ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಎರಡೂ ಬದಿಗೆ ಜಾಲಿ: ಸಂಚಾರಕ್ಕೆ ಅಡ್ಡಿ

ರಾಹುಲ್ ಗಾಂಧಿ ಬಂದಾಗ ಕಾಟಾಚಾರಕ್ಕೆ ಒಂದು ಕಿ.ಮೀ ರಸ್ತೆ ಸ್ವಚ್ಛತೆ: ಮತ್ತೆ ಬೆಳೆದ ಕಂಟಿ
Last Updated 4 ಮೇ 2016, 8:50 IST
ಅಕ್ಷರ ಗಾತ್ರ

ರಾಣೆಬೆನ್ನೂರು: ತಾಲ್ಲೂಕಿನ ಮೈದೂರು ಗ್ರಾಮದಿಂದ ಚಿಕ್ಕಕುರುವತ್ತಿವರೆಗೆ ಸಾಗುವ ರಸ್ತೆಯಲ್ಲಿ ಯತ್ತಿನಹಳ್ಳಿಯಿಂದ ಮೈದೂರುವರೆಗೆ 2 ಕಿಮೀ ರಸ್ತೆ ಎರಡೂ ಬದಿಗೆ ಆಳೆತ್ತರ ಜಾಲಿ ಬೆಳೆದು ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ. ಎದರು–ಬದುರು ಬರುವ ವಾಹನ ಕೂಡ ಕಾಣದಂತಾಗಿ ಅಪಘಾತಕ್ಕೆ ಆಹ್ವಾನ ನೀಡಿದಂತಾಗಿದೆ.

ಚಿಕ್ಕಕುರುವತ್ತಿ, ಚಿಕ್ಕಅರಳೀಹಳ್ಳಿ, ಚಂದಾಪುರ, ಚೌಡಯ್ಯದಾನಪುರ ಮೂಲಕ ಬಳ್ಳಾರಿ ಜಿಲ್ಲೆಗೆ ಹೋಗುವ ಗ್ರಾಮಗಳಿಗೆ ಸಂಪರ್ಕ ರಸ್ತೆಯಾಗಿದೆ.
ಗುಡುಗೂರು ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಶಿವಪ್ಪ ಎಸ್‌. ಕುರುವತ್ತಿ ಪ್ರಜಾವಾಣಿಯೊಂದಿಗೆ ಮಾತನಾಡಿ, ಅನೇಕ ತಲೆಮಾರುಗಳಿಂದ ರಸ್ತೆ ದುರಸ್ಥಿ ಕಾಣದೇ ಚಿಕ್ಕ ರಸ್ತೆಯಲ್ಲಿ ಯತ್ತಿನಹಳ್ಳಿ ಯಿಂದ ಮೈದೂರುವರೆಗೆ ಹಳ್ಳದ ದಂಡೆ ಹಿಡಿದು ಅಡ್ಡಾಡುತ್ತಿದ್ದರು. ಎಂದೂ ರಸ್ತೆ ದುರಸ್ತಿ ಕಂಡಿದ್ದಿಲ್ಲ. ಏನೋ ಈ ಭಾಗದ ಅದೃಷ್ಟ ಎನ್ನುವಂತೆ ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆ (ಪಿಎಂಜಿ ಎಸ್‌ವೈ) ಅಡಿಯಲ್ಲಿ ಮೈದೂರು ಗ್ರಾಮ ದಿಂದ ಚಿಕ್ಕಕುರುವತ್ತಿ ಗ್ರಾಮದವರೆಗೆ ಸುಮಾರು ಕೋಟಿಗಟ್ಟಲೇ ಹಣ ಖರ್ಚು ಮಾಡಿ 11 ಕಿ.ಮೀ. ರಸ್ತೆ ದುರಸ್ತಿ ಮಾಡಿ ಡಾಂಬರೀಕರಣ ಮಾಡಿದ್ದರಿಂದ ಈ ಭಾಗದ ಜನರಿಗೆ ತೀವ್ರ ಅನುಕೂಲ ವಾಗಿತ್ತು ಎಂದರು.

ಯತ್ತಿನಹಳ್ಳಿ ಗ್ರಾಮ ಮೊದಲು ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಗುಡಗೂರ ಗ್ರಾಮ ಪಂಚಾಯ್ತಿಗೆ ಸೇರ್ಪಡೆಯಾಗಿತ್ತು. ಈಗ ಬ್ಯಾಡಗಿ ವಿಧಾನಸಭಾ ಮತಕ್ಷೇತ್ರಕ್ಕೆ ಬರುವ ಹೊನ್ನತ್ತಿ ಪಂಚಾಯ್ತಿಗೆ ಸೇರಿದ್ದರಿಂದ ರಸ್ತೆ ದುರಸ್ತಿ, ಜಂಗಲ್‌ ತೆಗೆಸಲು ಗುಡಗೂರು ಪಂಚಾಯ್ತಿಗೆ ಕೇಳಬೇಕೋ ಅಥವಾ ಹೊನ್ನತ್ತಿ ಪಂಚಾಯ್ತಿಗೆ ಕೇಳ ಬೇಕೋ ಎನ್ನುವ ಯಕ್ಷ ಪ್ರಶ್ನೆಯಾಗಿದೆ ಎಂದರು.

ಈಗ ವಾಹನಗಳು ನಿರಂತರ ಅಡ್ಡಾ ಡುವುದರಿಂದ ಮುಳ್ಳುಗಳು ವಾಹನ ಗಳಿಗೆ ತೆರೆದು ಜಾಲಿ ತುಂಡರಿಸಿದ್ದು, ರಾತ್ರಿ ವಾಹನ ಬೆಳಕಿಗೆ ಹಸಿರು ತುಂಬಿದ ಗಾರ್ಡ್‌ನ್‌ಗೆ ಸಿದ್ಧಪಡಿಸಿದಂತೆ ಕಾಣುತ್ತದೆ.

ಎರಡೂ ವರ್ಷದಲ್ಲಿ ರಸ್ತೆ ಎರಡೂ ಬದಿಗೆ ಜಾಲಿ ಮುಳ್ಳಿನ ಕಂಠಿಗಳು ಬೆಳೆದು ಸಣ್ಣ ಟಂಟಂ ಗಾಡಿ ಕೂಡ ಹೋಗಲು ತೊಂದರೆಯಾಗಿದೆ. ಬೈಕ್‌ ಸವಾರರಿಗಂತೂ ಹೆಲ್ಮೆಟ್‌ ಕಡ್ಡಾಯ ವಾಗಿದೆ. ಇಲ್ಲದಿದ್ದರೆ ಮೈಕೈಗೆ ಮುಳ್ಳು ತೆರಚಿಕೊಂಡು ಹೋಗಬೇಕಾಗುತ್ತದೆ.

ರಸ್ತೆ ಉತ್ತಮವಾಗಿದೆ ಎಂದು ಟ್ರ್ಯಾಕ್ಟರ್‌ನಲ್ಲಿ ಮದುವೆ ಮುಂಜಿಗೆ ಸಾರ್ವಜನಿಕರನ್ನು ಕರೆದುಕೊಂಡು ಹೋಗುವಂತಿಲ್ಲ. ಯಾವಕಡೆ ಭಾಗಿ ದರೂ ಮುಳ್ಳುಗಳು ತೆರೆಯುತ್ತವೆ. ಶಾಲಾ ಕಾಲೇಜುಗಳಿಗೆ ಹೋಗುವ ಖಾಸಗಿ ಬಸ್‌ಗಳು ಕಿಟಕಿ ಗ್ಲಾಸು ಹಾಕಿಕೊಂಡು ಸಾಗಬೇಕು. ಇಲ್ಲದಿದ್ದರೆ 3 ಕಿ.ಮೀ. ಗುಡಗೂರ ಮೇಲೆ ಸುತ್ತುವರೆದು ಯತ್ತಿನಹಳ್ಳಿಗೆ ಬರಬೇಕು ಎಂದು ಗ್ರಾಮಸ್ಥರು ಹೇಳುತ್ತಾರೆ.

ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಜಂಗಲ್‌ ತೆಗೆಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡ ಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಜಿಲ್ಲಾ ಪಂಚಾಯ್ತಿಗೆ ರಸ್ತೆ ಹಸ್ತಾಂತರ
ಪಿಎಂಜೆಎಸ್‌ವೈ ಯೋಜನೆ ಯಲ್ಲಿ ಮೈದೂರು ಕ್ರಾಸ್‌ನಿಂದ ಚಿಕ್ಕಕುರುವತ್ತಿವರೆಗೆ 11.11 ಕಿ.ಮೀ. ರಸ್ತೆಯನ್ನು ದುರಸ್ತಿ ಮಾಡಿ ಈಗ 5–6 ವರ್ಷವಾಗಿದೆ. ನಾವು ಜಿಲ್ಲಾ ಪಂಚಾಯ್ತಿಗೆ ಹಸ್ತಾಂತರ ಮಾಡಿದ್ದೇವೆ. ಜಿಲ್ಲಾ ಪಂಚಾಯ್ತಿ ಅವರು ನಿರ್ವಹಣೆ ಮಾಡಬೇಕು.

ಪಿಎಂಜಿಎಸ್‌ವೈ ಕಾಮಗಾರಿ ಕೈಗೊಂಡ ಗುತ್ತಿಗೆದಾರರ ಅವಧಿ ಮುಗಿದಿದೆ.  ರಾಹುಲ್‌ ಗಾಂಧಿ ಅವರು ಈಚೆಗೆ ಬಂದಾಗ ಮೈದೂರಿನಿಂದ 1 ಕಿ.ಮೀ. ಜಂಗಲ್‌ ತೆಗೆಯಲಾಗಿದೆ ಎನ್ನುತ್ತಾರೆ ಪಿಎಂಜೆಎಸ್‌ವೈ ಸಹಾಯಕ ಎಂಜಿನಿಯರ್‌ ಎ.ಐ. ಹುಗ್ಗಿ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT