ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆ ಮಾಯ: ಹೈಕೋರ್ಟ್‌ ಕಿಡಿ

Last Updated 30 ಜನವರಿ 2015, 20:22 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜಕಾಲುವೆಗಳು ತ್ಯಾಜ್ಯ ವಸ್ತುಗ­ಳಿಂದ ತುಂಬಿ ಹೋಗಿವೆ ಎಂದು ಹೇಳುವ ನೀವು ಈ ಸಂಬಂಧ ಎಷ್ಟು ಜನ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದ್ದೀರಿ ಎಂಬುದನ್ನು ತಿಳಿಸಿ’ ಎಂದು ಹೈಕೋರ್ಟ್‌ ಬಿಬಿಎಂಪಿಯನ್ನು ತರಾಟೆಗೆ ತೆಗೆದು­ಕೊಂಡಿತು.

ಹಿರಿಯ ನ್ಯಾಯಮೂರ್ತಿ ಕೆ.ಎಲ್‌.ಮಂಜುನಾಥ್‌ ಹಾಗೂ ಎಸ್.ಸುಜಾತ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು ಶುಕ್ರವಾರ ಈ ಸಂಬಂಧದ ರಿಟ್‌ ಅರ್ಜಿ ವಿಚಾರಣೆ ವೇಳೆ, ‘ಬೆಂಗಳೂರಿ­ನಲ್ಲಿ ಕೆರೆಗಳು ಕ್ರಮೇಣ ಮಾಯ­ವಾಗುತ್ತಿವೆ’ ಎಂದು ತೀವ್ರ ಆತಂಕ ವ್ಯಕ್ತಪಡಿಸಿತು.

‘ರಾಜಕಾಲುವೆಗಳನ್ನು ಸ್ವಚ್ಛ ಮಾಡಿಸುತ್ತಿದ್ದೇವೆ ಎಂದು ಹೇಳುವ ನೀವು ಇದಕ್ಕಾಗಿ ಯಾರ ದುಡ್ಡನ್ನು ಖರ್ಚು ಮಾಡುತ್ತಿದ್ದೀರಿ. ಈ ರೀತಿ ಹಣ ಖರ್ಚು ಮಾಡಲು ನಿಮಗೆ ಯಾವ ಹಕ್ಕಿದೆ’ ಎಂದು ಪೀಠವು ಖಾರವಾಗಿ ಪ್ರಶ್ನಿಸಿತು.

‘ಕಾರ್ಪೊರೇಷನ್‌ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳಿಗೆ ಈ ಮೊದಲು 10 ಇಂಚಿನ ಕಲ್ಲಿನ ಚಪ್ಪಡಿಗಳನ್ನು ಹಾಕಲಾಗಿತ್ತು. ಈಗ ಇವುಗಳನ್ನೆಲ್ಲಾ ತೆಗೆಯಲಾಗಿದೆ. ಇವನ್ನೆಲ್ಲಾ ಹರಾಜು ಹಾಕಲಾ­ಗಿ­ದೆಯೇ ಅಥವಾ ಪುನರ್‌ಬಳಕೆ ಮಾಡಲಾಗುತ್ತಿದೆಯೇ ಎಂಬುದು ಈಗ ಯಾರಿಗೂ ಗೊತ್ತಿಲ್ಲ. ಈ ಕಲ್ಲುಗಳ ಬೆಲೆ ಎಷ್ಟೆಂದು ನಿಮಗೆ ಗೊತ್ತಿದೆಯೇ’ ಎಂದು ನ್ಯಾಯ­ಮೂರ್ತಿ ಕೆ.ಎಲ್‌.ಮಂಜುನಾಥ್‌ ಕಿಡಿ ಕಾರಿದರು.

ಎಂಎನ್‌ಸಿಗೆ ನೀಡಿ: ‘1986ರಲ್ಲಿ ಲಕ್ಷ್ಮಣ್‌ ಸಮಿತಿ  ನಗರದಲ್ಲಿ  150 ಕೆರೆಗಳಿವೆ ಎಂದು ಗುರುತಿಸಿತ್ತು. ಆದರೆ ಇವೆಲ್ಲಾ ಈಗ ಮಾಯವಾಗಿವೆ. ನಾಳೆ ನಮ್ಮ ಮೊಮ್ಮಕ್ಕಳು ಕೆರೆ ಎಂದರೆ ಏನು ಎಂದು ಕೇಳುವ ಪರಿಸ್ಥಿತಿ ಇದೆ’ ಎಂದು ಆತಂಕ ವ್ಯಕ್ತಪಡಿಸಿದ ಪೀಠವು, ‘ಕೆರೆಗಳ ನಿರ್ವಹಣೆಯನ್ನು ಬಹುರಾಷ್ಟ್ರೀಯ ಕಂಪೆನಿ­ಗಳ ಸುಪರ್ದಿಗೆ ನೀಡುವುದು ಒಳಿತು’ ಎಂಬ ಸಲಹೆ ನೀಡಿತು.

ಪ್ರಮಾಣ ಪತ್ರ: ಇದೇ ವೇಳೆ ನ್ಯಾಯಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿದ ಬೆಂಗಳೂರು ಜಲಮಂಡಳಿ ಪರ ವಕೀಲರು, ‘ಬಿಬಿಎಂಪಿ 110 ಹಳ್ಳಿಗಳನ್ನು ತನ್ನ ಒಡಲಲ್ಲಿ ಸೇರಿಸಿಕೊಂಡು ಹಿಗ್ಗಿರುವ ಪರಿಣಾಮ ಒಳಚರಂಡಿ ಸಮಸ್ಯೆ ಹೆಚ್ಚಾಗಿದೆ’ ಎಂದು ಪೀಠದ ಗಮನ ಸೆಳೆಯಿತು.
‘30–40 ವರ್ಷಗಳಷ್ಟು ಹಳೆಯದಾದ 400 ಮಿ.ಮೀ.ವ್ಯಾಸದ ಪೈಪ್‌ ಲೈನ್‌ಗಳನ್ನು ಬದಲಾ­ಯಿಸಲು ಜಲಮಂಡಳಿ ಕ್ರಮ ಕೈಗೊಂಡಿದೆ. ಈಗಾ­ಗಲೇ 33 ಕಿ.ಮೀ.ಗಳಷ್ಟು ಉದ್ದದ ಪೈಪ್‌ ಲೈನ್‌­ಗಳನ್ನು ಬದಲಾಯಿಸಲಾಗಿದೆ. ಈ ದಿಸೆಯಲ್ಲಿ ಇನ್ನೂ 70 ಕಿ.ಮಿ.ಗುರುತಿಸಲಾಗಿದೆ’ ಎಂದು ಜಲಮಂಡಳಿ ಪರ ವಕೀಲರು ವಿವರಿಸಿದರು.

ಎಡೆಯೂರು ಮತ್ತು ಯಲಹಂಕ ಕೆರೆಗಳಿಗೆ ಕೊಳಚೆ ನೀರು ಹರಿದು ಬರುವುದನ್ನು ತಡೆಯ­ಲಾ­ಗಿದೆ. ಹಲಸೂರು ಕೆರಯನ್ನೂ ಕೊಳಚೆ ಮುಕ್ತ ಮಾಡುವ ಕೆಲಸ ನಡೆದಿದೆ. ಕೆರೆಗಳಿಗೆ ತ್ಯಾಜ್ಯ ಹರಿಸುತ್ತಿರುವಂತಹ 1256 ಜನರನ್ನು ಗುರುತಿಸ­ಲಾಗಿದ್ದು ಅವರಿಗೆಲ್ಲಾ ನೋಟಿಸ್‌ ನೀಡ­ಲಾಗಿದೆ. 30 ದಿನಗಳಲ್ಲಿ ಕೆರೆಗೆಳಿಗೆ ತ್ಯಾಜ್ಯ ಹರಿಸುವುದನ್ನು ನಿಲ್ಲಿಸಲು ಸೂಚಿಸಲಾಗಿದೆ’ ಎಂದು ಅವರು ಹೇಳಿದರು.

‘ನಗರದಲ್ಲಿನ ಕೆರೆಗಳಿಗೆ ಕಟ್ಟಡಗಳ ಅವಶೇಷ, ಬಳಸಿದ ಪೂಜಾ ವಸ್ತುಗಳು ಮತ್ತು ಇತರ ತ್ಯಾಜ್ಯಗಳನ್ನು ತುಂಬಲಾಗುತ್ತಿದೆ. ಕೊಳಚೆ ನೀರನ್ನು ಹರಿಸಲಾಗುತ್ತಿದೆ. ಈ ಕೆರೆ ಪ್ರದೇಶಗಳ ಅತಿಕ್ರಮಣ ತಡೆಯಲು ಸೂಕ್ತ ನಿರ್ದೇಶನ ನೀಡಬೇಕು’  ಎಂದು ಸಿಟಿಜನ್ಸ್‌ ಆ್ಯಕ್ಷನ್‌ ಗ್ರೂಪ್‌ ಈ ಅರ್ಜಿ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT