ನಗರದ ಆಹಾರ ಸಂಸ್ಕೃತಿಯ ಕವಲುಗಳೇ ಆಸಕ್ತಿಕರ. ಈಗ ಎಲ್ಲೆಂದರೆ ಅಲ್ಲಿ ಆಹಾರ ಬೀದಿಗಳು ಹುಟ್ಟಿಕೊಂಡಿವೆ. ಹೊಸರುಚಿಯ ಕಥೆಗಳ ಜೊತೆಗೆ ಹಲವು ನೆನಪುಗಳನ್ನೂ ಅಡಗಿಸಿಕೊಂಡ ಇಂಥ ಬೀದಿಗಳನ್ನು ಪರಿಚಯ ಮಾಡಿಕೊಡುವ ಮಾಲಿಕೆ ಇದು. ವಾರಕ್ಕೊಮ್ಮೆ ಒಂದು ಆಹಾರ ಬೀದಿಯಲ್ಲಿ ಅಡ್ಡಾಡೋಣ.

ಶಿವಾಜಿನಗರದ ರಸೆಲ್ ಮಾರುಕಟ್ಟೆ ಸುತ್ತಮುತ್ತಲಿನ ರಸ್ತೆ ತನ್ನದೇ ಆಹಾರ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿದೆ. ದಿನಗೂಲಿ ಕಾರ್ಮಿಕರು, ಗುಜರಿ, ಮರ ವ್ಯಾಪಾರಿಗಳ ಕುಟುಂಬಗಳು ಹೆಚ್ಚಾಗಿ ವಾಸಿಸುವ ಪ್ರದೇಶ ಇದು. ರಸೆಲ್ ಮಾರುಕಟ್ಟೆಯ ಆಜುಬಾಜು ರಸ್ತೆಗಳಲ್ಲಿ ಪಾರಂಪರಿಕವಾಗಿ ಬೆಳೆದು ಬಂದ ಆಹಾರ ಸಂಸ್ಕೃತಿಯಲ್ಲಿ ಇಂದಿನವರೆಗೂ ಅಧುನಿಕತೆ ನುಸುಳಿಲ್ಲವೆನ್ನಬೇಕು.

ಪಂಚತಾರಾ ಹೋಟೆಲ್ಗಳ ಝಗಮಗ ಬೆಳಕು, ಅತಿಯಾದ ನಿಶ್ಯಬ್ದವಿಲ್ಲದೆ, ಪಾದಚಾರಿಗಳ ದಾರಿಯಲ್ಲೇ ಸಣ್ಣ ಸೌದೆ ಒಲೆ ಇಟ್ಟು ಅಡುಗೆ ಮಾಡಿಬಿಡುತ್ತಾರೆ. ಕೆಂಡದಲ್ಲೇ ನಾಲ್ಕು ತುಂಡು ಮಾಂಸ ಸುಟ್ಟು, ಮಾರಿ ಬದುಕುತ್ತಿದ್ದಾರೆ. ರಸೆಲ್ ಮಾರುಕಟ್ಟೆಯ ವೃತ್ತದ ರಸ್ತೆಗಳಲ್ಲಿ ಸಿಗುವ ಬೀಫ್, ಚಿಕನ್ ಖಾದ್ಯ ತಿನ್ನುವುದಕ್ಕಿಂತ ಅವರು ಬಡಿಸುವ ಪ್ರೀತಿಯಿಂದಲೇ ಹೊಟ್ಟೆ ತುಂಬಿ ತೃಪ್ತಿಯಾಗುತ್ತದೆ. ಈ ವಿಶಿಷ್ಟ ಬಗೆಯ ಖಾದ್ಯಗಳ ರುಚಿಯನ್ನು ಒಮ್ಮೆಯಾದರೂ ಸವಿಯಲೇಬೇಕು.

ಅಪ್ಸರ ಬೀಫ್ ಬಿರಿಯಾನಿ
ರಸಲ್ ಮಾರ್ಕೆಟ್ ವೃತ್ತದಲ್ಲಿ ಮೊದಲು ಎದುರಾಗುವುದೇ ಅಪ್ಸರ ಹೋಟೆಲ್. ಬೀಫ್ ಬಿರಿಯಾನಿ ರಾಣಿ ಅಪ್ಸರ. ರಸ್ತೆ ನಡುವೆಯೇ ಹೋಟೆಲ್ ಮೆನುವನ್ನು ದೊಡ್ಡ ಬ್ಯಾನರ್ನಂತೆ ತೂಗು ಹಾಕಿದ್ದಾರೆ ಮಾಲೀಕರಾದ ಇಮ್ರಾನ್ ರಶೀದ್. ಬ್ಯಾನರ್ 10 ವರ್ಷ ಹಳೆಯದಂತೆ. ಈ ಏರಿಯಾ ಸುತ್ತಮುತ್ತ ಅಪ್ಸರ ಚಿಕನ್ ಮತ್ತು ಬೀಫ್ ಬಿರಿಯಾನಿ ಜನಪ್ರಿಯ. ಪಕ್ಕದಲೇ ದರ್ಗಾ ಇರುವುದರಿಂದ ಪ್ರಾರ್ಥನೆ ಮುಗಿದ ಕೂಡಲೇ ಅಪ್ಸರ ಹೋಟೆಲ್ಗೆ ಬಿರಿಯಾನಿ ಪ್ರಿಯರು ಲಗ್ಗೆ ಇಡುತ್ತಾರೆ.

ಇಲ್ಲಿ ಬೀಫ್ ಬಿರಿಯಾನಿ, ಚಿಕನ್ ಬಿರಿಯಾನಿ, ಬೀಫ್ ಪಲಾವ್, ಬೀಫ್ ಮಸಾಲ, ಚಿಕನ್ ಕಬಾಬ್, ಷೀ ಕಬಾಬ್, ಪರಾಟ, ಕೀಮಾ ಬೀಫ್ ಹೆಚ್ಚು ಮಾರಾಟವಾಗುತ್ತವೆ. ಈ ಹೋಟೆಲ್ಗೆ ಐವತ್ತೊಂದು ವರ್ಷಗಳ ಇತಿಹಾಸವಿದೆ. ಇಮ್ರಾನ್ ಅವರ ಚಾಚಾ ಅಪ್ಸರ ಹೋಟೆಲ್ ಆರಂಭಿಸಿದರು, ಅವರು ತಮ್ಮ ತಾಯಿಯಿಂದ ಅರೇಬಿಯನ್ ಶೈಲಿಯ ಬಿರಿಯಾನಿ ಮಾಡುವುದನ್ನು ಕಲಿತಿದ್ದರಂತೆ. ಇಂದಿಗೂ ಒಂದು ಮೆಣಸಿಕಾಯಿ ಹೆಚ್ಚು ಕಡಿಮೆ ಮಾಡದೆ ಅದೇ ಗುಣಮಟ್ಟದ ಬಿರಿಯಾನಿ ತಯಾರಿಸುತ್ತಿದ್ದಾರೆ.

ಜೊತೆಗೆ ಬಿರಿಯಾನಿ ದರ ಕೇವಲ ಐವತ್ತು ರೂಪಾಯಿ. ಅಷ್ಟು ಕಡಿಮೆ ಯಾಕೆ ಎಂದರೆ, ‘ಬೇಟಾ... ಹಸಿದವರಿಗೆ ಅನ್ನ ಕೊಡಬೇಕು, ದುಡ್ಡು ಅಲ್ಲ’ ಎಂದು ಇಮ್ರಾನ್ ಅವರ ಚಾಚಾ ಹೇಳುತ್ತಿದ್ದರಂತೆ. ಇಂದಿಗೂ ಇಮ್ರಾನ್ ಈ ಮಾತುಗಳನ್ನು ಪಾಲಿಸುತ್ತಿದ್ದಾರೆ. ವಿಶೇಷ ಕೆಂಪು ಮಾಸಲೆಯಿಂದ ಘಮಗುಡುವ ಬಿಸಿಬಿಸಿ ಬೀಫ್ ಬಿರಿಯಾನಿ ಬಾಯಿಗಿಟ್ಟ ಕೂಡಲೇ ತುಪ್ಪದಂತೆ ಕರಗುತ್ತದೆ. ಮಾಂಸದಲ್ಲೇ ವಿಶೇಷ ಪರಿಮಳವಿರುವುದರಿಂದ ಪಕ್ವವಾಗಿ ಬೆಂದ ಬಿರಿಯಾನಿ ಅನ್ನ ಬೀಫ್ ಸ್ವಾದವನ್ನು ಹೀರಿಕೊಂಡು ರುಚಿಕಟ್ಟಾಗಿ ತಿನ್ನಲು ಪ್ರೇರೇಪಿಸುತ್ತದೆ.

ಬಿರಿಯಾನಿ ಫ್ಯಾನ್ಗಳು ಅದು ಹಬೆಯಾಡುವಾಗಲೇ ತಿನ್ನುವ ಸ್ಪರ್ಧೆಗೆ ಇಳಿಯುತ್ತಾರೆ! ಇದೇ ರಸ್ತೆಯಲ್ಲಿ ಮುಂದೆ ಹೋದರೆ ಸಿಗುವುದೇ ಅಬ್ದುಲ್ ಟೀ ಅಂಗಡಿ ಮತ್ತು ದಿಲ್ ಖುಷ್ ಟೀ ಅಂಗಡಿ. ಅಬ್ದುಲ್ ಟೀ ಅಂಗಡಿ ಆರಂಭವಾಗಿ 15 ವರ್ಷಗಳಾಗಿವೆ. ದಿಲ್ ಖುಷ್ ಟೀ ಅಂಗಡಿ ಆರಂಭವಾಗಿ ಏನಿಲ್ಲವೆಂದರೂ 40 ವರ್ಷಗಳಾಗಿವೆ ಎಂದು ಹೇಳುತ್ತಾರೆ ರೆಹಮಾನ್. ಕುದಿಯುವ ಟೀಯನ್ನು ‘ಸೊರ್ ಸೊರ್’ ಹೀರಿ, ಜೊತೆಗೊಂದು ಟೀ ಅಂಗಡಿಯಲ್ಲೇ ತಯಾರಿಸಿದ ಉಪ್ಪಿನ ಬಿಸ್ಕೆಟ್ ತಿಂದು ಜನ ಹೋಗುತ್ತಾರೆ.

ಈ ಪ್ರಕ್ರಿಯೆ ಏನಿಲ್ಲವೆಂದರೂ ಮೂರರಿಂದ ಐದು ನಿಮಿಷಗಳಲ್ಲಿ ನಡೆದು ಹೋಗುತ್ತದೆ. ದಿನಕ್ಕೆ ಸರಾಸರಿ 500 ಜನ ಟೀ ಕುಡಿಯಲು ಈ ಹೋಟೆಲ್ಗಳಿಗೆ ಬರುತ್ತಾರೆ. ಈ ಎರಡು ಟೀ ಅಂಗಡಿಗಳ ಸ್ವಾದ ಒಂದೇ ರೀತಿಯದ್ದು. ತೆಳುವಾದ ಹಾಲಿಗೆ ಗಟ್ಟಿ ಟೀ ತಿಳಿ ಬೆರಸಿ ತಯಾರಿಸಿದ ಟೀ ರುಚಿಯ ಬಗ್ಗೆ ಇಲ್ಲಿ ಎಲ್ಲರಿಗೂ ಆತ್ಮೀಯ ಭಾವ. ರಸೆಲ್ ಮಾರ್ಟೆಕ್ನಲ್ಲಿ ದಿನವಿಡೀ ಕೂಲಿ ಮಾಡಿ ಹಸಿದ ಜೀವಗಳಿಗೆ ಟೀ- ಉಪ್ಪಿನ ಬಿಸ್ಕೆಟ್ ಪರಮಾನ್ನಕ್ಕೆ ಸಮ.

ಷೀ ಕಬಾಬ್ ಕಾ ದರ್ಬಾರ್
ಇದೇ ರಸ್ತೆಯ ಕೊನೆಗೆ ಎಲ್ಲ ಅಂಗಡಿಗಳು ಮುಗಿದವು ಎಂದುಕೊಳ್ಳುವಷ್ಟರಲ್ಲಿ ಎಡ ಗಲ್ಲಿಯಿಂದ ಬೀಫ್ ರೋಸ್ಟ್ನ ಘಮ ಸೆಳೆಯುತ್ತದೆ. ಆ ಕಿರಿದಾದ ಗಲ್ಲಿಗೆ ನುಗ್ಗಿದರೆ ತೆರೆದುಕೊಳ್ಳುತ್ತದೆ ಹೆಸರೇ ಇಲ್ಲದ ಪುಟ್ಟಪುಟ್ಟ ಬೀಫ್ ಷೀ ಕಬಾಬ್ ಅಂಗಡಿಗಳ ದರ್ಬಾರ್. ಜನ ಲಾಟರಿ ಹೋಡೆದವರಂತೆ ಎಲ್ಲಾ ಅಂಗಡಿಗಳ ಮುಂದೆ ಜಮಾಯಿಸಿರುತ್ತಾರೆ. ಈ ರಸ್ತೆಯಲ್ಲಿ ಹಳೆಯದಾದ ಅಂಗಡಿ ಎಂದರೆ ಅಬ್ದುಲ್ ಲತೀಫ್ ಪಾಯ ಶಾಪ್. ಇದು 50 ವರ್ಷಗಳಷ್ಟು ಹಳೆಯದ್ದು.

ಈ ಹೋಟೆಲ್ನಲ್ಲಿ ವೀಲ್ ಕಬಾಬ್, ಷೀ ಕಬಾಬ್, ಬೀಫ್ ಗ್ರೇವಿ, ಡ್ರೈ ಗ್ರಿಲ್ ಜಯಪ್ರಿಯ ತಿನಿಸುಗಳು. ಕೊತ್ತಂಬರಿ ಸೊಪ್ಪಿನ ತಾಜಾತನ, ಹಸಿಮೆಣಸಿನ ಕಾಯಿಯ ಚುರುಕು ಖಾರದಿಂದ ಸಮೃದ್ಧವಾದ ವೀಲ್ ಕಬಾಬ್ ತಿಂದ ಕೂಡಲೆ ಖಾರ ನೆತ್ತಿಗೆ ಏರುತ್ತದೆ. ಬೀಫ್ನ ಸಣ್ಣ ಸಣ್ಣ ತುಂಡುಗಳನ್ನು ಹಸಿ ಮಸಾಲೆಯೊಂದಿಗೆ ನಾಲ್ಕು ಗಂಟೆ ನೆನೆಸಿಡಲಾಗುತ್ತದೆ. ಇದಕ್ಕೆ ಯಾವುದೇ ಒಣ ಮಸಾಲೆ ಪುಡಿಗಳನ್ನು ಬಳಸುವುದಿಲ್ಲ. ಹಸಿ ಮಸಾಲೆಯೊಂದಿಗೆ ನೆನೆದ ಮಾಂಸವನ್ನು ತವಾ ಮೇಲೆ ಚೆನ್ನಾಗಿ ಫ್ರೈ ಮಾಡಲಾಗುತ್ತದೆ. ಹಸಿರು ಬಣ್ಣದ ವೀಲ್ ಕಬಾಬ್ ರೋಸ್ಟ್ ಆದಷ್ಟೂ ರುಚಿ ಹೆಚ್ಚು.

ಕೆಂಡದ ಮೇಲೆ ಗ್ರಿಲ್ ಇಟ್ಟು ಸುಡುವ ಷೀ ಕಬಾಬ್ ಹೆಚ್ಚು ಮಾರಾಟವಾಗುವ ಖಾದ್ಯ. ಬೀಫ್ ಕೀಮಾದೊಂದಿಗೆ ಮಸಾಲೆ ಮಿಶ್ರಣ ಮಾಡಿ ಗ್ರಿಲ್ ಕೊಕ್ಕೆಗಳಿಗೆ ಸುತ್ತಿ ಕೆಂಡದ ಮೇಲೆ ಸುಡಲಾಗುತ್ತದೆ. ಕೆಂಡದ ವಿಶೇಷ ಗ್ರಿಲ್ ಘಮದಿಂದ ಷೀ ಬೀಫ್ ಕಬಾಬ್ ಮತ್ತಷ್ಟು ರುಚಿಯಾಗುತ್ತದೆ. ತುಂಬ ಮೃದುವಾದ ಬೀಫ್ ಷೀ ಕಬಾಬ್ ತಿನ್ನುವುದು ಒಂದು ಕಲೆ. ಇತರೆ ಮಾಂಸದಂತೆ ಜಗ್ಗಿ ಕಚ್ಚಬಾರದು, ಒಂದೊಂದೆ ತುಂಡನ್ನು ನಿಧಾನವಾಗಿ ಮುರಿದು ಬಾಯಲ್ಲಿ ಇಟ್ಟು ತಿನ್ನಬೇಕು. ಕೀಮವನ್ನು ಒರಟಾಗಿ ತಿನ್ನುವ ಪ್ರಮೇಯ ಇಲ್ಲ. ಬೀಫ್ ಷೀ ಕಬಾಬ್ನಲ್ಲಿ ಕಣಕಣವೂ ಮಸಾಲೆ ರುಚಿಯಿಂದ ತುಂಬಿರುವುದರಿಂದ ಗ್ರೇವಿಯ ಅಗತ್ಯವಿರುವುದಿಲ್ಲ.

ಮೆತ್ತಗೆ ಬಾಯಾಡಿಸಿದರೆ ಷೀ ಕಬಾಬ್ ಕರಗಿ ಸ್ವಾದವನ್ನು ಮರೆಯಲಾಗದಂತೆ ಉಳಿಸಿ ಹೊಟ್ಟೆ ಸೇರಿ ಬಿಡುತ್ತದೆ. ಎರಡು ಬಾರಿ ಬಾಯಾಡಿಸುವುದರಲ್ಲಿ ಒಂದು ಪ್ಲೇಟ್ ಷೀ ಕಬಾಬ್ ಖಾಲಿಯಾಗುತ್ತದೆ ಎನ್ನುವುದು ಮಾತ್ರ ಬೇಸರದ ಸಂಗತಿ. ಮಾಂಸವನ್ನು ತೆಳುವಾಗಿ ಕತ್ತರಿಸಿ ಮಸಾಲೆಯೊಂದಿಗೆ ನೆನೆಸಿ ಗ್ರಿಲ್ ಮಾಡುವುದೇ ಬೀಫ್ ರೋಸ್ಟ್. ಈ ರೋಸ್ಟ್ ದೊಡ್ಡ ಮರಗೆಣಸಿನ ಚಿಪ್ಸ್ನಂತೆ ರುಚಿ ನೀಡುತ್ತದೆ. ಅಷ್ಟು ತೆಳುವಾಗಿ ಮಾಂಸವನ್ನು ಕತ್ತರಿಸಿರುತ್ತಾರೆ.

ಈ ಎಲ್ಲಾ ಖಾದ್ಯಗಳೊಂದಿಗೆ ಅಕ್ಕಿ ಶ್ಯಾವಿಗೆ, ಪರಾಟ ಕೊಡುತ್ತಾರೆ. ಸಣ್ಣ ಎಳೆಎಳೆಯ ಶ್ಯಾವಿಗೆಯೊಂದಿಗೆ ಸ್ವಲ್ಪ ಗ್ರೇವಿಯಂತಿರುವ ವೀಲ್ ಕಬಾಬ್ ಹೊಂದುತ್ತದೆ. ಶಿವಾಜಿನಗರದ ಉಸ್ನಾ ಕಳೆದ ಮೂವತ್ತು ವರ್ಷಗಳಿಂದ ಇಲ್ಲಿನ ಷೀ ಕಬಾಬ್ ಆರಾಧಕಿ. ವಿಲ್ಸನ್ ಗಾರ್ಡನ್ಗೆ ಮದುವೆಯಾಗಿ ಹೋದರೂ ಇಲ್ಲಿಗೆ ಬಂದು ಷೀ ಕಬಾಬ್ ತಿನ್ನುವುದನ್ನು ಬಿಟ್ಟಿಲ್ಲ. ತಮ್ಮ ಪತಿ ಸೈಯದ್ ಇಮ್ರಾನ್ ಮತ್ತು ಮಕ್ಕಳೊಂದಿಗೆ ತಾಯಿ ಮನೆಗೆ ಬಂದಾಗಲೆಲ್ಲ, ಷೀ ಕಬಾಬ್ ತಿಂದುಹೋಗುತ್ತಾರೆ.

ನಲ್ಲಿ ಸೂಪ್
ಈ ರಸ್ತೆಯ ಮತ್ತೊಂದು ಪ್ರಸಿದ್ಧ ಖಾದ್ಯ ನಲ್ಲಿ ಸೂಪ್. ಬಿಸ್ಮಿಲ್ಲಾ ಷಿ ಕಬಾಬ್ ಸೆಂಟರ್ ನಲ್ಲಿ ಸೂಪ್ಗೆ ಹೆಸರುವಾಸಿ. ಬೀಫ್ ಮೂಳೆಗಳಿಂದ ತಯಾರಿಸಿದ ಈ ಸೂಪ್ ಹೆಚ್ಚು ಆರೋಗ್ಯಕರ. ಮಂಡಿ ನೋವಿನಿಂದ ಬಳಲುತ್ತಿರುವ ಹಿರಿಯ ಜೀವಗಳು ನಲ್ಲಿ ಸೂಪ್ನ ಖಾಯಂ ಗಿರಾಕಿಗಳು. 14 ಗಂಟೆ ಬೀಫ್ ಮೂಳೆಗಳನ್ನು ನೆನೆಹಾಕಬೇಕು. ಇದರಿಂದ ಸೂಪ್ನಲ್ಲಿ ಕೊಬ್ಬಿನ ಅಂಶ ಚೆನ್ನಾಗಿ ಹರಡಿಕೊಳ್ಳುತ್ತದೆ. ಸೂಪಿಗೆ ಹೆಚ್ಚಿನ ಮಸಾಲೆ ಅವಶ್ಯಕತೆ ಇಲ್ಲ. ತೆಳು ಮಸಾಲೆಯೊಂದಿಗೆ ಕುದಿಯುತ್ತಾ ಮೂಳೆ ತನ್ನ ಸಾರವನ್ನು ಬಿಡುತ್ತದೆ.

ಜಿಡ್ಡಿನಿಂದ ತುಂಬಿದ ಬಿಸಿ ಬಿಸಿ ಸೂಪ್ ಮೇಲೆ ಹೆಚ್ಚು ಎನಿಸುವಷ್ಟು ಬೆಣ್ಣೆ ಹಾಕಿ, ಹಸಿ ಕೊತ್ತಂಬರಿ, ನಾಲ್ಕು ಹನಿ ನಿಂಬೆ ರಸ ಹಾಕಿಕೊಂಡು ಒಂದೊಂದೇ ಚಮಚ ಹೀರಬೇಕು. ನಲ್ಲಿ ಸೂಪ್ ಮತ್ತಷ್ಟು ಖಾರವಾಗಿರಬೇಕು ಎನಿಸಿದರೆ ಈರುಳ್ಳಿ, ಮೆಣಸಿನಕಾಯಿ ಸಣ್ಣ ತುಂಡುಗಳನ್ನು ಮಿಶ್ರಣ ಮಾಡಿ ಕುಡಿಯಬಹುದು. ಇಲ್ಲಿ ಸಿಗುವ ಷೀ ಕಬಾಬ್, ಬಿರಿಯಾನಿ, ನಲ್ಲಿ ಸೂಪ್ ತುಂಬಾ ಜನಪ್ರಿಯ. ಆದರೆ ಇಲ್ಲಿ ಮಾರಾಟವಾಗುವ ಯಾವುದೇ ಖಾದ್ಯಗಳ ಶುಚಿತ್ವ ಮಾತ್ರ ಕೇಳುವ ಹಾಗಿಲ್ಲ. ಇಲ್ಲಿನ ಜನರು ಅದರ ಯಾವ ಜರೂರೂ ಇಲ್ಲದೆ ಸಹಜವಾಗಿ ಬದುಕುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.