲಿ ಸಕ್ರಿಯವಾಗಿ ಅವರು ತೊಡಗಿಸಿಕೊಂಡಿದ್ದಾರೆ. ಉತ್ತಮ ಗಾಯಕರಾದ ಅವರು ಹತ್ತಾರು ರಂಗಗೀತೆಗಳ ಕಾರ್ಯಕ್ರಮ ನೀಡಿದ್ದಾರೆ. ಅರುಂಧತಿ, ರಂಗೋಲಿ, ಮಾಂಗಲ್ಯ ಮೊದಲಾದ ಕಿರುತೆರೆ ಧಾರಾವಾಹಿಗಳಲ್ಲಿ ಅವರು ಅಭಿನಯಿಸಿದ್ದಾರೆ.

ಶುಕ್ರವಾರ ರಂಗಾಯಣದ ಭೂಮಿಗೀತದಲ್ಲಿ ಕರ್ನಾಟಕ ಪೊಲೀಸ್ ಅಕಾಡೆಮಿಯ ಉಪನಿರ್ದೇಶಕಿ ಧರಣಿದೇವಿ ಮಾಲಗತ್ತಿ ಅವರು ನಾಗರತ್ನ ಅವರನ್ನು ಸನ್ಮಾನಿಸಿದರು. ನಂತರ ಆರ್. ನಾಗೇಶ್ ನಿರ್ದೇಶನದಲ್ಲಿ ‘ಕೃಷ್ಣೇಗೌಡನ ಆನೆ’ ನಾಟಕವನ್ನು ರಂಗಾಯಣದ ಕಲಾವಿದರು ಪ್ರದರ್ಶಿಸಿದರು.

ಸನ್ಮಾನ: ಮಂಡ್ಯದ ವೃತ್ತಿರಂಗಭೂಮಿ ನಟಿ ರಮಾಬಾಯಿ ಅವರನ್ನು ಶನಿವಾರ ಸಂಜೆ ಸನ್ಮಾನಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT