ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗನತಿಟ್ಟುನಲ್ಲಿ ಸಂತಾನೋತ್ಪತ್ತಿಯ ಸಂಭ್ರಮ

Last Updated 11 ಜನವರಿ 2015, 19:34 IST
ಅಕ್ಷರ ಗಾತ್ರ

ಮೈಸೂರು: ಅಕ್ಟೋಬರ್ ಕಳೆಯು ತ್ತಿದ್ದಂತೆ ವಲಸೆ ಹೋಗುತ್ತಿದ್ದ ಹಕ್ಕಿಗಳು ಮತ್ತೆ ರಂಗನ­ತಿಟ್ಟಿನೆಡೆಗೆ ಬರುತ್ತಿವೆ. ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಪಕ್ಷಿಗಳಿಲ್ಲದ ರಂಗನತಿಟ್ಟು ಧಾಮದಲ್ಲಿ ಈಗ ಪಕ್ಷಿಗಳು ಸಂಸಾರ ಹೂಡಿವೆ. ಜನವರಿ ಬಂತೆಂದರೆ ಅವುಗಳಿಗೆ ಸಂತಾನೋತ್ಪತ್ತಿಯ ಕಾಲ.

ದೇಶ, ಗಡಿ ಯಾವುದರ ಹಂಗಿಲ್ಲದೆ, ವಾತಾವರಣ ಬದ­ಲಾದಂತೆ ವಲಸೆ ಬರುವ ಪಕ್ಷಿಗಳಿಗೆ ರಂಗನತಿಟ್ಟು ಆಸರೆಯ ತಾಣವೂ ಹೌದು. ಜನವರಿ ತಿಂಗಳಿಗೆ ಇಲ್ಲಿ ಬರುವ ಹಕ್ಕಿಗಳಿಗೆ ಸಂತಾನ­ಭಿವೃದ್ದಿಯ ಸಂತಸ. 

ಬಂಡೆಗಳ ನಡುವೆ ಗೂಡು ಮಾಡಿಕೊಂಡಿರುವ ಅತಿ ವಿರಳ ಹಕ್ಕಿ ರಿವರ್ ಟರ್ನ್ (ಮೀನು ಗುಟುಕ) ತನ್ನ ಸಂಗಾತಿಯೊಂದಿಗೆ ವಂಶಾ­ಭಿವೃದ್ದಿಯಲ್ಲಿ ತೊಡ­ಗಿಕೊಂಡಿದೆ. ಹೀಗಾಗಿ, ಅವುಗಳ ಛಾಯಾಚಿತ್ರಕ್ಕಾಗಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ. ಪೆಲಿಕಾನ್ (ಹೆಜ್ಜೆರ್ಲೆ) ಹಕ್ಕಿಗಳು ಗೂಡು ಕಟ್ಟುವ ಕಾಯಕದ ಜೊತೆಗೆ ವಂಶಾಭಿವೃದ್ದಿಯಲ್ಲೂ ತೊಡಗಿ ಕೊಂಡಿವೆ.

ಓಪನ್ ಬೀಕ್ ಸ್ಟಾರ್ಕ್, ಸ್ಪೂನ್ ಬಿಲ್, ಪೆಲಿಕಾನ್, ನೈಟ್ ಹೆರಾನ್, ರಿವರ್ ಟರ್ನ್, ಸ್ವಾಲ್ಲೋಸ್, ಪೈಂಟೆಡ್ ಸ್ಟಾರ್ಕ್, ಕಾರ್ಮೊ­ರೆಂಟ್, ಕಿಂಗ್ ಫಿಷರ್, ಫಿಷಿಂಗ್ ಈಗಲ್ ಇತ್ಯಾದಿ ಪಕ್ಷಿಗಳು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಮನ ತಣಿಸುತ್ತಿವೆ.

‘ಬೋಟ್‌ಮನ್’ ಈಗ ಪಕ್ಷಿ ಛಾಯಾಗ್ರಾಹಕ
ರಂಗನತಿಟ್ಟಿನಲ್ಲಿ 13 ವರ್ಷಗಳಿಂದ ‘ಬೋಟ್‌ಮನ್’ ಆಗಿ ಕಾರ್ಯ­ನಿರ್ವ­ಹಿಸುತ್ತಿರುವ ಮುರುಗೇಶ ರಂಗನತಿಟ್ಟಿನ ಪಕ್ಷಿಗಳ ಹಾಗೆ ವಿಶೇಷ ವ್ಯಕ್ತಿ.

ದೋಣಿಯ ಹುಟ್ಟು ಹಾಕುತ್ತಿದ್ದರೆ ಅವರ ಕಿವಿ ಪಕ್ಷಿಗಳ ಇಂಚರದ ಕಡೆಗೆ ನೆಟ್ಟಿರುತ್ತದೆ. ಎರಡು ತಿಂಗಳ ಹಿಂದಷ್ಟೇ ಖರೀದಿಸಿರುವ ನಿಕಾನ್ ಕ್ಯಾಮೆರಾ, ಪಕ್ಕದ ಬೆಂಚಿನ ಮೇಲೆ ಬೇಟೆಗಾಗಿ ಕಾಯುತ್ತ ಕೂತಿ­ರು­ತ್ತದೆ. ಪಕ್ಷಿ ಕೂಗಿನ ಮೇಲೆ ಅದು ಈಗ ‘ಮೇಟಿಂಗ್’ ಮಾಡುತ್ತದೆ, ಆಹಾರ ಹುಡುಕುತ್ತದೆ ಎನ್ನುವ ಮಾಹಿತಿಯನ್ನು ಮುರುಗೇಶ ನೀಡುತ್ತಾರೆ. ಹದ್ದು ಬಂದಾಗ ಹಕ್ಕಿಗಳು ಗುರುತಿಸುವುದರ ವಿವರಣೆ ಕೂಡ ನೀಡುತ್ತಾರೆ.

ಸುಮಾರು 80ಕ್ಕೂ ಹೆಚ್ಚಿನ ಪಕ್ಷಿಗಳನ್ನು ಅವುಗಳ ವೈಜ್ಞಾನಿಕ ಹೆಸರು, ಸ್ಥಳೀಯ ಹೆಸರಿನೊಂದಿಗೆ ಗುರುತಿಸಬಲ್ಲ ಮುರುಗೇಶ ಅವರ ಜೊತೆ ಪಕ್ಷಿ ವೀಕ್ಷಣೆಗೆ ತೆರಳುವುದು ಪ್ರವಾಸಿಗರಿಗೆ ಬಲು ಖುಷಿ. ಅಪರೂಪದ ಚಿತ್ರಗಳನ್ನು ತೆಗೆಯುವ ಅವರು ತಾವೇನೂ ಕಡಿಮೆಯಿಲ್ಲ ಎಂದು ಛಾಯಾಗ್ರಾಹಕ ಮಿತ್ರರಿಗೆ ತೋರಿಸಿಕೊಟ್ಟಿದ್ದಾರೆ. 

ಅಪರೂಪದ ಪಕ್ಷಿಗಳನ್ನು ನೋಡಿದ ದಿನ ಮನೆಗೆ ಹೋದ ಬಳಿಕ ಪುಸ್ತಕದಲ್ಲಿ ಅವುಗಳ ದಿನಚರಿ ದಾಖಲಿಸುವ ಮುರುಗೇಶ, ಸಲೀಂ ಅಲಿ ಪುಸ್ತಕದಲ್ಲಿ ಅವುಗಳ ಕುರಿತು ಜಾಲಾಡುತ್ತಾರೆ. ಇನ್ನೂ ಕೆಲವೊಮ್ಮೆ ಅಮೆರಿಕದ ಲೇಖಕರು ಬರೆದಿರುವ ಭಾರತೀಯ ಪಕ್ಷಿಗಳ ಪುಸ್ತಕ ನೋಡಿ ತಮ್ಮ ಅನುಭವ ದಾಖಲಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT