ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿಯಿಂದ ಜೀವನದ ಒಳಸತ್ಯಗಳ ಅರಿವು...

Last Updated 26 ಜೂನ್ 2016, 19:30 IST
ಅಕ್ಷರ ಗಾತ್ರ

ರಾಣಿ ಬಲ್ಬೀರ್‌ ಕೌರ್‌ ಪಂಜಾಬ್‌ ರಂಗಭೂಮಿಯ ಪ್ರಮುಖ ನಿರ್ದೇಶಕಿಯರಲ್ಲೊಬ್ಬರು. ಗಿರೀಶ ಕಾರ್ನಾಡರ ‘ಅಗ್ನಿ ಮತ್ತು ಮಳೆ’ ನಾಟಕವನ್ನು ಅವರು ‘ಅಗ್ನಿ ಔರ್‌ ಬರ್ಕ’ ಎಂಬ ಹೆಸರಿನಲ್ಲಿ ಹಿಂದಿಗೆ ಅನುವಾದಿಸಿ ರಂಗಪ್ರಯೋಗ ಮಾಡಿದ್ದಾರೆ. ಆ ನಾಟಕ ಇತ್ತೀಚೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನ ಕಂಡಿತ್ತು.

ಪಂಜಾಬ್ ರಂಗಭೂಮಿಯ ಕೆಲವೇ ಕೆಲವು ರಂಗನಿರ್ದೇಶಕಿಯರಲ್ಲಿ ರಾಣಿ ಬಲ್ಬೀರ್‌ ಕೌರ್‌ ಕೂಡ ಒಬ್ಬರು. ಅವರು ಚಂಡೀಗಡ ಮೂಲದವರು.  1972ರಲ್ಲಿ ರಂಗಭೂಮಿಗೆ ಪರಿಚಯವಾದ ಕೌರ್‌ ಅವರದು ಈಗ  ಪಂಜಾಬಿ ರಂಗಭೂಮಿಯಲ್ಲಿ ಚಿರಪರಿಚಿತ ಹೆಸರು.

ಅನೇಕ ನಾಟಕಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಅವರು  ಸೂಫಿ ಕಾವ್ಯಗಳನ್ನು ನಾಟಕಗಳಲ್ಲಿ ಅಳವಡಿಸಿಕೊಂಡು, ನಿರ್ದೇಶಿಸಿ ಯಶಸ್ವಿಯಾಗಿದ್ದಾರೆ.  ಪಂಜಾಬ್‌ನಿಂದ ಮೊದಲ ಬಾರಿಗೆ ವಿದೇಶಗಳಿಗೆ ತೆರಳಿ ನಾಟಕ ಪ್ರದರ್ಶಿಸಿದ ರಂಗಭೂಮಿ ನಟಿ ಎಂಬ ಕೀರ್ತಿಯೂ  ಇವರದು.

ಹಯವದನ, ಅಂಟಿಗೊನೆ, ಸಾಹೀಬಾನ್, ಘಾಸಿ ರಾಮ್‌ ಕೋತ್ವಾಲ್‌ ಇವರು ನಟಿಸಿದ ಪ್ರಮುಖ ನಾಟಕಗಳು. ಇತ್ತೀಚೆಗೆ ತಮ್ಮ ನಿರ್ದೇಶನದ ‘ಅಗ್ನಿ ಔರ್‌ ಬರ್ಕ’ ನಾಟಕದ ಪ್ರದರ್ಶನಕ್ಕಾಗಿ ನಗರಕ್ಕೆ ಬಂದಿದ್ದರು. ಇದು ಗಿರೀಶ ಕಾರ್ನಾಡರ ‘ಅಗ್ನಿ ಮತ್ತು ಮಳೆ’ ನಾಟಕದ ಹಿಂದಿ ಆವೃತ್ತಿ.

* ನೀವು ರಂಗಭೂಮಿ ಕಡೆಗೆ ಆಕರ್ಷಿತಗೊಂಡಿದ್ದು ಹೇಗೆ?
ನಾನು ರಂಗಭೂಮಿಗೆ ಬಂದು ಸುಮಾರು 50 ವರ್ಷವಾಗುತ್ತಿದೆ. ಬಾಲ್ಯದಲ್ಲಿ ಸಂಗೀತ ಕ್ಷೇತ್ರದಲ್ಲಿ ಮುಂದುವರಿಯಬೇಕು, ಅದರಲ್ಲೇ ಸಾಧನೆ ಮಾಡಬೇಕು ಎಂದುಕೊಂಡಿದ್ದೆ. ಆದರೆ  ಜೀವನದ ಒಂದು ಹಂತದಲ್ಲಿ  ಉತ್ಸಾಹ ಕಳೆದುಕೊಂಡಿದ್ದ ನಾನು ಆಚಾನಕ್ಕಾಗಿ  ರಂಗಭೂಮಿ ಪ್ರವೇಶಿಸಿದೆ.

ಬಳಿಕ ರಂಗಭೂಮಿ ನನ್ನ ಜೀವನಕ್ಕೆ ಹೊಸ ಉತ್ಸಾಹ, ಹುರುಪು ನೀಡಿತು. ಅಲ್ಲಿಂದ ನನ್ನ ಜೀವನದ ಪಯಣ ಬದಲಾಯಿತು. ಜೀವನಾಸಕ್ತಿ ಕಳೆದುಕೊಂಡಿದ್ದ ನನ್ನಲ್ಲಿ ರಂಗಭೂಮಿ ಹೊಸ ಉತ್ಸಾಹ ತುಂಬಿತು.

* ಇಷ್ಟು ವರ್ಷಗಳ ರಂಗಪಯಣದ ಅನುಭವದ ಕುರಿತು ಹೇಳಿ.
ರಂಗಭೂಮಿಯಿಂದ ನಾನು ಕಲಿತ ಪಾಠ ಅಪಾರ. ರಂಗಭೂಮಿ ಸೃಜನಾತ್ಮಕವಾಗಿ ಚಿಂತಿಸುವಂತೆ ಮಾಡುತ್ತದೆ. ಈಗ ನನಗೆ ರಂಗಭೂಮಿಯಿಂದ ದೂರವಾಗಿ ಇರಲು ಸಾಧ್ಯವಿಲ್ಲ. ಇಲ್ಲಿ ನನ್ನ ಪ್ರಯಾಣ ಹರ್ಷದಾಯಕವಾಗಿದೆ. ಇದು ಹೊಸ ಹೊಸ ಪ್ರಯೋಗಗಳಿಗೆ ನನ್ನನ್ನು ಪ್ರೋತ್ಸಾಹಿಸುತ್ತದೆ.

ರಂಗಭೂಮಿ ಜೀವನದ ಒಳಸತ್ಯಗಳನ್ನು ತಿಳಿಸಿ, ಸಂಬಂಧ, ಮಾನವೀಯ ಮೌಲ್ಯಗಳ ಬಗ್ಗೆ ಅರಿಯುವಂತೆ ಮಾಡುತ್ತದೆ. ಮನುಷ್ಯರ ನಡುವಿನ ಅಂತರ, ಮಾನವೀಯ ಸಂಬಂಧಗಳ ಚೌಕ್ಕಟ್ಟನ್ನು ಮೀರಿ ಜೀವನ ಪ್ರೀತಿಯನ್ನು ಬೆಳೆಸುತ್ತದೆ.

* ‘ಅಗ್ನಿ ಹಾಗೂ ಮಳೆ’ ನಾಟಕ ನಿಮ್ಮನ್ನು ಯಾಕೆ ಆಕರ್ಷಿಸಿತು?
‘ಅಗ್ನಿ ಹಾಗೂ ಮಳೆ’ ನಾಟಕದ ವಿಷಯ ಮನುಷ್ಯನ ಒಳಮನಸ್ಸಿನ ಬಗ್ಗೆ ನಮ್ಮನ್ನು ಆಳವಾದ ಯೋಚಿಸುವಂತೆ ಮಾಡುತ್ತದೆ.  ಇದು ಮಹಾಭಾರತದ ಒಂದು ಉಪಕತೆ ಮಾತ್ರ ಅಲ್ಲ, ಇದರಲ್ಲಿ ಮನುಷ್ಯನ ಮೋಸಗಾರಿಕೆ, ಹತಾಶೆ, ಸ್ವಾರ್ಥ, ಪ್ರತೀಕಾರದ ಒಳಮನಸ್ಸಿನ ಬಿಂಬಗಳು ಇವೆ. ಮನುಷ್ಯನ ಮನಸ್ಥಿತಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಾಗಿದೆ.

ಇದು ಸಾಂಪ್ರದಾಯಿಕ ಹಾಗೂ ಸಮಕಾಲೀನ ಜಗತ್ತನ್ನು ಪ್ರತಿನಿಧಿಸುತ್ತದೆ.  ಇದೊಂದು ಸಂಗೀತ ಪ್ರಧಾನ ನಾಟಕ. ಮೂಲ ನಾಟಕಕ್ಕೆ ನನ್ನ ಆಲೋಚನೆಗಳನ್ನು  ಸೇರಿಸಿಕೊಂಡು ರೂಪಿಸಿದ್ದೇನೆ. ಆದರೆ ಯಾವುದನ್ನೂ ತುರುಕಿಲ್ಲ. ನನ್ನ ಆಲೋಚನೆಗಳ ಜೊತೆ ಸೇರಿಸಿ ರಂಗರೂಪಕ್ಕೆ ತರಲು ಪ್ರಯತ್ನಿಸಿದ್ದೇನೆ. ಈ ಹಿಂದೆಯೂ ಈ ನಾಟಕವನ್ನು ರಂಗರೂಪಕ್ಕಿಳಿಸಿದ್ದೆ. ಇದು ನನ್ನ ಎರಡನೇ ಪ್ರಯತ್ನ.

* ರಂಗ ಸಂಗೀತ ನಿರ್ದೇಶನದ ಬಗ್ಗೆ ಹೇಳಿ?
ನಮ್ಮದು ಸಂಗೀತವನ್ನು ಪ್ರೋತ್ಸಾಹಿಸುತ್ತಿದ್ದ ಕುಟುಂಬ. ಸಹಜವಾಗಿಯೇ ಸಂಗೀತ ಕಲಿತೆ. ಆದರೆ  ನನಗೆ ತುಂಬಾ ಪ್ರೋತ್ಸಾಹ ಸಿಗಲಿಲ್ಲ. ಬಳಿಕ ಸಂಗೀತ ಪಾಠ ಮಾಡುತ್ತಿದ್ದೆ. ಮದುವೆಯಾಯಿತು. ಇಬ್ಬರು ಹೆಣ್ಣು ಮಕ್ಕಳು ಆದರು.

ನಾನು  ಈಗ ನಿರ್ದೇಶಕಿಯಾಗಿ, ಸಂಗೀತ ನಿರ್ದೇಶಕಿಯಾಗಿಯೂ ಗುರುತಿಸಿಕೊಂಡಿದ್ದೇನೆ. ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡುವುದರಿಂದ ನನ್ನ ನೆಚ್ಚಿನ ಆಸಕ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ನನ್ನ ಬಹುತೇಕ ನಾಟಕಗಳಿಗೆ ನಾನೇ ಸಂಗೀತ ನಿರ್ದೇಶನ ಮಾಡಿದ್ದೇನೆ. ‘ಅಗ್ನಿ ಔರ್‌ ಬರ್ಕ’ ನಾಟಕಕ್ಕೂ ಸಂಗೀತ ನಿರ್ದೇಶನ  ಮಾಡಿದ್ದೇನೆ.

* ಚಂಡಿಗಡ ಡ್ರಾಮಾ ರೆಪರ್ಟೆರಿ ಬಗ್ಗೆ ಹೇಳಿ.
ಚಂಡೀಗಡ ಸರ್ಕಾರದಿಂದ ಚಂಡೀಗಡ ಡ್ರಾಮಾ  ರೆಪರ್ಟೆರಿ ಸ್ಥಾಪನೆಯಾಗಿದೆ. ಟ್ಯಾಗೋರ್‌ ಥಿಯೇಟರ್‌ ಸೊಸೈಟಿ ಸಹಯೋಗದೊಂದಿಗೆ ಡ್ರಾಮಾ ರೆಪರ್ಟೆರಿ ಉತ್ತಮ ನಿರ್ದೇಶಕರನ್ನು ಗುರುತಿಸಿ ಅವರಿಂದ ಪ್ರಯೋಗಾತ್ಮಕ ನಾಟಕಗಳನ್ನು ಪ್ರದರ್ಶಿಸುವಂತೆ ಆಮಂತ್ರಣ ನೀಡುತ್ತದೆ. 

‘ಅಗ್ನಿ ಔರ್‌ ಬರ್ಕ’ ಇದರ ಮೊದಲ ನಾಟಕ. ನಾನು ನಿರ್ದೇಶನ ಮಾಡಿದ್ದೇನೆ. ಇದು ಶಿಮ್ಲಾ, ಪಟಿಯಾಲ, ಚಂಡೀಗಡ ಈಗ ಬೆಂಗಳೂರು ಸೇರಿದಂತೆ ದೇಶದ ಎಂಟು ರಾಜ್ಯಗಳಲ್ಲಿ ಪ್ರದರ್ಶನ ಕಂಡಿರುವುದು ಖುಷಿ ಆಗಿದೆ.

* ಕನ್ನಡದ ರಂಗಭೂಮಿ ಜೊತೆ ನಿಮ್ಮ ನಂಟಿನ ಬಗ್ಗೆ ಹೇಳಿ.
ಕನ್ನಡದ ಅನೇಕ ಪ್ರಯೋಗಾತ್ಮಕ ನಾಟಕಗಳನ್ನು ನಾನು ನೋಡಿದ್ದೇನೆ. ಒಬ್ಬ ನಿರ್ದೇಶಕಿಯಾಗಿ ನಾನು ಕನ್ನಡ ರಂಗಭೂಮಿಯಿಂದ ಪ್ರಭಾವಿತಳಾಗಿದ್ದೇನೆ.

ಗಿರೀಶ ಕಾರ್ನಾಡ, ಚಂದ್ರಶೇಖರ ಕಂಬಾರ ಹಾಗೂ ಇತರರ ಅನೇಕ ನಾಟಕಗಳನ್ನು ಹಿಂದಿಗೆ ಭಾಷಾಂತರಿಸಿ ರಂಗರೂಪಕ್ಕೆ ಆಳವಡಿಸಿದ್ದೇನೆ. ಹಯವದನ, ರಕ್ತಕಲ್ಯಾಣ, ತುಘಲಕ್‌ ನಾಟಕಗಳಿಗೆ ತುಂಬ ಮೆಚ್ಚುಗೆ ವ್ಯಕ್ತವಾಗಿದೆ. ಬಿ.ವಿ ಕಾರಂತ ಅವರ ನಾಟಕಗಳಿಗೆ ನಾನು ಸಂಗೀತ ನಿರ್ದೇಶನ ಮಾಡಿದ್ದೇನೆ.

* ಉತ್ತರ– ದಕ್ಷಿಣ ಭಾರತದ ರಂಗಭೂಮಿಯಲ್ಲಿನ ವ್ಯತ್ಯಾಸ ಏನು?
ದಕ್ಷಿಣ ಭಾರತದ ಕರ್ನಾಟಕ, ಕೇರಳ ರಾಜ್ಯದಲ್ಲಿ ರಂಗಭೂಮಿ ಬೆಳೆದಿದೆ. ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಹೊಂದಿದೆ. ಇಲ್ಲಿ ಉತ್ತಮ ನಿರ್ದೇಶಕರಿದ್ದಾರೆ, ಅನುಭವಿ ಕಲಾವಿದರ ಸಂಖ್ಯೆ ಹೆಚ್ಚು ಇದೆ. ಯುವಜನಾಂಗ ರಂಗಭೂಮಿ ಕಡೆಗೆ ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಉತ್ತರ ಭಾರತದಲ್ಲಿ ಅನುಭವಿ ಕಲಾವಿದರು, ನಿರ್ದೇಶಕರ ಸಂಖ್ಯೆ ಕಡಿಮೆಯಾಗುತ್ತಿದೆ. ರಂಗಶಿಕ್ಷಣ ಇಳಿಕೆಯಾಗುತ್ತಿದೆ. ಇದು ಆತಂಕದ ವಿಷಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT