ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ ಮೂಲಕ ಸಂಸ್ಕೃತಿ ಕಲಿಸಿ

ಹಿರಿಯ ರಂಗಕರ್ಮಿ ಪ್ರಸನ್ನ ಅಭಿಮತ
Last Updated 19 ಡಿಸೆಂಬರ್ 2014, 9:07 IST
ಅಕ್ಷರ ಗಾತ್ರ

ಉಡುಪಿ: ‘ರಂಗಭೂಮಿಯ ಮೂಲಕ ಯುವ ಜನತೆಗೆ ಸಂಸ್ಕೃತಿ ಪ್ರವೇಶ ಮಾಡಿಸುವ ಕೆಲಸವಾಗಬೇಕು. ಮಕ್ಕಳ ರಂಗ­ಭೂಮಿಯ ಕಡೆ ಹೆಚ್ಚು ಕೆಲಸ ಮಾಡಬೇಕು’ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಹೇಳಿದರು.

ಉಡುಪಿ ರಂಗಭೂಮಿ ಸಂಸ್ಥೆ 50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಗುರುವಾರ ಏರ್ಪಡಿಸಿದ್ದ ‘ಸುವರ್ಣ ರಂಗಭೂಮಿ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬೆರಕೆ ಭಾಷೆ– ಸಂಸ್ಕೃತಿ ಮತ್ತು ಜೀವನಶೈಲಿ ಸಹಜವಾಗಿ­ಬಿಟ್ಟಿದೆ. ಈ ವಿಪ್ಲವ ಸರಿಹೋಗುವ ತನಕ ಮಕ್ಕಳನ್ನು ಇಂಗ್ಲಿಷ್‌ ಶಿಕ್ಷಣಕ್ಕೆ ದೂಡಿ ಸುಮ್ಮನೆ ಕೂರಲಾಗದು, ಹಾಗೆಯೇ ಹಳ್ಳಿಗಳಿಗೆ ಮಕ್ಕಳನ್ನು ಅಟ್ಟಿ ಸುಮ್ಮನಿರಲಾಗದು.

ಯುವಕರಿಗೆ ನೇರವಾಗಿ ಪಂಪ, ರನ್ನನನ್ನು ಅರ್ಥ ಮಾಡಿಸಲು ಆಗುವುದಿಲ್ಲ. ರಂಗಭೂಮಿಯ ಮೂಲಕ ಅವರನ್ನು ಸಂಸ್ಕೃತಿ ಕಡೆಗೆ ಸೆಳೆಯಬೇಕು. ಒಮ್ಮೆ ಅವರು ಪ್ರವೇಶಿಸಿದ ನಂತರ ಅವರಿಗೆ ಹಳೆಗನ್ನಡ, ರನ್ನ, ಪಂಪರನ್ನ ತಲುಪಿಸಲು ಸಾಧ್ಯವಿದೆ ಎಂದರು.
ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಮಕ್ಕಳು ಮತ್ತು ಶಾಲೆಗಳ ಜೊತೆ ಹೆಚ್ಚು ಕೆಲಸ ಮಾಡಿದರು.

ಮಕ್ಕಳ ಜೊತೆ ರಂಗಭೂಮಿ ಚಟುವಟಿಕೆ ನಡೆಸಿದರೆ ಅದರ ಪರಿಣಾಮ ಸಮಾಜದ ಮೇಲಾಗುತ್ತದೆ. ಕಲೆಯ ಅಗತ್ಯ ಇರುವುದು ಸಾಮಾಜಿಕ ಉಪಯುಕ್ತತೆಯಲ್ಲಿ, ಅದಿಲ್ಲದಿದ್ದರೆ  ಏನೂ ಪ್ರಯೋಜನ ಇಲ್ಲ ಎಂದು ಅಭಿಪ್ರಾಯಪಟ್ಟರು. ರಂಗಭೂಮಿ ಹುಟ್ಟಿದಾಗ ಮತ್ತು ಅದರ ಯೌವ್ವನದಲ್ಲಿ ಸಾಮಾಜಿಕ ಉಪಯುಕ್ತತೆಯ ಬಗ್ಗೆ ಯಾವುದೇ ರೀತಿಯ ಗೊಂದಲ ಇರಲಿಲ್ಲ, ಸ್ಪಷ್ಟತೆ ಇತ್ತು. ಮನರಂಜನೆಗಾಗಿ ಹೌದು. ಆದರೆ ಅದರ ಜೊತೆಗೆ ಸಾಮಾಜಿಕ ಉಪಯುಕ್ತತೆ ಸಾಧಿಸಬೇಕು ಎಂಬ ಅರಿವು ಹಿರಿಯ ನಾಟಕಾರರಲ್ಲಿತ್ತು.

ಮನರಂಜನೆಯ ಜವಾಬ್ದಾರಿಯನ್ನು ಈಗ ಯಂತ್ರಚಾಲಿತ ಮಾಧ್ಯಮಗಳು ವಹಿಸಿಕೊಂಡಿವೆ. ಆದ್ದರಿಂದ ನಾವು ಏಕೆ ನಾಟಕವಾಡಬೇಕು, ಯಾರಿಗಾಗಿ ನಾಟಕ ಮಾಡಬೇಕು ಎಂಬ ಪ್ರಶ್ನೆ ರಂಗಭೂಮಿಯಲ್ಲಿ ಕೆಲಸ ಮಾಡುವವರಲ್ಲಿ ಮೂಡಿದೆ. ಈಗ ಸಮಸ್ಯೆ ಹೆಚ್ಚು ಸಂಕೀರ್ಣವಾಗಿದೆ.

ನಾಟಕ ತಾಲೀಮು ಮತ್ತು ಅದನ್ನು ನೋಡಲು ಬರುವುದು ಸಹ ಸಮಸ್ಯೆ ಆಗುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಹವ್ಯಾಸಿ ಚಳವಳಿಯ ಅತಿರೇಕಗಳನ್ನು ಸಹಿಸಿಕೊಂಡು ಮಧ್ಯಮ ಮಾರ್ಗ ಅನುಸರಿಸಿಕೊಂಡು ಅದೇ ಮಾರ್ಗದಲ್ಲಿ ಮುಂದೆ ಸಾಗುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು. ಡಾ. ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಜಿ. ಶಂಕರ್‌ ಅಧ್ಯಕ್ಷತೆ ವಹಿಸಿದ್ದರು.

ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮಶೆಟ್ಟಿ, ಕಾರ್ಯಾಧ್ಯಕ್ಷರಾದ ಯು. ಉಪೇಂದ್ರ, ಡಾ. ಅರವಿಂದ ನಾಯಕ್‌ ಅಮ್ಮುಂಜೆ, ಪ್ರಧಾನ ಕಾರ್ಯದರ್ಶಿ ಪಿ. ವಾಸುದೇವ ರಾವ್‌, ಸುವರ್ಣ ರಂಗಭೂಮಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ, ಕಾರ್ಯದರ್ಶಿ ಎಚ್‌.ಪಿ. ರವಿರಾಜ್‌, ಉದ್ಯಮಿಗಳಾದ ವಿ. ಮನೋಹರ ಶೆಟ್ಟಿ, ಕೆ. ಉದಯಕುಮಾರ್‌ ಶೆಟ್ಟಿ  ಮೊದಲಾದವರು ಉಪಸ್ಥಿತರಿದ್ದರು.

ರಂಗಭೂಮಿ ಅಂಬರೀಷನ ಸೃಷ್ಟಿಸುವ ಕಲೆಯಲ್ಲ
ಕಲಾವಿದರ ಬಗ್ಗೆ ಹೆಮ್ಮೆ ಪಡುವ ಸ್ಥಿತಿ ಈಗಿಲ್ಲ. 350 ಹುಡುಗಿಯರನ್ನು ಇಟ್ಟುಕೊಂಡಿದ್ದೇನೆ ಎಂದು ನಟ ಅಂಬರೀಷ್‌ ಹೇಳಿದ್ದರು. ಈ ಕಲೆ ಅಂಬರೀಷನನ್ನು ಸೃಷ್ಟಿಸುವ ಕಲೆಯಲ್ಲ. ಶ್ರಮಜೀವಿಯ ಕಲೆಯಾಗಿದೆ. ಸನ್ಯಾಸಿ, ಶಿಕ್ಷಕ, ಕಲಾವಿದ ಈ ಮೂರೂ ಮಂದಿಗೂ ಅಷ್ಟೇ ಜವಾಬ್ದಾರಿ, ಮರ್ಯಾದೆ ಇರಬೇಕು. ಕಲಾವಿದ ಬೇಜವಾಬ್ದಾರಿಯಿಂದ ಮಾತನಾಡಲು ಆಗುವುದಿಲ್ಲ. ರಂಗಭೂಮಿ ಅಶ್ಲೀಲ ಮನರಂಜನೆಯಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT