ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಬೇಡ

Last Updated 5 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬಾಲಕಿ ನಂದಿತಾ ಸಾವಿನ ಪ್ರಕರಣ ದಿನದಿಂದ ದಿನಕ್ಕೆ ಕಗ್ಗಂಟಾ­ಗು­ತ್ತಿದೆ. ತೀರ್ಥಹಳ್ಳಿಯಲ್ಲಿನ ಉದ್ವಿಗ್ನ ಸ್ಥಿತಿ ಕ್ರಮೇಣ ತಣ್ಣಗಾಗು­ತ್ತಿದೆ­ಯಾದರೂ ಈ ಘಟನೆ ನಾಗರಿಕ ಸಮಾಜದಲ್ಲಿ ಹಲವಾರು ಪ್ರಶ್ನೆ­ಗಳನ್ನು ಹುಟ್ಟುಹಾಕಿದೆ. ಬಾಲಕಿಯ ಸಂಶಯಾಸ್ಪದ ಸಾವು ರಾಜ್ಯದ ಜನರ ಪ್ರಜ್ಞೆ­ಯನ್ನು ಕಲಕಿದೆ. ಬೆಂಗಳೂರಿನಂತಹ ರಾಜಧಾನಿಯ ಹೈಟೆಕ್‌ ಶಾಲೆ­ಗಳಲ್ಲಿ ಪುಟ್ಟ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಾಗರಿಕರ ಮೈನಡುಗಿಸಿರುವ ಬೆನ್ನಲ್ಲೇ ನಡೆದಿರುವ ನಂದಿತಾ ಸಾವು, ನಮ್ಮ ಸಾಮಾ­ಜಿಕ ವ್ಯವಸ್ಥೆಯ ಹದಗೆಟ್ಟ ಸ್ಥಿತಿಗೆ ಕನ್ನಡಿ ಹಿಡಿದಿದೆ.

‘ಉರಿಯುತ್ತಿರುವ ಮನೆ­ಯಿಂದ ಗಳ ಇರಿಯುವವರು’ ಈ ಪ್ರಕರಣದ ಬೆಂಕಿಗೆ ತುಪ್ಪ ಸುರಿಯುತ್ತಿ­ದ್ದಾರೆ. ಎಲ್ಲಿ ಜಾತಿ, ಧರ್ಮ ಗೌಣವಾಗಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ತೀವ್ರ ಆಗ್ರಹಗಳು ಕೇಳಿಬರಬೇಕಿತ್ತೋ ಅಲ್ಲಿ ಪೂರ್ವಗ್ರಹ ಮೇಲುಗೈ ಪಡೆ­ದಿದೆ. ರಾಜಕೀಯ ಮೆರೆದಾಡುತ್ತಿದೆ. ಆರೋಪಿಗಳನ್ನು ಸರ್ಕಾರ ರಕ್ಷಿಸುತ್ತಿದೆ ಎಂಬ ಬಿಜೆಪಿ ಆರೋಪ, ಘಟನೆಯನ್ನು ಬಿಜೆಪಿ ಕೋಮುಸಂಘರ್ಷಕ್ಕೆ ಬಳಸಿ­ಕೊಳ್ಳುತ್ತಿದೆ ಎಂಬ ಕಾಂಗ್ರೆಸ್‌ ದೂರು ಜನರಲ್ಲಿ ಗೊಂದಲ ಮೂಡಿಸುತ್ತಿದೆ. ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಯಲ್ಲೂ ತಲೆಎತ್ತಿರುವ ಇಂತಹ ಕೊಳಕು ರಾಜಕೀಯದ ನಡುವೆ ಸತ್ಯ ಕಳೆದುಹೋಗಿಬಿಡಬಹುದು ಎಂಬ ಆತಂಕ ಸೃಷ್ಟಿಯಾಗಿದೆ. ರಾಜಕೀಯ ಮುಖಂಡರು ಕುಟುಂಬದವರಿಗೆ ಸಾಂತ್ವನ ಹೇಳಲು ನಾ ಮುಂದು ತಾ ಮುಂದು ಎಂದು ಬಾಲಕಿಯ ಮನೆಗೆ ಎಡತಾಕುತ್ತಿದ್ದಾರೆ. ಕರುಳ ಕುಡಿಯನ್ನು ಕಳೆದುಕೊಂಡಿರುವ ಪೋಷಕರಿಗೆ ಈಗ ಬೇಕಿರುವುದು ಹುಸಿ ಸಾಂತ್ವನವಲ್ಲ; ತಪ್ಪಿತಸ್ಥರ ವಿರುದ್ಧದ ಹೋರಾಟಕ್ಕೆ ಬಲ ತುಂಬುವ ಪೂರ್ವಗ್ರಹರಹಿತ ಬೆಂಬಲ.

ಘಟನೆಯ ಸಿಐಡಿ ತನಿಖೆಗೆ ಸರ್ಕಾರ ಮುಂದಾಗಿರುವುದು ಸೂಕ್ತ ಕ್ರಮ. ಆದರೆ ಎಲ್ಲ ಪ್ರಕರಣಗಳಲ್ಲೂ ಆದಂತೆ ವಿವಾದದ ಬಿಸಿ ತಣ್ಣಗಾಗು­ತ್ತಿ­ದ್ದಂತೆಯೇ ಈ ತನಿಖೆಯ ಗತಿಯೂ ಹಳ್ಳಹಿಡಿದರೆ ಅದಕ್ಕಿಂತ ದುರ್ಗತಿ ಮತ್ತೊಂದಿರಲಾರದು. ನಂದಿತಾ ಬ್ಯಾಗಿನಲ್ಲಿ ಸಿಕ್ಕ ಆತ್ಮಹತ್ಯಾ ಪತ್ರ ಪೊಲೀ­ಸರ ಸುಳ್ಳು ಸೃಷ್ಟಿ ಎಂದು ಪೋಷಕರು ದೂರಿರುವುದರಿಂದ ತನಿಖಾಧಿಕಾರಿ­ಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಬಾಲಕಿಯ ಮೇಲೆ ಅತ್ಯಾ­ಚಾರ ನಡೆದಿಲ್ಲ ಎಂದು ವೈದ್ಯಕೀಯ ವರದಿ ತಿಳಿಸಿರುವುದರಿಂದ ಈ ಪ್ರಕರ­ಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಒಂದು ವೇಳೆ ಅನ್ಯ ಉದ್ದೇಶಕ್ಕೇ ಅಪಹರಣ ಅಥವಾ ಸಾವು ಸಂಭವಿಸಿದ್ದರೆ ಅದರ ಹಿಂದಿನ ಕಾರಣವೂ ಬಯಲಾಗ­ಬೇಕು.

ನಾಗರಿಕರಲ್ಲಿ ಅಭದ್ರತೆ ಸೃಷ್ಟಿಸಿ ಅವರ ಸ್ಥೈರ್ಯ ಕುಗ್ಗಿಸುವ ಇಂತಹ ಘಟನೆಗಳಲ್ಲಾದರೂ ರಾಜಕೀಯ ಪಕ್ಷಗಳು ‘ಎಲ್ಲದರಲ್ಲೂ ಬೇಳೆ ಬೇಯಿಸಿ­ಕೊಳ್ಳುವ’ ತಮ್ಮ ಎಂದಿನ ಚಾಳಿಯನ್ನು ಬಿಡಬೇಕು. ಆರೋಪಿಗಳು ಎಷ್ಟೇ ಪ್ರಬಲರಾಗಿರಲಿ ಅವರಿಗೆ ತಕ್ಕ ಶಿಕ್ಷೆ ಆಗುವಂತೆ ಮಾಡಲು ಪಕ್ಷಾತೀತವಾಗಿ ತನಿಖೆಗೆ ಸಹಕರಿಸಬೇಕು. ಸಾಮಾಜಿಕ ಮೌಲ್ಯಕ್ಕೆ ಬದ್ಧರಾಗಬೇಕು. ಶೀಘ್ರ­ವಾಗಿ ನ್ಯಾಯ ದೊರಕಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT