ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಘವೇಶ್ವರ ಶ್ರೀಗಳ ಪೀಠ ತ್ಯಾಗಕ್ಕೆ ಒತ್ತಾಯ

ತೀರ್ಪಿನಲ್ಲಿ ಅಕ್ರಮ ಸಂಬಂಧ ಉಲ್ಲೇಖ: ಆರೋಪ
Last Updated 6 ಜೂನ್ 2016, 9:28 IST
ಅಕ್ಷರ ಗಾತ್ರ

ಸಾಗರ: ‘ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ಮೇಲಿನ ಅತ್ಯಾಚಾರದ ಆರೋಪ ಪ್ರಕರಣದಲ್ಲಿ ಅವರು ದೋಷಮುಕ್ತರಾಗಿದ್ದರೂ ತೀರ್ಪಿನಲ್ಲಿ ಅಕ್ರಮ ಸಂಬಂಧ ನಡೆದಿದೆ ಎನ್ನುವ ಬಗ್ಗೆ ಉಲ್ಲೇಖ ಇರುವುದರಿಂದ ಶ್ರೀಗಳು ಪೀಠದಲ್ಲಿ ಮುಂದುವರಿಯುವ ನೈತಿಕತೆ ಕಳೆದುಕೊಂಡಿದ್ದಾರೆ’ ಎಂದು ಅಖಿಲ ಹವ್ಯಕ ಒಕ್ಕೂಟದ ಪ್ರಮುಖರಾದ ಅಶ್ವಿನಿ ಕುಮಾರ್ ಹೇಳಿದರು.

ಅಖಿಲ ಹವ್ಯಕ ಒಕ್ಕೂಟ ರಾಘವೇಶ್ವರ ಶ್ರೀಗಳ ಪೀಠ ತ್ಯಾಗಕ್ಕೆ ಒತ್ತಾಯಿಸಿ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು ನಮ್ಮ ಒಕ್ಕೂಟ ಹಮ್ಮಿಕೊಂಡಿದ್ದ ಮಠ ಉಳಿಸಿ ಅಭಿಯಾನ ಕಾರ್ಯಕ್ರಮಕ್ಕೆ ರಾಘವೇಶ್ವರ ಶ್ರೀಗಳ ಪರ ಇರುವ ಗುಂಪು ಅಡ್ಡಿಪಡಿಸುವ ಮೂಲಕ ಗೂಂಡಾ ವರ್ತನೆ ತೋರಿದೆ ಎಂದು ದೂರಿದರು.

ರಾಘವೇಶ್ವರ ಶ್ರೀಗಳ ಪರ ತಾವಿದ್ದೇವೆ ಎಂದು ಹೇಳಿಕೊಳ್ಳುವ ವ್ಯಕ್ತಿಗಳು ಒಕ್ಕೂಟದ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ವ್ಯಕ್ತಿಗಳಿಗೆ ಚಪ್ಪಲಿ, ಪೊರಕೆ ತೋರಿಸಿ ಕೆಲವರ ಮೇಲೆ ಹಲ್ಲೆಯನ್ನು ನಡೆಸಿದ್ದಾರೆ. ಇದು ಯಾವ ಸಂಸ್ಕೃತಿ ಎಂದು ಪ್ರಶ್ನಿಸಿದ ಅವರು ಇಂತಹ ಕೆಲಸಗಳಿಗೆ ಸ್ವತ: ರಾಘವೇಶ್ವರ ಶ್ರೀಗಳ ಪ್ರಚೋದನೆಯೇ ಕಾರಣ ಎಂದು ಆಪಾದಿಸಿದರು.

ಹವ್ಯಕ ಒಕ್ಕೂಟದ ಅಶೋಕ್ ಜಿ.ಭಟ್ ಮಾತನಾಡಿ ಪ್ರೇಮಲತಾ ಪ್ರಕರಣದಲ್ಲಿ ಅತ್ಯಾಚಾರ ನಡೆದಿಲ್ಲ, ಅನಾಚಾರ ನಡೆದಿರುವುದು ಖಚಿತ ಎಂದು ನಮ್ಮ ಸಂಘಟನೆ ಮೊದಲಿ ನಿಂದಲೂ ಪ್ರತಿಪಾದಿಸುತ್ತಿತ್ತು. ಆ ಅಭಿಪ್ರಾಯಕ್ಕೆ ಈಗ ನ್ಯಾಯಾಲಯದ ಮುದ್ರೆ ಬಿದ್ದಿದೆ ಎಂದರು.

ರಾಘವೇಶ್ವರ ಶ್ರೀಗಳ ವಿರುದ್ಧ ಕೆಲವು ಮಠಾಧೀಶರು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಹವ್ಯಕ ಮಂಡಲದವರು ಆರೋಪಿಸಿದ್ದಾರೆ. ಅವರಿಗೆ ತಾಕತ್ತಿದ್ದರೆ ಯಾವ ಮಠಾಧೀಶರು ಷಡ್ಯಂತ್ರ ನಡೆಸುತ್ತಿದ್ದಾರೆ ಎಂಬುದನ್ನು ಬಹಿರಂಗವಾಗಿ ಹೇಳಲಿ ಎಂದು ಸವಾಲು ಹಾಕಿದರು.

ರಾಘವೇಶ್ವರ ಶ್ರೀಗಳು ಯಾವುದೇ ತಪ್ಪು ಮಾಡಿಲ್ಲ ಅಂತಾದರೆ ಹವ್ಯಕ ಒಕ್ಕೂಟದ ಸಭೆಗೆ ಅಡ್ಡಿಪಡಿಸುವ ಔಚಿತ್ಯವಾದರೂ ಏನಿದೆ ಎಂದು ಪ್ರಶ್ನಿಸಿದ ಅವರು, ನಿಗದಿತ ಸ್ಥಳದಲ್ಲೇ ಸಭೆ ನಡೆಸಲು ತಾಲ್ಲೂಕು ಆಡಳಿತ ಅವಕಾಶ ಮಾಡಿಕೊಡಬೇಕಿತ್ತು ಎಂದರು.

ವಕೀಲರಾದ ಈಶ್ವರಪ್ಪ ನಾಯ್ಕ್ ಮಾತನಾಡಿ, ‘ಪ್ರೇಮಲತಾ ಪ್ರಕರ ಣದಲ್ಲಿ ರಾಘವೇಶ್ವರ ಶ್ರೀಗಳು ನಿರ್ದೋಷಿ ಎಂದು ನೀಡಿರುವ ತೀರ್ಪು ಹೈಕೋರ್ಟ್‌ ನ್ಯಾಯಾಲಯದ ಹಲವು ತೀರ್ಪುಗಳಿಗೆ ವಿರುದ್ಧವಾಗಿದೆ. ಇದನ್ನು ಈಗಾಗಲೇ ರಾಜ್ಯದ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಹೀಗಿರುವಾಗ ಸಭೆ ನಡೆಸಲು ಅಡ್ಡಿಪಡಿಸುವುದು ಸರಿಯಲ್ಲ’ ಎಂದು ಹೇಳಿದರು.

ಹವ್ಯಕ ಒಕ್ಕೂಟದ ಪ್ರಮುಖರಾದ ಯು.ಎನ್.ಭಟ್ ಅಧ್ಯಕ್ಷತೆ ವಹಿಸಿದ್ದರು. ಸಿ.ಬಿ.ಎಲ್.ಹೆಗಡೆ, ಎಚ್.ಎಸ್. ಮಂಜಪ್ಪ, ಕೆ.ಎನ್.ಶರ್ಮ, ಇಂದಿರಾ ಮೋಹನ್ ಹೆಗಡೆ, ಕೆ.ಟಿ. ಮಹಾಬ ಲಗಿರಿ, ಸಿ.ಎಚ್.ಎಸ್.ಭಟ್, ಗೋಪಾ ಲಕೃಷ್ಣ ನೀರ್ಜಾಲು, ಮಂಜುನಾಥ ಹೆಗಡೆ ಹೊಸಬಾಳೆ, ಡಾ.ಟಿ.ಟಿ.ಹೆಗಡೆ, ಬೀರೂರು ಮಂಜಣ್ಣ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT